Site icon Vistara News

ವಿಸ್ತಾರ ಸಂಪಾದಕೀಯ : ವಿಜ್ಞಾನಿಗಳು ದೇಶದ ಹೆಮ್ಮೆ, ಅವರನ್ನು ಅವಹೇಳನ ಮಾಡುವುದೇಕೆ?

Rocket Scientist

ನಮ್ಮ ದೇಶದ ಹೆಮ್ಮೆಯ ಸಾಧನೆಯಾದ ಚಂದ್ರಯಾನ- 3ರ ನೌಕೆಯ ಆರ್ಬಿಟರ್‌ನಿಂದ ಲ್ಯಾಂಡರ್‌ ಕಳಚಿಕೊಂಡು ಚಂದ್ರನ ನೆಲದ ಮೇಲೆ ಕಾಲಿಡಲು ಮುಂದಾಗಿದೆ. ಆ ಸಿಹಿ ಸುದ್ದಿಯನ್ನು ಇಡೀ ದೇಶ ನಿರೀಕ್ಷಿಸುತ್ತಿದೆ. ಒಂದೆಡೆ ನಮಗಿಂತ ನಂತರ ಹೊರಟು ಅತಿವೇಗದಿಂದ ಸಾಗಿ ಚಂದ್ರನಲ್ಲಿ ಇಳಿಯುತ್ತೇವೆ ಎಂಬ ಹೆಮ್ಮೆಯಿಂದ ಹೊರಟ ರಷ್ಯಾದ ನೌಕೆ ವಿಫಲವಾಗಿದೆ. ಅದಕ್ಕೆ ಹೋಲಿಸಿದರೆ ನಮ್ಮ ನೌಕಾಯಾನ ಅತ್ಯಂತ ಕಡಿಮೆ ಖರ್ಚಿನದು; ಆದರೆ ಹಿಂದಿನ ವೈಫಲ್ಯದಿಂದ ಪಾಠ ಕಲಿತುಕೊಂಡು ನಿರ್ಮಿತವಾಗಿದ್ದು, ಈ ಬಾರಿ ಯಶಸ್ಸು ಖಾತ್ರಿ ಎಂಬ ಭರವಸೆ ಇದನ್ನು ರೂಪಿಸಿದ ವಿಜ್ಞಾನಿಗಳ ತಂಡದ್ದಾಗಿದೆ; ಹಾಗೆಯೇ ಇಡೀ ದೇಶದ್ದೂ ಆಗಿದೆ. ಚಂದ್ರಯಾನ 3 ಯಶಸ್ವಿಯಾದರೆ ಜಾಗತಿಕ ಬಾಹ್ಯಾಕಾಶ ರಂಗದಲ್ಲಿ ಭಾರತದ ಘನತೆ ಮತ್ತಷ್ಟು ಹೆಚ್ಚಲಿದೆ. ಇದು ಭಾರತೀಯರು ಹೆಮ್ಮೆ ಪಡುವ ಕ್ಷಣ.

