Site icon Vistara News

Adventure Tourism: ನೀವು ಸಾಹಸ ಪ್ರಿಯರೇ? ಈ ಚಳಿಗಾಲದಲ್ಲಿ ನೀವು ಇಷ್ಟಾದರೂ ಸಾಹಸ ಮಾಡದಿದ್ದರೆ ಹೇಗೆ?!

paragliding

ನೀವು ಸಾಹಸಪ್ರಿಯರೇ? ನಿಸರ್ಗವೂ, ಪ್ರವಾಸವೂ ಸಾಹಸವೂ (adventure tourism) ನಿಮ್ಮನ್ನು ಸೆಳೆಯುತ್ತದೆಯೋ? ಹೊಸತೇನೇ ಇದ್ದರೂ ಅದು ನಿಮ್ಮನ್ನು ಹುಚ್ಚೆಬ್ಬಿಸುತ್ತದೆಯೋ? ಹಾಗಿದ್ದಲ್ಲಿ ಈ ಚಳಿಗಾಲ (Winter Travel) ನಿಮಗೆ ಪರ್ಫೆಕ್ಟ್‌ ಕಾಲ. ಸಾಹಸೀ ಪ್ರವೃತ್ತಿಯ ಮಂದಿಗೆ, ಯಾವುದೇ ಸಂದರ್ಭದಲ್ಲಿಯೂ ಎದೆಗುಂದದೆ, ಎಲ್ಲವೂ ಒಂದು ಅನುಭವ ಎಂಬ ಆಧಾರದಲ್ಲಿ ಪರಿಗಣಿಸುವ ಪಾಸಿಟಿವ್‌ ಮಂದಿಗೆ, ಜೀವನದಲ್ಲಿ ಒಮ್ಮೆಯಾದರೂ ಇಂತಹ ಅನುಭವ ಆಗಬೇಕು ಎಂದು ಎಲ್ಲವನ್ನೂ ಖುಷಿಯಿಂದ ಸ್ವೀಕರಿಸುವ ಅಡ್ವೆಂಚರಸ್‌ ಮಂದಿಗೆ ಚಳಿಗಾಲದಷ್ಟು ಸುಸಮಯ ಇನ್ನೊಂದಿಲ್ಲ. ಪ್ರಕೃತಿಯ ಮಡಿಲಲ್ಲಿ ಎಲ್ಲ ಸಾಹಸಕ್ರೀಡೆಗಳನ್ನೂ ಅನುಭವಿಸಲು ಇದು ಸಕಾಲ. ಹಾಗಾದರೆ ಬನ್ನಿ, ಈ ಚಳಿಗಾಲದಲ್ಲಿ ಏನೆಲ್ಲ ಸಾಹಸಗಳನ್ನು ನೀವು ಮಾಡಬಹುದು ಎಂಬುದನ್ನು ನೋಡೋಣ.

1. ಚಾರಣ: ಚಾರಣದಲ್ಲಿ ಆಸಕ್ತಿಯಿರುವ ಯಾರಿಗೇ ಆದರೂ ಹಿಮದಲ್ಲಿ ಚಾರಣ (ice trekking) ಮಾಡಬೇಕೆಂಬ ಕನಸು ಇದ್ದೇ ಇರುತ್ತದೆ. ಈಗ ನವೆಂಬರ್‌ ಬರುತ್ತಿದ್ದಂತೆ ಭಾರತದಲ್ಲಿ ಹಲವಾರು ಹಿಮಾಲಯನ್‌ ಚಾರಣಗಳು ಹಿಮದ ಹಾದಿಯದ್ದಾಗಿರುತ್ತದೆ. ಒಂದೆರಡು ದಿನಗಳ ಸುಲಭ ಚಾರಣಗಳಿಂದ ಮೊದಲ್ಗೊಂಡು 8-10 ದಿನಗಳ ಚಾರಣಗಳವರೆಗೆ ಬಗೆಬಗೆಯ ಆಸಕ್ತಿಗಳಿಗುಣವಾಗಿ ಸಿದ್ಧ ಮಾದರಿಯ ಚಾರಣಗಳು ಲಭ್ಯವಾಗುತ್ತವೆ. ಉತ್ತರಾಖಂಡ, ಹಿಮಾಚಲ ಪ್ರದೇಶ ರಾಜ್ಯಗಳ ತುಂಬ ಇಂಥ ಚಾರಣಗಳು ಸಿಗುತ್ತಿದ್ದು, ಚಳಿಗಾಲದಲ್ಲೊಮ್ಮೆ ಹೋಗಿ ಬರಬಹುದು. ಹಿಮದಲ್ಲಿ ಕ್ಯಾಂಪಿಂಗ್‌ ಮಾಡಿ ಜೀವನದ ರಮ್ಯ ಅನುಭವಗಳ ಬುತ್ತಿಯಲ್ಲಿ ಇವನ್ನೂ ಸೇರಿಸಬಹುದು.

