ಬೆಂಗಳೂರು : ಟೊಯೊಟಾ ಕಂಪನಿಯ ಬಹುನಿರೀಕ್ಷಿತ ಹೈಬ್ರಿಡ್ ಎಸ್‌ಯುವಿ ಕಾರು, ಅರ್ಬನ್ ಕ್ರೂಸರ್ ಹೈರೈಡರ್‌ನ(Urban Cruiser Hyryder) ಬೆಲೆಯನ್ನು ಸೆಪ್ಟೆಂಬರ್ ೯ರಂದು ಪ್ರಕಟಿಸಲಾಗಿದೆ. ಕಾರಿನ ಆರಂಭಿಕ ಬೆಲೆ ೧೫.೧೧ ಲಕ್ಷ ರೂಪಾಯಿ (ಎಕ್ಸ್ ಶೋರೂಮ್). ಟಾಪ್ ಎಂಡ್ ಮಾಡೆಲ್ ಕಾರಿನ ಬೆಲೆ ೧೮. ೯೯ ಲಕ್ಷ ರೂಪಾಯಿ ಎಂದು ಕಂಪನಿ ಹೇಳಿದೆ. ಸದ್ಯ ಸ್ಟ್ರಾಂಗ್ ಹೈಬ್ರಿಡ್ ಹಾಗೂ ಮೈಲ್ಡ್ ಹೈಬ್ರಿಡ್ ಮಾದರಿಯ ಟಾಪ್ ಎಂಡ್ ವೇರಿಯೆಂಟ್‌ಗಳ ಬೆಲೆಯನ್ನು ಮಾತ್ರ ಪ್ರಕಟಿಸಿದೆ. ಉಳಿದ ಕಾರುಗಳ ದರವನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಹೇಳಿದೆ.
ಹೈರೈಡರ್ ಎಸ್‌ಯುವಿ ಕಾರುಗಳು ಇ, ಎಸ್, ಜಿ, ಮತ್ತು ವಿ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಆದರೆ, ಸ್ಟ್ರಾಂಗ್ ಹೈಬ್ರಿಡ್ ಕಾರುಗಳು ಎಸ್, ಜಿ ಮತ್ತು ವಿ ಎಂಬ ಮೂರು ವೇರಿಯೆಂಟ್‌ಗಳಲ್ಲಿ ಮಾತ್ರ ರಸ್ತೆಗೆ ಇಳಿಯಲಿವೆ. ಮೈಲ್ಡ್ ಹೈಬ್ರಿಡ್‌ನ ಎಸ್, ಜಿ ಮತ್ತು ವಿ ವೇರಿಯೆಂಟ್‌ನ ಕಾರುಗಳಲ್ಲಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳಿವೆ.
ಎಂಜಿನ್ ಸಾಮರ್ಥ್ಯ
ಅರ್ಬನ್ ಕ್ರೂಸರ್ ಹೈರೈಡರ್ ಮೈಲ್ಡ್ ಹೈಬ್ರಿಡ್ ಹಾಗೂ ಸ್ಟ್ರಾಂಗ್ ಹೈಬ್ರಿಡ್ ಎಂಬ ಎರಡು ಪೆಟ್ರೋಲ್ ಎಂಜಿನ್‌ಗಳ ಆಯ್ಕೆ ನೀಡಿದೆ. ಮೈಲ್ಡ್ ಹೈಬ್ರಿಡ್ ಕಾರಿನಲ್ಲಿ ೧.೫ ಲೀಟರ್ ಸಾಮರ್ಥ್ಯದ ನಾಲ್ಕು ಸಿಲಿಂಡರ್‌ಗಳ ಎಂಜಿನ್ ಇದ್ದು, ಗರಿಷ್ಠ ೧೦೩ ಎಚ್‌ಪಿ ಪವರ್ ಹಾಗೂ ೧೩೭ ಎನ್‌ಎಮ್ ಟಾರ್ಕ್ಯೂ ಬಿಡುಗಡೆ ಮಾಡುತ್ತದೆ. ೫ ಸ್ಪೀಡ್ ಮ್ಯಾನುಯಲ್ ಎಂಜಿನ್ ಹಾಗೂ ೬ ಸ್ಪೀಡ್‌ನ ಟಾರ್ಕ್ ಕನ್ವರ್ಟೆಡ್ ಆಟೋಮ್ಯಾಟಿಕ್ ಟ್ರಾನ್ಸಿಮಿಷನ್ ಇದು ಹೊಂದಿದೆ. ಟೊಯೊಟಾ ಕಂಪನಿ ಈ ಎಂಜಿನ್‌ಗೆ “Neo Drive” ಎಂದು ಕರೆದಿದೆ. ಈ ಎಂಜಿನ್‌ನಲ್ಲಿ ಟೊಯೊಟಾ ಆಲ್ ವೀಲ್ ಡ್ರೈವ್ ಆಯ್ಕೆ ನೀಡಿದ್ದರೂ, ಮ್ಯಾನುಯಲ್ ಟ್ರಾನ್ಸಿಮಿಷನ್‌ಗೆ ಮಾತ್ರ ಲಭ್ಯವಿದೆ.