ಆದರೆ ಭಿನ್ನ ರಾಜಕೀಯ ನಿಲುವುಗಳನ್ನು ಹೊಂದಿರುವ ಕಾರಣಕ್ಕಾಗಿಯೇ ಸರ್ಕಾರದ ಎಲ್ಲ ನಡೆಗಳನ್ನೂ ದ್ವೇಷಿಸುವವರು, ಈ ಚಂದ್ರಯಾನದಲ್ಲೂ ಹುಳುಕು ಹುಡುಕುತ್ತಿದ್ದಾರೆ. ಇವರಲ್ಲಿ ಹಲವರು ವಿರೋಧಿ ರಾಜಕೀಯ ಪಕ್ಷದವರಾಗಿದ್ದರೆ, ಇನ್ನು ಹಲವರು ಬುದ್ಧಿಜೀವಿಗಳೆಂದು ತಮ್ಮನ್ನು ಕರೆದುಕೊಳ್ಳುವವರು. ಈ ಸಾಲಿನಲ್ಲಿ ಸ್ವಯಂಘೋಷಿತ ಬುದ್ಧಿಜೀವಿ, ನಟ ಪ್ರಕಾಶ್‌ ರೈ ಕೂಡ ಇದ್ದಾರೆ. ಇವರು ನಮ್ಮ ಹೆಮ್ಮೆಯ ಇಸ್ರೊ ವಿಜ್ಞಾನಿಗಳನ್ನು ಅವಹೇಳನ ಮಾಡುವ ವ್ಯಂಗ್ಯಚಿತ್ರವನ್ನು ಹಂಚಿಕೊಂಡು ಗೇಲಿ ಮಾಡಿದ್ದಾರೆ. ಅವರು ಚಹಾ ಮಾರುತ್ತಿರುವ ಕೇರಳಿಗ ವ್ಯಕ್ತಿಯ ಕಾರ್ಟೂನ್‌ ಅನ್ನು ಎಕ್ಸ್‌(ಟ್ವಿಟರ್)ನಲ್ಲಿ ಹಂಚಿಕೊಂಡು, ʼಇದು ಚಂದ್ರಯಾನ ಕಳಿಸಿದ ಚಿತ್ರವೇ?ʼ ಎಂದು ಕ್ಯಾಪ್ಷನ್‌ ಹಾಕಿಕೊಂಡಿದ್ದಾರೆ. ಇಸ್ರೋದ ಇಂದಿನ ಮುಖ್ಯಸ್ಥರು (ಸೋಮನಾಥ ಪಣಿಕ್ಕರ್)‌ ಹಾಗೂ ಮಾಜಿ ಮುಖ್ಯಸ್ಥರು (ಕೆ.ಶಿವನ್) ಕೇರಳದವರು. ಇದು ನಿಸ್ಸಂಶಯವಾಗಿ ಮಲೆಯಾಳಿಗರನ್ನು ಗೇಲಿ ಮಾಡುವ ಪೋಸ್ಟ್.‌ ಮಾತ್ರವಲ್ಲ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಾಲ್ಯದಲ್ಲಿ ಟೀ ಮಾರುತ್ತಿದ್ದರು ಎಂಬ ಅಂಶವೂ ಈ ಪೋಸ್ಟ್‌ನ ವ್ಯಂಗ್ಯದ ಹಿಂದೆ ಇರುವಂತಿದೆ. ಹೀಗಾಗಿ ಇದು ಅವಹೇಳನಕ್ಕಾಗಿಯೇ ಮಾಡಿದ ಪೋಸ್ಟ್‌ ಎಂದು ಅರ್ಥವಾಗುತ್ತದೆ.

ಚಂದ್ರಯಾನದ ಯಶಸ್ವಿಗಾಗಿ ದೇಶಕ್ಕೆ ದೇಶವೇ ಕಾತುರದಿಂದ ಎದುರು ನೋಡುತ್ತಿರುವಾಗ, ವಿಶೇಷ ಪೂಜೆ-ಪ್ರಾರ್ಥನೆಯಲ್ಲಿ ಮುಳುಗಿರುವಾಗ ಕೆಲವು ವಿಘ್ನ ಸಂತೋಷಿಗಳು ಇಂಥ ಕುಹಕದಲ್ಲಿ ತೊಡಗಿರುವುದು ಖಂಡನೀಯ. ಈ ಹಿಂದೆ ಚಂದ್ರಯಾನದ ನೌಕೆಯ ಉಡಾವಣೆಗೆ ಮುನ್ನ ಇದರ ತಂಡದಲ್ಲಿದ್ದ ವಿಜ್ಞಾನಿಗಳು ತಿರುಪತಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ಇದರ ಯಶಸ್ಸಿಗಾಗಿ ಪ್ರಾರ್ಥಿಸಿದ್ದರು. ಇದು ಸುದ್ದಿಯಾಗಿದ್ದು ಮಾತ್ರವಲ್ಲದೆ, ಎಡಪಂಥೀಯ ಬುದ್ಧಿಜೀವಿಗಳ ವಲಯದಲ್ಲಿ ಕುಹಕ, ಗೇಲಿಗೆ ಕಾರಣವಾಗಿತ್ತು. ಇಸ್ರೊ ವಿಜ್ಞಾನಿಗಳು ದೇವರ ಮೊರೆ ಹೋಗಿರುವುದು, ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದನ್ನು ಅವರು ಟೀಕಿಸಿದ್ದರು. ದೇವರ ಕಲ್ಪನೆ, ಪೂಜೆ, ಪ್ರಾರ್ಥನೆಗಳೆಲ್ಲ ನಮ್ಮ ದೇಶದ ಜನಜೀವನದ ಅವಿಭಾಜ್ಯ ಅಂಗ. ಇದು ಜನರ ನಂಬಿಕೆಯ ಪ್ರಶ್ನೆ. ವಿಜ್ಞಾನಿಗಳೂ ಮನುಷ್ಯರೇ ಹೊರತು, ಅವರು ರೊಬಾಟ್‌ಗಳಲ್ಲ. ಅವರ ನಂಬಿಕೆಯನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ದೇವಸ್ಥಾನಕ್ಕೆ ಹೋದ ಕೂಡಲೇ ಅವರ ಪ್ರತಿಭೆ, ಸಾಧನೆ ಕ್ಷುಲ್ಲಕ ಆಗುವುದಿಲ್ಲ. ಅವರ ವೈಜ್ಞಾನಿಕ ಮನೋಭಾವ ಸುಳ್ಳಾಗುವುದಿಲ್ಲ.

