Site icon Vistara News

Twitter Blue Tick: ಸಿಎಂ ಯೋಗಿ, ಶಾರುಖ್ ಖಾನ್​, ರಾಹುಲ್ ಗಾಂಧಿ ಸೇರಿ ಹಲವರ ಅಕೌಂಟ್​​ನಿಂದ ಬ್ಲ್ಯೂಟಿಕ್​ ಕಿತ್ತೆಸೆದ ಟ್ವಿಟರ್​; ಹಣ ತುಂಬಿಲ್ಲವಂತೆ!

Top Indians lost their Twitter blue tick

#image_title

ನವ ದೆಹಲಿ: ಸೆಲೆಬ್ರಿಟಿಗಳ ಟ್ವಿಟರ್​ ಖಾತೆಗೆ ಬ್ಲ್ಯೂಟಿಕ್​ (ಹೆಸರಿನ ಎದುರು ನೀಲಿ ಬಣ್ಣದ ಒಂದು ಮಾರ್ಕ್-Twitter Blue Tick​) ಇರುವುದು ಸಾಮಾನ್ಯ. ಹೀಗೆ ತಮ್ಮ ಟ್ವಿಟರ್ ಖಾತೆಗೆ ಬ್ಲ್ಯೂಟಿಕ್​ ಪಡೆದಿದ್ದ ಭಾರತದ ಹಲವು ಕ್ರಿಕೆಟ್ ಆಟಗಾರರು, ಸಿನಿತಾರೆಯರು, ರಾಜಕೀಯ ನಾಯಕರು ಈಗದನ್ನು ಕಳೆದುಕೊಂಡಿದ್ದಾರೆ. ಅವರಿಗೆ ನೀಡಿದ್ದ ನೀಲಿ ಬಣ್ಣದ ಮಾರ್ಕ್​ನ್ನು ಟ್ವಿಟರ್ ಕಂಪನಿಯೇ ತೆಗೆದುಹಾಕಿದೆ. ಎಲಾನ್​ ಮಸ್ಕ್​ ಸಿಇಒ ಆದ ಮೇಲೆ ಟ್ವಿಟರ್​​ನಲ್ಲಿ ಹಲವು ಬದಲಾವಣೆಗಳು ಆಗಿವೆ. ಅದರಲ್ಲಿ ಒಂದು ಈ ಬ್ಲ್ಯೂಟಿಕ್​​ಗಳಿಗೆ ಹಣ ಪಾವತಿ ಮಾಡುವ ವ್ಯವಸ್ಥೆ. ಭಾರತದಲ್ಲಿ ವೆಬ್​ ಟ್ವಿಟರ್​ ಬಳಕೆದಾರರು ತಿಂಗಳಿಗೆ 650 ರೂಪಾಯಿ ಮತ್ತು ಮೊಬೈಲ್​ ಆ್ಯಪ್​​ ಬಳಕೆದಾರರು ತಿಂಗಳಿಗೆ 900 ರೂಪಾಯಿ ತುಂಬಿ, ಈ ಬ್ಲ್ಯೂಟಿಕ್​ ಸೌಲಭ್ಯವನ್ನು ಉಳಿಸಿಕೊಳ್ಳಬೇಕಾಗಿದೆ. ಹಾಗೇ, ಯಾರಾದರೂ ಬ್ಲ್ಯೂಟಿಕ್​ ಪಡೆಯಬೇಕು ಎಂದರೂ ವರ್ಷಕ್ಕೆ/ತಿಂಗಳಿಗೆ ಎಂದು ಇಂತಿಷ್ಟು ಹಣ ಪಾವತಿಸಿ, ಚಂದಾದಾರರು ಆಗಬೇಕು.

