Site icon Vistara News

Rajeev Chandrasekhar: ಬರೋಬ್ಬರಿ 36,838 ಯುಆರ್‌ಎಲ್‌ಗಳಿಗೆ ನಿರ್ಬಂಧ; ಕಾರಣವೇನು?

rajiv chandrashekhar

rajiv chandrashekhar

ನವದೆಹಲಿ: 2018ರ ಜನವರಿ ಮತ್ತು ಅಕ್ಟೋಬರ್ ನಡುವೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (Ministry of Electronics and Information Technology) ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ 36,838 ಯೂನಿಫಾರ್ಮ್‌ ರಿಸೋರ್ಸ್‌ ಲೊಕೇಟರ್‌ (Uniform Resource Locator-URLs)ಗಳನ್ನು ನಿರ್ಬಂಧಿಸಿದೆ ಎಂದು ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.  ಸಿಪಿಐ(ಎಂ)ನ ಜಾನ್‌ ಬ್ರಿಟ್ಟಸ್‌ ಅವರ ಪ್ರಶ್ನೆಗೆ ಅವರು ಉತ್ತರಿಸಿದರು.

2018ರಲ್ಲಿ ಎಂಇಐಟಿವೈ (Ministry of Electronics and Information Technology-MeitY) 2,799 ಯುಆರ್‌ಎಲ್‌ಗಳನ್ನು ನಿರ್ಬಂಧಿಸಿದ್ದರೆ ಈ ವರ್ಷದ ಅಕ್ಟೋಬರ್‌ವರೆಗೆ 7,502 ಯುಆರ್‌ಎಲ್‌ಗಳನ್ನು ಬ್ಲಾಕ್‌ ಮಾಡಿದೆ. 2020ರಲ್ಲಿ ಗರಿಷ್ಠ ಸಂಖ್ಯೆಯ 9,849 ಯುಆರ್‌ಎಲ್‌ಗಳನ್ನು ನಿಷೇಧಿಸಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಐಟಿ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ನಿಯೋಜಿತ ಅಧಿಕಾರಿ, ಐಟಿ ಕಾರ್ಯದರ್ಶಿಯ ಅನುಮೋದನೆಯ ಮೇರೆಗೆ ಮತ್ತು 69 ಎ ನಿರ್ಬಂಧಿಸುವ ಸಮಿತಿಯ ಶಿಫಾರಸಿನ ಮೇರೆಗೆ ಆರು ಕಾರಣಗಳಿಗಾಗಿ ಯುಆರ್‌ಎಲ್‌ಗಳನ್ನು ನಿರ್ಬಂಧಿಸುವ ಅಧಿಕಾರ ಇದೆ. ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಭದ್ರತೆ, ವಿದೇಶಗಳೊಂದಿಗಿನ ಸ್ನೇಹ ಸಂಬಂಧಗಳು, ಸಾರ್ವಜನಿಕ ಸುವ್ಯವಸ್ಥೆ ಅಥವಾ ಯಾವುದೇ ಅಪರಾಧಕ್ಕೆ ಪ್ರಚೋದನೆ ನೀಡುವುದನ್ನು ತಡೆಗಟ್ಟಲು ಯುಆರ್‌ಎಲ್‌ಗಳನ್ನು ನಿರ್ಬಂಧಿಸುವ ಅಧಿಕಾರ ಇದೆ.

ಅಂಕಿ-ಅಂಶ

ಸಾಮಾಜಿಕ ಜಾಲತಾಣ ಎಕ್ಸ್ ಈ 70 ತಿಂಗಳ ಅವಧಿಯಲ್ಲಿ ಗರಿಷ್ಠ ಸಂಖ್ಯೆಯ ಯುಆರ್‌ಎಲ್‌ಗಳನ್ನು ನಿರ್ಬಂಧಿಸಿದೆ. 2018 ಮತ್ತು ಈ ವರ್ಷದ ಅಕ್ಟೋಬರ್ ನಡುವೆ, ಕೇಂದ್ರವು ಎಲಾನ್‌ ಮಸ್ಕ್ ಒಡೆತನದ ಎಕ್ಸ್‌ಗೆ 13,660 ನಿರ್ಬಂಧ ಆದೇಶಗಳನ್ನು ಕಳುಹಿಸಿದೆ. ಕಂಪನಿಯು 2018ರಲ್ಲಿ 224, 2019ರಲ್ಲಿ 1,041, 2020ರಲ್ಲಿ 2,731, 2021ರಲ್ಲಿ 2,851, 2022ರಲ್ಲಿ 3,423 ಮತ್ತು 2023ರಲ್ಲಿ ಅಕ್ಟೋಬರ್‌ವರೆಗೆ 3,390 ಯುಆರ್‌ಎಲ್‌ಗಳನ್ನು ನಿರ್ಬಂಧಿಸಿತ್ತು.

