Site icon Vistara News

Kishan Bagaria: ಒಂದೇ ಒಂದು ಆ್ಯಪ್​ ಅಭಿವೃದ್ಧಿ ಮಾಡಿ ರಾತ್ರೋರಾತ್ರಿ ಕೋಟ್ಯಾಧೀಶ್ವರನಾದ ಅಸ್ಸಾಂ ಯುವಕ!

Kishan Bagaria

ಮೆಸೇಜಿಂಗ್ ಅಪ್ಲಿಕೇಶನ್ (Messaging App) ಅಭಿವೃದ್ಧಿ ಮಾಡಿದ ಅಸ್ಸಾಂನ (assam) ಹಳ್ಳಿಯೊಂದರ 26 ವರ್ಷದ ಯುವಕ ಈಗ ವಿಶ್ವ ಖ್ಯಾತಿಗಳಿಸಿದ್ದಾನೆ. ಇವನು ತಯಾರಿಸಿದ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಯುಎಸ್ ನ (US) ಟೆಕ್ ದೈತ್ಯ ( tech giant) ಕಂಪೆನಿಯೊಂದು ಬರೋಬ್ಬರಿ 400 ಕೋಟಿ ರುಪಾಯಿಗಿಂತಲೂ ಹೆಚ್ಚು ಮೌಲ್ಯಕ್ಕೆ ಖರೀದಿ ಮಾಡಿದೆ. ಅಸ್ಸಾಂನ ದಿಬ್ರುಗಢದ (Dibrugarh) ಕಿಶನ್ ಬಗಾರಿಯಾ (Kishan Bagaria) ತಾನು ಸೃಷ್ಟಿ ಮಾಡಿದ ಅಪ್ಲಿಕೇಶನ್ ನಿಂದಾಗಿ ತನಗೆ ಜಾಗತಿಕ ಮನ್ನಣೆಯೊಂದಿಗೆ ಖ್ಯಾತಿ ಮತ್ತು ಹಣ ಎರಡು ಸಿಗುತ್ತದೆ ಎಂದು ಊಹೆಯನ್ನೂ ಮಾಡಿರಲಿಲ್ಲ.

ಕಿಶನ್ ಬಗಾರಿಯಾ ಸಿದ್ದಪಡಿಸಿದ Texts.com ಎಂಬ ಹೆಸರಿನ ಸಿಂಗಲ್​ ಪ್ಲಾಟ್‌ಫಾರ್ಮ್ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಯುಎಸ್ ನ ಟೆಕ್ ದೈತ್ಯ (US tech giant) ಆಟೋಮ್ಯಾಟಿಕ್ (Automattic) 50 ಮಿಲಿಯನ್‌ ಡಾಲರ್ ಗೆ ಖರೀದಿ ಮಾಡಿದೆ. ಈ ಕಂಪೆನಿಯು ಮ್ಯಾಟ್ ಮುಲ್ಲೆಂಗ್ ಅವರ ಒಡೆತನದಲ್ಲಿದೆ. ಇವರು WordPress.com ಮತ್ತು Tumblr ನ ಮಾಲೀಕರಾಗಿದ್ದಾರೆ.

ಇದನ್ನೂ ಓದಿ: WhatsApp Update: ವಾಟ್ಸ್ ಆಪ್ ನಲ್ಲಿ ಮತ್ತೊಂದು ಹೊಸ ಫೀಚರ್! ಫೋಟೊ, ವಿಡಿಯೊ ಶೇರಿಂಗ್ ಇನ್ನೂ ಸುಲಭ


ಯಾರು ಈ ಕಿಶನ್ ?

ಉದ್ಯಮಿ ಮಹೇಂದ್ರ ಬಗಾರಿಯಾ ಮತ್ತು ನಮೀತಾ ದಂಪತಿಯ ಮಗನಾಗಿರುವ ಕಿಶನ್ ದಿಬ್ರುಗಢದ ಥಾನಾ ಚರಿಯಾಲಿ ನಿವಾಸಿ.ಕಂಪೆನಿಯು Texts.com ಖರೀದಿ ಮಾಡಿದ ಬಳಿಕ ಅವರು ರಾತ್ರೋರಾತ್ರಿ ಕೋಟ್ಯಾಧೀಶ್ವರನಾಗಿದ್ದಾರೆ. ಅವರ ಆಪ್ ಸುಮಾರು 416 ಕೋಟಿ ರೂಪಾಯಿ ಗೆ ಮಾರಾಟವಾಗಿದೆ. ಮಾತ್ರವಲ್ಲ ಕಿಶನ್ ನ ಆಪ್ ಅನ್ನು ಖರೀದಿ ಮಾಡಿರುವ ಆಟೋಮ್ಯಾಟಿಕ್ ಕಂಪೆನಿ Texts.com ನ ಕಾರ್ಯಚಟುವಟಿಕೆಗಳ ಉಸ್ತುವಾರಿಯನ್ನು ಅವರು ವಹಿಸಿಕೊಂಡಿದ್ದಾರೆ.

ಹೇಗಿತ್ತು ಪಯಣ ?

