ಬೆಂಗಳೂರು: ಸ್ಕೋಡಾ ಕಂಪನಿಯ ಜನಪ್ರಿಯ ಸೆಡಾನ್ ಕಾರು ಸ್ಲಾವಿಯಾ, ಜಾಗತಿಕ ಸುರಕ್ಷತಾ ಮಾನದಂಡವಾಗಿರುವ ಗ್ಲೋಬಲ್ ಎನ್ಕ್ಯಾಪ್ನಲ್ಲಿ 5ಕ್ಕೆ ಐದು ರೇಟಿಂಗ್ ಪಡೆದುಕೊಂಡಿದೆ. ಈ ಮೂಲಕ ಭಾರತದ ಅತ್ಯಂತ ಸುರಕ್ಷಿತ ಸೆಡಾನ್ ಕಾರು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಇದೇ ವೇಳೆ ಭಾರತೀಯ ಮಾರುಕಟ್ಟೆಯಲ್ಲಿ ಸ್ಕೋಡಾ ಕಾರುಗಳಿಗ ಬೇಡಿಕೆ ಹೆಚ್ಚಾಗಿದೆ ಎಂಬ ಮಾಹಿತಿಯನ್ನೂ ಕಂಪನಿ ಬಹಿರಂಗಪಡಿಸಿದೆ.
2021ರಲ್ಲಿ ಜೆಕ್ ಗಣರಾಜ್ಯದ ಕಂಪನಿಯಾಗಿರುವ ಸ್ಕೋಡಾ ಇಂಡಿಯಾ 2.0 ಎಂಬ ಸುರಕ್ಷತಾ ಯೋಜನೆಯನ್ನು ಘೋಷಿಸಿತ್ತು. ಅದರ ಭಾಗವಾಗಿ ಸ್ಲಾವಿಯಾ ಕಾರಿಗೆ ಜಾಗತಿಕ ಸುರಕ್ಷತಾ ಮಾನದಂಡದಲ್ಲಿ 5ಕ್ಕೆ ಐದು ಅಂಕಗಳನ್ನು ಪಡೆಯಲು ಸಾಧ್ಯವಾಗಿದೆ. ಸ್ಲಾವಿಯಾ ಸೆಡಾನ್ ಹಿರಿಯರಿಗೆ ಹಾಗೂ ಮಕ್ಕಳಿಗೆ ಸಮಾನ ರೀತಿಯಲ್ಲಿ ಸುರಕ್ಷತೆಯನ್ನು ನೀಡುವಂಥ ಕಾರು ಎನಿಸಿಕೊಂಡಿದೆ.
ಸ್ಕೋಡಾ ಕಂಪನಿಯ 2021ರಲ್ಲಿ ಇಂಡಿಯಾ 2.0 ಯೋಜನೆಯ ಮೂಲಕ ಕಾರುಗಳ ನಿರ್ಮಾಣ ಮಾಡಲು ಆರಂಭಿಸಿತು. ಕುಶಾಕ್ ಹಾಗೂ ಸ್ಲಾವಿಯಾ ಈ ಪ್ರಾಜೆಕ್ಟ್ನ ಪ್ರಮುಖ ಕಾರುಗಳಾಗಿವೆ. ಈ ಎರಡು ಕಾರುಗಳಿಗೆ ಭಾರತದಲ್ಲಿ ದೊಡ್ಡ ಪ್ರಮಾಣದ ಬೇಡಿಕೆ ಸೃಷ್ಟಿಯಾಗಿದೆ. ಹೀಗಾಗಿ 2022ರಲ್ಲಿ ಒಟ್ಟು 53,271 ಕಾರುಗಳನ್ನು ಮಾರಾಟ ಮಾಡಿದೆ. ಇದು 202ರ ಮಾರುಕಟ್ಟೆ ಲೆಕ್ಕಾಚಾರಕ್ಕೆ ಹೋಲಿಸಿದರೆ ಶೇಕಡಾ 125 ಪ್ರಗತಿ ಸಾಧನೆ. 2021ರಲ್ಲಿ ಸ್ಕೋಡಾ ಇಂಡಿಯಾ 23, 858 ಕಾರುಗಳನ್ನು ಮಾರಾಟ ಮಾಡಿತ್ತು.
ಜೆಕ್ ಗಣರಾಜ್ಯದ ಕಂಪನಿಯಾಗಿರುವ ಸ್ಕೋಡಾಗೆ ಭಾರತ ಮೂರನೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಹೀಗಾಗಿ ಎಸ್ಯುವಿ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಕುಶಾಕ್ ಅನ್ನು ಹೊಸ ಫ್ಲಾಟ್ಫಾರ್ಮ್ನಲ್ಲಿ ಬಿಡುಗಡೆ ಮಾಡಿತ್ತು. ಅದು ಜನಪ್ರಿಯತೆ ಪಡೆದುಕೊಂಡು ಒಂದೇ ವರ್ಷದಲ್ಲಿ 45 ಸಾವಿರಕ್ಕೂ ಅಧಿಕ ಕಾರುಗಳು ಮಾರಾಟವಾಗಿವೆ.
ಸ್ಕೋಡಾ ಮತ್ತ ಸ್ಲಾವಿಯಾ ಕಾರುಗಳನ್ನು MQB A0 IN ಪ್ಲಾಟ್ಫಾರ್ಮ್ನಲ್ಲಿ ನಿರ್ಮಿಸಲಾಗುತ್ತಿದೆ. ಇದನ್ನು ಭಾರತದಲ್ಲಿರುವ ಸ್ಕೋಡಾ ತಂಡವೇ ಅಭಿವೃದ್ಧಿ ಮಾಡಿದೆ. ಇದು ಹೆಚ್ಚು ಸುರಕ್ಷಿತ ಹಾಗೂ ಕಡಿಮೆ ನಿರ್ವಹಣಾ ವೆಚ್ಚಕ್ಕೆ ಪೂರಕವಾಗಿದೆ.
