Site icon Vistara News

Dosa maker | ಇನ್ಮೇಲೆ ದೋಸೆ ಹುಯ್ಯೋದಲ್ಲ, ಎ-4 ಸೈಜ್‌ ಗರಿಗರಿ ದೋಸೆ ಪ್ರಿಂಟ್‌ ಮಾಡಿ!

dosa

ಇನ್ಮೇಲೆ ಬೆಳಗ್ಗೆದ್ದು, ಅಯ್ಯೋ ಯಾರಪ್ಪಾ ದೋಸೆ ಹುಯ್ಯುವುದು ಎಂದು ತಲೆಕೆರೆದುಕೊಳ್ಳುವ ಅಗತ್ಯವಿಲ್ಲ! ದೋಸೆ ಹುಯ್ಯಲು ಕಷ್ಟ ಪಡುವ, ಪೇಪರ್‌ ರೋಸ್ಟ್‌ ಮಾಡಲು ಹರಸಾಹಸ ಪಡುವ ಎಲ್ಲರೂ ಇದೀಗ ಮನೆಯಲ್ಲಿ ದೋಸೆ ಹಬ್ಬ ಮಾಡಬಹುದು. ಸ್ವಿಚ್‌ ಅದುಮಿ, ಹಿಟ್ಟು ಕೊಟ್ಟರೆ ಸಾಕು, ದೋಸೆ ಪ್ರಿಂಟ್‌ ಆಗಿ ಬರುತ್ತದೆ.

ಆದರೆ, ಇನ್ಮೇಲೆ ಯಾರಿಗೂ ʻದೋಸೆಯಂತೆ ರೌಂಡಾಗಿದೆʼ ಎಂದು ಉದಾಹರಣೆ ಕೊಡಲು ಸಾಧ್ಯವಿಲ್ಲ. ಯಾಕೆಂದರೆ ಈ ಮೆಷೀನ್‌ನಲ್ಲಿ ಮಾಡಲಾಗುವ ದೋಸೆಯೆಲ್ಲವೂ ಆಯತಾಕಾರದ್ದು. ಪ್ರಿಂಟಿಂಗ್‌ ಮೆಷೀನಿನಲ್ಲಿ ಶೀಟು ಹೊರತೆಗೆದಂತೆ ಇಲ್ಲೂ ಎ-4 ಸೈಜ್‌ನ ದೋಸೆ ಹೊರತೆಗೆದು ಚಟ್ನಿ, ಸಾಂಬಾರಿನ ಜೊತೆ ಸವಿಯಬಹುದು!

ತಮಾಷೆಯಾಗಿ ಕಂಡರೂ ಸತ್ಯ. ಇದು ಕಂಡು ಕೇಳರಿಯದ ಹೊಸ ಪ್ರಾಡಕ್ಟು. ʻಇವೋಶೆಫ್‌ ಡಾಟ್‌ ಇನ್‌ʼ (https://evochef.in/) ಮೂಲಕ ಇದೀಗ ಮೊತ್ತಮೊದಲ ಬಾರಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ವಿಶ್ವದ ಮೊದಲ ಸ್ಮಾರ್ಟ್‌ ದೋಸೆ ಮೇಕರ್ ಅಂತೆ!‌ ಇಷ್ಟರವರೆಗೆ ಸ್ಯಾಂಡ್‌ವಿಚ್‌ ಮೇಕರ್‌, ಚಪಾತಿ ಮೇಕರ್‌ಗಳೆಲ್ಲ ಕೇಳಿದ್ದೆವು, ಈಗ ಮೊದಲ ಬಾರಿಗೆ ದೋಸೆ ಮೇಕರ್‌ ಕೂಡಾ ಭಾರೀ ಸದ್ದು ಮಾಡುತ್ತಾ ಮಾರುಕಟ್ಟೆಗೆ ಬಂದಿದೆ. ಸದ್ಯಕ್ಕೆ ಇದರ ಬೆಲೆ 15,999 ರೂಪಾಯಿಗಳು!

