ದೂರದ ಬೆಟ್ಟ ಕಣ್ಣಿಗೆ ನುಣ್ಣನೆ ಎಂಬ ಮಾತಿದೆಯಲ್ಲ, ಹಾಗೆಯೇ ಈ ವಿಮಾನ ಪ್ರಯಾಣ ಕೂಡಾ! ಹೊರಗಿನಿಂದ ನೋಡಲಷ್ಟೇ ಸುಂದರ ಕನಸಿನ ಹಾಗೆ. ಒಳಗೆ ಹೊಕ್ಕು ಕೂತು ಪ್ರಯಾಣಿಸದರಷ್ಟೇ ನಿಜವಾದ ಸಮಸ್ಯೆಗಳು ಅರಿವಿಗೆ ಬರುವುದು. ಅತ್ಯಂತ ವೇಗವಾದ ಪ್ರಯಾಣಕ್ಕೆ ಸೂಕ್ತವಾದದ್ದು ಎಂಬುದನ್ನು ಹೊರತುಪಡಿಸಿದರೆ, ಜನಸಾಮಾನ್ಯರಿಗೆ ಯಾವತ್ತೂ ದುಬಾರಿಯೆನಿಸುವ ದರ, ಸುಖಾಸೀನವಾಗಿ ಮಗುವಿನಂತೆ ನಿದ್ರಿಸಿ ಹೋಗಬಲ್ಲ ವೇಗದೂತ ಬಸ್ಸುಗಳಿಗಿಂತಲೂ ಇಕ್ಕಟ್ಟಾದ ಸೀಟುಗಳು, ಸಹ ಪ್ರಯಾಣಿಕರೊಂದಿಗೂ ಅಪರಿಚಿತರಂತೆಯೇ ಇದ್ದು ಪ್ರಯಾಣಿಸಬೇಕಾದ ಸಹಜವಾಗಿರಲಾಗದ ಇರುಸುಮುರುಸು, ದುಬಾರಿ ಬೆಲೆ ತೆತ್ತು ತಿನ್ನಬೇಕಾದ ಕುಡಿಯಬೇಕಾದ ರುಚಿಯಿಲ್ಲದ ತಿನಿಸುಗಳು… ಹೀಗೆ ವಿಮಾನ ಪ್ರಯಾಣವನ್ನು ಇಷ್ಟಪಡದಿರಲು ಬೇಕಾದಷ್ಟು ಕಾರಣಗಳಿವೆ.
ವಿಮಾನ ಪ್ರಯಾಣದಲ್ಲಿ ಏನೇನು ಮಾಡಬಹುದು ಎಂದು ಎಲ್ಲರಿಗೂ ಗೊತ್ತಿದೆ. ಆದರೆ, ಏನು ಮಾಡುವುದರಿಂದ ಆದಷ್ಟು ದೂರವಿರಬೇಕು ಎಂಬ ಸಂಗತಿಯೂ ಗೊತ್ತಿದ್ದರೆ ಒಳ್ಳೆಯದು.
1. ವಿಮಾನದಲ್ಲಿ ಕೂತು ಸ್ವಲ್ಪ ಹೊತ್ತಾದ ಕೂಡಲೇ, ಏನಾದರೊಂದು ಕುಡಿಯುವ ಅಂತ ಆರ್ಡರ್ ಮಾಡುವ ಮೊದಲು ಸ್ವಲ್ಪ ಯೋಚಿಸಿ. 2004ರಲ್ಲಿ ನಡೆದ ಇಪಿಎ ಸ್ಟಡಿ ಪ್ರಕಾರ, 327 ವಿಮಾನಗಳಲ್ಲಿ ಕೊಡುವ ನೀರು ನಲ್ಲಿಯದ್ದು, ಹಾಗೂ ಇವುಗಳಲ್ಲಿ ಕೇವಲ ಶೇ.15ರಷ್ಟು ಮಾತ್ರವೇ ಹೆಲ್ತ್ ಸ್ಟ್ಯಾಂಡರ್ಡ್‌ನಲ್ಲಿ ಉತ್ತೀರ್ಣಗೊಂಡಿದ್ದವು ಎಂದರೆ ನಂಬಲೇಬೇಕು. 2009ರಲ್ಲಿ ಗಮನಿಸಿದಂತೆ, ಇದರ ಗುಣಮಟ್ಟದಲ್ಲಿ ವೃದ್ಧಿಯಾಗಿದ್ದರೂ, ಈಗ ಶುದ್ಧೀಕರಿಸಿದ ನೀರು ಕೊಡುತ್ತಿದ್ದರೂ, ಜ್ಯೂಸ್ ಇತ್ಯಾದಿ ಪೇಯಗಳಲ್ಲಿ ಹಾಕುವ ಐಸ್ ಯಾವ ನೀರಿನಿಂದ ಮಾಡಿದ್ದು ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಅದು ನಲ್ಲಿ ನೀರಿನದ್ದೂ ಇರಬಹುದು. ವಿಮಾನದ ನೀರಿನ ಟ್ಯಾಂಕ್ ಖಂಡಿತವಾಗಿಯೂ ಆಗಾಗ ತೊಳೆಯುವುದಿಲ್ಲ. ಹಾಗೂ ಅದು ಬಹಳ ಹಳತಾಗಿರುತ್ತದೆ.
