Site icon Vistara News

Smart Watch: ಸ್ಮಾರ್ಟ್‌ವಾಚ್‌ಗಳು ನೀಡಬಲ್ಲವು ಪಾರ್ಕಿನ್ಸನ್‌ ಕಾಯಿಲೆಯ ಸೂಚನೆ!

Smart Watch

ಹೊಸದಿಲ್ಲಿ: ಸ್ಮಾರ್ಟ್‌ವಾಚ್‌ಗಳು (Smart Watch) ಸುಮಾರು ಏಳು ವರ್ಷಕ್ಕೂ ಮೊದಲೇ ಧರಿಸಿದ ವ್ಯಕ್ತಿಗೆ ಭವಿಷ್ಯದಲ್ಲಿ ಬರಬಹುದಾದ ಪಾರ್ಕಿನ್ಸನ್‌ ರೋಗದ (parkinson’s disease) ಸೂಚನೆ ಕೊಡಬಲ್ಲವು ಎಂದು ಹೊಸ ಅಧ್ಯಯನದಿಂದ ಗೊತ್ತಾಗಿದೆ.

ವಿಜ್ಞಾನಿಗಳ ತಂಡವೊಂದು ಸುಮಾರು 1,03,000 ಜನರನ್ನು ವೈದ್ಯಕೀಯವಾಗಿ ಅಧ್ಯಯನ ಮಾಡಿದ್ದು, ಧರಿಸುವ ಗ್ಯಾಜೆಟ್‌ಗಳನ್ನು ಏಳು ದಿನಗಳ ಕಾಲ ಧರಿಸುವಂತೆ ಮಾಡಿ ಪರೀಕ್ಷೆಗೊಡ್ಡಿದೆ. ಇವರ ಚಲನೆಯ ವೇಗವನ್ನು ನಿರಂತರವಾಗಿ ಪರೀಕ್ಷಿಸಿದೆ.

ಪಾರ್ಕಿನ್ಸನ್‌ ಕಾಯಿಲೆಯು ವ್ಯಕ್ತಿಯ ಕೇಂದ್ರ ನರವ್ಯವಸ್ಥೆಯನ್ನು ಬಾಧಿಸುತ್ತದೆ. ವ್ಯಕ್ತಿಯ ಚಲನೆಯನ್ನು ನಿರ್ಬಂಧಿಸುತ್ತದೆ. ದೇಹದಲ್ಲಿ ಕಂಪನಗಳನ್ನು ಉಂಟುಮಾಡುತ್ತದೆ. ಸಾಮಾನ್ಯವಾಗಿ ಬಳಸುವ ಸ್ಮಾರ್ಟ್‌ವಾಚ್‌ಗಳೇ ಈ ಕಾಯಿಲೆಯ ಪೂರ್ವಭಾವಿ ಮುನ್ಸೂಚನೆಗಳನ್ನು ಕೊಡಬಲ್ಲವು ಎನ್ನುತ್ತಾರೆ ವಿಜ್ಞಾನಿಗಳು.

ಪಾರ್ಕಿನ್ಸನ್‌ ಕಾಯಿಲೆಯ ಸೂಚನೆಗಳು ಬಲು ನಿಧಾನವಾಗಿ ಬಹಳ ಕಾಲದ ಅಂತರದಲ್ಲಿ ಒಂದೊಂದೇ ಕಾಣಿಸಿಕೊಳ್ಳುತ್ತವೆ. ಹೀಗಾಗಿ, ಈ ಕಾಯಿಲೆ ಡಯಾಗ್ನೋಸ್‌ ಆಗುವ ಹೊತ್ತಿಗೆ ಸರಿಪಡಿಸಲಾಗದ ಹಾನಿಯಾಗಿರುತ್ತದೆ.

ಈ ಅಧ್ಯಯನದಲ್ಲಿ 2013ರಿಂದ 2016ರ ಅವಧಿಯಲ್ಲಿ ಪ್ರಯೋಗಗಳನ್ನು ಮಾಡಲಾಗಿದ್ದು, ಇದರಲ್ಲಿ ಪಾರ್ಕಿನ್ಸನ್‌ ಕಾಯಿಲೆ ಇರುವವರೂ ಸೇರಿದ್ದರು. ಈ ಪ್ರಯೋಗದ ಏಳು ವರ್ಷ ನಂತರದ ಡೇಟಾ ಕೂಡ ಸಂಗ್ರಹಿಸಲಾಗಿದ್ದು, ಹಲವರಲ್ಲಿ ಪಾರ್ಕಿನ್ಸನ್‌ ಕಂಡುಬಂದಿದೆ. ಇದನ್ನು ಪ್ರಯೋಗದ ಡೇಟಾ ಸಮರ್ಥಿಸಿದೆ. ಅಂದರೆ ಸ್ಮಾರ್ಟ್‌ವಾಚ್‌ಗಳು ಹಲವು ವರ್ಷಗಳಿಗೆ ಮುನ್ನವೇ ಈ ಕಾಯಿಲೆಯನ್ನು ಸೂಚಿಸಬಲ್ಲವು ಎಂದು ಖಚಿತವಾಗಿದೆ.

ಕಾರ್ಡಿಫ್‌ ಯೂನಿವರ್ಸಿಟಿಯ ಯುಕೆ ಡಿಮೆನ್ಷಿಯ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನ ಅಧ್ಯಯನ ಮುಖ್ಯಸ್ಥ ಡಾ. ಸಿಂಥಿಯಾ ಸ್ಯಾಂಡರ್‌ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಕಾಯಿಲೆಗೆ ಪೂರ್ವಭಾವಿಯಾಗಿಯೇ ಚಿಕಿತ್ಸೆ ಪಡೆದುಕೊಳ್ಳಲು ಈ ಅಧ್ಯಯನ ಸಹಕಾರಿಯಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ: Apple Watch | ಪತಿಯಿಂದಲೇ ಜೀವಂತ ಸಮಾಧಿಯಾಗಿದ್ದ ಮಹಿಳೆಯನ್ನು ಆತನಿಂದ ರಕ್ಷಿಸಿದ್ದು ಆ್ಯಪಲ್​ ​ವಾಚ್​ !

Exit mobile version