Site icon Vistara News

Sanchar Saathi: 52 ಲಕ್ಷ ಫೇಕ್ ಮೊಬೈಲ್ ಸಂಪರ್ಕ ಸ್ಥಗಿತ, ಇದು ‘ಸಂಚಾರ್ ಸಾಥಿ’ ಕರಾಮತ್ತು!

Fake Mobile Connection

ನವದೆಹಲಿ: ಸಂಚಾರ್ ಸಾಥಿ (Sanchar Saathi Portal) ಜಾಲತಾಣದಲ ಮೂಲಕ 52 ಲಕ್ಷ ಫೇಕ್ ಮೊಬೈಲ್ ಸಂಪರ್ಕಗಳನ್ನು (Fake Mobile Connections) ಪತ್ತೆ ಹಚ್ಚಿ, ಆ ಸಂಪರ್ಕಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಈ ಫೇಕ್ ಮೊಬೈಲ್ ನಂಬರ್‌ಗಳನ್ನು ಬಳಸಿಕೊಂಡು ವಂಚನೆಗಳನ್ನು ಮಾಡಲಾಗುತ್ತಿತ್ತು. ಅಲ್ಲದೇ ದುರುಪಯೋಗವಾಗುವ ಸಾಧ್ಯತೆಗಳು ಹೆಚ್ಚಾಗಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು (Central Government) ಕಠಿಣ ನಿಲುವು ತಾಳಿಸಿದ್ದು, ಫೇಕ್ ಮೊಬೈಲ್ ಸಂಪರ್ಕಗಳನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸುವ ಕೆಲಸವನ್ನು ಮಾಡುತ್ತಿದೆ. ಸಂಚಾರ್ ಸಾಥಿ ಜಾಲತಾಣಕ್ಕೆ ಭೇಟೀ ನೀಡಲು ಇಲ್ಲಿ ಕ್ಲಿಕ್ ಮಾಡಿ.

ಫೇಕ್ ಮೊಬೈಲ್ ಸಂಪರ್ಕ ಮಾತ್ರವಲ್ಲದೇ, ನಿಯಮಗಳನ್ನು ಉಲ್ಲಂಘಿಸಿರುವ 300 ಸಿಮ್‌ ಕಾರ್ಡ್ ಡೀಲರ್‌ಗಳ ವಿರುದ್ದ 300ಕ್ಕೂ ಅಧಿಕ ಎಫ್ಐಆರ್‌ಗಳನ್ನು ದಾಖಲಿಸಲಾಗಿದೆ. 67ಕ್ಕೂ ಅಧಿಕ ಸಿಮ್ ಕಾರ್ಡ್ ಡೀಲರ್‌ಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿದ್ದಾರೆ.

ಸಂಚಾರ ಸಾಥಿ ಪೋರ್ಟಲ್ 17,000 ಕದ್ದ ಹ್ಯಾಂಡ್‌ಸೆಟ್‌ಗಳನ್ನು ನಿರ್ಬಂಧಿಸಿದೆ. 66,000 ಫೇಕ್ ವಾಟ್ಸಾಪ್ ಖಾತೆಗಳನ್ನು ಪತ್ತೆ ಹಚ್ಚಿದೆ. ಜತೆಗೆ 3 ಲಕ್ಷಕ್ಕೂ ಅಧಿಕ ಮೊಬೈಲ್ ಸೆಟ್‌ಗಳನ್ನು ಯಶಸ್ವಿಯಾಗಿ ಪತ್ತೆ ಹಚ್ಚಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಅವರು ತಿಳಿಸಿದ್ದಾರೆ.

