Site icon Vistara News

WhatsApp Down | ವಾಟ್ಸ್‌ಆ್ಯಪ್ ಸೇವೆಗೆ ಅಡಚಣೆ ಉಂಟಾಗಿರುವುದು ಈ ಎಲ್ಲ ಕಾರಣಗಳಿಂದ

ಬೆಂಗಳೂರು : ಅತಿ ಹೆಚ್ಚು ಸೇವಾದಾರರನ್ನು ಹೊಂದಿರುವ ವಾಟ್ಸ್‌ಆ್ಯಪ್ (whatsAPP) ಸೇವೆಯಲ್ಲಿ ಮಂಗಳವಾರ (ಅಕ್ಟೋಬರ್‌ ೨೫ರಂದು) ಎರಡು ಗಂಟೆಗಳ ಕಾಲ ಅಡಚಣೆ ಉಂಟಾಗಿತ್ತು. ದೀಪಾವಳಿ ಹಬ್ಬದ ಶುಭಾಶಯಗಳನ್ನು ಕಳುಹಿಸುವ ಹುಮ್ಮಸ್ಸಿನಲ್ಲಿದ್ದ ಮಂದಿಗೆ ಇದರಿಂದ ನಿರಾಸೆಯಾಗಿತ್ತು. ಸಾಕಷ್ಟು ಮಂದಿ ತಮ್ಮ ಮೊಬೈಲ್‌ನಲ್ಲೇ ಏನೂ ಸಮಸ್ಯೆ ಇರಬಹುದು ಎಂದು ಪದೇಪದೆ ರೀಸ್ಟಾರ್ಟ್‌ ಮಾಡಿದ್ದರು. ಅದರಿಂದ ಏನೂ ಪ್ರಯೋಜನ ಆಗಿರಲಿಲ್ಲ. ಸುಮಾರು ಎರಡು ಗಂಟೆಗಳ ಬಳಿಕ ಸಮಸ್ಯೆ ಪರಿಹಾರಗೊಂಡಿತ್ತು.

ಈ ಸಮಸ್ಯೆ ಭಾರತಕ್ಕೆ ಮಾತ್ರ ಸೀಮಿತಗೊಂಡಿರಲಿಲ್ಲ. ಕೀನ್ಯಾ, ಇಂಡೋನೆಷ್ಯಾ ಹಾಗೂ ಸ್ಪಾನಿಷ್‌ ಭಾಷೆ ಮಾತನಾಡುವ ಪ್ರದೇಶಗಳಲ್ಲಿ ಇದೇ ಸಮಸ್ಯೆ ತಲೆದೋರಿತ್ತು. ಗ್ರಾಹಕರು ತಕ್ಷಣ ಟ್ವಿಟರ್‌ ಮೂಲಕ #WhatsAppDown ಹ್ಯಾಷ್‌ಟ್ಯಾಗ್‌ ಮೂಲಕ ದೂರು ಹೇಳಿದ್ದರು. ಬಳಿಕ ಪ್ರತಿಕ್ರಿಯೆ ಕೊಟ್ಟಿದ್ದ ಮೆಟಾ ಸಂಸ್ಥೆ “ಸಮಸ್ಯೆ ನಮ್ಮ ಅರಿವಿಗೆ ಬಂದಿದೆ. ತಕ್ಷಣದಲ್ಲೇ ಸಮಸ್ಯೆಯನ್ನು ಬಗೆ ಹರಿಸಲಾಗುವುದು,” ಎಂದು ಹೇಳಿತ್ತು. ಅಂತೆಯೇ ಸಮಸ್ಯೆ ಕೊನೆಗೊಂಡಿತ್ತು. ಆದರೆ, ಮೆಸೇಜ್ ಹೋಗದಿರಲು ಕಾರಣ ಏನೆಂಬುದನ್ನು ವಿವರಿಸಿರಲಿಲ್ಲ

ಯಾಕಿರಬಹುದು?

