ಮುಂಬಯಿ : ಭಾರತದ ಮುಂಚೂಣಿ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಇತ್ತೀಚೆಗೆ ಬಿಡುಗಡೆ ಮಾಡಿರುವ ಗ್ರಾಂಡ್ ವಿಟಾರಾ (Grand Vitara) ಎಸ್‌ಯವಿ ಕಾರಿನ ಬೆಲೆ ಸೆಪ್ಟೆಂಬರ್ ೨೬ರಂದು ಘೋಷಣೆಯಾಗಲಿದೆ. ಮಿಡ್‌ಸೈಜ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಮಾರುತಿ ಸುಜುಕಿಯ ಮೊದಲ ಕಾರು ಇದಾಗಿದ್ದು, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಎಮ್ ಆಸ್ಟರ್, ಸ್ಕೋಡಾ ಕುಶಾಕ್, ಫೋಕ್ಸ್‌ವ್ಯಾಗನ್ ಟೈಗುನ್ ಸೇರಿದಂತೆ ಇನ್ನಲವು ಕಾರುಗಳ ಜತೆ ಮಾರುಕಟ್ಟೆಯಲ್ಲಿ ಸ್ಪರ್ಧೆ ನಡೆಸಲಿದೆ.
ನವರಾತ್ರಿ ಆರಂಭದ ದಿನವಾದ ಸೆಪ್ಟೆಂಬರ್ ೨೬ರಂದು ಗ್ರಾಂಡ್ ವಿಟಾರದ ಮಾರಾಟ ಆರಂಭವಾಗಲಿದ್ದು, ಅಂದು ಬೆಲೆಯೂ ಪ್ರಕಟವಾಗಲಿದೆ ಎಂದು ಮಾರುತಿ ಸುಜುಕಿಯ ಮಾರಾಟ ವಿಭಾಗದ ಹಿರಿಯ ಅಧಿಕಾರಿ ಶಶಾಂಕ್ ಶ್ರೀವಾಸ್ತವ್ ಹೇಳಿದ್ದಾರೆ.
ಗ್ರಾಂಡ್ ವಿಟಾರ್ ಕಳೆದ ಎರಡು ತಿಂಗಳಲ್ಲಿ ಮಾರುತಿ ಬಿಡುಗಡೆ ಮಾಡಿರುವ ಎರಡನೇ ಎಸ್‌ಯುವಿ ಕಾರಾಗಿದೆ. ಜೂನ್ ೩೦ರಂದು ಮಾರುತಿ ತನ್ನ ಬ್ರೆಜಾ ಕಾರಿನ ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡಿತ್ತು. ಬ್ರೆಜಾ ಕಾಂಪಾಕ್ಟ್ ಎಸ್‌ಯುವಿ ಆಗಿದ್ದು, ಆ ಸೆಗ್ಮೆಂಟ್‌ನಲ್ಲಿ ಬೇಡಿಕೆ ಹೊಂದಿದೆ. ಆದರೆ, ಮಾರುತಿ ಸುಜುಕಿ ಮಿಡ್‌ಸೈಜ್ ಸೆಗ್ಮೆಂಟ್‌ನಲ್ಲಿ ಯಾವುದೇ ಕಾರನ್ನು ಹೊಂದಿರಲಿಲ್ಲ. ಗ್ರಾಂಡ್ ವಿಟಾರಾ ಹೊಸ ಪ್ರವೇಶ.
ಇತ್ತೀಚಿನ ದಿನಗಳಲ್ಲಿ ಎಸ್‌ಯುವಿ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಸಣ್ಣ ಕಾರುಗಳ ಮಾರುಕಟ್ಟೆ ನಿಧಾನವಾಗಿ ಕುಸಿಯುತ್ತಿದೆ. ಅಂತೆಯೇ ಮಾರುತಿ ಸುಜುಕಿಯ ೨೦೧೯-೨೦೨೦ರಲ್ಲಿ ಹೊಂದಿದ್ದ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಹೊಂದಿದ್ದ ಶೇಕಡಾ ೫೧ ಪಾಲು ೨೦೨೧-೨೨ಕ್ಕೆ ಶೇಕಡಾ ೪೩ಕ್ಕೆ ಕುಸಿತ ಕಂಡಿದೆ. ಹೀಗಾಗಿ ಮಿಡ್‌ಸೈಜ್ ಸೆಗ್ಮೆಂಟ್‌ಗೆ ಮಾರುತಿ ಪ್ರವೇಶಿಸಿದೆ.
ಜಪಾನ್ ಮೂಲದ ಕಾರು ಕಂಪನಿಗಳಾಗಿರುವ ಸುಜುಕಿ ಮೋಟಾರ್ ಕಾರ್ಪೊರೇಷನ್ ಹಾಗೂ ಟೊಯೊಟಾ ಕಿರ್ಲೊಸ್ಕರ್ ನಡುವೆ ನಡೆದಿರುವ ಜಾಗತಿಕ ಒಪ್ಪಂದಂತೆ ಟೊಯೊಟಾದ ಅರ್ಬಜ್ ಕ್ರೂಸರ್ ಹೈರೈಡರ್‌ನ ಫ್ಲಾಟ್‌ಫಾರ್ಮ್ ಅನ್ನು ವಿಟಾರಾಗೆ ಪಡೆದುಕೊಳ್ಳಲಾಗಿದೆ.
ಗ್ರಾಂಡ್ ವಿಟಾರ ೧.೫ ಲೀಟರ್ ಸಾಮರ್ಥ್ಯದ ಎಂಜಿನ್ ಹೊಂದಿದ್ದು, ಸ್ಟ್ರಾಂಗ್ ಹೈಬ್ರಿಡ್ ಹಾಘೂ ಮೈಲ್ಡ್ ಹೈಬ್ರಿಡ್ ಎಂಬ ಎರಡು ಆಯ್ಕೆಯನ್ನು ಹೊಂದಿದೆ. ಕಾರು 4,345 ಮಿಲಿ ಮೀಟರ್ ಉದ್ದವಿದ್ದು, 1,795 ಮಿ.ಮಿ ಅಗಲ ಹೊಂದಿದೆ. 1,645 ಮಿ.ಮಿ ಎತ್ತರವಾಗಿದ್ದು, 2,600 ಮಿ.ಮಿ ವೀಲ್‌ಬೇಸ್ ಹೊಂದಿದೆ.
ಇದನ್ನೂ ಓದಿ | Suzuki | ಸುಜುಕಿಯಿಂದ ಹರಿಯಾಣದಲ್ಲಿ 11,000 ಕೋಟಿ ರೂ, ಗುಜರಾತ್‌ನಲ್ಲಿ 7,300 ಕೋಟಿ ರೂ. ಹೂಡಿಕೆ