ಟ್ವಿಟರ್ ಹೊಸದಾಗಿ ಪರಿಚಯಿಸಿದ ಈ ಹಣ ಪಾವತಿ ವ್ಯವಸ್ಥೆ ನಿಯಮವನ್ನು ಪಾಲಿಸದ ಕಾರಣ ಭಾರತದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಇನ್ನೂ ಹಲವು ರಾಜಕೀಯ ನಾಯಕರ, ಸಿನಿಮಾ ತಾರೆಯರಾದ ಶಾರುಖ್​ ಖಾನ್​, ಅಮಿತಾಭ್ ಬಚ್ಚನ್​, ಅಲಿಯಾ ಭಟ್​, ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್​ ಸೇರಿ ಅನೇಕಾನೇಕರ ಟ್ವಿಟರ್​ ಅಕೌಂಟ್​​ಗಿದ್ದ ವೆರಿಫಿಕೇಶನ್​ ಮಾರ್ಕ್ ಆದ ಬ್ಲ್ಯೂಟಿಕ್​ನ್ನು ತೆಗೆದುಹಾಕಲಾಗಿದೆ. ಭಾರತದಲ್ಲಿ ಅಷ್ಟೇ ಅಲ್ಲ, ವಿಶ್ವದ ವಿವಿಧ ದೇಶಗಳ ಇನ್ನೂ ಹಲವು ಗಣ್ಯರ ಟ್ವಿಟರ್ ಅಕೌಂಟ್ ಕೂಡ ಬ್ಲ್ಯೂಟಿಕ್​​ನ್ನು ಕಳೆದುಕೊಂಡಿದೆ.

ಸಾಮಾನ್ಯವಾಗಿ ಯಾವುದೇ ಕ್ಷೇತ್ರದ ಗಣ್ಯರ ಹೆಸರಲ್ಲಿ ವಿವಿಧ ನಕಲಿ ಅಕೌಂಟ್​ಗಳು, ಅವರ ಅಭಿಮಾನಿಗಳು ಸೃಷ್ಟಿಸುವ ಟ್ವಿಟರ್ ಅಕೌಂಟ್​​ಗಳು ಜಾಸ್ತಿ ಇರುತ್ತವೆ. ಹೀಗಾಗಿ ನಿರ್ದಿಷ್ಟ ಆ ಗಣ್ಯರ ಅಧಿಕೃತ ಖಾತೆಗೆ ಬ್ಲ್ಯೂಟಿಕ್ ನೀಡುವ ಮೂಲಕ ಅಥಂಟಿಕೇಶನ್ ಮಾಡಲಾಗುತ್ತಿತ್ತು. ಯಾರ ಅಕೌಂಟ್​ಗೆ ಈ ಬ್ಲ್ಯೂಟಿಕ್​ ಇರುತ್ತದೆಯೋ ಅದು ಅವರ ನಿಜವಾದ ಟ್ವಿಟರ್ ಅಕೌಂಟ್​ ಎಂಬುದು ಖಾತರಿ ಆಗುತ್ತಿತ್ತು. ಎಲಾನ್ ಮಸ್ಕ್​ ಅವರು ಟ್ವಿಟರ್ ಖರೀದಿ ಮಾಡುವುದಕ್ಕೂ ಮೊದಲು ಈ ನೀಲಿ ಟಿಕ್​ ಪಡೆಯಲು ಅನುಸರಿಸಬೇಕಾದ ನಿಯಮಗಳು ಬೇರೆ ಇದ್ದವು. ಆದರೆ ಎಲಾನ್​ ಮಸ್ಕ್​ ಸಿಇಒ ಆದ ಬಳಿಕ ಕ್ರಮಗಳು ಬದಲಾಗಿವೆ. ನೀಲಿಟಿಕ್​ ಪಡೆಯಲು ಚಂದಾದಾರಿಕೆ ಪಡೆಯುವುದನ್ನು ಅವರು ಕಡ್ಡಾಯ ಮಾಡಿದ್ದಾರೆ. ಹೀಗೆ ಹೊಸ ನಿಯಮದ ಪ್ರಕಾರ ಯಾರೆಲ್ಲ ಇನ್ನೂ ಹಣ ತುಂಬಿಲ್ಲವೋ, ಅವರ ಟ್ವಿಟರ್​ ಅಕೌಂಟ್​​ನ ಬ್ಲ್ಯೂಟಿಕ್​ ತೆಗೆದುಹಾಕಲಾಗಿದೆ.

ಇದನ್ನೂ ಓದಿ: Twitter: ಇನ್ನು ಟ್ವಿಟರ್‌ನಿಂದಲೂ ಬಳಕೆದಾರರು ಹಣ ಗಳಿಸಬಹುದು! ಎಲಾನ್ ಮಸ್ಕ್ ಹೇಳಿದ್ದೇನು?

Exit mobile version