೨೦೨೧ರಲ್ಲೂ ಒಮ್ಮೆ ಇದೇ ಮಾದರಿಯ ಸಮಸ್ಯೆ ಭಾರತದಲ್ಲಿ ಕಂಡುಬಂದಿತ್ತು. ಆಗ ವಾಟ್ಸ್‌ಆ್ಯಪ್ ಸೇವೆ ಆರು ಗಂಟೆಗಳ ಕಾಲ ಇರಲಿಲ್ಲ. ಆಗ ಮೆಟಾ ಒಡೆತನದ ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಮ್‌ ಹಾಗೂ ಫೇಸ್‌ಬುಕ್‌ನಲ್ಲಿ ಸಮಸ್ಯೆ ಕಂಡು ಬಂದಿತ್ತು. ಆಗ ಡಿಎನ್‌ಎಸ್‌ (Domain Name System) ಸಮಸ್ಯೆ ಎಂದು ಹೇಳಲಾಗಿತ್ತು. ಅದೇ ಸಮಸ್ಯೆ ಈ ಬಾರಿಯೂ ಬಂದಿದೆ ಎನ್ನಲಾಗಿದೆ. ಮನುಷ್ಯರು ಓದಬಲ್ಲ ಹೋಸ್ಟ್ ಹೆಸರುಗಳನ್ನು ಕಚ್ಚಾ, ಸಂಖ್ಯಾ IP ವಿಳಾಸಗಳಿಗೆ ಭಾಷಾಂತರಿಸುವುದು ಇದರ ಕೆಲಸವಾಗಿದೆ. ಇದು ಕೈಕೊಟ್ಟಾಗ ಬಿಜಿಪಿ (Broader Gateway Protocol) ಮೂಲಕ ಸಮಸ್ಯೆ ಬಗೆಹರಿಸಲಾಗುತ್ತದೆ.

ಫೇಸ್‌ಬುಕ್‌ಗೆ ಸುಮಾರು ೩೦೦ ಕೋಟಿ ಹಾಗೂ ವಾಟ್ಸ್‌ಆ್ಯಪ್‌ಗೆ ೨೦೦ ಕೋಟಿ ಬಳಕೆದಾರರು ಇದ್ದಾರೆ. ಹೀಗಾಗಿ ಅದರ ಡೇಟಾ ಸೆಂಟರ್‌ಗಳನ್ನು ಒಂದೇ ಕಡೆ ಇಟ್ಟಿರುವುದಿಲ್ಲ. ಹೀಗಾಗಿ ಯಾವುದೊ ಒಂದು ಭಾಗದ ಡೇಟಾ ಸೆಂಟರ್‌ನಲ್ಲಿ ಸಮಸ್ಯೆ ಉಂಟಾದರೆ ಆ ಪ್ರದೇಶದ ಜನರಿಗೆ ಸಮಸ್ಯೆ ಆಗುತ್ತಿದೆ.

ಬಳಕೆದಾರರ ಸಂಖ್ಯೆ ಹೆಚ್ಚಾದಾಗ ಉತ್ಪನ್ನಗಳನ್ನ ಬದಲಿಸಲಾಗುತ್ತದೆ. ಇಂಥ ಬದಲಾವಣೆಯನ್ನು ಬೃಹತ್‌ ಪ್ರಮಾಣದ ಬಳಕೆದಾರರಿಗೆ ಮೊದಲೇ ತಿಳಿಸುವುದಿಲ್ಲ. ಹಂತ ಹಂತವಾಗಿ ಬದಲಿಸಲಾಗುತ್ತದೆ. ಈ ವೇಳೆಯೂ ಒಂದೊಂದು ಭಾಗದ ಗ್ರಾಹಕರಿಗೆ ಸಮಸ್ಯೆ ತಲೆದೋರುತ್ತದೆ.

ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ ಹಾಗೂ ವಾಟ್ಸ್‌ಆ್ಯಪ್ ಸೇವೆಗಾಗಿ ಮೂರನೇ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆ ಕಂಪನಿಯಲ್ಲೂ ಸಮಸ್ಯೆ ಉಂಟಾದರೆ ವಾಟ್ಸ್‌ಆ್ಯಪ್ ಗ್ರಾಹಕರಿಗೆ ಸಮಸ್ಯೆಯಾಗುತ್ತದೆ.

ಇದನ್ನೂ ಓದಿ | WhatsApp is OK | ವಾಟ್ಸ್ಆ್ಯಪ್‌ಗೆ ಹಿಡಿದಿದ್ದ ಗ್ರಹಣ ವಿಮೋಚನೆ! ನೀವೀಗ ಸಂದೇಶ ಕಳುಹಿಸಬಹುದು!

Exit mobile version