Site icon Vistara News

Research News: ಬರಲಿವೆ ಇನ್ನು ಮಳೆಯಿಂದ ವಿದ್ಯುತ್‌ ಉತ್ಪಾದಿಸುವ ಫಲಕಗಳು!

rain electricity panels

ಹೊಸದಿಲ್ಲಿ: ಸೌರಶಕ್ತಿಯಿಂದ ವಿದ್ಯುತ್‌ ಉತ್ಪಾದಿಸುವ ಸೋಲಾರ್‌ ಪ್ಯಾನೆಲ್‌ಗಳಂತೆ (Solar panel), ಮಳೆಹನಿಗಳನ್ನು ಸಂಗ್ರಹಿಸುವ ಮೂಲಕ ಶಕ್ತಿಯನ್ನು ಉತ್ಪಾದಿಸುವ (Electricity by Rain) ಸಾಧನವನ್ನು ಚೀನಾದ ಸಂಶೋಧಕರು (research news) ಅಭಿವೃದ್ಧಿಪಡಿಸಿದ್ದಾರೆ. ಈ ಸಂಶೋಧನೆ ಸಾಮಾನ್ಯ ಬಳಕೆಗೆ ಬಂದರೆ ಸದ್ಯದಲ್ಲೇ ನಾವು ಸೌರ ಫಲಕಗಳ ಜೊತೆಗೆ, ನಮ್ಮ ಮನೆಗಳ ಛಾವಣಿಗಳ ಮೇಲೆ ವಿದ್ಯುತ್‌ ಉತ್ಪಾದಿಸುವ ಮಳೆ ಫಲಕಗಳನ್ನು ಸಂಯೋಜಿಸಬಹುದು.

ಫೋಟೊವೋಲ್ಟಾಯಿಕ್ ಪ್ಯಾನೆಲ್‌ಗಳ ಬಗ್ಗೆ ನಮಗೆ ತಿಳಿದೇ ಇದೆ. ಇದು ವಿಶೇಷವಾಗಿ ಬಿಸಿಲು ಅಧಿಕವಾಗಿರುವ ಸ್ಥಳಗಳಲ್ಲಿ ಬಹಳ ಜನಪ್ರಿಯವಾಗಿದೆ. ಆದರೆ ಸೂರ್ಯನ ಬೆಳಕಿನ ಕಿರಣಗಳಿಗಿಂತ ಹೆಚ್ಚಾಗಿ ಮಳೆಹನಿಗಳು ಹೊಡೆಯುವ ಸಾಧ್ಯತೆಯಿರುವ ದೇಶದಲ್ಲಿ ನೀವು ವಾಸಿಸುತ್ತಿದ್ದರೆ, ವಿದ್ಯುತ್ ಉತ್ಪಾದನೆ ಹೇಗೆ ಸಾಧ್ಯ? ಚೀನಾದ ವಿಜ್ಞಾನಿಗಳ ತಂಡ ಈ ಪ್ರಶ್ನೆಗೆ ಉತ್ತರಿಸಲು ಯತ್ನಿಸಿದೆ.

ಇದರ ಮೂಲತತ್ವ ಸೌರ ಅಥವಾ ದ್ಯುತಿವಿದ್ಯುಜ್ಜನಕ ಫಲಕಗಳಂತೆಯೇ ಇರುತ್ತದೆ. ಇಲ್ಲಿ ಶಕ್ತಿಯ ಮೂಲ ಸೂರ್ಯನ ಬೆಳಕಲ್ಲ, ಬದಲು ಮಳೆನೀರು ವಿದ್ಯುತ್ ಆಗಿ ಪರಿವರ್ತನೆಯಾಗುತ್ತದೆ. “ಮಳೆಹನಿಗಳು ಚಲನಶಕ್ತಿ ಮತ್ತು ಸ್ಥಾಯೀವಿದ್ಯುತ್ತಿನ ಶಕ್ತಿ ಎರಡನ್ನೂ ಒಳಗೊಂಡಂತೆ ಹೇರಳವಾಗಿ ನವೀಕರಿಸಬಹುದಾದ ಶಕ್ತಿಯನ್ನು ಒಳಗೊಂಡಿರುತ್ತವೆ. ಅದನ್ನು ಪರಿಣಾಮಕಾರಿಯಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದು ಸಂಶೋಧನಾ ವಿಷಯ” ಎಂದು ಅಧ್ಯಯನದ ತಂಡ ಸೂಚಿಸಿದೆ.