ಇದನ್ನೂ ಓದಿ : ಸಂಪಾದಕೀಯ: ಅಗತ್ಯ ವಸ್ತುಗಳ ದರ ನಿಯಂತ್ರಿಸಿ ಹಣದುಬ್ಬರಕ್ಕೆ ಕಡಿವಾಣ ಹಾಕಬೇಕಿದೆ

ದೇಶವೇ ಹೆಮ್ಮೆ ಪಡುವ ಬಾಹ್ಯಾಕಾಶ ಸಾಧನೆಯನ್ನು ಕುಹಕದಿಂದ ನೋಡುವ ದೃಷ್ಟಿಕೋನವನ್ನು ಬುದ್ಧಿಜೀವಿಗಳೆಂದುಕೊಂಡವರು ಬದಲಿಸಿಕೊಳ್ಳಲಿ. ಹಿಂದೂ ಧರ್ಮೀಯರ ನಂಬಿಕೆ ಆಚರಣೆಗಳನ್ನು ಗೇಲಿ ಮಾಡುವುದನ್ನು ಇವರು ನಿಲ್ಲಿಸಲಿ. ನಮ್ಮ ಇಸ್ರೋ, ನಮ್ಮ ಹೆಮ್ಮೆ. ಇದರ ಸಾಧನೆ ನಮ್ಮ ಎದೆಯುಬ್ಬಲು, ಪುಳಕಗೊಳ್ಳಲು ಕಾರಣವಾಗಬೇಕು. ನಾವು ನಮ್ಮ ಬಾಹ್ಯಾಕಾಶ ಸಾಧನೆಯುನ್ನಷ್ಟೆ ಗಮನಿಸಬೇಕು ಹೊರತು ಅದರಲ್ಲಿ ಇಲ್ಲದ ಕೊಂಕುಗಳನ್ನು ಎತ್ತಿ ಆಡುವುದಲ್ಲ. ಹೀಗೆ ಮಾಡುವ ಮೂಲಕ ಈ ಛಿದ್ರಾನ್ವೇಷಿ ಸಮುದಾಯವು, ಹಲವು ಅನಾಹುತಗಳನ್ನು ಏಕಕಾಲದಲ್ಲಿ ಮಾಡುತ್ತಿದೆ. ನಮ್ಮ ದೇಶದ ಭವಿಷ್ಯದ ತಲೆಮಾರಿನಲ್ಲಿ ನಮ್ಮ ಸಾಧನೆಗಳ ಬಗ್ಗೆ ಸಿನಿಕತೆಯನ್ನು ಸೃಷ್ಟಿಸುತ್ತಿದೆ. ನಮ್ಮ ದೇಶಿ ಸಾಧನೆಗಳ ಬಗ್ಗೆ ಅಪಪ್ರಚಾರ, ಋಣಾತ್ಮಕತೆಯನ್ನು ಹಬ್ಬಿಸಿ ಇಡಿಯ ದೇಶವನ್ನು ನೈರಾಶ್ಯದತ್ತ ನೂಕುತ್ತಿದೆ. ಹಾಗೆ ಮಾಡುವ ಮೂಲಕ ದೇಶದ್ರೋಹಿಗಳು ಇಲ್ಲಿ ಕಾಲೂರಲು ಹುಲುಸಾದ ನೆಲವನ್ನು ಸೃಷ್ಟಿಸುತ್ತಿದೆ.

ಚಂದ್ರನ ಅಂಗಳದಲ್ಲಿ ಭಾರತದ ನೌಕೆ ಯಶಸ್ವಿಯಾಗಿ ಇಳಿಯುವ ಕ್ಷಣವನ್ನು ನಾವು ಎದುರು ನೋಡೋಣ. ನಮ್ಮ ವಿಜ್ಞಾನಿಗಳ ಸಾಧನೆ ನಮ್ಮ ಹೆಮ್ಮೆಯಾಗಿರಲಿ. ನಾಲ್ಕು ಒಳ್ಳೆಯ ಮಾತಾಡಿದರೆ ಹಲ್ಲು ಉದುರಿಹೋಗುವುದಿಲ್ಲ. ಅವರು ಚಂದ್ರನನ್ನು ಮುಟ್ಟಿದ್ದಾರೆ. ನಾವು ಸಹಜೀವಿಗಳ ಹೃದಯವನ್ನಾದರೂ ಮುಟ್ಟುವುದು ಬೇಡವೇ?

Exit mobile version