ಇನ್ನು 2018 ಮತ್ತು ಈ ವರ್ಷದ ಅಕ್ಟೋಬರ್ ನಡುವೆ ಸಚಿವಾಲಯವು ಫೇಸ್‌ಬುಕ್‌ಗೆ 10,197 ನಿರ್ಬಂಧ ಆದೇಶಗಳನ್ನು ಹೊರಡಿಸಿದೆ, 3,023 ಯುಆರ್‌ಎಲ್‌ಗಳನ್ನು ತೆಗೆದುಹಾಕಲು ಇನ್‌ಸ್ಟಾಗ್ರಾಮ್‌ಗೆ ಸೂಚಿಸಲಾಗಿದೆ. ಅದೇ ರೀತಿ ಯೂಟ್ಯೂಬ್‌ 5,759 ಯುಆರ್‌ಎಲ್‌ಗಳನ್ನು ಬ್ಲಾಕ್‌ ಮಾಡಿದೆ.

“ಭಾರತದಲ್ಲಿ ಇಂಟರ್ನೆಟ್ ಎಲ್ಲ ಬಳಕೆದಾರರಿಗೆ ಸುರಕ್ಷಿತ, ವಿಶ್ವಾಸಾರ್ಹ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಸರ್ಕಾರದ ನೀತಿಗಳು ಹೊಂದಿವೆ” ಎಂದು ರಾಜೀವ್‌ ಚಂದ್ರಶೇಖರ್ ತಿಳಿಸಿದರು.

ನಕಲಿ ಸುದ್ದಿ ತಡೆಗೆ ಫ್ಯಾಕ್ಟ್‌ ಚೆಕ್‌ ವಿಭಾಗ 

ಕೆಲವು ತಿಂಗಳ ಹಿಂದೆ ಕೇಂದ್ರ ಸರ್ಕಾರ ನಕಲಿ ಸುದ್ದಿಗಳ ಹಾವಳಿಯನ್ನು ತಡೆಯಲು ಮಹತ್ವದ ಹೆಜ್ಜೆ ಇರಿಸಿತ್ತು. ನಕಲಿ ಸುದ್ದಿಗಳನ್ನು ಪತ್ತೆ ಹಚ್ಚಲು ಕೇಂದ್ರ ಸರ್ಕಾರವು ನೂತನ ಫ್ಯಾಕ್ಟ್‌ ಚೆಕ್‌ ವಿಭಾಗವನ್ನು (Fact Check Body) ಘೋಷಿಸಿತ್ತು. ನಕಲಿ ಸುದ್ದಿಗಳನ್ನು ಪತ್ತೆ ಹಚ್ಚಲು, ನಿಯಂತ್ರಿಸಲು ಕೇಂದ್ರ ಸರ್ಕಾರವು ಒಂದು ತಂಡವನ್ನು ರಚಿಸುತ್ತದೆ. ವಿಭಾಗದಲ್ಲಿ ಸಂಪೂರ್ಣವಾಗಿ ಕೇಂದ್ರ ಸರ್ಕಾರಿ ಅಧಿಕಾರಿಗಳೇ ಇರಲಿದ್ದಾರೆ. ಇವರು ಆನ್‌ಲೈನ್‌ ಮೂಲಕ ಹರಡುವ ನಕಲಿ ಸುದ್ದಿಗಳನ್ನು ಪತ್ತೆ ಹಚ್ಚಿ, ಡಿಜಿಟಲ್‌ ಮೂಲಕ ಪ್ರಕಟಿಸಿದ ಸುದ್ದಿಗಳನ್ನು ಗುರುತಿಸಿ, ಆ ಸುದ್ದಿಗಳನ್ನು ತೆಗೆಯುವಂತೆ ಆಯಾ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಸುದ್ದಿಗಳನ್ನು ತೆಗೆಯಲು ಮೂರು ತಿಂಗಳ ಅವಕಾಶ ನೀಡಲಾಗುತ್ತದೆ. ಇದಾದ ಬಳಿಕವೂ ನಕಲಿ ಸುದ್ದಿ ತೆಗೆಯದಿದ್ದರೆ ಐಟಿ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದರು.

ಇದನ್ನೂ ಓದಿ: ಕಿರಿಕಿರಿಯುಂಟು ಮಾಡುವ ಎಸ್ಸೆಮ್ಮೆಸ್, ಧ್ವನಿ ಕರೆಗಳಿಗೆ ಟ್ರಾಯ್ ಬ್ರೇಕ್!

Exit mobile version