ಬೆಂಗಳೂರು : ಕಾರ್ಟೂನ್ಗಳಲ್ಲಿ, ಸಿನಿಮಾಗಳಲ್ಲಿ ಕಾರುಗಳು ಮಾತನಾಡುವುದನ್ನು ನಾವು ನೋಡಿದ್ದೇವೆ. ಕಾರಿನಲ್ಲಿ ಕುಳಿತವರ ಜತೆ ಪ್ರಯಾಣದುದ್ದಕ್ಕೂ ಸಂಭಾಷಣೆ ಮಾಡುತ್ತಾ, ಮಧ್ಯೆ ತಲೆ ಹರಟೆ ಮಾಡುತ್ತಾ, ಐಡಿಯಾಗಳನ್ನು ಕೊಡುತ್ತಾ ಹೋಗುವುದನ್ನು ನೋಡುವುದು ಒಂಥರಾ ಖುಷಿ. ಇಂಥದ್ದೊಂದು ಕಾನ್ಸೆಫ್ಟ್ (BMW Vision DEE) ವಾಸ್ತವ ಜಗತ್ತಿಗೆ ಬರುವ ದಿನಗಳು ದೂರವಿಲ್ಲ. ಪ್ರಯಾಣಿಕರ ಜತೆ ತನ್ನ ಭಾವನೆಯನ್ನು ಮಾತಿನ ಮೂಲಕ ವ್ಯಕ್ತಪಡಿಸುವ ಕಾರೊಂದನ್ನು ಜರ್ಮನಿ ಮೂಲದ ಕಾರು ತಯಾರಕ ಕಂಪನಿ ಬಿಎಂಡಬ್ಲ್ಯು ತಯಾರಿಸಿ ರಸ್ತೆಗಿಳಿಸಲಿದೆ. ಇದು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಎಲೆಕ್ಟ್ರಿಕ್ ಕಾನ್ಸೆಫ್ಟ್ ಕಾರಾಗಿದ್ದು, ವರ್ಚುಯಲ್ ಲೋಕಕ್ಕೆ ಪ್ರಯಾಣಕ್ಕೆ ಕೊಂಡೊಯ್ಯಲಿದೆ.
ಕಾರಿನಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಟೆಕ್ನಾಲಜಿ ಇರಲಿದ್ದು, ಪ್ರಯಾಣದ ಅವಧಿಯಲ್ಲಿ ತನಗೆ ಅನಿಸಿದನ್ನು ಹೇಳುತ್ತದೆ. ಕಾರು ಪಕ್ಕಾ ಗೋಸುಂಬೆಯಂತೆ ವರ್ತಿಸಲಿದ್ದು, ಬೇಕಾದ ಹಾಗೆ ಬಣ್ಣವನ್ನು ಕೂಡ ಬದಲಿಸಲಿದೆ. ಕಾರಿನ ಚಾಲಕ ಒಟ್ಟು 32 ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಅಗತ್ಯಕ್ಕೆ ತಕ್ಕ ಹಾಗೆ ಕಾರು ಬಣ್ಣ ಬದಲಾಯಿಸುತ್ತದೆ.
ವಿಷನ್ ಡಿಇಇ ಕಾರಿನಲ್ಲಿ ಒಟ್ಟು 240 ಭಾಗಗಳಿದ್ದು, ಅವುಗಳ ಮೂಲಕ ಕಾರಿನ ಬಣ್ಣವನ್ನು ಬದಲಾಯಿಸುವ ತಾಂತ್ರಿಕತೆಯನ್ನು ನಿರ್ಮಿಸಲಾಗಿದೆ. ಕಾರಿನ ಬಾಡಿಯ ನಾನಾ ಭಾಗಗಳಲ್ಲಿ ಬಣ್ಣಗಳು ಬದಲಾಗಲಿದ್ದು, ಟಯರ್ ಕೂಡ ಬಣ್ಣವನ್ನು ಬದಲಿಸಿಕೊಳ್ಳಲಿದೆ. ಕಾರಿನ ಹೆಡ್ಲೈಟ್ ಹಾಗೂ ಗ್ರಿಲ್ಗಳು ಚಾಲಕನ ಮುಖಭಾವಕ್ಕೆ ತಕ್ಕ ಹಾಗೆ ಹಾವಭಾವಗಳನ್ನು ವ್ಯಕ್ತಪಡಿಸಲಿದೆ ಎಂದು ಬಿಎಂಡಬ್ಲ್ಯು ಹೇಳಿದೆ.
ವಿಷನ್ ಡಿಇಇ ಕಾರು ಪ್ರಯಾಣಿಕರನ್ನು ಸಂಪೂರ್ಣವಾಗಿ ಡಿಜಿಟಲ್ ಲೋಕಕ್ಕೆ ಕೊಂಡೊಯ್ಯಲಿದೆ. ವಿಂಡ್ ಶೀಲ್ಡ್ ಹಾಗೂ ಬದಿಯಲ್ಲಿರುವ ಗಾಜುಗಳಲ್ಲಿ ಮಾಹಿತಿ ಹಾಗೂ ಮನೋರಂಜನೆಯ ಕಣಜವಾಗಿರಲಿದೆ. ಜತೆಗೆ ಮಾತಿಗೂ ಸ್ಪಂದನೆ ಕೊಡಲಿದೆ. ಈ ಕಾರಿನ ಹೆಡ್ ಅಪ್ ಡಿಸ್ಪ್ಲೇ ವಿಂಡ್ಶೀಲ್ಡ್ಗೆ ಪೂರ್ತಿಯಾಗಿ ಆವರಿಸಿಕೊಳ್ಳಲಿದೆ, ಜೇಮ್ಸ್ ಬಾಂಡ್ ಸಿನಿಮಾದ ಕಲ್ಪನೆಗಳು ಸಾಕಾರಗೊಳ್ಳುವುದು ಖಚಿತ.
ಇಷ್ಟೆಲ್ಲ ಅತ್ಯಾಧುನಿಕ ಫೀಚರ್ಗಳನ್ನು ಹೊಂದಿರುವ ಈ ಕಾರು ರಸ್ತೆಗೆ ಇಳಿಯುವುದಕ್ಕೆ ಇನ್ನೆರಡು ವರ್ಷ ಕಾಯಬೇಕು. 2025ರಿಂದ ಕಾರಿನ ಉತ್ಪಾದನೆಯನ್ನು ಆರಂಭಿಸುತ್ತೇವೆ ಎಂದು ಕಂಪನಿ ಹೇಳಿದೆ. ಈ ಕಾರಿನಲ್ಲಿ 27 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, ಪನೋರಮಿಕ್ ಸನ್ರೂಫ್, ಪಾಪ್ ಅಫ್ ಸ್ಟೀರಿಂಗ್ ವೀಲ್ ಇರುತ್ತದೆ.
ಇದನ್ನೂ ಓದಿ | Royal Enfield | ಹಂಟರ್ ಮೇನಿಯಾ; ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಮಾರಾಟದಲ್ಲಿ ಭರ್ಜರಿ ಏರಿಕೆ