ಇದನ್ನೂ ಓದಿ : Maruti Suzuki : 25.51 ಕಿಲೋ ಮೀಟರ್ ಮೈಲೇಜ್ ಕೊಡುವ ಮಾರುತಿ ಸುಜುಕಿ ಬ್ರೆಜಾ ಬಿಡುಗಡೆ
ಸ್ಲಾವಿಯಾದ ಯಶಸ್ಸಿನ ಕುರಿತು ಮಾತನಾಡಿದ ಸ್ಕೋಡಾ ಆಟೋ ಇಂಡಿಯಾದ ಬ್ರಾಂಡ್ ನಿರ್ದೇಶಕ ಪೀಟರ್ ಸಾಲ್ಡ್, ನಮ್ಮ ಇಂಡಿಯಾ 2.0 ಯೋಜನೆಯ ಎರಡನೇ ಕಾರಾಗಿರುವ ಸ್ಲಾವಿಯಾ ಗ್ಲೋಬಲ್ ಎನ್ಕ್ಯಾಪ್ನಲ್ಲಿ ಗರಿಷ್ಠ 5 ರೇಟಿಂಗ್ ಪಡೆದಿರುವುದನ್ನು ತಿಳಿಸಲು ಖುಷಿಯಾಗುತ್ತಿದೆ. ಇದು ನಮ್ಮ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸಿದೆ. ಈ ಮೂಲಕ ಸ್ಲಾವಿಯಾ ಭಾರತೀಯ ಕಾರು ಮಾರುಕಟ್ಟೆಯ ಅತ್ಯಂತ ಸುರಕ್ಷಿತ ಕಾರು ಎಂಬ ಹೆಗ್ಗಳಿಕೆ ಗಳಿಸಿದೆ. ನಮ್ಮ ಕಾರುಗಳು ಸುರಕ್ಷತೆ ಹಾಗೂ ಬಾಳಿಕೆ ವಿಚಾರಕ್ಕೆ ಬಂದಾಗ ಅಗ್ರ ಸ್ಥಾನ ಪಡೆಯುತ್ತದೆ ಎಂದು ಹೇಳಿದರು.
ಕಾರಿನ ಎಂಜಿನ್ ಸಾಮರ್ಥ್ಯವೇನು?
ಸ್ಕೋಡಾ ಸ್ಲಾವಿಯಾ 1 ಲೀಟರ್ ಹಾಗೂ 1.5 ಲೀಟರ್ ಟರ್ಬೊ ಎಂಜಿನ್ ಆಯ್ಕೆಯೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಎರಡೂ ಎಂಜಿನ್ಗಳಲ್ಲಿ 6 ಸ್ಪೀಡ್ನ ಮ್ಯಾನುಯಲ್ ಹಾಗೂ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ. ಈ ಎಂಜಿನ್ 147. 52 ಬಿಎಚ್ಪಿ ಪವರ್ ಹಾಗೂ 250 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. 1 ಲೀಟರ್ ಎಂಜಿನ್ 19.47 ಕಿಲೋ ಮೀಟರ್ ಮೈಲೇಜ್ ಕೊಟ್ಟರೆ, 1500 ಸಿಸಿಯ ಎಂಜಿನ್ 18.72 ಕಿಲೋ ಮೀಟರ್ ಮೈಲೇಜ್ ಒದಗಿಸುತ್ತದೆ.
ಕ್ರಿಸ್ಟಲ್ ಬ್ಲ್ಯೂ, ಟೊರ್ನಾಡೊ ರೆಡ್, ಕಾರ್ಬನ್ ಸ್ಟೀಲ್, ಬ್ರಿಲಿಯಂಟ್ ಸಿಲ್ವರ್ ಹಾಗೂ ಕ್ಯಾಂಡಿ ವೈಟ್ ಎಂಬ ಐದು ಬಣ್ಣಗಳ ಆಯ್ಕೆಯೊಂದಿಗೆ ಕಾರು ಲಭ್ಯವಿದೆ. ಕಾರಿನಲ್ಲಿ 521 ಲೀಟರ್ ಬೂಟ್ ಸ್ಪೇಸ್ ಲಭ್ಯವಿದೆ.
ಆರು ಏರ್ಬ್ಯಾಗ್ಗಳು, ಎಬಿಎಸ್, ಇಬಿಡಿ, ಐಸೋಫಿಕ್ಸ್ ಚೈಲ್ಡ್ ಸೀಟ್, ಟೈರ್ ಪ್ರೆಶರ್ ಮಾನಿಟರಿಂಗ್, ಹಿಲ್ ಹೋಲ್ಡ್ ಅಸಿಸ್ಟ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ಹಲವು ಫೀಚರ್ಗಳು ಕಾರಿನಲ್ಲಿ ಲಭ್ಯವಿದೆ.
ಸ್ಲಾವಿಯಾ ಕಾರಿನ ಬೇಸಿಕ್ ವರ್ಷನ್ 11.39 ಲಕ್ಷ ರೂಪಾಯಿ ಮೌಲ್ಯ ಹೊಂದಿದ್ದರೆ, ಟಾಪ್ ಎಂಡ್ ಕಾರಿಗೆ 18.45 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ.