ಮುಂಬಯಿ: ಮಹೀಂದ್ರಾ ಆಂಡ್ ಮಹೀಂದ್ರಾ ಕಂಪನಿಯು ತನ್ನ ಸ್ಕಾರ್ಪಿಯೊ ಕ್ಲಾಸಿಕ್ (Scorpio Classic) ಕಾರನ್ನು ಶುಕ್ರವಾರ (ಆಗಸ್ಟ್ ೧೨) ಅನಾವರಣ ಮಾಡಿದೆ. ಈ ಕಾರು ಆಗಸ್ಟ್ ೨೦ರಿಂದ ಮಾರುಕಟ್ಟೆಗೆ ಇಳಿಯಲಿದೆ. ಕೆಲವು ದಿನಗಳ ಹಿಂದೆ ಮಹೀಂದ್ರಾ ಸ್ಕಾರ್ಪಿಯೊ -ಎನ್ ಕಾರನ್ನು ಬಿಡುಗಡೆ ಮಾಡಿತ್ತು. ಅದರೊಂದಿಗೆ ಈ ಕ್ಲಾಸಿಕ್ ಮಾದರಿಯ ಕಾರು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ.
ಕ್ಲಾಸಿಕ್ ಸ್ಕಾರ್ಪಿಯೊ ಎಸ್ ಹಾಗೂ ಎಸ್‌೧ ಎಂಬ ಎರಡು ವೇರಿಯೆಂಟ್‌ನಲ್ಲಿ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸ್ಕಾರ್ಪಿಯೊ ಕಾರು ಎಕ್ಸ್‌ಟೀರಿಯರ್ ಹಾಗೂ ಇಂಟೀರಿಯರ್ ಬದಲಾವಣೆಯೊಂದಿಗೆ ರಸ್ತೆಗೆ ಇಳಿಯಲಿದೆ. ಆಗಸ್ಟ್ ೨೦ರಂದು ಬೆಲೆಯನ್ನು ಪ್ರಕಟಿಸುವುದಾಗಿ ಕಂಪನಿ ಪ್ರಕಟಿಸಿದೆ.
ಏನಿದೆ ಹೊಸತು?
ಸ್ಕಾರ್ಪಿಯೋ ಕ್ಲಾಸಿಕ್‍ನ ಮುಂಬದಿಯಲ್ಲಿ ಆರು ಉದ್ದುದ್ದ ಗೆರೆಗಳಂತಿರುವ ಗ್ರಿಲ್ ಮತ್ತು ಹುಡ್ ಸ್ಕೂಪ್‍ನೊಂದಿಗಿನ ದೃಢವಾದ ಬಾನೆಟ್ ಇದೆ. ಟ್ವಿನ್-ಪೀಕ್ ಲೋಗೋ ವಿಶಿಷ್ಟ ನೋಟವನ್ನು ನೀಡುತ್ತಿದೆ. ಟವರ್ ಎಲ್‍ಇಡಿ ಟೇಯ್ಲ್ ದೀಪಗಳ ಹೊಸ ಡಿಆರ್‍ಎಲ್‍ಗಳು ನೋಟವನ್ನು ವೃದ್ಧಿಸಿವೆ. ಹೊಸ ೧೭ ಇಂಚಿನ ಅಲಾಯ್ ವೀಲ್‌ಗಳು ಹಾಗೂ ಎರಡೂ ಬದಿಯ ಕ್ಲಾಡಿಂಗ್‌ಗಳು ದೃಢ ನೋಟವನ್ನು ಕಲ್ಪಿಸುತ್ತದೆ.
ಸ್ಕಾರ್ಪಿಯೋ ಕ್ಲಾಸಿಕ್ 97 ಕಿಲೋ ವ್ಯಾಟ್ ಪವರ್ ಮತ್ತು 300 ಎನ್‍ಎಂ ಟಾರ್ಕ್ಯೂ ಉತ್ಪಾದಿಸುವ, ಜೆನ್-2 ಎಂಹಾಕ್ ಎಂಜಿನ್ ಹೊಂದಿದೆ. ೧೦೦೦ ಆರ್‌ಪಿಎಮ್‌ನಲ್ಲಿ 230 ಟಾರ್ಕ್ಯೂ ಉತ್ಪಾದಿಸುವ ಸಾಮರ್ಥ್ಯ ಇದಕ್ಕಿದೆ. ಸಂಪೂರ್ನವಾಗಿ ಅಲ್ಯುಮಿನಿಯಮ್ ಲೋಹದಿಂದ ತಯಾರಿಸಿರುವ ಈ ಎಂಜಿನ್ ಹಿಂದಿನ ಆವೃತ್ತಿಗಿಂಗ 55 ಕಿಲೋ ಹಗುರವಾಗಿದ್ದು, ಶೇಕಡ 14ರಷ್ಟು ಹೆಚ್ಚು ಮೈಲೇಜ್ ಕೊಡುತ್ತದೆ ಎಂದು ಕಂಪನಿ ಹೇಳಿದೆ. ಕಾರಿನಲ್ಲಿ ಸಿಕ್ಸ್-ಸ್ಪೀಡ್ ಕೇಬಲ್ ಶಿಪ್ಟ್ ಟ್ರಾನ್ಸಿಮಿಷನ್ ಹೊಂದಿದೆ.
ಕ್ಬಾಬಿನ್ ಒಳಗೆ ಹಿಂದಿನ ಸ್ಕಾರ್ಪಿಯೊದ ಬಹುತೇಕ ಫೀಚರ್‌ಗಳು ಹಾಗೂ ವಿನ್ಯಾಸಗಳನ್ನು ಉಳಿಸಿಕೊಳ್ಳಲಾಗಿದೆ. ಆದರೆ, ೯ ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಹೊಸತು. ಅಂತೆಯೇ ಇದರಲ್ಲಿ ಫೋನ್ ಮಿರರ್ ಆಯ್ಕೆಯನ್ನೂ ನೀಡಲಾಗಿದೆ. ವುಡ್ ಕನ್ಸೋಲ್ ಹಾಗೂ ಬ್ಲ್ಯಾಕ್ ಮತ್ತು ಬೀಗ್ ಬಣ್ಣದ ಮಿಶ್ರಣ ಅತ್ಯಾಕರ್ಷಕವಾಗಿದೆ. ಸ್ಟೀರಿಂಗ್ ವಿಲ್‌ಗೆ ಪಿಯಾನೊ ಬ್ಲ್ಯಾಕ್ ಬಣ್ಣ ನೀಡಲಾಗಿದ್ದು, ಲೆದರ್ ಫಿನಿಶಿಂಗ್ ಕೂಡ ಕೊಡಲಾಗಿದೆ. ಅಂತೆಯೇ ಸನ್ ಗ್ಲಾಸ್ ಹೋಲ್ಡರ್ ಕೂಡ ಕೊಟ್ಟಿದ್ದಾರೆ.
ಕ್ರೂಸ್ ಕಂಟ್ರೋಲ್, ಕಾರ್ನರಿಂಗ್ ಲ್ಯಾಂಪ್ ಹಾಗೂ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಕ್ಲಾಸಿಕ್‌ನ ವಿಭಾಗಕ್ಕೆ ಹೊಸ ಸೇರ್ಪಡೆಯಾಗಿದೆ.
ಇದನ್ನೂ ಓದಿ | ಮಹೀಂದ್ರಾ Scorpio N ಅನಾವರಣ, ಏನೇನಿವೆ ಹೊಸ ಫೀಚರ್‌ಗಳು?