2. ವಿಮಾನಕ್ಕೆ ಹತ್ತಿದ ಕೂಡಲೇ, ಶಿಸ್ತಿನ ಸಿಪಾಯಿಗಳಂತೆ, ಅಲ್ಲಿರುವ ವಿಚಿತ್ರ ಮೌನದ ವಾತಾವರಣದಲ್ಲಿ ಹೇಗೆ ವ್ಯವಹರಿಸಬೇಕೆಂದು ಗೊತ್ತಾಗದೆ, ಅಷ್ಟೂ ಹೊತ್ತು ಸೀಟಿನಲ್ಲಿ ಕೂತೇ ಇರಬೇಕಾದ ಅಗತ್ಯವಿಲ್ಲ. ಒಂದು ಗಂಟೆಗೊಮ್ಮೆ ಬೇಕಾದರೆ ಎದ್ದು ಅಡ್ಡಾಡಿ. ಯಾಕೆಂದರೆ ಎತ್ತರದಲ್ಲಿ ಹಾರುತ್ತಿರುವಾಗ ನಮ್ಮ ದೇಹಕ್ಕೆ ಡೀಪ್ ವೀನ್ ಥ್ರೋಂಬೋಸಿಸ್ (ಡಿವಿಟಿ) ಆಗುವ ಸಂಭವ ಹೆಚ್ಚು. ಇದಕ್ಕೆ ʻಇಕಾನಮಿ ಕ್ಲಾಸ್ ಸಿಂಡ್ರೋಮ್ʼ ಎಂಬ ಅಡ್ಡ ಹೆಸರೂ ಇದೆ. ಯಾಕೆಂದರೆ, ಇಕ್ಕಟ್ಟಿನ ಸ್ಥಳದಲ್ಲಿ ಕಾಲು ಒಂದೇ ಜಾಗದಲ್ಲಿ ಚಲಿಸದೆ ಇಟ್ಟಿರುವುದರಿಂದ ಕಾಲಿನ ಕೆಲವು ನರಗಳಲ್ಲಿ ರಕ್ತ ಹೆಪ್ಪುಗಟ್ಟಿದಂತಾಗುವ ಸ್ಥಿತಿ ಇದು. ಹಾಗಾಗಿ ಯಾವಾಗಲೂ ವಿಮಾನ ಪ್ರಯಾಣದಲ್ಲಿ ಬಿಗಿಯಾದ ಉಡುಪು ಧರಿಸದೆ, ಆರಾಮವಾಗಿರಬಲ್ಲ ಬಟ್ಟೆಗಳನ್ನೇ ತೊಟ್ಟುಕೊಳ್ಳುವುದು ಉತ್ತಮ. ಆಗಾಗ ಕೂತ ಭಂಗಿ ಬದಲಾಯಿಸಿ, ಅಲ್ಲೇ ಆಚೀಚೆ ಅಡ್ಡಾಡುವುದು ಒಳ್ಳೆಯದು.