Image Of River Rafting

2. ಸ್ಕೀಯಿಂಗ್‌ ಉತ್ಸವ: ನವೆಂಬರ್‌ ಶುರುವಾಗುತ್ತಿದ್ದಂತೆ ಹಿಮಾಲಯದ ತಪ್ಪಲಿನ ತಾಣಗಳೆಲ್ಲವೂ ಹಿಮಾವೃತವಾಗುತ್ತದೆ. ಇದರಿಂದ ಸಾಕಷ್ಟು ಚಳಿಗಾಲದ ಕ್ರೀಡೆಗಳು, ಅವುಗಳ ಉತ್ಸವಗಳು ಆರಂಭವಾಗುತ್ತವೆ. ಮನಾಲಿಯ ಸೋಲಂಗ್‌ ವ್ಯಾಲಿಯಲ್ಲಿ, ಲಡಾಕ್‌ನಲ್ಲಿ ಸೇರಿದಂತೆ ಹಲವೆಡೆ ಇಂತಹ ಉತ್ಸವಗಳು ಆರಂಭವಾಗುತ್ತದೆ. ಇಂತಹ ಉತ್ಸವಗಳಲ್ಲಿ ಪಾಲ್ಗೊಳ್ಳುವ ಮೂಲಕ ಸ್ಕೀಯಿಂಗ್‌ ಸ್ಪರ್ಧೆಗಳನ್ನೂ ನೋಡಬಹುದು, ಕಲಿತುಕೊಂಡು ಆಸಕ್ತಿಯಿದ್ದರೆ, ಇದರಲ್ಲಿ ಭಾಗಿಯಾಗಬಹುದು.

Image Of River Rafting

3. ಐಸ್‌ ಸ್ಕೇಟಿಂಗ್‌, ಸ್ಲೆಡ್ಜಿಂಗ್:‌ ಕಾಶ್ಮೀರದ ಗುಲ್ಮಾರ್ಗ್‌, ಉತ್ತರಾಖಂಡ ಔಲಿ, ಹಿಮಾಚಲದ ಮನಾಲಿ, ನಾರ್ಕಂಡಾ ಮತ್ತಿತರ ಜಾಗಗಳು, ಸ್ಕೀಯಿಂಗ್‌, ಸ್ಲೆಡ್ಲಿಂಗ್‌, ಸ್ನೋ ಬೋರ್ಡಿಂಗ್‌ ಸೇರಿದಂತೆ ಬಗೆ ಬಗೆಯ ಹಿಮಕ್ರೀಡೆಗಳಿಗೆ ಮೈದಾನ. ಇಲ್ಲಿ ಚಳಿಗಾಲದಲ್ಲಿ ಸೃಷ್ಟಿಯಾಗುವ ಕಿಲೋಮೀಟರುಗಟ್ಟಲೆ ಸಪಾಟಾಗಿರುವ ಜಾರುವ ಇಳಿಜಾರಿರುವ ಹಿಮ ಮೈದಾನಗಳು ಈ ಎಲ್ಲ ಸಾಹಸ ಕ್ರೀಡೆಗಳಿಗೆ ತಕ್ಕನಾದ ವಾತಾವರಣ ನಿರ್ಮಿಸಿಬಿಡುತ್ತವೆ. ಇದರಿಂದ ಇಲ್ಲಿ ಇಂತಹ ಎಲ್ಲ ಬಗೆಯ ಹಿಮಕ್ರೀಡೆಗಳನ್ನೂ ಒಮ್ಮೆ ಟ್ರೈ ಮಾಡಿ ನೋಡಬಹುದು. ಆಸಕ್ತಿಯಿದ್ದರೆ ಕೋರ್ಸು ಸೇರಿ ಕಲಿತುಕೊಳ್ಳಬಹುದು.

