ಬೀಜಿಂಗ್: ಜನಪ್ರಿಯ ಮೊಬೈಲ್ ತಯಾರಕ ಕಂಪನಿ ಕ್ಸಿಯೋಮಿ (Xiaomi) ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿದೆ. ಎಲೆಕ್ಟ್ರಿಕ್ ಸೆಡಾನ್ ಕಾರು ಆಗಿರುವ Xiaomi SU7 EV ಸದ್ಯ ಚೀನಾದಲ್ಲಿ ಬಿಡುಗಡೆ ಆಗಿದೆ.
SU7ನ ಎರಡು ಆವೃತ್ತಿಗಳನ್ನು ಕಂಪನಿ ಹೊರ ತಂದಿದೆ. ಅವು ಲಿಡಾರ್‌ನೊಂದಿಗೆ ಮತ್ತು ಲಿಡಾರ್ ರಹಿತ. ಲಿಡಾರ್ (LiDAR) ಎಂಬುದು ಎದುರಿರುವ ವಸ್ತುಗಳ ಹಾಗೂ ಕಾರಿನ ನಡುವಿನ ದೂರವನ್ನು ಅಳೆದು ಎಚ್ಚರಿಸುವ ಸೆನ್ಸರ್.
ಹೊಸ ಎಲೆಕ್ಟ್ರಿಕ್ ಸೆಡಾನ್‌ನ ಮೂರು ವೇರಿಯೆಂಟ್‌ಗಳು ಲಭ್ಯವಿವೆ- SU7, SU7 Pro ಹಾಗೂ SU7 Max. ಎರಡು ಪವರ್‌ಟ್ರೈನ್ ಆಯ್ಕೆಗಳಿವೆ- RWD ಮತ್ತು AWD. RWD ಆವೃತ್ತಿಯು ಹಿಂದಿನ ಆಕ್ಸಲ್‌ನಲ್ಲಿ ಅಳವಡಿಸಲಾಗಿರುವ ಏಕೈಕ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಬರುತ್ತದೆ. ಇದು 295 bhp (brake horsepower) ಅನ್ನು ಉತ್ಪಾದಿಸುತ್ತದೆ. ಆದರೆ ಆಲ್-ವೀಲ್ ಡ್ರೈವ್ ಆವೃತ್ತಿಯು 663 bhp ಉತ್ಪಾದಿಸುತ್ತದೆ. AWD ಡ್ರೈವ್‌ಟ್ರೇನ್ ಮುಂಭಾಗದ ಆಕ್ಸಲ್‌ನಲ್ಲಿ ಅಳವಡಿಸಲಾಗಿರುವ 295 bhp ಎಲೆಕ್ಟ್ರಿಕ್ ಮೋಟಾರ್ ಮತ್ತು ಹಿಂದಿನ ಆಕ್ಸಲ್‌ನ 368 bhp ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಬರುತ್ತದೆ.
ಕಡಿಮೆ ಆವೃತ್ತಿಯ ಕಾರುಗಳು BYDಯಿಂದ ಪಡೆದ ಎಲ್‌ಎಫ್‌ಪಿ (Lithium iron phosphate – LFP) ಬ್ಯಾಟರಿಗಳನ್ನು ಹೊಂದಿವೆ. ಹೆಚ್ಚಿನ ಆವೃತ್ತಿಯ ಕಾರುಗಳು CATLನಿಂದ ಪಡೆದ ಎನ್‌ಎಂಸಿ (NMC – Nickel Manganese Cobalt) ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿವೆ. ಬ್ಯಾಟರಿಯ ತೂಕದ ಕಾರಣದಿಂದಾಗಿ ಎಲೆಕ್ಟ್ರಿಕ್ ಕಾರುಗಳು ಸಾಕಷ್ಟು ಭಾರವಾಗಿರುತ್ತವೆ. Xiaomi SU7 1,980 ಕೆಜಿ ಕರ್ಬ್ ತೂಕವನ್ನು ಹೊಂದಿದೆ. ಆದರೆ ಟಾಪ್-ಎಂಡ್ ಟ್ರಿಮ್ 2,205 ಕೆಜಿ ತೂಗುತ್ತದೆ. ಕಡಿಮೆ ವೇರಿಯೆಂಟ್‌ಗಳ ಗರಿಷ್ಠ ವೇಗವು 210 kmph ಮತ್ತು ಹೆಚ್ಚಿನ ರೂಪಾಂತರಿಗಳಿಗೆ 265 kmph ವೇಗವಿದೆ.
ಕ್ಸಿಯೋಮಿ SU7ನ ಸಾಮೂಹಿಕ ಉತ್ಪಾದನೆ ಡಿಸೆಂಬರ್‌ನಲ್ಲಿ ಆರಂಭವಾಗಲಿದ್ದು, ಫೆಬ್ರವರಿ ವೇಳೆಗೆ ಡೆಲಿವರಿ ಶುರುವಾಗಲಿದೆ. ಬೀಜಿಂಗ್ ಫ್ಯಾಕ್ಟರಿಯಲ್ಲಿ ಟ್ರಯಲ್ ಉತ್ಪಾದನೆ ಶುರುವಾಗಿದೆ. ಟೆಸ್ಟ್ ವಾಹನಗಳು ಈಗಾಗಲೇ ಉತ್ಪಾದನೆಯಾಗಿವೆ.
ಕ್ಸಿಯೋಮಿ ಕಾರುಗಳಲ್ಲಿ Hyper OS ಬಳಸುತ್ತಿದೆ. ಈ ಕಂಪನಿಯು ತನ್ನ ಹೊಸ ಸ್ಮಾರ್ಟ್‌ಫೋನ್‌ಗಳಿಗೂ ಈ ಆಪರೇಟಿಂಗ್ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ. ಮುಂಬರುವ ದಿನಗಳಲ್ಲಿ ಕ್ಸಿಯೋಮಿಯ ಕಾರುಗಳು ಹಾಗೂ ಸ್ಮಾರ್ಟ್‌ಫೋನ್‌ಗಳು ಪರಸ್ಪರ ಸಂಭಾಷಿಸುವ ಹಾಗೂ ನಿಯಂತ್ರಣಕ್ಕೊಳಪಡುವ ವ್ಯವಸ್ಥೆ ಬರುವ ಸಂಭವ ಇದೆ.
ಇದನ್ನೂ ಓದಿ: Flying Taxi: ಜಗತ್ತಿನ ಮೊದಲ ‘ಹಾರುವ ಟ್ಯಾಕ್ಸಿ’ಗೆ ಚೀನಾ ಅಸ್ತು; ಇದರ ಹಾರಾಟ ಹೇಗಿದೆ ನೋಡಿ!