Site icon Vistara News

Araku Valley Tour: ಆಂಧ್ರಪ್ರದೇಶದ ಅರಕು ವ್ಯಾಲಿ; ಹಲವು ಅದ್ಭುತಗಳ ಸಂಗಮ

Araku Valley Tour

ಜೀವನದ ಜಂಜಾಟದಿಂದ ಬೇಸತ್ತ ಜನರು ತಮ್ಮ ಕುಟುಂಬದ ಜೊತೆಗೆ ಪ್ರವಾಸಕ್ಕೆ ಹೋಗಲು ಇಷ್ಟಪಡುತ್ತಾರೆ. ಅದಕ್ಕಾಗಿ ಸುಂದರವಾದ, ಪ್ರಶಾಂತವಾದ ಸ್ಥಳಗಳನ್ನು ಹುಡುಕುತ್ತಿರುತ್ತಾರೆ. ಅಂಥವರು ಒಮ್ಮೆ ಭಾರತದ ಸುಂದರವಾದ ಮತ್ತು ರಮಣೀಯವಾದ ಪೂರ್ವ ಘಟ್ಟಗಳ ನಡುವಿನ ಶಾಂತಿಯುತವಾದ ಸ್ಥಳ ಅರಕು ಕಣಿವೆಗೆ (Araku Valley Tour) ಭೇಟಿ ನೀಡಬಹುದು.

ಆಂಧ್ರಪ್ರದೇಶದಲ್ಲಿರುವ ಈ ಸಣ್ಣ ಕಣಿವೆಯು ನೈಸರ್ಗಿಕ ಸೌಂದರ್ಯದ ಮೂಲಕ ನಿಮ್ಮನ್ನು ರೋಮಾಂಚನಗೊಳಿಸುವಂತಹ ಸ್ಥಳವಾಗಿದೆ. ಇಲ್ಲಿನ ಹಸಿರು ತಾಣಗಳು, ಜಲಪಾತಗಳು ಮತ್ತು ಇಲ್ಲಿ ಸಿಗುವಂತಹ ರುಚಿಕರವಾದ ತಿನಿಸು ಪ್ರಯಾಣಿಕರನ್ನು ಈ ಸ್ಥಳಕ್ಕೆ ಸೆಳೆಯುತ್ತದೆ. ಹಾಗಾಗಿ ಅರಕು ಕಣಿವೆಯ ಈ ರಮಣೀಯ ಸ್ಥಳಗಳ ಬಗ್ಗೆ ತಿಳಿಯಿರಿ. ಇದು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ 111 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ಇಲ್ಲಿಗೆ 20 ಗಂಟೆಗಳ ಪ್ರಯಾಣ.

Araku Valley Tour

ಬೊರ್ರಾ ಗುಹೆಗಳು

ಇದು ಭಾರತದ ಅತಿದೊಡ್ಡ ಗುಹೆಗಳಲ್ಲಿ ಒಂದು. ಇದು ಸಾಹಸಿಗಳಿಗೆ ಹೇಳಿ ಮಾಡಿಸಿದ ಸ್ಥಳ. ಇದು ಸುಣ್ಣದ ಕಲ್ಲುಗಳಿಂದ ಮಾಡಿದ ಗುಹೆಯಾಗಿದೆ. ಇದು ಸುಂದರವಾದ ಸ್ಟಾಲಾಕ್ಟೈಟ್ ಗಳು ಮತ್ತು ಸ್ಟಾಲಗ್ಮೈಟ್ ಗಳಿಂದ ಅಲಂಕರಿಸಲ್ಪಟ್ಟಿದೆ. ಇವುಗಳ ಮೂಲಕ ಗುಹೆಗೆ ಪ್ರವೇಶಿಸುವಾಗ ನೀವು ಮಂತ್ರಮುಗ್ಧರಾಗುವುದಂತು ಖಂಡಿತ.

Araku Valley Tour

ಕಟಿಕಿ ಜಲಪಾತ

ಸೊಂಪಾದ ಕಾಡುಗಳ ಆಳದಲ್ಲಿ ಅಡಗಿರುವ ಈ ಜಲಪಾತ ನಿಮಗೆ ಉಲ್ಲಾಸದಾಯಕ ಅನುಭವವನ್ನು ನೀಡುತ್ತದೆ. ಈ ಜಲಪಾತಕ್ಕೆ ಹೋಗಲು ಕಾಡುಗಳ ನಡುವೆ ನೀವು ಚಾರಣ ಮಾಡಬೇಕಾಗುತ್ತದೆ. ಇದು ಪ್ರಕೃತಿ ಪ್ರಿಯರಿಗೆ ಖುಷಿಯನ್ನು ನೀಡುತ್ತದೆ. ಇಲ್ಲಿನ ಜಲಪಾತದ ಕೆಳಗಿನ ಕೊಳದಲ್ಲಿ ಜಲಕ್ರೀಡೆ ಆಡಬಹುದು.