ಸಿಮ್ ಡೀಲರ್‌ಗಳಿಗೆ ಪೊಲೀಸ್ ವೆರಿಫಿಕೇಷನ್ ಕಡ್ಡಾಯ

ಸಿಮ್‌ ಮಾರಾಟ ಡೀಲರ್‌ಗಳಿಗೆ (SIM Dealer) ಸಂಬಂಧಿಸಿದಂತೆ ಕೇಂದ್ರ ಸರ್ಕಾರವು (Central Government) ಕಠಿಣ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಸಿಮ್ ಡಿಲರ್‌ಗಳಿಗೆ ಪೊಲೀಸ್ ದೃಢೀಕರಣವನ್ನು (Police Verification) ಕಡ್ಡಾಯಗೊಳಿಸಲಾಗಿದೆ. ವಂಚನೆಯನ್ನು ತಪ್ಪಿಸುವುದಕ್ಕಾಗಿ ಬಲ್ಕ್ ಆಗಿ ಸಿಮ್‌ ಮಾರಾಟವನ್ನೂ (SIM bulk Sale) ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಸಿಮ್ ಮೂಲಕ ಮಾಡಲಾಗುವ ಮೋಸವನ್ನು ಗಣನೀಯವಾಗಿ ತಗ್ಗಿಸಲು ನೆರವು ದೊರೆಯಲಿದೆ. ಸಿಮ್‌ಗಳನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಇನ್ನು ಮುಂದೆ ಹೊಸ ಮೊಬೈಲ್ ಸಿಮ್ ಡೀಲರ್‌ಗಳಿಗೆ ಪೊಲೀಸ್ ಪರಿಶೀಲನೆ ಮತ್ತು ಬಯೋಮೆಟ್ರಿಕ್ ಪರಿಶೀಲನೆಯ ಕಡ್ಡಾಯವಾಗಿದೆ. ಈಗ ಎಲ್ಲಾ ಪಾಯಿಂಟ್ ಆಫ್ ಸೇಲ್ ಡೀಲರ್‌ಗಳಿಗೆ ನೋಂದಣಿ ಕಡ್ಡಾಯವಾಗಿದೆ. ಒಂದು ವೇಳೆ ಈ ನಿಯಮ ಉಲ್ಲಂಘಿಸಿದರೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಎಂದು ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Police Verification: ಸಿಮ್ ಮಾರಾಟಗಾರರಿಗೆ ಪೊಲೀಸ್ ವೆರಿಫಿಕೇಷನ್ ಕಡ್ಡಾಯ, ತಪ್ಪಿದ್ರೆ 10 ಲಕ್ಷ ರೂ. ದಂಡ!

ಬಲ್ಕ್ ಸಿಮ್ ಮಾರಾಟ ನಿಷೇಧ

ದೂರಸಂಪರ್ಕ ಇಲಾಖೆಯೂ ಬಲ್ಕ್ ಸಿಮ್ ಸಂಪರ್ಕ ನೀಡುವುದನ್ನು ಸ್ಥಗಿತಗೊಳಿಸಿದ್ದು, ಅದರ ಬದಲಾಗಿ ವ್ಯಾಪಾರ ಸಂಪರ್ಕದ (Business Connection) ಹೊಸ ಪರಿಕಲ್ಪನೆಯನ್ನು ಪರಿಚಯಿಸಲಾಗುವುದು. ಬಿಸಿನೆಸ್‌ ಕೆವೈಸಿ ಮಾತ್ರವಲ್ಲದೇ, ಆ ಸಿಮ್ ಪಡೆದುಕೊಳ್ಳುವ ವ್ಯಕ್ತಿಯ ಕೆವೈಸಿ ಕೂಡ ಪಡೆಯಲಾಗುವುದು ಎಂದು ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದ್ದಾರೆ. ಕಳೆದ ಮೇ ತಿಂಗಳಲ್ಲಿ ಪಂಜಾಬ್ ಪೊಲೀಸರು, ಫೇಕ್ ಗುರುತುಗಳ ಮೂಲಕ ಸಕ್ರಿಯಗೊಳಿಸಲಾಗಿದ್ದ 1.8 ಲಕ್ಷ ಸಿಮ್ ಕಾರ್ಡ್‌‌ಗಳನ್ನು ಬ್ಲಾಕ್ ಮಾಡಿದ್ದರು. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಮ್ ಮಾರಾಟ ಮಾಡಿದ್ದ 17 ಜನರನ್ನು ಬಂಧಿಸಿದ್ದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version