Site icon Vistara News

ಭಾರತದ 3 ಗ್ಲಾಸ್‌ ಬ್ರಿಡ್ಜ್‌ಗಳು: ಗಾಜಿನ ಸೇತುವೆಯಲ್ಲಿ ನಡೆಯಲು ವಿದೇಶಕ್ಕೆ ಹೋಗಬೇಕಿಲ್ಲ!

glass bridge

ಗಾಜಿನ ಸ್ಕೈವಾಕ್‌ನಲ್ಲಿ ನಡೆಯುತ್ತಾ ಸುತ್ತಲೂ ೩೬೦ ಡಿಗ್ರಿಯಲ್ಲಿ ಪ್ರಕೃತಿಯ ರಮಣೀಯ ದೃಶ್ಯ ಸವಿಯಲು ಚೀನಾಕ್ಕೋ, ಯುಎಸ್‌ಗೋ, ಮಲೇಶಿಯಾಕ್ಕೋ ಅಥವಾ ಇನ್ನಾವುದೋ ದೇಶಕ್ಕೋ ಹೋಗಬೇಕಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಚಲಾವಣೆಯಲ್ಲಿರುವ ಇಂತಹ ಜಾಗಗಳ ರಮಣೀಯ ದೃಶ್ಯಗಳಿರುವ ರೀಲ್ಸ್‌ಗಳ್ನು ನೋಡಿ ಇಂಥದ್ದೊಂದು ಜಾಗಕ್ಕೆ ಹೋಗುವ ಅವಕಾಶ ಸಿಕ್ಕಿದ್ದಿದ್ದರೆ ಎಂದು ಆಸೆ ಪಟ್ಟರೆ ಅಂಥ ಕನಸನ್ನು ನನಸಾಗಿಸಲು ದೂರದ ದೇಶಗಳಿಗೇ ಹೋಗಬೇಕಾಗಿಲ್ಲ. ನಮ್ಮ ದೇಶದಲ್ಲೇ ಸುತ್ತಾಡಿ, ಅತ್ಯದ್ಭುತ ಎನಿಸುವ ಫೋಟೋ, ವಿಡಿಯೋಗಳನ್ನೂ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಬಹುದು. ಅರೆ, ಇಂಥದ್ದೊಂದು ಜಾಗ ನಮ್ಮ ದೇಶದಲ್ಲೇ ಇದೆಯಾ ಎಂದು ಆಶ್ಚರ್ಯವೆನಿಸುವಂಥ ಇಂಥ ಸ್ಥಳಗಳ ಬಗ್ಗೆ ಎಷ್ಟು ಜನರಿಗೆ ಗೊತ್ತಿದೆ ಹೇಳಿ!

೧. ಗ್ಲಾಸ್‌ ಬ್ರಿಡ್ಜ್‌, ಪೆಲ್ಲಿಂಗ್‌, ಸಿಕ್ಕಿಂ: ಭಾರತದಲ್ಲಿ ಮೊತ್ತ ಮೊದಲು ಇಂಥದ್ದೊಂದು ಸ್ಕೈವಾಕ್‌ ಪ್ರಯತ್ನ ನಡೆದದ್ದು ಸಿಕ್ಕಿಂನ ಪೆಲ್ಲಿಂಗ್‌ನಲ್ಲಿ. ಸುತ್ತಲೂ ರುದ್ರ ರಮಣೀಯ ಹಿಮಾಲಯ ಬೆಟ್ಟದ ಸಾಲುಗಳು, ಮದ್ಯದಲ್ಲೊಂದು ಗಾಜಿನ ಸೇತುವೆಯ ಮೇಲೆ ಮೆಲ್ಲನೆ ನೀವು ನಡೆದು ಬರುವುದನ್ನು ಒಮ್ಮೆ ಊಹಿಸಿಕೊಂಡರೆ ರೋಮಾಂಚಿತರಾಗುವುದು ನಿಶ್ಚಿತ. ಸಮುದ್ರ ಮಟ್ಟದಿಂದ ೭,೨೦೦ ಅಡಿ ಎತ್ತರದಲ್ಲಿರುವ ಈ ಸ್ಥಳದಲ್ಲಿ ನಾಲ್ಕು ದಿಕ್ಕುಗಳಿಂದಲೂ ಅದ್ಭುತವಾದ ಮನೋಹರ ದೃಶ್ಯವೈಭವ ಕಣ್ತುಂಬಿಕೊಳ್ಳಬಹುದಾದ ಜಾಗದಲ್ಲಿ ಇಂಥದ್ದೊಂದು ಗಾಜಿನ ಸೇತುವೆ ನಿರ್ಮಾಣವಾಗಿದೆ. ಆಳವಾದ ಕಣಿವೆಗಳಲ್ಲಿ ಹರಿಯುವ ನದಿ, ಹಿಮಗಿರಿ ಕಂದರಗಳ ಈ ಸ್ಥಳ ಪ್ರವಾಸಿಗರ ಪ್ರಮುಖ ಆಕರ್ಷಣೆ. ಇದೇ ಗಾಜಿನ ಸೇತುವೆಯ ಇನ್ನೊಂದು ಪಾರ್ಶ್ವದಲ್ಲಿ ಬುದ್ಧನ ಪ್ರತಿರೂಪವೇ ಆದ ಬೃಹತ್‌ ಚೆನ್‌ರೆಝಿಗ್‌ ಪ್ರತಿಮೆಯಿದೆ. ಶುಭ್ರಾಕಾಶದ ದಿನವಾಗಿದ್ದರೆ, ನೀವು ಅದೃಷ್ಟಶಾಲಿಗಳಾಗಿದ್ದರೆ ಕಾಂಚನಜುಂಗಾವನ್ನೂ ಇಲ್ಲಿಂದಲೇ ಕಣ್ತುಂಬಿಕೊಳ್ಳಬಹುದು. ೫೦ ರೂಪಾಯಿಗಳ ಟಿಕೆಟ್‌ ದರ ನೀಡಿದರೆ ಈ ಸೇತುವೆಯಲ್ಲಿ ನಡೆಯಬಹುದು. ಬೆಳಗ್ಗೆ ಎಂಟರಿಂದ ಸಂಜೆ ಐದರವರೆಗೂ ತೆರೆದಿರುವ ಇದು ಸಿಕ್ಕಿಂನ ಒಂದು ಮಜವಾದ ಅನುಭವ ಕೊಡುವ ಜಾಗವೆಂದರೂ ತಪ್ಪಲ್ಲ.

