Site icon Vistara News

Nothing phone (1) ಮಾರುಕಟ್ಟೆಯಲ್ಲಿ ಸೃಷ್ಟಿಸುತ್ತಿದೆ ಸಂಚಲನ

nothing phone(1)

ನವ ದೆಹಲಿ: ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ದಿನಕ್ಕೊಂದು ಹೊಸ ಬೆಳವಣಿಗೆಗಳು ನಡೆಯುತ್ತಿರುತ್ತವೆ. ಅಂತೆಯ ಇತ್ತೀಚಿನ ಸುದ್ದಿಯೆಂದರೆ ಒನ್‌ ಪ್ಲಸ್‌ ಕಂಪನಿಯ ಮಾಜಿ ಸಂಸ್ಥಾಪಕ ಕಾರ್ಲ್ ಪೀ ಅವರ ಹೊಸ ಸಂಸ್ಥೆ Nothing ತಯಾರಿಸಿರುವ ಹೊಸ ಸ್ಮಾರ್ಟ್‌ ಫೋನ್‌ nothing phone (1). ಈ ಮೊಬೈಲ್‌ ಜುಲೈ ೧೨ರಂದು ಭಾರತದಲ್ಲಿ ಬಿಡುಗಡೆಯಾಗಲಿದ್ದು, ಜಾಗತಿಕವಾಗಿಯೂ ಸಂಚಲನ ಮೂಡಿಸುತ್ತಿದೆ.

ಆಪಲ್‌ ಕಂಪನಿಯ ಐಫೋನ್‌ಗೆ ಪರ್ಯಾಯ ಎಂದೇ ಬಿಂಬಿಸುವ ಮೂಲಕ ಒನ್‌ಪ್ಲಸ್‌ ಮೊಬೈಲ್‌ಗಳಿಗೆ ಮಾರುಕಟ್ಟೆ ಕಂಡುಕೊಂಡಿದ್ದ ಕಾರ್ಲ್‌ ಪೀ, Nothing ಮೂಲಕವೂ ಕಡಿಮೆ ಬೆಲೆಯ ವಿಭಿನ್ನ ಆಂಡ್ರಾಯ್ಡ್‌ ಫೋನ್‌ಗಳು ನಮ್ಮದು ಎಂದು ಹೇಳಿಕೆ ನೀಡಿದ್ದಾರೆ. Nothing ಕಂಪನಿಯ ಮೂಲಕ ಅದಾಗಲೇ ಇಯರ್‌ ಬಡ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು, ಸಂಪೂರ್ಣವಾಗಿ ಪಾರದರ್ಶಕವಾಗಿರುವ ಈ ಸಾಧನಗಳು ಮಾರುಕಟ್ಟೆಯಲ್ಲಿ ಯಶಸ್ಸು ಕಂಡಿದೆ. ಅಂತೆಯೇ Nothing (೧) ಸ್ಮಾರ್ಟ್‌ಫೋನ್‌ನ ಹಿಂಭಾಗವೂ ಪಾರದರ್ಶಕ ಎಂದು ಹೇಳಲಾಗುತ್ತಿದೆ. ಅಮೆರಿಕದ ಟೆಕ್‌ ಯೂಟ್ಯೂಬರ್‌ ಮಾರ್ಕಸ್‌ ಬ್ರೌಲಿನ್‌ ಫೋನ್‌ನ ವಿಶೇಷತೆಯನ್ನು ಬಣ್ಣಿಸಿದ್ದು, ಪ್ರಮುಖವಾಗಿ ಎಲ್‌ಇಡಿ ಲೈಟ್‌ ನೋಟಿಫಿಕೇಷನ್‌ ಫೋನ್‌ನ ಆಕರ್ಷಣೆ ಎಂದಿದ್ದಾರೆ.

ಹೇಗಿದೆ ವಿನ್ಯಾಸ?

