ನವ ದೆಹಲಿ : ಮಹಿಂದ್ರಾ ಆಂಡ್ ಮಹೀಂದ್ರ ಕಂಪನಿಯ ಮೊಟ್ಟ ಮೊದಲ ಬ್ಯಾಟರಿ ಚಾಲಿತ ಎಸ್‌ಯುವಿ ಕಾರು XUV 400 ಶುಕ್ರವಾರ ಸಂಜೆ ಅನಾವರಣಗೊಂಡಿತು. ಮುಂದಿನ ಡಿಸೆಂಬರ್‌ನಲ್ಲಿ ಗ್ರಾಹಕರು ಈ ಕಾರಿ ಟೆಸ್ಟ್ ರೈಡ್ ಮಾಡಬಹುದಾಗಿದ್ದು, ೨೦೨೩ರ ಜನವರಿಯಲ್ಲಿ ಬೆಲೆ ಪ್ರಕಟಗೊಳ್ಳಲಿದೆ.
ಟಾಟಾ ಕಂಪನಿಯ ನೆಕ್ಸಾನ್ ಇವಿ ಹಾಗೂ ಇವಿ ಮ್ಯಾಕ್ಸ್ ಕಾರಿಗೆ ಪ್ರತಿಸ್ಪರ್ಧಿಯಾಗಿ XUV 400 ಕಾರನ್ನು ಮಹೀಂದ್ರಾ ಕಂಪನಿಯು ಬಿಡುಗಡೆ ಮಾಡಿದೆ. ೨೦೨೦ರ ಆಟೋ ಎಕ್ಸ್‌ಪೋದಲ್ಲಿ ಈ ಕಾರನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಇದೀಗ ಅದರ ಸ್ವರೂಪ ಬಯಲಾಗಿದೆ.
ಈಗಾಗಲೇ ಮಾರುಕಟ್ಟೆಯಲ್ಲಿರುವ XUV ೩೦೦ ಕಾರಿನ ಸುಧಾರಿತ ಆವೃತ್ತಿಯಂತೆ XUV 400 ಅನ್ನು ಬಿಡುಗಡೆ ಮಾಡಲಾಗಿದೆ. ಎಲೆಕ್ಟ್ರಿಕ್ ಮಾದರಿಗೆ ಸೂಕ್ತವಾಗುವ ಇಂಟೀರಿಯರ್ ಹಾಗೂ ಎಕ್ಸ್‌ಟೀರಿಯರ್ ಅನ್ನು ನಿರ್ಮಿಸಲಾಗಿದೆ.
ಮೊದಲ ಹಂತದಲ್ಲಿ ೧೬ ನಗರಗಳಲ್ಲಿ XUV 400 ಕಾರು ಬಿಡುಗಡೆಯಾಗಲಿದೆ. ಮುಂಬಯಿ, ಹೈದರಾಬಾದ್, ನವ ದೆಹಲಿ ಎನ್‌ಸಿಅರ್, ಬೆಂಗಳೂರು, ಕೋಲ್ಕೊತಾ, ಚೆನ್ನೈ, ಪುಣೆ, ಅಹಮದಾಬಾದ್, ಗೋವಾ, ಸೂರತ್, ನಾಗ್ಪುರ, ತಿರುವನಂತಪುರಂ, ನಾಸಿಕ್, ಚಂಡೀಗಢ ಹಾಗೂ ಕೊಚ್ಚಿಯಲ್ಲಿ ಲಭಿಸಲಿದೆ.
ಬ್ಯಾಟರಿ ಸಾಮರ್ಥ್ಯವೇನು?
XUV 400 ಕಾರಿನಲ್ಲಿ ೩೯.೪ ಕಿಲೋ ವ್ಯಾಟ್‌ನ ಬ್ಯಾಟರಿ ಬಳಸಲಾಗಿದೆ. ಬ್ಯಾಟರಿಗಳು IP67 ವಾಟರ್ ಹಾಗೂ ಡಸ್ಟ್ ಪ್ರೂಫ್ ಸಾಮರ್ಥ್ಯ ಹೊಂದಿದೆ. ಬ್ಯಾಟರಿಗಳನ್ನು ಭಾರತದಲ್ಲಿಯೇ ತಯಾರಿಸಲಾಗಿದೆ. ೫೦ KWh DC ಫಾಸ್ಟ್ ಚಾರ್ಜರ್ ನೀಡಲಾಗಿದ್ದು, ೫೦ ನಿಮಿಷಗಳಲ್ಲಿ ಶೇಕಡಾ ೮೦ರಷ್ಟು ಬ್ಯಾಟರಿ ಚಾರ್ಜ್ ಆಗುತ್ತದೆ. ಒಂದು ವೇಳೆ ೭.೨kW/32A ಚಾರ್ಜರ್ ಬಳಸಿದರೆ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಆಗಲು ೬.೩೦ ಗಂಟೆ ತೆಗೆದುಕೊಳ್ಳುತ್ತದೆ. ಗೃಹ ಬಳಕೆಯ ಸಾಕೆಟ್‌ನ ೩.೩ kw / 16A ಚಾರ್ಜರ್ ಬಳಸಿದರೆ ೧೩ ಗಂಟೆ ಬೇಕಾಗುತ್ತದೆ.