ತಮಾಷೆಯೆಂದರೆ, ಇದು ನೋಡಲು ಪ್ರಿಂಟರ್‌ನಂತೆಯೇ ಇದ್ದು, ದೋಸೆ ಹಿಟ್ಟು ಹಾಕಲು ಪ್ರತ್ಯೇಕ ಜಾಗವಿದೆ. ಈ ಭಾಗದಲ್ಲಿ ಹಿಟ್ಟು ಹಾಕಿ, ಸ್ವಿಚ್‌ ಅದುಮಿ, ಬೇಕಾದಷ್ಟು ದಪ್ಪದ ದೋಸೆ ಮಾಡಿಕೊಳ್ಳಲು ಇರುವ ಪ್ರತ್ಯೇಕ ಆಯ್ಕೆಯನ್ನು ಒತ್ತಿದರೆ, ನಿಮಗೆ ಬೇಕಾದಷ್ಟು ದಪ್ಪದ, ತೆಳುವಿನ ದೋಸೆ ಪ್ರಿಂಟ್‌ ಆಗಿ ಇನ್ನೊಂದು ಬದಿಯಿಂದ ಹೊರಬರುತ್ತದೆ. ಜೊತೆಗೆ ಅವರವರ ಅಗತ್ಯಕ್ಕೆ ತಕ್ಕಂತೆ ಆಮೇಲೆ, ಬಿಸಿ ದೋಸೆಗೆ ತುಪ್ಪ, ಎಣ್ಣೆ, ಚೀಸ್‌ ಹೀಗೆ ಯಾವುದು ಬೇಕಾದರೂ ಹಾಕಿ ಸವಿಯಬಹುದು.

ಇದನ್ನೂ ಓದಿ | ತೂಕ ಇಳಿಸಿಕೊಳ್ಳುವ ಸವಾಲು: ಬೆಳಗಿನ ಉಪಾಹಾರ ಬೇಕೋ? ಬೇಡವೋ?

ಸದ್ಯಕ್ಕೀಗ ಈ ದೋಸೆ ಪ್ರಿಂಟರ್‌, ಇಂಟರ್ನೆಟ್‌ ಜಗತ್ತನ್ನು ಇಬ್ಭಾಗವಾಗಿಸಿದೆ. ಕೆಲವರು ಇದೊಂದು ಪ್ರಪಂಚದ ಎಂಟನೇ ಅದ್ಭುತವೆಂಬಂತೆ ಸಂಭ್ರಮಿಸಿದ್ದು, ಇನ್ನೂ ಕೆಲವರು, ಇದೊಂದು ವೇಸ್ಟ್‌ ಪ್ರಾಡಕ್ಟ್‌ ಎಂದು ಮೂಗು ಮುರಿದಿದ್ದಾರೆ.

ʻದೋಸೆ ಮಾಡುವ ಮಜಾ ಇರೋದೆ ದೋಸೆ ಹುಯ್ಯೋದರಲ್ಲಿ. ಅಂಥದ್ದರಲ್ಲಿ, ಈ ಇಂಟರೆಸ್ಟಿಂಗ್‌ ಕೆಲಸವನ್ನೇ ಸರಳ ಮಾಡುವ ಹೆಸರಿನಲ್ಲಿ ಹಾಳುಗೆಡವಲಾಗಿದೆʼ ಎಂದು ಒಬ್ಬರು ಅಭಿಪ್ರಾಯ ಪಟ್ಟರೆ ಇನ್ನೊಬ್ಬರು, ʻದೋಸೆ ಹುಯ್ಯುವುದು ಕಷ್ಟದ ಕೆಲಸವಲ್ಲ. ದೋಸೆ ಹಿಟ್ಟು ರೆಡಿ ಮಾಡುವುದಷ್ಟೇ ದೋಸೆ ಮಾಡುವುದರಲ್ಲಿರುವ ಬಹಳ ಕಷ್ಟದ ಕೆಲಸ. ದೋಸೆ ಚೆನ್ನಾಗಿ ಆಗಬೇಕೆಂದರೆ ಪರ್ಫೆಕ್ಟ್‌ ಹಿಟ್ಟು ಬೇಕಾಗುತ್ತದೆ. ಹಿಟ್ಟು ಸರಿಯಿಲ್ಲದಿದ್ದರೆ ದೋಸೆ ಫ್ಲಾಪ್‌ ಶೋ. ಹಾಗಾಗಿ, ಈ ಮೆಷೀನು ಬಂದು ಅಂಥಾ ಉಪಯೋಗವೇನೂ ಆಗುವುದಿಲ್ಲ. ಚಪಾತಿ ಮೇಕರ್‌ನಲ್ಲಿ ಚಪಾತಿ ಹಿಟ್ಟನ್ನು ಅದುವೇ ಮಾಡುವ ಕಾರಣ ಅಂಥದ್ದೊಂದು ಮೆಷೀನಿನ ಅಗತ್ಯ ಅರ್ಥವಾಗುತ್ತದೆ. ಆದರಿಲ್ಲಿ, ಈ ಮೆಷೀನು ಕೇವಲ ದೋಸೆಯನ್ನು ಹುಯ್ಯುವುದು ಬಿಟ್ಟರೆ ಬೇರೇನನ್ನೂ ಮಾಡುವುದಿಲ್ಲ. ಹಾಗಾಗಿ ಇದೊಂದು ಕೆಟ್ಟ ಪ್ರಾಡಕ್ಟುʼ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.