3. ನೀವು ಕಾಂಟಾಕ್ಟ್ ಲೆನ್ಸ್ ಧರಿಸುವ ಅಭ್ಯಾಸ ಹೊಂದಿದ್ದರೆ ಅದನ್ನು ಆದಷ್ಟು ವಿಮಾನ ಪ್ರಯಾಣದಲ್ಲಿ ಅವಾಯ್ಡ್ ಮಾಡಿ. ಬೇಕಿದ್ದರೆ ಕನ್ನಡಕ ಧರಿಸಿ. ಯಾಕೆಂದರೆ, ಇದು ಕಣ್ಣಿನಲ್ಲಿ ಉರಿತ ತರಬಹುದು. ವಿಮಾನದಲ್ಲಿ ನಿದ್ರಿಸಲಾಗದ ಸ್ಥಿತಿ ಬರಬಹುದು.
4. ಎಷ್ಟೇ ಚಳಿಯೆನಿಸಿದರೂ, ನಿಮ್ಮ ತಲೆಯ ಮೇಲೆ ಇರುವ ಗಾಳಿಯಾಡುವ (ಏರ್ ವೆಂಟ್) ಸ್ವಿಚ್ಚನ್ನು ಆಫ್ ಮಾಡಬೇಡಿ. ಚಳಿಯೆನಿಸಿದರೆ, ಜಾಕೆಟ್ ಧರಿಸಿ. ನೆಲದಿಂದ ಎಷ್ಟೋ ಎತ್ತರದಲ್ಲಿರುವಾಗ ಗಾಳಿಯಾಡುತ್ತಿದ್ದರೆ ಒಳ್ಳೆಯದು. ಜೊತೆಗೆ ನಿಮ್ಮ ಚರ್ಮ ಒಣಗಿದಂತಾಗುವುದನ್ನೂ ಇದು ತಡೆಯುತ್ತದೆ. ಜೊತೆಗೆ ನಿಮ್ಮ ಹತ್ತಿರವೇ ಸುತ್ತಿಕೊಂಡಿರುವ ಕೆಟ್ಟ ಗಾಳಿಯನ್ನೂ ಇದು ಹೊಡೆದೋಡಿಸುತ್ತದೆ.
5. ತಟ್ಟೆಯಿಂದ ಟ್ರೇ ಮೇಲೆ ಬಿದ್ದ ತಿನಿಸನ್ನು ತಿನ್ನಬೇಡಿ. ಯಾಕೆಂದರೆ, ಟ್ರೇಗಳನ್ನು ಯಾರೂ ಪದೇ ಪದೇ ಸ್ವಚ್ಛಗೊಳಿಸುವುದಿಲ್ಲ.
6. ನಿದ್ದೆ ಬರುತ್ತದೆಂದು ವಿಮಾನದ ದಿಂಬು, ಹೊದಿಕೆಯನ್ನು ಬಳಸುವಾಗ ಯೋಚಿಸಿ. ಯಾಕೆಂದರೆ ಅವುಗಳನ್ನು ಪ್ರತಿ ಪ್ರಯಾಣದ ನಂತರ ತೊಳೆದಿರುವುದಿಲ್ಲ. ಹಾಗಾಗಿ ಮತ್ತೊಬ್ಬರು ಅದನ್ನು ಬಳಸಿರುವ ಸಾಧ್ಯತೆಗಳು ಹೆಚ್ಚಿವೆ.
7. ಆಗಾಗ ನೀರು ಕುಡಿಯಿರಿ. ಎಲ್ಲರೂ ಸಾಧಾರಣವಾಗಿ ಸರಾಗವಾಗಿ ಉಸಿರಾಡಿಕೊಂಡಿರುವುದು ಸುಮಾರು ಆರೆಂಟು ಸಾವಿರ ಅಡಿ ಎತ್ತರದವರೆಗೆ ಮಾತ್ರ. ನಂತರ ಹೈ ಆಲ್ಟಿಟ್ಯೂಡ್ ಪ್ರದೇಶದಲ್ಲಿರುವಂತೆ ಭಾಸವಾಗುತ್ತದೆ. ಹಾಗಾಗಿ ಮನುಷ್ಯನಿಗೆ ಮೇಲೇರುತ್ತಾ ಹೋದಂತೆ ದೇಹಕ್ಕೆ ಸರಾಗವಾಗಿ ಆಮ್ಲಜನಕದ ಪರಿಚಲನೆ ಆಗುತ್ತಿರಬೇಕೆಂದರೆ ಆಗಾಗ ಎಂದಿಗಿಂತ ಹೆಚ್ಚು ನೀರು ಕುಡಿಯಬೇಕು. ಬಾಟಲ್ ನೀರೇ ಬಳಸಿ.