೨. ಗ್ಲಾಸ್‌ ಬ್ರಿಡ್ಜ್‌, ರಾಜ್‌ಗೀರ್‌, ಬಿಹಾರ: ಪ್ರವಾಸಿಗರು ಇಷ್ಟಪಡುವ ಹೊಸ ಬಗೆಯ ಸಾಹಸಗಳಿಗೆ ಬಿಹಾರದಲ್ಲಿರುವ ಈ ಜಾಗ ಉತ್ತಮ. ಬಿಹಾರದ ನಳಂದಾದಲ್ಲಿರುವ ಈ ಗಾಜಿನ ಸೇತುವೆ ೨೦೦ ಅಡಿ ಎತ್ತರದಲ್ಲಿ ನಿರ್ಮಿಸಲ್ಪಟ್ಟಿದೆ. ಕೆಳಗೆ ಬಗ್ಗಿ ನೋಡಿದರೆ ಭಾರೀ ಪ್ರಪಾತ ಸ್ಥಳೀಯ ಪ್ರವಾಸಿಗರನ್ನೂ, ವಿದೇಶೀ ಪ್ರವಾಸಿಗರನ್ನೂ ಆಕರ್ಷಿಸುತ್ತಿದೆ. ಚೀನಾದ ಸ್ಕೈವಾಕ್‌ ನೋಡಿ ಅದರಿಂದ ಪ್ರೇರಿತರಾಗಿ ಈ ಸ್ಕೈವಾಕ್‌ ನಿರ್ಮಾಣ ಮಾಡಲಾಗಿದೆಯಂತೆ. ಸುಮಾರು ೮೫ ಅಡಿ ಉದ್ದ ಹಾಗೂ ೬ ಅಡಿ ಆಳವಿರುವ ಇದರಲ್ಲಿ ನಡೆದಾಡಿದರೆ, ಸುತ್ತಲ ರಮಣೀಯ ದೃಶ್ಯವೈಭವವನ್ನು ಸವಿಯಬಹುದು.

೩. ವಯನಾಡ್‌ ಗ್ಲಾಸ್‌ ಬ್ರಿಡ್ಜ್‌, ತೊಲ್ಲಾಯಿರಂ ಕಂಡಿ, ಕೇರಳ: ನಮ್ಮ ಪಕ್ಕದಲ್ಲೇ ಇರುವ ದೇವರ ನಾಡು ಕೇರಳದಲ್ಲಿ ವಯನಾಡು ಎಂಬ ಅದ್ಭುತ ಪ್ರಕೃತಿ ಸೌಂದರ್ಯದ ಬೀಡಿನಲ್ಲಿ ಇಂಥದ್ದೊಂದು ಗಾಜಿನ ಸೇತುವೆ ನಿರ್ಮಾಣವಾಗಿ ಸದ್ಯ ಸಾಕಷ್ಟು ಸುದ್ದಿಯಾಗುತ್ತಿದೆ. ಮುಖ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್‌ ಮಾಡುವ ಎಲ್ಲರೂ ವಯನಾಡಿನಲ್ಲಿ ಈ ಜಾಗಕ್ಕೊಂದು ಬೇಟಿ ಕೊಡದೆ ಮರಳಲಾರರು. ಖಾಸಗಿ ರೆಸಾರ್ಟ್‌ ಒಂದು ಇದನ್ನು ನಿರ್ಮಿಸಿದ್ದು, ನೆಲದಿಂದ ಸುಮಾರು ೧೦೦ ಅಡಿ ಎತ್ತರದಲ್ಲಿದೆ. ಸುತ್ತಲೂ ಕಣ್ಣೆವೆಯಿಕ್ಕದೆ ನೋಡಬಹುದಾದ ಹಸಿರು ಪ್ರಕೃತಿ ಸೌಂದರ್ಯ ಇಲ್ಲಿ ಮನೆ ಮಾಡಿದೆ. ಇಟಲಿಯಿಂದ ಆಮದು ಮಾಡಿಕೊಂಡ ಒಡೆಯಲಾಗದ ಪೈಬರ್‌ ಗ್ಲಾಸ್‌ನಿಂದ ಈ ಸೇತುವೆ ನಿರ್ಮಾಣ ಮಾಡಲಾಗಿದೆಯಂತೆ. ಖಾಸಗಿ ರೆಸಾರ್ಟ್‌ ಜಾಗದಲ್ಲಿದ್ದರೂ ೧೦೦ ರೂಪಾಯಿಗಳನ್ನು ಕೊಟ್ಟು ಟಿಕೆಟ್‌ ಖರೀದಿಸಿ ಒಳಗೆ ಪ್ರವೇಶ ಪಡೆಯಬಹುದು.

Exit mobile version