ಫೋನ್‌ ಹಿಂಭಾಗದ ವಿನ್ಯಾಸ ಹೇಗಿರಲಿದೆ ಎಂಬುದನ್ನು ಕಂಪನಿ ಈಗಾಗಲೇ ತಿಳಿಸಿದೆ. ಕಂಪನಿಯು ತಮ್ಮ ನಥಿಂಗ್‌ ಇಯರ್‌ಫೋನ್‌ ಮಾದರಿಯಲ್ಲೇ ಫೋನ್‌ ಕೂಡ ಪಾರದರ್ಶಕವಾಗಿ ಇರುವಂತೆ ನೋಡಿಕೊಂಡಿದೆ. ಅದರಲ್ಲಿ ಹಿಂಬದಿ ಕ್ಯಾಮೆರಾ ಅಳವಡಿಕೆ ಹಾಗೂ ವೈರ್‌ಲೆಸ್‌ ಚಾರ್ಜಿಂಗ್‌ ಕಾಯಿಲ್‌ ಹಾಗೂ ಇನ್ನಿತರ ಒಳಗಿನ ಭಾಗಗಳನ್ನು ನೋಡಲು ಸಾಧ್ಯವಿದೆ.

ಹಿಂಬದಿಯಲ್ಲಿ ಎಲ್‌ಇಡಿ ನೋಟಿಫಿಕೇಷನ್‌ ಬರುವುದೇ ಈ ಫೋನ್‌ನ ವಿಶೇಷತೆ. ಹಿಂಬದಿಯ ವಿನ್ಯಾಸಕ್ಕಾಗಿ ಕಂಪನಿಯು ಒಂದು ಫೋನ್‌ಗೆ ೯೦೦ ಎಲ್‌ಇಡಿಗಳನ್ನು ಬಳಸಿದೆ. ಇನ್ನು ಈ ವೈರ್‌ಲೆಸ್ ಚಾರ್ಜರ್‌ ಬಳಸಿಕೊಂಡು ಚಾರ್ಜ್‌ ಮಾಡಲು ಸಾಧ್ಯವಿದೆ. ಅದೇ ರೀತಿ ವೈರ್‌ ಚಾರ್ಜಿಂಗ್‌ ವ್ಯವಸ್ಥೆಯೂ ಇದರಲ್ಲಿದೆ. ಜತೆಗೆ ಎಲ್‌ಇಡಿ ಲೈಟ್‌ಗಳು ಬ್ಯಾಟರಿಯ ಚಾರ್ಜಿಂಗ್‌ ಹಂತವನ್ನು ತಿಳಿಸುತ್ತದೆ. ಜತೆಗೆ ಫೋಟೊ ತೆಗೆಯುವ ವೇಳೆಯೂ ಎಲ್‌ಇಡಿ ಲೈಟ್‌ಗಳು ಬಳಕೆದಾರರ ನೆರವಿಗೆ ಬರಲಿದೆ.

ಆಂಡ್ರಾಯ್ಡ್‌ ೧೨, Nothing UI

Nothing ಫೋನ್‌ನಲ್ಲಿ ಆಂಡ್ರಾಯ್ಡ್‌ ೧೨ ಲಭ್ಯವಿರುತ್ತದೆ. ಜತೆಗೆ Nothing ಅವರದ್ದೇ Nothing Launcher ಕೂಡ ಇರುತ್ತದೆ. ಫೋನ್‌ನ ಗಾತ್ರ ೬.೫೫ ಇಂಚು ಇರಲಿದ್ದು, ೨೪೦೦X 1200 ಪಿಕ್ಸೆಲ್‌ ರೆಸೆಲ್ಯೂಶನ್‌ ಹೊಂದಿರಲಿದೆ. ಸ್ನಾಪ್‌ಡ್ರಾಗನ್‌ ಜೆನ್‌ ೭ ಚಿಪ್‌ಸೆಟ್‌ ಹೊಂದಿರಲಿದ್ದು, ೮ ಜಿಬಿ ರ್ಯಾಮ್‌ ಹಾಗೂ ೨೫೬ ಆಂತರಿಕ ಸ್ಟೋರೇಜ್‌ ಸಾಮರ್ಥ್ಯ ಹೊಂದಿರಲಿದೆ. ಹಿಂಬದಿಯಲ್ಲಿ ಡ್ಯುಯೆಲ್‌ ಕ್ಯಾಮೆರಾ ಹಾಗೂ ೩೨ ಜಿಬಿ ಸೆಲ್ಫಿ ಕ್ಯಾಮೆರಾ ಇರಲಿದೆ. ೪೫೦೦ ಎಮ್‌ಎಎಚ್‌ ಸಾಮರ್ಥ್ಯದ ಬ್ಯಾಟರಿ ಹೊಂದಿರಲಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ

Nothing (೧) ಸ್ಮಾರ್ಟ್‌ಫೋನ್‌ ಜುಲೈ ೧೨ ರಾತ್ರಿ ೮.೩೦ಕ್ಕೆ ಭಾರತದಲ್ಲಿ ಮಾರುಕಟ್ಟೆಗೆ ಇಳಿಯಲಿದೆ. ಇ ಕಾಮರ್ಸ್‌ ಸಂಸ್ಥೆ ಫ್ಲಿಪ್‌ಕಾರ್ಟ್‌ ಭಾರತದಲ್ಲಿ ಈ ಫೋನ್‌ ಮಾರಾಟ ಮಾಡಲಿದೆ. ಕಂಪನಿ ಈಗಾಗಲೇ ಪ್ರೀ ಬುಕಿಂಗ್‌ ಆರಂಭಿಸಿದ್ದು, ೨೦೦ ರೂಪಾಯಿ ನೀಡಿ ಬುಕ್‌ ಮಾಡಬಹುದು. ಫೋನ್‌ನ ಬೆಲೆ ಘೋಷಣೆಯಾಗಿಲ್ಲ. ಆದರೆ, ಯೂಟ್ಯೂಬರ್‌ಗಳ ಪ್ರಕಾರ ೩೫ ಸಾವಿರದಿಂದ ೫೦ ಸಾವಿರ ರೂಪಾಯಿ ತನಕ ನಿಗದಿಯಾಗುವ ಸಾಧ್ಯತೆಗಳಿವೆ.

ಯಾರು ಈ ಕಾರ್ಲ್‌ ಪೀ?

ಸ್ವೀಡನ್‌ ಮೂಲದ ಉದ್ಯಮಿ ಕಾರ್ಲ್‌ ಪೀ ಅವರು ಪೀಟ್‌ ಲೂ ಅವರೊಂದಿಗೆ ಸೇರಿಕೊಂಡು ಒನ್‌ಪ್ಲಸ್‌ ಮೊಬೈಲ್‌ ತಯಾರಿಸಿದ ಬಳಿಕವೂ ವಿಭಿನ್ನ ರೀತಿಯಲ್ಲಿ ಮಾರುಕಟ್ಟೆಯಲ್ಲಿ ಯಶಸ್ಸು ಕಾಣುವಂತೆ ನೋಡಿಕೊಂಡಿದ್ದರು. ದುಬಾರಿ ಬೆಲೆಯ ಐಫೋನ್‌ಗಳಿಗೆ ಪರ್ಯಾಯವಾಗಿ ಅಷ್ಟೇ ಫೀಚರ್‌ಗಳನ್ನು ಹೊಂದಿರುವ ಕಡಿಮೆ ಬೆಲೆಯ ಫೋನ್‌ಗಳು ಎಂದು ಬಿಂಬಿಸಿದ್ದರು. ಆ ಮಾರುಕಟ್ಟೆ ತಂತ್ರ ಯಶಸ್ಸು ಕಂಡಿತ್ತು. ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಒನ್‌ಪ್ಲಸ್‌ ಮೊಬೈಲ್‌ ಮಾರುಕಟ್ಟೆಯ ರಾಜನಂತೆ ಮೆರೆಯುತ್ತಿದೆ.

ಅಂತೆಯೇ ಕಾರ್ಲ್‌ ಪೀ ೨೦೨೦ರಲ್ಲಿ ನಥಿಂಗ್‌ ಕಂಪನಿ ಸ್ಥಾಪನೆ ಮಾಡಿದ ಬಳಿಕ ಐಪಾಡ್‌ ಅನ್ವೇಷಕ ಕಂಪನಿ ಟೋನಿ ಫ್ಯಾಡೆಲ್‌, ಟ್ವಿಚ್‌ ಕೋ ಸಂಸ್ಥೆಯ ಕೆವಿನ್‌ ಲಿನ್‌, ರೆಡಿಟ್‌ನ ಸಿಇಒ ಹಫ್‌ಮನ್‌ ಸೇರಿದಂತೆ ದೊಡ್ಡ ಉದ್ಯಮಿಗಳು ಹೂಡಿಕೆ ಮಾಡಿದ್ದರು. ಇದೀಗ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಇಳಿಸುವ ಮೂಲಕ ಸ್ಮಾರ್ಟ್‌ಫೋನ್‌ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲು ಮುಂದಾಗಿದ್ದಾರೆ.

ನ್ನೂ ಓದಿ| Poco F4 5G ಸ್ಮಾರ್ಟ್‌ ಫೋನ್‌ ನಾಳೆ ಬಿಡುಗಡೆ

Exit mobile version