ನೀರನ್ನು ಶಕ್ತಿಯ ಮೂಲವಾಗಿ ಪರಿವರ್ತಿಸುವ ತಂತ್ರ ಹೊಸದಲ್ಲ. ಜಲವಿದ್ಯುತ್‌ ಉತ್ಪಾದನೆಯಲ್ಲಿ ಇದನ್ನು ಕಾಣಬಹುದು. ಆದರೆ ಸಣ್ಣ ಪ್ರಮಾಣದಲ್ಲಿ ಬೀಳುವ ಮಳೆಹನಿಗಳನ್ನು ಇದಕ್ಕಾಗಿ ಬಳಸುವುದು ಹೇಗೆ? ಚೀನಾದ ತ್ಸಿಂಗ್ವಾ ವಿಶ್ವವಿದ್ಯಾಲಯದ ಸಂಶೋಧಕರು ಇದನ್ನು ಕಂಡುಹಿಡಿಯಲು, ಸುಧಾರಿಸಲು ಪ್ರಯತ್ನಿಸಿದ್ದಾರೆ. ಪ್ರತಿ ಚದರ ಮೀಟರ್‌ಗೆ 200 ವ್ಯಾಟ್‌ಗಳ ವಿದ್ಯುತ್‌ ಉತ್ಪಾದಿಸುವ, ಸೌರ ಫಲಕದಂತಿರುವ ಸಾಧನವನ್ನು ಅವರು ಅಭಿವೃದ್ಧಿಪಡಿಸಿದ್ದಾರೆ. “ಸಮಾನಾಂತರವಾಗಿ ಅನೇಕ ಸೌರ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸಂಪರ್ಕಿಸುವ ಸೌರ ಫಲಕಗಳ ವಿನ್ಯಾಸದಂತೆಯೇ ಮಳೆಹನಿ ಶಕ್ತಿ ಕೊಯ್ಲು ಮಾಡುವ ಸರಳ ಮತ್ತು ಪರಿಣಾಮಕಾರಿ ವಿಧಾನವನ್ನು ಈ ಅಧ್ಯಯನದಲ್ಲಿ ಪ್ರಸ್ತಾಪಿಸಲಾಗಿದೆ” ಎಂದು ಸಂಶೋಧಕರು ವಿವರಿಸಿದ್ದಾರೆ.

ಇಲ್ಲಿ ವಿವರಿಸಿದ ವಿಧಾನವು ಜಲವಿದ್ಯುತ್ ತತ್ವವನ್ನು ಆಧರಿಸಿದೆ; ಆದರೆ ಇದನ್ನು ದೊಡ್ಡ ಪ್ರಮಾಣದಲ್ಲಿ ಅನ್ವಯಿಸಿದೆ. ಹಲವಾರು ವಿಧದ ಜನರೇಟರ್‌ಗಳು ಹಾಗೂ ಪ್ಯಾನೆಲ್‌ಗಳ ಮೂಲಕ ಮಳೆಹನಿಯ ಶಕ್ತಿಯನ್ನು ಪರೀಕ್ಷಿಸಿದ ನಂತರ ಸಂಶೋಧಕರು ಅಂತಿಮವಾಗಿ ಗರಿಷ್ಠ ಉತ್ಪಾದನೆಯ ಜನರೇಟರ್‌ಗಳನ್ನು ಆವಿಷ್ಕರಿಸಿದ್ದಾರೆ. ಇದರ ಗರಿಷ್ಠ ವಿದ್ಯುತ್ ಉತ್ಪಾದನೆ ಸಾಂಪ್ರದಾಯಿಕ ಮಳೆಹನಿಯ ಶಕ್ತಿಗಿಂತ ಸುಮಾರು ಐದು ಪಟ್ಟು ಹೆಚ್ಚು ಎಂದು ಚೀನಾದ ಶೆನ್‌ಜೆನ್‌ನಲ್ಲಿರುವ ಸಿಂಗುವಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಮತ್ತು ಕೃತಿಯ ಸಹ-ಲೇಖಕ ಝೋಂಗ್ ಲಿ ಹೇಳಿದ್ದಾರೆ.

ಈ ಫಲಕಗಳನ್ನು ಈಗಷ್ಟೇ ಅಭಿವೃದ್ಧಿಪಡಿಸಲಾಗಿದೆ. ಮಾರುಕಟ್ಟೆಗೆ ಇವು ಇನ್ನೂ ಬಂದಿಲ್ಲ. ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಈ ಆವಿಷ್ಕಾರ ಹೆಚ್ಚು ಉಪಯೋಗಕ್ಕೆ ಬರಬಹುದು ಎಂದು ಊಹಿಸಲಾಗಿದೆ.

ಇದನ್ನೂ ಓದಿ: Viral News: ನೀರಿನಂತೆಯೇ ಇರುವ ಮಂಜುಗಡ್ಡೆಯನ್ನು ತಯಾರಿಸಿದ ವಿಜ್ಞಾನಿಗಳು!

Exit mobile version