Site icon Vistara News

WhatsApp Channels: ವಾಟ್ಸ್ಯಾಪ್‌ ಹೊಸ ಫೀಚರ್‌ ʼಚಾನೆಲ್‌ʼ ಈಗ ಭಾರತದಲ್ಲೂ ಲಭ್ಯ; ಏನಿದು, ಸೇರೋದು ಹೇಗೆ?

WhatsApp Channels

ಹೊಸದಿಲ್ಲಿ: WhatsApp ತನ್ನ ಹೊಸ ಬ್ರಾಡ್‌ಕಾಸ್ಟ್ ವೈಶಿಷ್ಟ್ಯ ʼಚಾನೆಲ್ಸ್‌ʼ (WhatsApp Channels) ಅನ್ನು ಭಾರತದಲ್ಲಿ ಮತ್ತು 150ಕ್ಕೂ ಹೆಚ್ಚು ದೇಶಗಳಲ್ಲಿ ಅಧಿಕೃತವಾಗಿ ಹೊರತಂದಿದೆ.

Instagramನಲ್ಲಿರುವ ಬ್ರಾಡ್‌ಕಾಸ್ಟ್ ಚಾನೆಲ್ ವೈಶಿಷ್ಟ್ಯದಂತೆಯೇ, Metaದ WhatsApp ಬಳಕೆದಾರರು ತಮ್ಮ ಸಂಪರ್ಕಗಳೊಂದಿಗೆ ಏಕಮುಖ ಚಾನಲ್‌ಗಳ ಮೂಲಕ ತೊಡಗಿಸಿಕೊಳ್ಳಲು ಇದು ಅನುವು ಮಾಡಿಕೊಡುತ್ತದೆ. ದೊಡ್ಡ ಗುಂಪುಗಳಿಗೆ ಸಂದೇಶಗಳನ್ನು ಕಳುಹಿಸಲು ಇದು ಅನುಕೂಲವಾಗಿದೆ.

ವಾಟ್ಸಾಪ್ ಚಾನೆಲ್‌ಗಳು ಸಾಮಾನ್ಯ ಚಾಟ್‌ಗಳಿಂದ ಬೇರೆಯಾಗಿ ಕಾರ್ಯನಿರ್ವಹಿಸುತ್ತವೆ. ಇಲ್ಲಿ ನಿಮ್ಮನ್ನು ʼಫಾಲೋʼ ಮಾಡುವವರ ಗುರುತುಗಳು ಇತರ ಫಾಲೋವರ್ಸ್‌ಗೆ ಗೊತ್ತಾಗದಂತೆ ಗೌಪ್ಯವಾಗಿರುತ್ತವೆ. ಚಾನೆಲ್‌ಗಳು ಏಕಮುಖ ಪ್ರಸಾರ ಸಾಧನವಾಗಿ ಕಾರ್ಯನಿರ್ವಹಿಸುತ್ತವೆ. ಅಡ್ಮಿನ್‌ಗಳು ಮತ್ತು ಫಾಲೋವರ್‌ಗಳ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತದೆ. ಪಠ್ಯ, ಫೋಟೋಗಳು, ವೀಡಿಯೊಗಳು, ಸ್ಟಿಕ್ಕರ್‌ಗಳು ಮತ್ತು ಸಮೀಕ್ಷೆಗಳನ್ನು ಹಂಚಿಕೊಳ್ಳಲು ನಿರ್ವಾಹಕರಿಗೆ ಅವಕಾಶ ನೀಡುತ್ತದೆ.

“ನಾವು ಭಾರತ ಸೇರಿ 150ಕ್ಕೂ ಹೆಚ್ಚು ದೇಶಗಳಲ್ಲಿ WhatsApp ಚಾನೆಲ್‌ಗಳನ್ನು ಪ್ರಾರಂಭಿಸುತ್ತಿದ್ದೇವೆ. WhatsApp ಚಾನೆಲ್‌ಗಳು ಏಕಮುಖಿ ಪ್ರಸಾರ ಸಾಧನವಾಗಿದೆ. WhatsAppನಲ್ಲಿಯೇ ನಿಮಗೆ ಮುಖ್ಯವಾದ ಜನರು ಮತ್ತು ಸಂಸ್ಥೆಗಳಿಂದ ಅಪ್‌ಡೇಟ್‌ಗಳನ್ನು ಸ್ವೀಕರಿಸಲು ಇದು ಖಾಸಗಿ ಮಾರ್ಗವಾಗಿದೆ” ಎಂದು WhatsApp ತಿಳಿಸಿದೆ.

