ನವದೆಹಲಿ: ದೇಶದಲ್ಲಿ 5ಜಿ ತಂತ್ರಜ್ಞಾನಕ್ಕೆ ಚಾಲನೆ ನೀಡಿ ಕೇವಲ 5 ತಿಂಗಳಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಈಗಾಗಲೇ 5ಜಿ ಸೇವೆ ಲಭ್ಯವಿದೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಶೀಘ್ರದಲ್ಲೇ 6ಜಿ ಜಾರಿಗೊಳಿಸುವ (6G In India) ಕುರಿತು ಮಹತ್ವದ ಘೋಷಣೆ ಮಾಡಿದ್ದಾರೆ. ನರೇಂದ್ರ ಮೋದಿ ಅವರು ಬುಧವಾರ ‘ಭಾರತ್ 6ಜಿ ವಿಷನ್’ ಡಾಕ್ಯುಮೆಂಟ್ ಹಾಗೂ ‘6ಜಿ ಟೆಸ್ಟ್ ಬೆಡ್’ ಅನಾವರಣಗೊಳಿಸಿದ್ದು, ದೇಶದಲ್ಲಿ 6ಜಿ ಜಾರಿಗೊಳಿಸುವ ದಿಸೆಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಭಾರತ್ 6ಜಿ ವಿಷನ್’ ಡಾಕ್ಯುಮೆಂಟ್ ಹಾಗೂ ‘6ಜಿ ಟೆಸ್ಟ್ ಬೆಡ್’ ಅನಾವರಣಗೊಳಿಸಿ ಮಾತನಾಡಿದ ಅವರು, “ಭಾರತದಲ್ಲಿ ಈಗ ಡಿಜಿಟಲ್ ಕ್ರಾಂತಿಯಾಗುತ್ತಿದೆ. 5ಜಿ ಜಾರಿಯಲ್ಲಿ ಭಾರತ ಅತ್ಯಂತ ವೇಗ ಕಾಯ್ದುಕೊಂಡಿದೆ. ನಾವು ಈಗಾಗಲೇ 6ಜಿ ತಂತ್ರಜ್ಞಾನದ ಬಗ್ಗೆ ಮಾತನಾಡಲು ಆರಂಭಿಸಿದ್ದೇವೆ. ಇದು ನವಭಾರತದ ಆತ್ಮವಿಶ್ವಾಸವಾಗಿದೆ. ದೇಶದಲ್ಲಿ 6ಜಿ ಸೇವೆ ಲಭ್ಯವಾಗುವ ದಿನಗಳು ತುಂಬ ದೂರವಿಲ್ಲ” ಎಂದು ಹೇಳಿದರು.
6ಜಿ ಡಾಕ್ಯುಮೆಂಟ್ ಎಂದರೇನು?
ಭಾರತದಲ್ಲಿ 6ಜಿ ಜಾರಿ ಕುರಿತು ಕೇಂದ್ರ ಸರ್ಕಾರವು 2021ರ ನವೆಂಬರ್‌ನಲ್ಲಿ ರಚಿಸಿದ ಟೆಕ್ನಾಲಜಿ ಇನೋವೇಷನ್ ಗ್ರೂಪ್ ತಯಾರಿಸಿದ ಡಾಕ್ಯುಮೆಂಟ್ ‘ಭಾರತ್ 6ಜಿ ವಿಷನ್’ ಆಗಿದೆ. ದೇಶದ ಹಲವು ಸಚಿವಾಲಯಗಳು, ಇಲಾಖೆಗಳು, ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಗಳು, ಅಕಾಡೆಮಿಯಾಗಳು, ಟೆಲಿಕಾಂ ಸರ್ವಿಸ್ ಪ್ರೊವೈಡರ್‌ಗಳು, ಟೆಲಿಕಾಂ ಉದ್ಯಮದ ಪ್ರಮುಖರು ತಂಡದಲ್ಲಿದ್ದರು. ಭಾರತದಲ್ಲಿ 6ಜಿ ತಂತ್ರಜ್ಞಾನದ ಅಭಿವೃದ್ಧಿ ಹಾಗೂ ಸೇವೆ ಒದಗಿಸುವ ಕುರಿತು ಇವರು ಕ್ರಿಯಾಯೋಜನೆ ರಚಿಸಿದ್ದಾರೆ. ಕೆಲವು ಮಾರ್ಗಸೂಚಿಗಳನ್ನೂ ರಚಿಸಿದ್ದಾರೆ. ಇವುಗಳ ಅನ್ವಯ 6ಜಿ ಜಾರಿ ಕುರಿತು ಸಂಶೋಧನೆ, ನಾವೀನ್ಯತೆಯ ಅಳವಡಿಕೆ ಸೇರಿ ಹಲವು ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ.