4. ಪಾರಾಗ್ಲೈಡಿಂಗ್‌: ಪಾರಾಗ್ಲೈಡಿಂಗ್‌ನಂತಹ (paragliding) ಆಕಾಶ ಯಾನ ಮಾಡಲು ಚಳಿಗಾಲವೇ ಆಗಬೇಕೆಂದೇನಿಲ್ಲ ನಿಜವಾದರೂ, ಭಾರತದ ಹಿಮಾಲಯನ್‌ ಪ್ರವಾಸೀ ತಾಣಗಳಲ್ಲಿ ಹಿಮಕ್ರೀಡೆಗಳ ಜೊತೆಗೆ ಪಾರಾಗ್ಲೈಡಿಂಗ್‌ ಕೂಡಾ ಮಾಡಬಹುದು. ಬೀರ್‌ ಬಿಲ್ಲಿಂಗ್‌, ಪೆಹಲ್‌ಗಾಂ, ಗುಲ್ಮಾರ್ಗ್‌, ಮನಾಲಿ ಮತ್ತಿತರ ಸ್ಥಳಗಳಲ್ಲಿ ಪಾರಾಗ್ಲೈಡಿಂಗ್‌ ಸಾಧ್ಯವಿದೆ.

ಇದನ್ನೂ ಓದಿ: Travel Tips: ದ್ವೀಪಗಳೆಂಬ ಮೋಹಕ ತಾಣಗಳು! ಈ ಮಳೆಗಾಲದಲ್ಲಿ ಇವು ನಿಮ್ಮ ಮೋಹ ಅರಳಿಸಲಿ

5. ರ್ಯಾಫ್ಟಿಂಗ್‌: ಉತ್ತರ ಭಾರತದ ನದಿಗಳಲ್ಲಿ ರ್ಯಾಫ್ಟಿಂಗ್‌ (rafting) ಮಾಡಲೂ ಕೂಡಾ ಇದು ಸಕಾಲ. ಮುಖ್ಯವಾಗಿ ರಿಷಿಕೇಶದಲ್ಲಿ ಗಂಗಾ ನದಿಯಲ್ಲಿ ರ್ಯಾಫ್ಟಿಂಗ್‌ ಮಾಡಬಯಸುವ ಮಂದಿಗೆ ಇದು ಸುಸಮಯ. ಅತಿಯಾದ ನೀರಿಲ್ಲದೆ ಇರುವುದರಿಂದ ನೆರೆಯ ಭಯವಿಲ್ಲದೆ, ಆರಾಮವಾಗಿ ರ್ಯಾಫ್ಟಿಂಗ್‌ ಅನುಭವ ಪಡೆಯಬಹುದು. ನದೀ ತೀರದಲ್ಲಿ ಕ್ಯಾಂಪಿಂಗ್‌ ಮಾಡಬಹುದು.

6. ಮರುಭೂಮಿಯ ಸಫಾರಿ: ರಾಜಸ್ಥಾನದ ಮರುಭೂಮಿಯಲ್ಲಿ ಒಂಟೆಯ ಮೇಲೆ ಸಫಾರಿ (desert safari) ಹೋಗಲು ಕೂಡಾ ಇದು ಪರ್ಫೆಕ್ಟ್‌ ಕಾಲ. ಯಾಕೆಂದರೆ, ಬೇರಾವ ಕಾಲದಲ್ಲಾದರೂ, ಮರುಭೂಮಿ ಧಗಧಗನೆ ಸುಡುತ್ತಿರುತ್ತದೆ. ಹಾಗೂ ಈ ಕಾಲದಲ್ಲಿ ರಾಜಸ್ಥಾನದ ಕೋಟೆ ಕೊತ್ತಲಗಳನ್ನೂ ಸುತ್ತಿ ನೋಡಲು ಕಷ್ಟ ಸಾಧ್ಯ. ಬಿಸಿಲಿನ ಝಳದಿಂದ ತಪ್ಪಿಸಿಕೊಂಡು ಹಿತವಾದ ಮರುಭೂಮಿಯ ಚಳಿಯಲ್ಲಿ ಒಂಟೆಯ ಮೇಲೆ ಕೂತು ಮರಳಿನಲ್ಲಿ ಏರಿಳಿಯುತ್ತಾ ಹೋಗುವುದೂ ಕೂಡಾ ಒಂದು ಅಪರೂಪದ ಜೀವನಾನುಭವ.

ಇದನ್ನೂ ಓದಿ: Traveling Tips: ಪ್ರಯಾಣಿಸುವಾಗ ಕಣ್ಣಿನ ಕಾಳಜಿ ಹೀಗಿರಲಿ

Exit mobile version