Araku Valley Tour

ಪದ್ಮಪುರಂ ಉದ್ಯಾನ

ಅರಕು ಕಣಿವೆಯ ಹೃದಯ ಭಾಗದಲ್ಲಿರಿವ ಪದ್ಮಪುರಂ ಉದ್ಯಾನದಲ್ಲಿ ಪರಿಮಳಯುಕ್ತವಾದ ಬಣ್ಣ ಬಣ್ಣದ ಹೂಗಳನ್ನು ನೋಡಬಹುದು. ಇದನ್ನು ನೋಡಿದರೆ ಸ್ವರ್ಗವೇ ಭೂಮಿಗೆ ಬಂದಂತೆ ಭಾಸವಾಗುತ್ತದೆ. ಇಲ್ಲಿನ ಸುಂದರವಾದ ಉದ್ಯಾನ, ಸಸ್ಯಗಳು, ಮತ್ತು ನಡೆಯಲು ನಿರ್ಮಿಸಿದ ಆಕರ್ಷಕವಾದ ಫುಟ್ ಪಾತ್ ಗಳಲ್ಲಿ ನಿಮ್ಮ ಕುಟುಂಬದವರ ಜೊತೆ ವಾಕ್ ಮಾಡಬಹುದು. ಇಲ್ಲಿ ಆಟಿಕೆ ರೈಲಿನಲ್ಲಿ ಸವಾರಿ ಮಾಡುವ ಮೂಲಕ ಉದ್ಯಾನವನದ ನೋಟವನ್ನು ಕಣ್ತುಂಬಿಕೊಳ್ಳಬಹುದು.

Araku Valley Tour

ಬುಡಕಟ್ಟು ವಸ್ತು ಸಂಗ್ರಹಾಲಯ (ಟ್ರೈಬಲ್ ಮ್ಯೂಸಿಯಂ)

ಈ ಬುಡಕಟ್ಟು ವಸ್ತು ಸಂಗ್ರಹಾಲಯವು ಬುಡಕಟ್ಟು ಪರಂಪರೆಯನ್ನು ಸಾರುತ್ತದೆ. ಇದು ಸ್ಥಳೀಯ ಜನರ ಜೀವನ ಮತ್ತು ಪದ್ಧತಿಗಳನ್ನು ಪ್ರತಿನಿಧಿಸುತ್ತದೆ. ಈ ವಸ್ತು ಸಂಗ್ರಾಹಾಲಯದಲ್ಲಿ ಬುಡಕಟ್ಟು ಆಚರಣೆಗಳು, ಸಂಪ್ರದಾಯಗಳು ಮತ್ತು ಕೌಶಲ್ಯಗಳನ್ನು ಒಳಗೊಂಡ ಕಲಾಕೃತಿಗಳು ಮತ್ತು ಕರಕುಶಲ ವಸ್ತುಗಳನ್ನು ಕಾಣಬಹುದು.

Araku Valley Tour

ಅನಂತಗಿರಿ ಬೆಟ್ಟಗಳು

ಇಲ್ಲಿ ದಟ್ಟವಾದ ಕಾಡುಗಳು ಮತ್ತು ಮಂಜಿನ ಮೋಡಗಳಿಂದ ಆವೃತವಾದ ಬೆಟ್ಟಗಳಿಂದ ಸುತ್ತುವರಿದ ಗಿರಿಧಾಮವಿದೆ. ಇಲ್ಲಿ ಸಾಹಸಮಯ ಚಾರಣವನ್ನು ಮಾಡಬಹುದು. ಇಲ್ಲಿ ವಿವಿಧ ರೀತಿಯ ಸಸ್ಯಗಳು ಮತ್ತು ಪ್ರಾಣಿಗಳನ್ನು ನೋಡಬಹುದಂತೆ.

ಇದನ್ನೂ ಓದಿ: Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Araku Valley Tour

ಚಾಪಾರೈ ವಾಟರ್ ಕ್ಯಾಸ್ಕೇಡ್

ಪ್ರಕೃತಿಯ ಮಧ್ಯೆ ಶಾಂತಿಯುತವಾಗಿ ಇರಲು ಬಯಸುವವರು ಈ ಸ್ಥಳಕ್ಕೆ ಭೇಟಿ ನೀಡಿ. ಇಲ್ಲಿ ಹರಿಯುವ ನೀರು ಮತ್ತು ಸೊಂಪಾದ ಹಸಿರು ನಿಮ್ಮ ಮನಸ್ಸಿಗೆ ಮುದವನ್ನು ನೀಡುತ್ತದೆ. ಇದು ವಿಶ್ರಾಂತಿ ಪಡೆಯಲು ಸೂಕ್ತವಾದ ಸ್ಥಳ.
ಹಾಗಾಗಿ ಕುಟುಂಬದೊಂದಿಗೆ ಅರಕು ಕಣಿವೆಯ ಈ ಸ್ಥಳಕ್ಕೆ ಭೇಟಿ ನೀಡಿ ನಿಮ್ಮ ಪ್ರವಾಸವನ್ನು ಸ್ಮರಣೀಯವಾಗಿಸಿ.

Exit mobile version