Site icon Vistara News

Mission RHUMI: ದೇಶದ ಮೊದಲ ಮರುಬಳಕೆ ಮಾಡಬಹುದಾದ ಹೈಬ್ರಿಡ್‌ ರಾಕೆಟ್‌ನ ಯಶಸ್ವಿ ಉಡಾವಣೆ

Mission RHUMI

ಚೆನ್ನೈ: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ನೆಟ್ಟಿದೆ. ರೂಮಿ 1 (RHUMI 1) ಹೆಸರಿನ ತನ್ನ ಮೊದಲ ಮರುಬಳಕೆ ಮಾಡಬಹುದಾದ ಹೈಬ್ರಿಡ್ ರಾಕೆಟ್​​​ (Reusable hybrid rocket) ಅನ್ನು ಇಂದು (ಆಗಸ್ಟ್ 24) ಯಶಸ್ವಿಯಾಗಿ ಉಡಾವಣೆ ಮಾಡಿದೆ. ತಮಿಳುನಾಡು ಮೂಲದ ಸ್ಟಾರ್ಟ್-ಅಪ್ ಕಂಪನಿ ಸ್ಪೇಸ್ ಝೋನ್ ಇಂಡಿಯಾವು ಮಾರ್ಟಿನ್‌ ಗ್ರೂಪ್‌ ಜತೆ ಸೇರಿ ಅಭಿವೃದ್ಧಿಪಡಿಸಿದ ಈ ರಾಕೆಟ್​​ನ್ನು ಚೆನ್ನೈಯ ತಿರುವಿದಂಧೈನಲ್ಲಿರುವ ಟಿಟಿಡಿಸಿ (TTDC) ಮೈದಾನದಿಂದ ಉಡಾವಣೆ ಮಾಡಲಾಯಿತು (Mission RHUMI).

ಈ ರಾಕೆಟ್ 3 ಕ್ಯೂಬ್ ಉಪಗ್ರಹಗಳು ಮತ್ತು 50 ಪಿಐಸಿಒ (PICO) ಉಪಗ್ರಹಗಳನ್ನು ಉಪಕಕ್ಷೆಯ ಪಥಕ್ಕೆ ಕೊಂಡೊಯ್ಯಲಿದೆ. ರಾಕೆಟ್ ಅನ್ನು ಮೊಬೈಲ್ ಲಾಂಚರ್ ಬಳಸಿ ಸಬ್ ಆರ್ಬಿಟಲ್ ಪಥಕ್ಕೆ ಉಡಾಯಿಸಲಾಯಿತು. ಈ ಉಪಗ್ರಹಗಳು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಸಂಶೋಧನಾ ಉದ್ದೇಶಗಳಿಗಾಗಿ ಡೇಟಾವನ್ನು ಸಂಗ್ರಹಿಸಲಿವೆ.

ಇಸ್ರೋ ಉಪಗ್ರಹ ಕೇಂದ್ರದ (ISAC) ಮಾಜಿ ನಿರ್ದೇಶಕ ಡಾ.ಮೈಲ್‌ಸ್ವಾಮಿ ಅಣ್ಣಾದೊರೈ ಅವರ ಮಾರ್ಗದರ್ಶನದಲ್ಲಿ ಸ್ಪೇಸ್ ಝೋನ್ ಇಂಡಿಯಾ ಸಂಸ್ಥಾಪಕ ಆನಂದ್ ಮೆಗಾಲಿಂಗಂ ಅವರು ಆರ್‌ಎಚ್‌ಯುಎಂಐ ಮಿಷನ್ ಅನ್ನು ಮುನ್ನಡೆಸುತ್ತಿದ್ದಾರೆ. ದಕ್ಷತೆಯನ್ನು ಸುಧಾರಿಸಲು ಮತ್ತು ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡಲು ಆರ್‌ಎಚ್‌ಯುಎಂಐ -1 (ರೂಮಿ 1) ರಾಕೆಟ್ ದ್ರವ ಮತ್ತು ಘನ ಇಂಧನ ಪ್ರೊಪೆಲ್ಲಂಟ್ ವ್ಯವಸ್ಥೆಗಳ ಅನುಕೂಲಗಳನ್ನು ಸಂಯೋಜಿಸುತ್ತದೆ.

3.5 ಮೀಟರ್‌ ಉದ್ದ 80 ಕೆಜಿ ತೂಕದ ಈ ರಾಕೆಟ್‌ನ ಶೇ. 70ರಷ್ಟನ್ನು ಮರುಬಳಕೆ ಮಾಡಬಹುದು. ರಾಕೆಟ್‌ನ ಮುಖ್ಯಭಾಗ, ಉಪಗ್ರಹಗಳನ್ನು ಹೊಂದಿರುವ ಭಾಗ ಯಶಸ್ವಿ ಉಡ್ಡಯನದ ಬಳಿಕ ಮರಳಿ ಭೂಮಿ ವಾತಾವರಣ ಪ್ರವೇಶಿಸಿ ಸಮುದ್ರದಲ್ಲಿ ಬೀಳಲಿದೆ. ಅಲ್ಲಿಂದ ಈ ಭಾಗಗಳನ್ನು ಸಂಗ್ರಹಿಸಿ, ಇನ್ನೊಂದು ಉಡ್ಡಯನಕ್ಕೆ ಬಳಸಬಹುದು. ಇದು ಭವಿಷ್ಯದ ಉಡ್ಡಯನ ವೆಚ್ಚವನ್ನು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಈ ರೂಮಿ 1 ರಾಕೆಟ್‌ 35 ಕಿ.ಮೀ ಎತ್ತರದ ಕಕ್ಷೆವರೆಗೆ ಹಾರಬಲ್ಲದು.

ಇದನ್ನೂ ಓದಿ: Aditya L1 Launch: ರಾಕೆಟ್‌ನಿಂದ ಬೇರ್ಪಟ್ಟ ಆದಿತ್ಯ ಎಲ್‌ 1 ಮಿಷನ್;‌ ಇಸ್ರೋಗೆ ಶಹಬ್ಬಾಶ್‌ ಎಂದ ಮೋದಿ

ಚೆನ್ನೈ ಮೂಲದ ಸ್ಪೇಸ್‌ ಝೋನ್‌ ಇಂಡಿಯಾ ಏರೋ-ಟೆಕ್ನಾಲಜಿ ಕಂಪನಿಯಾಗಿದ್ದು, ಬಾಹ್ಯಾಕಾಶ ಉದ್ಯಮದಲ್ಲಿ ಕಡಿಮೆ ವೆಚ್ಚದ, ದೀರ್ಘಾವಧಿಯ ಪರಿಹಾರವನ್ನು ಒದಗಿಸುವ ಗುರಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.

Exit mobile version