ಇನ್ನೂ ಕೆಲವರಿಗೆ ಈ ಹೊಸ ಮೆಷೀನಿನ ಆವಿಷ್ಕಾರ ಸಂತಸ ತಂದಿದೆ. ʻಇದು ಯುವಜನರಿಗೆ ಹೇಳಿ ಮಾಡಿಸಿದಂತಿದೆ. ಮಾರುಕಟ್ಟೆಯಿಂದ ದೋಸೆ ಹಿಟ್ಟನ್ನು ತಂದರೂ ಹುಯ್ಯಲು ಕಷ್ಟ ಪಡುವ ಎಷ್ಟೋ ಮಂದಿಗೆ ಕ್ರಿಸ್ಪೀ ಆಗಿರುವ ದೋಸೆ ಮಾಡಲು ಇದು ಅನುಕೂಲವಾಗಿದೆ. ಹಾಗಾಗಿ ಇದರಿಂದ ಖಂಡಿತ ಅನೇಕ ಲಾಭಗಳಿವೆʼ ಎಂದಿದ್ದಾರೆ.

ಬಹಳಷ್ಟು ಸಾರಿ, ದೊಡ್ಡ ಕುಟುಂಬದ ಎಲ್ಲರಿಗೆ ಅಥವಾ ನೆಂಟರಿಷ್ಟರು ಸೇರಿದಂಥ ಸಂದರ್ಭ ಒಬ್ಬರೇ ನಿಂತು ಎಷ್ಟೋ ದೋಸೆಗಳನ್ನು ಹುಯ್ಯಬೇಕಾಗುತ್ತದೆ. ಹಾಗಾಗಿ ಅಂಥ ಸಂದರ್ಭಗಳಲ್ಲಿ ಇದು ಬಹಳ ಉಪಯೋಗಕ್ಕೆ ಬರಲಿದೆ. ಬಹಳಷ್ಟು ಸಮಯ ಉಳಿತಾಯ ಮಾಡಲಿದೆ. ಜೊತೆಗೆ ಇಂತಹ ಕ್ವಿಕ್‌ ದೋಸೆಗಳನ್ನು ಎಲ್ಲರೂ ಇನ್ನು ಮೇಲೆ ಜೊತೆಯಾಗಿ ಕೂತು ತಿನ್ನಬಹುದು ಎಂದಿದ್ದಾರೆ.

ಇನ್ನೂ ಕೆಲವರು, ಈ ದೋಸೆ ಮೇಕರ್‌ ಚಟ್ನಿಯನ್ನೂ ಮಾಡಿಕೊಡುತ್ತದೆಯೋ ಎಂದು ತಮಾಷೆ ಮಾಡಿದ್ದಾರೆ. ʻದೋಸೆ ಹಿಟ್ಟು ಈ ಪ್ರಿಂಟರ್‌ ಮೆಷೀನ್‌ ಒಳಗೆ ಸಿಕ್ಕಿಹಾಕಿಕೊಂಡರೆ, ಪ್ರಿಂಟ್‌ ಇಡ್ಲಿ ಸ್ವಿಚ್‌ ಒತ್ತಬೇಕೇ?, ಈ ಮೆಷೀನು ಪೇಪರ್‌ ದೋಸೆ ಬದಲು ಉತ್ತಪ್ಪ ಕೊಟ್ಟರೇನು ಮಾಡುವುದು?ʼ ಎಂದೂ ನಗೆಯಾಡಿದ್ದಾರೆ.

ಇದನ್ನೂ ಓದಿ | Food | ನಮ್ಮ ಖಾಲಿ ದೋಸೆ ಅಮೆರಿಕದ ರೆಸ್ಟೋರೆಂಟ್‌ನಲ್ಲಿ ಚಿತ್ರಾನ್ನ!

Exit mobile version