ಬೆಂಗಳೂರು : ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯು ಜನವರಿ ತಿಂಗಳ ಆರಂಭದಲ್ಲಿ ಬಿಡುಗಡೆ ಮಾಡಿರುವ ಎಲೆಕ್ಟ್ರಿಕ್ ಎಸ್ಯುವಿ Mahindra XUV 400 ಕಾರಿನ ಬುಕಿಂಗ್ ಆರಂಭಗೊಂಡ ಐದನೇ ದಿನದಲ್ಲಿ 10 ಸಾವಿರಕ್ಕಿಂತಲೂ ಅಧಿಕ ಗ್ರಾಹಕರಿಂದ ಬೇಡಿಕೆ ಪಡೆದುಕೊಂಡಿದೆ. ಈ ಮೂಲಕ ಭಾರತದ ಇವಿ ಕಾರುಗಳ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಸೋಮವಾರ (ಜನವರಿ 30ರಂದು) ಕಂಪನಿಯು ಒಟ್ಟು ಬುಕಿಂಗ್ ಕುರಿತು ಮಾಹಿತಿ ನೀಡಿದ್ದು, ಏಳು ತಿಂಗಳ ಬಳಿಕ ಡೆಲಿವರಿ ಆರಂಭಿಸುವುದಾಗಿ ಭರವಸೆ ನೀಡಿದೆ.
Mahindra XUV 400 ಕಾರಿಗೆ ಜನವರಿ 26ರಂದು ಬುಕಿಂಗ್ ಆರಂಭಗೊಂಡಿತ್ತು. ಮೊದಲ ದಿನದಂದಲೇ ಕಾರಿಗೆ ಮಿತಿಮೀರಿ ಬೇಡಿಕೆ ವ್ಯಕ್ತಗೊಂಡಿವೆ. ಈ ಮೂಲಕ ಎಕ್ಸ್ಯುವಿ ಸೆಗ್ಮೆಂಟ್ನಲ್ಲಿ ಮತ್ತೊಂದು ಯಶಸ್ಸು ಸಾಧಿಸಿದೆ. ಈ ಕಾರಿನ ಆರಂಭಿಕ ಬೆಲೆ 16 ಲಕ್ಷ ರೂಪಾಯಿಗಳಾಗಿದ್ದು ಟಾಪ್ ವೇರಿಯೆಂಟ್ನ ಎಕ್ಸ್ಶೋರೂಮ್ ಬೆಲೆ 19 ಲಕ್ಷ ರೂಪಾಯಿಗಳು. ಮೊದಲ 5000 ಕಾರುಗಳಿಗೆ ಮಾತ್ರ ಈ ಬೆಲೆ ಅನ್ವಯ ಎಂದು ಕಂಪನಿ ಮೊದಲೇ ಹೇಳಿದೆ. ಜತೆಗೆ ಈ ವರ್ಷಾಂತ್ಯಕ್ಕೆ 20 ಸಾವಿರ Mahindra XUV 400 ಕಾರುಗಳನ್ನು ಉತ್ಪಾದಿಸಿ ಗ್ರಾಹಕರಿಗೆ ತಲುಪಿಸುವುದಾಗಿ ತಿಳಿಸಿದೆ.
ಟಾಟಾ ಮೋಟಾರ್ಸ್ನ ನೆಕ್ಸಾನ್ ಇವಿಗೆ ಪೈಪೋಟಿ ನೀಡುವ ಉದ್ದೇಶದಿಂದ Mahindra XUV 400 ಎಲೆಕ್ಟ್ರಿಕ್ ಕಾರನ್ನು ಮಹೀಂದ್ರಾ ಕಂಪನಿ ಮಾರುಕಟ್ಟೆಗೆ ಇಳಿಸಿದೆ. ಎರಡು ವೇರಿಯೆಂಟ್ ಹಾಗೂ ಐದು ಬಣ್ಣಗಳಲ್ಲಿ Mahindra XUV 400 ಲಭ್ಯವಿದ್ದು, ಎರಡು ರೀತಿಯ ಬ್ಯಾಟರಿ ಆಯ್ಕೆಗಳನ್ನು ನೀಡಿದೆ. Mahindra XUV 400 ಪ್ರವೇಶದಿಂದಾಗಿ ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಸಂಚಲನ ಮೂಡಿದೆ. ಇದುವರೆಗೆ ಅಗ್ಗದ ಬೆಲೆಗೆ ದೊರೆಯುವ ಎಲೆಕ್ಟ್ರಿಕ್ ಎಸ್ಯುವಿ ಎಂದೇ ಕರೆಯಲಾಗುತ್ತಿದ್ದ ನೆಕ್ಸಾನ್ನ ಓಟಕ್ಕೆ ಸ್ವಲ್ಪ ಅಡಚಣೆಯಾಗುವ ಸಾಧ್ಯತೆಗಳಿವೆ.
ಇದನ್ನೂ ಓದಿ | Mahindra & Mahindra | ಪುಣೆಯಲ್ಲಿ ಹೊಸ ಇವಿ ಕಾರು ಉತ್ಪಾದನಾ ಘಟಕ ಸ್ಥಾಪಿಸಲಿದೆ ಮಹೀಂದ್ರಾ
ಕಡಿಮೆ ಬೆಲೆಗೆ Mahindra XUV 400 ಕಾರಿನಲ್ಲಿ 34.5 ಕಿಲೋ ವ್ಯಾಟ್ನ ಬ್ಯಾಟರಿ ಬಳಸಲಾಗಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 375 ಕಿಲೋ ಮೀಟರ್ ದೂರಕ್ಕೆ ಸಾಗುತ್ತದೆ. ಟಾಪ್ ಎಂಡ್ ಕಾರಿನಲ್ಲಿ 39.4 ಕಿಲೋ ವ್ಯಾಟ್ನ ಬ್ಯಾಟರಿ ಬಳಸಲಾಗಿದ್ದು, ಒಂದು ಬಾರಿ ಪೂರ್ತಿ ಚಾರ್ಜ್ ಮಾಡಿದರೆ 450 ಕಿಲೋ ಮೀಟರ್ ದೂರ ಪ್ರಯಾಣ ಮಾಡಬಹುದು. ಈ ಕಾರು 8.3 ಸೆಕೆಂಡ್ಗಳಲ್ಲಿ ಸೊನ್ನೆಯಿಂದ 100 ಕಿಲೋ ಮೀಟರ್ ವೇಗ ಪಡೆಯುವ ಸಾಮರ್ಥ್ಯ ಹೊಂದಿದೆ. ಅದೇ ರೀತಿ ಇದರ ಗರಿಷ್ಠ ವೇಗ 150 ಕಿಲೋ ಮೀಟರ್.
Mahindra XUV 400 ಕಾರಿನಲ್ಲಿ ಅತ್ಯಾಧುನಿಕ ಸೇಫ್ಟಿ ಫೀಚರ್ಗಳನ್ನು ನೀಡಲಾಗಿದೆ. ಜತೆಗೆ ಇಂಟೀರಿಯರ್ ಹಾಗೂ ಎಕ್ಸ್ಟೀರಿಯರ್ ಇವಿ ಲುಕ್ಗೆ ಪೂರಕವಾಗಿ ತಯಾರಿಸಲಾಗಿದೆ.