ಬೆಂಗಳೂರು: ಮೆಟಾ ಸಂಸ್ಥೆಯು ನಿಯಮಿತವಾಗಿ ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂಗಳಲ್ಲಿ ಹೊಸ ಹೊಸ ಫೀಚರ್‌ಗಳ ಮೂಲಕ ಬಳಕೆದಾರರ ಗಮನ ಸೆಳೆಯುತ್ತದೆ. ಅದೇ ರೀತಿ ಮೆಟಾ ಕಂಪನಿಯು ವಾಟ್ಸ್‌ಆ್ಯಪ್‌ನಲ್ಲಿ (WhatsApp New Feature:) ಶೀಘ್ರದಲ್ಲಿಯೇ ಹೊಸ ಫೀಚರ್ ಅಳವಡಿಸಲಿದೆ. ಹೌದು, ನಾವು ಬೇರೊಬ್ಬರಿಗೆ ಕಳುಹಿಸಿದ ವಾಟ್ಸ್‌ಆ್ಯಪ್ ಮೆಸೇಜ್ ಎಡಿಟ್ ಮಾಡುವ ಫೀಚರ್ ಈಗ ಬೀಟಾ ವರ್ಷನ್ (ನಿಯಮಿತ ಜನರಿಂದ ಹೊಸ ಫೀಚರ್ ಬಳಸಿ, ಅವರಿಂದ ಪ್ರತಿಕ್ರಿಯೆ ಪಡೆದು, ದೋಷಗಳನ್ನು ಸರಿಪಡಿಸುವುದು) ಹಂತದಲ್ಲಿದ್ದು, ಶೀಘ್ರದಲ್ಲಿಯೇ ಎಲ್ಲ ಬಳಕೆದಾರರಿಗೆ ಹೊಸ ಫೀಚರ್ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.
ಆ್ಯಂಡ್ರಾಯ್ಡ್, ಐಒಎಸ್ (iOS) ಹಾಗೂ ವೆಬ್‌ನಲ್ಲಿ ಹೊಸ ಫೀಚರ್ ಸಿಗಲಿದೆ. ಸದ್ಯ ಬೀಟಾ ವರ್ಷನ್ ಬಳಸುವವರು ವಾಟ್ಸ್‌ಆ್ಯಪ್‌ನಲ್ಲಿ ಮೂರು ಡಾಟ್‌ಗಳ ಮೇಲೆ ಕ್ಲಿಕ್ ಮಾಡಿದರೆ Edit Message ಆಪ್ಶನ್ ಸಿಗುತ್ತದೆ. ಇದನ್ನು ಬಳಸುವ ಮೂಲಕ ನಾವು ಯಾರಿಗಾದರೂ ಕಳುಹಿಸಿದ ಮೆಸೇಜ್‌ಅನ್ನು ಎಡಿಟ್ ಮಾಡಬಹುದಾಗಿದೆ.
ಎಷ್ಟು ನಿಮಿಷದಲ್ಲಿ ಎಡಿಟ್ ಮಾಡಬಹುದು?
ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ ಮೆಸೇಜ್‌ಅನ್ನು 15 ನಿಮಿಷದಲ್ಲಿ ಎಡಿಟ್ ಮಾಡಬಹುದಾಗಿದೆ. ನಿಗದಿತ ಸಮಯದಲ್ಲಿ ಒಂದು ಮೆಸೇಜ್‌ಅನ್ನು ಎಷ್ಟು ಬಾರಿ ಬೇಕಾದರೂ ಎಡಿಟ್ ಮಾಡುವ ಸೌಲಭ್ಯವಿದೆ. ಐಮೆಸೇಜ್ ಟೆಕ್ಸ್ಟ್‌ಅನ್ನು ಐದು ನಿಮಿಷದಲ್ಲಿ ಕೇವಲ ಐದು ಬಾರಿ ಎಡಿಟ್ ಮಾಡಬಹುದಾದರೆ. ಆದರೆ, ನಿಗದಿತ ಸಮಯದಲ್ಲಿ ಎಷ್ಟು ಬಾರಿ ಬೇಕಾದರೂ ಎಡಿಟ್ ಮಾಡುವ ಸೌಲಭ್ಯವನ್ನು ವಾಟ್ಸ್‌ಆ್ಯಪ್ ನೀಡಿದೆ.
ಇದನ್ನೂ ಓದಿ: WhatsApp New Feature: ಈಗ ನಾಲ್ಕು ಫೋನ್‌ಗಳಲ್ಲಿ ಒಂದೇ ವಾಟ್ಸಾಪ್ ಖಾತೆ ಬಳಸಿ! ಈ ಫೀಚರ್‌ನಿಂದ ಏನು ಲಾಭ?
ವಾಟ್ಸ್‌ಆ್ಯಪ್ ಮೆಸೇಜ್ ಎಡಿಟ್ ಜತೆಗೆ ‘Silence Unknown Callers’ ಎಂಬ ಹೊಸ ಫೀಚರ್‌ಅನ್ನು ಕೂಡ ಬಿಡುಗಡೆ ಮಾಡಲು ವಾಟ್ಸ್‌ಆ್ಯಪ್ ಟೆಸ್ಟ್ ಮಾಡುತ್ತಿದೆ. ಇದರಿಂದ ವಾಟ್ಸ್‌ಆ್ಯಪ್‌ಗೆ ಬರುವ ಅಪರಿಚಿತ ಕರೆಗಳನ್ನು ಅವಾಯ್ಡ್ ಮಾಡಬಹುದು. ಇತ್ತೀಚೆಗೆ ಬೇರೆ ದೇಶಗಳಿಂದ ಹೆಚ್ಚಾಗಿ ಅಪರಿಚಿತ ಕರೆಗಳು ಬಂದಿದ್ದು, ಇವುಗಳ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಹೊಸ ಫೀಚರ್ ನೆರವಾಗಲಿದೆ. ಕೆಲವೇ ವಾರಗಳಲ್ಲಿ ಎರಡೂ ಫೀಚರ್‌ಗಳು ಎಲ್ಲ ಬಳಕೆದಾರರಿಗೆ ಸಿಗಲಿವೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.