ಅಂತೆಯೇ ಸ್ಟ್ರಾಂಗ್ ಹೈಬ್ರಿಡ್ ಕಾರಿನಲ್ಲೂ ೧.೫ ಲೀಟರ್ ಮೂರು ಸಿಲಿಂಡರ್ ಎಂಜಿನ್ ಇದೆ. ಇದು ೯೨ ಎಚ್‌ಪಿ ಪವರ್ ಹಾಗೂ ೧೨೨ ಎನ್‌ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಹೆಚ್ಚುವರಿಯಾಗಿ ಎಲೆಕ್ಟ್ರಿಕ್ ಮೋಟರ್ ಅಳವಡಿಸಲಾಗಿದ್ದು, ೭೯ ಎಚ್‌ಪಿ ಪವರ್ ೧೪೧ ಎನ್‌ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಎರಡೂ ಸೇರಿದರೆ ೧೧೪ ಎಚ್‌ಪಿ ಪವರ್ ಬಿಡುಗಡೆ ಮಾಡುತ್ತದೆ. ಟೊಯೊಟಾ ಕಂಪನಿ ಗೆ ೨೭.೯೭ ಕಿಲೋ ಮೀಟರ್ ಮೈಲೇಜ್ ನೀಡುತ್ತದೆ ಎಂದು ಹೇಳಿದೆ.
ಪ್ರತಿಸ್ಪರ್ಧಿಗಳು
ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಎಮ್‌ಜಿ ಆಸ್ಟರ್, ಸ್ಕೋಡಾ ಕುಶಾಕ್, ಪೋಕ್ಸ್‌ವ್ಯಾಗನ್ ಟೈಗುನ್, ಇನ್ನೇನು ಮಾರುಕಟ್ಟೆಗೆ ಇಳಿಯಲಿರುವ ಮಾರುತಿ ಸುಜುಕಿ ಗ್ರಾಂಡ್ ವಿಟಾರ ಈ ಕಾರಿನ ಮೊದಲ ಪ್ರತಿಸ್ಪರ್ಧಿಗಳು. ಎಮ್‌ಜಿ ಹೆಕ್ಟರ್, ಕಿಯಾ ಕರೆನ್ಸ್, ಮಹೀಂದ್ರಾ ಸ್ಕಾರ್ಪಿಯೊ, ಮಹೀಂದ್ರಾ ಎಕ್ಸ್‌ಯುವಿ೭೦೦ ಕಾರುಗಳಿಗೂ ಸ್ಪರ್ಧೆ ನೀಡಲಿದೆ.
ಇದನ್ನೂ ಓದಿ | XUV 400 | ಮಹೀಂದ್ರಾದ ಮೊಟ್ಟ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ; ಏನೆಲ್ಲ ಫೀಚರ್‌ಗಳಿವೆ?