ರೇಂಜ್ ಎಷ್ಟು?
XUV 400 ಕಾರು ಒಂದು ಬಾರಿ ಪೂರ್ತಿ ಚಾರ್ಜ್ ಮಾಡಿದರೆ ೪೫೬ ಕಿ.ಮೀ ಚಲಿಸುತ್ತದೆ. ಅದೇ ರೀತಿ ಪೆಡಲ್ ಡ್ರೈವಿಂಗ್ ಎಂಬ ಹೊಸ ಆಯ್ಕೆಯನ್ನು ಮಹೀಂದ್ರಾ ನೀಡಿದ್ದು, ಡ್ರೈವರ್ ಅಕ್ಸಿಲರೇಟರ್ ಮೇಲಿಂದ ಕಾಲು ತೆಗೆದ ತಕ್ಷಣ ಕಾರು ಬ್ರೇಕ್ ಕೆಲಸ ಮಾಡುತ್ತದೆ. ಈ ವೇಳೆ ಸ್ವಯ ಚಾಲಿತವಾಗಿ ವಿದ್ಯುತ್ ಸಂಗ್ರಹವಾಗುತ್ತದೆ. ಇದನ್ನು ಮಹೀಂದ್ರಾ ಲೈವ್ಲಿ ಮೋಡ್ ಎಂದು ಕರೆದಿದೆ.
XUV 400 ಕಾರು ೨೬೦೦ ಮಿಲಿ ಮೀಟರ್ ವೀಲ್ ಬೇಸ್ ಹೊಂದಿದ್ದು, XUV ೩೦೦ನಷ್ಟೇ ಇದೆ. ಕಾರಿನ ಒಟ್ಟಾರೆ ಉದ್ದ ೪೨೦೦ ಮಿಲಿ ಮೀಟರ್, ಅಗಲ ೧೮೨೧ ಮಿಲಿ ಮೀಟರ್, ಎತ್ತರ ೧೬೩೪ ಮಿಲಿ ಮೀಟರ್ ಇದೆ. ಹೀಗಾಗಿ XUV ೩00 ಉದ್ದವಾಗಿದ್ದು, ಎಲೆಕ್ಟ್ರಿಕ್ ವಾಹನಗಳ ಪೈಕಿ ಹೆಚ್ಚು ಅಗಲವಾಗಿದೆ.
ಕಾರು ಬಹುತೇಕ XUV ೩00 ರೀತಿಯಲ್ಲೇ ಇದ್ದು, ಲೋಗೊಗೆ ಕಾಪರ್ ಫಿನಿಶಿಂಗ್ ಕೊಡಲಾಗಿದೆ. ಎಲ್‌ಇಡಿ ಟೈಲ್ ಲ್ಯಾಂಪ್‌ಗಳು ಹಾಗೂ ಫ್ರಂಟ್ ಗ್ರಿಲ್ ಭಿನ್ನವಾಗಿದೆ. ೧೬ ಇಂಚಿನ ಡೈಮಂಡ್ ಕಟ್ ಅಲಾಯ್ ವಿಲ್ ಹೊಂದಿದೆ. ಇಂಟೀರಿಯರ್ ಅನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದ್ದು, ಕಪ್ಪು ಬಣ್ಣದ ಥೀಮ್‌ಗೆ ಕಾಪರ್ ಫಿನಿಶಿಂಗ್ ನೀಡಲಾಗಿದೆ.
ಮೋಟಾರ್ ಶಕ್ತಿ ಏನು?
XUV 400 ಕಾರು ೮.೩ ಸೆಕೆಂಡ್‌ಗಳಲ್ಲಿ ೧೦೦ ಕಿ.ಮೀ ವೇಗ ಪಡೆಯಬಲ್ಲುದು. ಪಿಎಸ್‌ಎಮ್ ಎಲೆಕ್ಟ್ರಿಕ್ ಮೋಟಾರ್ ೧೪೭ ಎಚ್‌ಪಿ ಪವರ್ ಸೃಷ್ಟಿಸಿದರೆ, ೩೧೦ ಎನ್‌ಎಮ್ ಟಾರ್ಕ್ಯೂ ನೀಡುತ್ತದೆ. XUV 400 ಗರಿಷ್ಠ ವೇಗ ೧೫೦ ಕಿ.ಮಿ. ಫನ್, ಫಾಸ್ಟ್ ಆಂಡ್ ಫಿಯರ್‌ಲೆಸ್ ಎಂಬ ಮೂರು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿದೆ.
ಇದನ್ನೂ ಓದಿ | TVS Apache RTR | ಟಿವಿಎಸ್ ಅಪಾಚೆ ಆರ್‌ಟಿಆರ್ 180, ಆರ್‌ಟಿಆರ್ 160 ಬಿಡುಗಡೆ