ಕಿಶನ್ ಕಂಪ್ಯೂಟರ್ ಮತ್ತು ಇಂಟರ್ನೆಟ್ ಸಂಪರ್ಕವನ್ನು ಹೊರತುಪಡಿಸಿ ಬೇರೆ ಯಾವುದೇ ತಂತ್ರಜ್ಞಾನ ಅವರ ಬಳಿ ಇರಲಿಲ್ಲ. ವಿಂಡೋಸ್ ಅಪ್ಲಿಕೇಶನ್‌ ನಲ್ಲಿ ಅವರು ತಮ್ಮ ಪ್ರಯೋಗಗಳನ್ನು ಮಾಡುತ್ತಿದ್ದರು. ಇವರ ಸಾಧನೆಯ ಹಾದಿ ಉದಯೋನ್ಮುಖ ಅಪ್ಲಿಕೇಶನ್ ಡೆವಲಪರ್‌ಗಳಿಗೆ ದಾರಿದೀಪವಾಗಿದೆ.

ಇತರ ಆಪ್ ಗಳಿಗಿಂತ ಹೇಗೆ ಭಿನ್ನ ?

Texts.com ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಾದ Instagram, Twitter, Messenger, WhatsApp ಗಳಂತೆ ಕಾರ್ಯ ನಿರ್ವಹಿಸಲಿದ್ದು, ಇದನ್ನೂ ಅದೇ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.
Texts.com ಸಂದೇಶ ಕಳುಹಿಸುವುದರಲ್ಲಿ ಕ್ರಾಂತಿ ಎಂದೇ ಹೇಳಬಹದು.

ಇತ್ತೀಚೆಗೆ ಸ್ಮಾರ್ಟ್‌ಫೋನ್‌ಗಳು ಹಲವಾರು ಮೆಸೇಜಿಂಗ್ ಅಪ್ಲಿಕೇಶನ್‌ ಗಳನ್ನು ಹೊಂದಿದೆ. ಸಾಮಾನ್ಯವಾಗಿ ಸಂದೇಶ ಕಳುಹಿಸುವ ಆಪ್ ಗಳು ವಿವಿಧ ಪ್ಲಾಟ್‌ಫಾರ್ಮ್‌ಗಳಿಂದ ಸಂದೇಶಗಳನ್ನು ಒಂದು ಅರ್ಥಗರ್ಭಿತ ಇಂಟರ್ಫೇಸ್‌ಗೆ ಮನಬಂದಂತೆ ಸಂಯೋಜಿಸುತ್ತದೆ. ಆದರೆ ಇದು ಕೇವಲ ಅಪ್ಲಿಕೇಶನ್ ಆಗಿಲ್ಲ. ವಿವೇಚನಾಯುಕ್ತ ಸಂದೇಶ ವೀಕ್ಷಣೆ ಮತ್ತು ಆರಂಭದಿಂದ ಅಂತ್ಯದ ವರೆಗೆ ಗೂಢಲಿಪೀಕರಣದಂತಹ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಡಿಜಿಟಲ್ ಸಂವಹನದಲ್ಲಿ ಗೌಪ್ಯತೆ ಮತ್ತು ಸರಳತೆಯನ್ನು ಖಾತ್ರಿಪಡಿಸುತ್ತದೆ. ಎಲ್ಲ ಸಂದೇಶಗಳು ಒಂದೇ ವೇದಿಕೆಯಡಿ ಲಭ್ಯವಾಗುವಂತೆ ಮಾಡುತ್ತದೆ.


ಭವಿಷ್ಯ ಹೇಗಿದೆ ?

ಆಟೋಮ್ಯಾಟಿಕ್‌ನ ಬೆಂಬಲದೊಂದಿಗೆ, ಕಿಶನ್ ಅವರ Texts.com ಜಾಗತಿಕ ಸಂವಹನ ಸೇವೆಗಳೊಂದಿಗೆ ಲಭ್ಯವಾಗುತ್ತಿದೆ. ಡಿಜಿಟಲ್ ಸಂವಹನವನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿಸಲು ಅವರು ನಿರಂತರ ಬದ್ಧತೆಯನ್ನು ಒತ್ತಿಹೇಳುತ್ತಿರುವುದರಿಂದ ಮುಂದಿನ ದಿನಗಳಲ್ಲಿ Texts.com ಮತ್ತಷ್ಟು ವಿಕಸನಗೊಳ್ಳುವುದು. ಇದರಲ್ಲಿ ಇನ್ನಷ್ಟು ಅದ್ಭುತ ವೈಶಿಷ್ಟ್ಯಗಳನ್ನು ಪರಿಚಯಿಸುವ ಭರವಸೆಯನ್ನು ಅವರು ನೀಡುತ್ತಾರೆ.

ಕಿಶನ್ ಬಗ್ಗೆ ಈಗ ಜಾಗತಿಕವಾಗಿ ಸಾಕಷ್ಟು ನಿರೀಕ್ಷೆಗಳು ಮೂಡಿದೆ. ಅವರು ಮುಂದೆ ಏನನ್ನು ಆವಿಷ್ಕರಿಸುತ್ತಾರೆ ಎಂದು ಎದುರು ನೋಡುತ್ತಿರುವುದಾಗಿ ಟೆಕ್ ದೈತ್ಯ ಕಂಪೆನಿಗಳು ಹೇಳಿವೆ. ಅವರ ಕಥೆ ಈಗ ಡಿಜಿಟಲ್ ವಿಕಾಸದ ಸಾಹಸಗಾಥೆಯಲ್ಲಿ ಸೇರಿಕೊಂಡಿದೆ.

Exit mobile version