ಇದನ್ನೂ ಓದಿ: Travel Tips: ಬಿರಿಯಾನಿ ಪ್ರಿಯರು ತಿನ್ನಲೇಬೇಕಾದ ವಿವಿಧ ಸ್ಥಳಗಳ ಬಿರಿಯಾನಿಗಳಿವು!
8. ಆದಷ್ಟೂ ಕಾಫಿ, ಟೀಗಳಿಂದ ದೂರವಿರುವುದು ಒಳ್ಳೆಯದು. ಯಾಕೆಂದರೆ, ವಿಮಾನದಲ್ಲಿ ಕಾಫಿ, ಟೀ ಮಾಡಲು ಬಳಸಿದ ನೀರಿನ ಬಗ್ಗೆ ಯಾವುದೇ ಖಾತರಿ ಇಲ್ಲ. ಕ್ಯಾನ್ಡ್ ಡ್ರಿಂಕ್‌ಗಳನ್ನು ಬೇಕಿದ್ದರೆ ಕುಡಿಯಬಹುದು. ಆದರೆ, ಕೆಫಿನ್ ಇರುವ ಪೇಯಗಳು ಎತ್ತರದಲ್ಲಿರುವಾಗ ಕುಡಿಯುವುದು ಒಳ್ಳೆಯದಲ್ಲ. ಇದು ದೇಹವನ್ನು ಡೀಹೈಡ್ರೇಟ್ ಮಾಡುತ್ತದೆ. ಜೊತೆಗೆ ಕಾರ್ಬೋನೇಟೆಡ್ ಡ್ರಿಂಕ್‌ಗಳೂ ಅಷ್ಟು ಒಳ್ಳೆಯದಲ್ಲ. ಎತ್ತರದ ಪ್ರದೇಶದಲ್ಲಿರುವಾಗ, ಇದು ನಿಮ್ಮ ದೇಹದಲ್ಲಿರುವ ಗ್ಯಾಸನ್ನು ಶೇ.೩೦ರಷ್ಟು ಮತ್ತಷ್ಟು ಹಿಗ್ಗುವಂತೆ ಮಾಡುತ್ತದೆ.
9. ಪ್ರಯಾಣದ ನಡುವೆ ಆರೋಗ್ಯ ಯಾಕೋ ಸರಿಯಿಲ್ಲ ಅನಿಸಿದರೆ ಮುಜುಗರ ಪಡದೆ, ದಯವಿಟ್ಟು ಪರಿಚಾರಿಕೆಯರನ್ನು ಕರೆದು ವಿಷಯ ತಿಳಿಸಿ. ಯಾಕೆಂದರೆ ವಿಮಾನಲ್ಲಿರುವ ಪರಿಚಾರಿಕೆಯರು, ಅಗತ್ಯ ಸಂದರ್ಭಗಳಲ್ಲಿ ಚಿಕಿತ್ಸೆ ನೀಡಲು ತರಬೇತಿ ಪಡೆದಿರುತ್ತಾರೆ. ಜೊತೆಗೆ ಎತ್ತರದ ಜಾಗದಲ್ಲಿ ಆರೋಗ್ಯ ಹದಗೆಟ್ಟರೆ, ನೆಲದ ಮೇಲಿನಂತೆ ಇರುವುದಿಲ್ಲ ಎಂದು ನೆನಪಿಡಿ.
10. ವಿಮಾನ ಟೇಕ್ ಆಫ್ ಆಗುವ ಮೊದಲೇ ನಿದ್ದೆ ಮಾಡಿಬಿಡಬೇಡಿ. ಇದರಿಂದ ಕಿವಿ ಮೇಲೆ ಒತ್ತಡ ಬೀಳುತ್ತದೆ. ಹಾಗಾಗಿ ತಲೆನೋವು ಬರುವ ಸಂಭವ ಇರುತ್ತದೆ. ಕಿವಿ ಎತ್ತರಕ್ಕೆ ಹೊಂದಿಕೊಂಡ ಮೇಲೆ ನಿದ್ದೆ ಮಾಡಿ.
ಇದನ್ನೂ ಓದಿ: Travel Tips: ರಾತ್ರಿಗಳಲ್ಲಿ ಹೊಳೆವ ಅಲೆಗಳ ಬೀಚ್‌ಗಳಿಗೆ ಪ್ರವಾಸ ಮಾಡಿ!