ಚಾನಲ್‌ಗಳಿಗೆ ಹೊಸ ಟ್ಯಾಬ್

WhatsApp ತನ್ನ ಹೊಸ ಚಾನೆಲ್‌ ಫೀಚರ್‌ ಅನ್ನು “ಅಪ್‌ಡೇಟ್‌ಗಳು” ಎಂಬ ಮೀಸಲಾದ ಟ್ಯಾಬ್‌ನಲ್ಲಿ ಪರಿಚಯಿಸುತ್ತಿದೆ. ಇಲ್ಲಿ ಬಳಕೆದಾರರು ಸ್ಟೇಟಸ್‌ ಅಪ್‌ಡೇಟ್‌ ಮತ್ತು ಫಾಲೋ ಮಾಡುವ ಚಾನಲ್‌ಗಳನ್ನು ಪ್ರವೇಶಿಸಲು ಸಾಧ್ಯ. ಕುಟುಂಬ, ಸ್ನೇಹಿತರು ಮತ್ತು ಸಮುದಾಯಗಳೊಂದಿಗಿನ ಅವರ ಚಾಟ್‌ಗಳಿಂದ ಇವುಗಳನ್ನು ಪ್ರತ್ಯೇಕವಾಗಿರಿಸಿಕೊಳ್ಳಬಹುದು. ಹೆಚ್ಚುವರಿಯಾಗಿ, ಚಾಟ್‌ಗಳು, ಇಮೇಲ್‌ಗಳು ಅಥವಾ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾದ ಆಹ್ವಾನ ಲಿಂಕ್‌ಗಳ ಮೂಲಕ ಬಳಕೆದಾರರು ಚಾನಲ್‌ಗಳನ್ನು ಪ್ರವೇಶಿಸಬಹುದು.

ಚಾನೆಲ್‌ ಫೀಚರ್‌ ಅನ್ನು ಜಾಗತಿಕವಾಗಿ ವಿಸ್ತರಿಸಲಾಗುತ್ತಿದೆ. ಬಳಕೆದಾರರ ಅನುಭವವನ್ನು ಹೆಚ್ಚಿಸುವ ಉದ್ದೇಶದಿಂದ ಚಾನಲ್‌ಗಳಿಗೆ ಹೊಸ ಅಪ್‌ಡೇಟ್‌ಗಳನ್ನು ಪರಿಚಯಿಸಲಾಗುತ್ತಿದೆ.

ವಿಸ್ತೃತ ಡೈರೆಕ್ಟರಿ: ಸ್ವಯಂಚಾಲಿತವಾಗಿ ಫಿಲ್ಟರ್ ಮಾಡಲಾದ ಸರ್ಚ್‌ ಡೈರೆಕ್ಟರಿಯ ಮೂಲಕವೂ ಬಳಕೆದಾರರು ಇದೀಗ ಚಾನಲ್‌ಗಳನ್ನು ಅನ್ವೇಷಿಸಬಹುದು. ಬಳಕೆದಾರರು ತಮ್ಮ ಚಟುವಟಿಕೆಯ ಮಟ್ಟ, ಜನಪ್ರಿಯತೆ ಅಥವಾ ಹೊಸತನವನ್ನು ಆಧರಿಸಿ ಚಾನಲ್‌ಗಳನ್ನು ಬ್ರೌಸ್ ಮಾಡಬಹುದು.

ಪ್ರತಿಕ್ರಿಯೆಗಳು: ಇನ್‌ಸ್ಟಾಗ್ರಾಮ್ ಬ್ರಾಡ್‌ಕಾಸ್ಟ್ ಚಾನೆಲ್‌ಗಳಲ್ಲಿ ಪ್ರತಿಕ್ರಿಯಿಸುವಂತೆಯೇ WhatsApp ಚಾನೆಲ್‌ಗಳಲ್ಲಿಯೂ ಬಳಕೆದಾರರು ಅಪ್‌ಡೇಟ್‌ಗಳಿಗೆ ಪ್ರತಿಕ್ರಿಯಿಸಬಹುದು. ಎಮೋಜಿಯನ್ನು ಬಳಸಿಕೊಂಡು ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಬಹುದು. ಪ್ರತಿಕ್ರಿಯೆಗಳ ಒಟ್ಟು ಸಂಖ್ಯೆಯನ್ನು ಪ್ರದರ್ಶಿಸಲಾಗುತ್ತದೆ. ಆದರೆ ನಿರ್ವಾಹಕರ ವೈಯಕ್ತಿಕ ಪ್ರತಿಕ್ರಿಯೆಗಳು ಫಾಲೋವರ್‌ಗಳಿಗೆ ಗೋಚರಿಸುವುದಿಲ್ಲ.

