ಹಿಂದೊಂದು ಕಾಲದಲ್ಲಿ ಮೊಬೈಲ್ ಎಂದರೆ ಅದು ‘ನೋಕಿಯಾ’ ಎಂಬಂತಿತ್ತು. ಸಣ್ಣ ಬೇಸಿಕ್ ಸೆಟ್ನಿಂದ ಆ್ಯಂಡ್ರಾಯ್ಡ್ವರೆಗೆ ನೋಕಿಯಾ ಕಂಪನಿಯದ್ದೇ ಕಾರುಬಾರು. ಆದರೆ ಈಗ ಆ್ಯಂಡ್ರಾಯ್ಡ್ ಮಾರ್ಕೆಟ್ನಲ್ಲಿ ನೋಕಿಯಾ ಬೇಡಿಕೆ ಕುಸಿದಿದೆ. ನೋಕಿಯಾ ಸ್ಮಾರ್ಟ್ಫೋನ್ಗಳನ್ನು ಖರೀದಿಸುವವರೇ ಇಲ್ಲವೆಂಬಂತಾಗಿದೆ. ಇದೇ ಹೊತ್ತಲ್ಲಿ ನೋಕಿಯಾ ಕಂಪನಿ ಈಗ 60 ವರ್ಷಗಳ ನಂತರ ತನ್ನ ‘ಲೋಗೋ’ವನ್ನು ಬದಲಿಸಿದೆ.
ನೋಕಿಯಾ ತನ್ನ ಕಾರ್ಯತಂತ್ರ ಬದಲಿಸಿಕೊಂಡು, ಟೆಲಿಕಾಂ ಉಪಕರಣದ ಮಾರುಕಟ್ಟೆಯಲ್ಲಿ ಆಕ್ರಮಣಕಾರಿಯಾಗಿ ಮುಂದುವರಿಯಲು ಯೋಜನೆ ರೂಪಿಸಿದ್ದು, ಅದರ ಮೊದಲ ಹಂತವಾಗಿ ತನ್ನ ಬ್ರ್ಯಾಂಡ್ ಗುರುತನ್ನು ಬದಲಿಸಿಕೊಂಡಿದೆ. ಇಷ್ಟು ವರ್ಷಗಳ ಕಾಲ ಇದ್ದ ನೀಲಿ ಬಣ್ಣದ ಲೋಗೋವನ್ನು ಕೈಬಿಟ್ಟಿದೆ. ಇದೀಗ ಹೊಸ ಲೋಗೋದಲ್ಲಿ NOKIA ಎಂಬ ಶಬ್ದವನ್ನು ಐದು ವಿಭಿನ್ನ ಆಕಾರಗಳಲ್ಲಿ ರೂಪಿಸಲಾಗಿದ್ದು, ಗಮನಸೆಳೆಯುತ್ತದೆ. ಹಾಗೇ, ಲೋಗೊ ಬಳಕೆಗೆ ತಕ್ಕಂತೆ ಬಣ್ಣವನ್ನೂ ಬದಲಿಸುವುದಾಗಿ ಕಂಪನಿ ಹೇಳಿದೆ.
ಇದನ್ನೂ ಓದಿ: Nokia 5710 | 4,999 ರೂ.ಗೆ ನೋಕಿಯಾ 5710 ಫೋನ್! ಜತೆಗೇ ಇಯರ್‌ಬಡ್ಸ್ ಫ್ರೀ!
ಫಿನ್ಲ್ಯಾಂಡ್ ಮೂಲದ ನೋಕಿಯಾ ಕಂಪನಿಗೆ 2020ರಲ್ಲಿ ಸಿಇಒ ಆಗಿ ನೇಮಕಗೊಂಡಿರುವ ಪೆಕ್ಕಾ ಲುಂಡ್ಮಾರ್ಕ್ ಅವರು ಈ ಕಂಪನಿಯನ್ನು ಮತ್ತೆ ಉದ್ಧರಿಸಲು ನಿರ್ಧಾರ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಮರುಜೋಡಣೆ, ವೇಗ ಹೆಚ್ಚಳ ಮತ್ತು ಮಾನದಂಡ ಎಂಬ ಮೂರು ಹಂತದ ಕಾರ್ಯತಂತ್ರ ರೂಪಿಸಿದ್ದಾಗಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ನೋಕಿಯಾ ಕಂಪನಿಯನ್ನು ಮರು ಜೋಡಣೆ ಮಾಡುವ ಕೆಲಸ ಪೂರ್ಣಗೊಂಡಿದ್ದು, ಈಗ ಎರಡನೇ ಹಂತದಲ್ಲಿದ್ದೇವೆ. ಅಂದರೆ ನೋಕಿಯಾ ಕಂಪನಿಯ ಕಾರ್ಯ ವೇಗವನ್ನು ಹೆಚ್ಚಿಸುವ ಕೆಲಸದಲ್ಲಿ ತೊಡಗಿದ್ದೇವೆ ಎಂದೂ ಅವರು ತಿಳಿಸಿದ್ದಾರೆ.