6ಜಿ ಡಾಕ್ಯುಮೆಂಟ್ ಬಿಡುಗಡೆ
ಏನಿದು 6ಜಿ ಟೆಸ್ಟ್ ಬೆಡ್? ಇದರಿಂದ 6ಜಿ ಹೇಗೆ ಜಾರಿ?
ದೇಶದಲ್ಲಿ 6ಜಿ ಜಾರಿಗೊಳಿಸುವುದು, ನೂತನ ತಂತ್ರಜ್ಞಾನದ ಅಳವಡಿಕೆ, ಸುಧಾರಿತ ತಂತ್ರಜ್ಞಾನದ ಅವಕಾಶಗಳ ಬಳಕೆ, ತಪಾಸಣೆ, ಪರೀಕ್ಷೆಗೆ ಪೂರಕ ವಾತಾವರಣ ನಿರ್ಮಿಸಲು 6ಜಿ ಟೆಸ್ಟ್ ಬೆಡ್ ಉತ್ತಮ ವೇದಿಕೆಯಾಗಿದೆ. ಯಾವುದೇ ರಿಯಲ್ ವರ್ಲ್ಡ್ ನೆಟ್‌ವರ್ಕ್‌ಗಳಿಗೆ ಪರಿಣಾಮ ಬೀರದೆ, 6ಜಿ ಕುರಿತು ಸಂಶೋಧಕರು ಹಾಗೂ ಡೆವಲಪರ್‌ಗಳು ಸಂಶೋಧನೆ, ತಂತ್ರಜ್ಞಾನ ಅಳವಡಿಕೆ, ಪರೀಕ್ಷೆಗೆ ಇದು ಪೂರಕ ವಾತಾವರಣ ಸೃಷ್ಟಿಸಿದೆ. ಆರಂಭಿಕ ಹಂತದಲ್ಲಿ ಸೀಮಿತ ಜನರು ಮಾತ್ರ 6ಜಿಯನ್ನು ಪರೀಕ್ಷಿಸಿ, ಅದರ ಸೇವೆ ತಪಾಸಣೆ ಮಾಡಿ, ನಂತರ ಸಾರ್ವಜನಿಕ ಸೇವೆಗೆ ಬಿಡಲು 6ಜಿ ಟೆಸ್ಟ್ ಬೆಡ್ ನಿರ್ಣಾಯಕವಾಗಿದೆ.
ಪ್ರಸಕ್ತ ದಶಕದ ಅಂತ್ಯದ ವೇಳೆಗೆ ದೇಶದಲ್ಲಿ 6ಜಿ ಜಾರಿಗೊಳಿಸುವುದು ಗುರಿಯಾಗಿದೆ ಎಂದು ನರೇಂದ್ರ ಮೋದಿ ಆಶಯ ವ್ಯಕ್ತಪಡಿಸಿದ್ದಾರೆ. 2022ರ ಅಕ್ಟೋಬರ್‌ನಿಂದಲೇ ದೇಶದಲ್ಲಿ ಟೆಲಿಕಾಂ ಸರ್ವಿಸ್ ಪ್ರೊವೈಡರ್‌ಗಳು ಹೈಸ್ಪೀಡ್ 5ಜಿ ಸೇವೆ ಒದಗಿಸಲು ಆರಂಭಿಸಿದ್ದಾರೆ. 5ಜಿ ತರಂಗಗಳ (Spectrum) ಖರೀದಿಗೆ ಟೆಲಿಕಾಂ ಇಲಾಖೆಗೆ 1.50 ಲಕ್ಷ ಕೋಟಿ ರೂ. ಮೌಲ್ಯದ ಹರಾಜು ಮೊತ್ತ ಬಂದಿದೆ. ದೇಶದ ಪ್ರಮುಖ ನಗರಗಳಲ್ಲಿ 5ಜಿ ಸೇವೆ ಲಭ್ಯವಿದೆ.
ಇದನ್ನೂ ಓದಿ: 6G Technology | 6ಜಿ ಟೆಕ್ನಾಲಜಿ ಕನಸು ಬಿತ್ತಿದ ಮೋದಿ ಸರ್ಕಾರ, ದಶಕದ ಅಂತ್ಯಕ್ಕೆ ಆಗಲಿದೆ ಸಾಕಾರ