ಎಡಿಟಿಂಗ್: ಅಡ್ಮಿನ್‌ಗಳು ತಮ್ಮ ಅಪ್‌ಡೇಟ್‌ಗಳನ್ನು, WhatsAppನ ಸರ್ವರ್‌ಗಳಿಂದ ಸ್ವಯಂಚಾಲಿತವಾಗಿ ಅಳಿಸುವ ಮೊದಲು, ಅಂದರೆ 30 ದಿನಗಳ ಅವಧಿಯವರೆಗೆ ಎಡಿಟ್‌ ಮಾಡಬಹುದು.

ಫಾರ್ವರ್ಡ್: ಅಡ್ಮಿನ್‌ಗಳು ಚಾಟ್‌ಗಳು ಅಥವಾ ಗುಂಪುಗಳಿಗೆ ಅಪ್‌ಡೇಟ್‌ಗಳನ್ನು ಫಾರ್ವರ್ಡ್ ಮಾಡಿದಾಗ, ಅದು ಚಾನಲ್‌ಗೆ ಹಿಂತಿರುಗುವ ಲಿಂಕ್ ಅನ್ನು ಒಳಗೊಂಡಿರುತ್ತದೆ. ಜನರು ಸುಲಭವಾಗಿ ಹೆಚ್ಚಿನ ಮಾಹಿತಿಯನ್ನು ಹುಡುಕಲು ಅನುವು ಮಾಡಿಕೊಡುತ್ತದೆ.

ಚಾನಲ್‌ಗಳಲ್ಲಿ ಸಂದೇಶಗಳ ಸಂಗ್ರಹವನ್ನು ತಡೆಯಲು, WhatsApp ತನ್ನ ಸರ್ವರ್‌ಗಳಲ್ಲಿ ಗರಿಷ್ಠ 30 ದಿನಗಳವರೆಗೆ ಹಿಸ್ಟರಿಯನ್ನು ಉಳಿಸಿಕೊಳ್ಳುತ್ತದೆ. ಫಾಲೋವರ್‌ಗಳ ಸಾಧನಗಳಿಂದ ಅಪ್‌ಡೇಟ್‌ಗಳು ಇನ್ನಷ್ಟು ತ್ವರಿತವಾಗಿ ಕಣ್ಮರೆಯಾಗುವಂತೆ ಮಾಡುವಲ್ಲಿ ಕೂಡ ಕಂಪನಿಯು ಕಾರ್ಯನಿರ್ವಹಿಸುತ್ತಿದೆ. ತಮ್ಮ ಚಾನಲ್‌ಗಳಿಂದ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳದಂತೆ, ಫಾರ್ವರ್ಡ್‌ ಮಾಡದಂತೆ ಕೂಡ ಅಡ್ಮಿನ್‌ಗಳು ತಡೆಗಟ್ಟುವ ಆಯ್ಕೆಯನ್ನು ಹೊಂದಿರುತ್ತಾರೆ.

ಜೊತೆಗೆ, WhatsApp ಅಡ್ಮಿನ್‌ಗಳಿಗೆ ತಮ್ಮ ಚಾನಲ್ ಅನ್ನು ಯಾರು ಅನುಸರಿಸಬಹುದು ಮತ್ತು ಡೈರೆಕ್ಟರಿಯಲ್ಲಿ ತಮ್ಮ ಚಾನಲ್ ಅನ್ನು ಅನ್ವೇಷಿಸಲು ಯಾರು ಬಯಸಬಹುದು ಎಂಬುದರ ಮೇಲೆ ನಿಯಂತ್ರಣವಿರುತ್ತದೆ. ಚಾನಲ್‌ಗಳು ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್ ಆಗಿರುವುದಿಲ್ಲ. ಏಕೆಂದರೆ ಇವುಗಳ ಪ್ರಾಥಮಿಕ ಗುರಿ ಹೆಚ್ಚಿನ ಜನರನ್ನು ತಲುಪುವುದು.

Exit mobile version