Site icon Vistara News

ಪ್ರವಾಸಿ ತಾಣ: ಕೊರೊನಾ ನಂತರ ಈ ದೇಶ ಪ್ರವಾಸಿಗರ ಅಚ್ಚುಮೆಚ್ಚು ಆಗಿದೆಯಂತೆ!

bangkok

ಸುಮಾರು ಎರಡು ವರ್ಷಗಳಿಂದ ಕೊರೊನಾ ಎಂದು ಎಲ್ಲೂ ತಿರುಗಾಡದೆ, ಪ್ರವಾಸ ಮಾಡದೆ ಬೇಸತ್ತು ಇದೀಗ ಕಳೆದ ಕೆಲವು ತಿಂಗಳುಗಳಲ್ಲಿ ತಮ್ಮ ನಿತ್ಯ ಜೀವನಕ್ಕೆ ಮರಳಿದ್ದು ಜನರು ನಿರಾಳವಾಗಿ ಕೋವಿಡ್‌ ನಿರ್ಬಂಧಗಳಿಂದ ನಿಧಾನವಾಗಿ ಬಿಡಿಸಿಕೊಂಡು ಸಹಜಸ್ಥಿತಿಗೆ ಬರುತ್ತಿದ್ದಾರೆ. ಮಕಾಡೆ ಮಲಗಿದ್ದ ಪ್ರವಾಸೋದ್ಯಮ ಇದರಿಂದಾಗಿ ಮತ್ತೆ ಗರಿಗೆದರಿ ನಿಲ್ಲುತ್ತಿದೆ. ಬಹುಮುಖ್ಯವಾಗಿ ಅಂತಾರಾಷ್ಟ್ರೀಯ ಪ್ರವಾಸ ಮಾರುಕಟ್ಟೆ ಚಿಗಿತುಕೊಳ್ಳುತ್ತಿದ್ದು, ಪ್ರವಾಸಪ್ರಿಯರು ತಮ್ಮ ಸೂಟ್‌ಕೇಸ್‌ಗಳ ಧೂಳೊರೆಸಿ ಮತ್ತೆ ವಿದೇಶ ಪ್ರವಾಸಗಳ ಕನಸು ಕಾಣತೊಡಗಿದ್ದಾರೆ.

ಡಿಜಿಟಲ್‌ ಟ್ರಾವೆಲ್‌ ಸಂಸ್ಥೆ ಅಗೋಡಾ ಇತ್ತೀಚೆಗೆ ಟಾಪ್‌ ಟ್ರೆಂಡಿಂಗ್‌ ಪ್ರವಾಸೀ ಸ್ಥಳಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅಂತಾರಾಷ್ಟ್ರೀಯ ಪ್ರವಾಸೋದ್ಯಮದಲ್ಲಿ ಬ್ಯಾಂಕಾಕ್‌ ಎಲ್ಲರ ಮನಗೆದ್ದು ಮೊದಲ ಸ್ಥಾನದಲ್ಲಿದೆ.

ಭಾರತೀಯರೂ ಕೂಡಾ ತಮ್ಮ ಸುತ್ತಮುತ್ತಲ ದೇಶಗಳಿಗೆ ಹಾರಿ ಪ್ರವಾಸದ ಖುಷಿ ಅನುಭವಿಸಲು ತೊಡಗಿದ್ದಾರೆ. ಅಗೋಡಾದ ಇತ್ತೀಚೆಗಿನ ಕೆಲವು ತಿಂಗಳುಗಳ ಬುಕ್ಕಿಂಗ್‌ ವರದಿಯ ಪ್ರಕಾರ, ಜನರು ಥಾಯ್ಲೆಂಡ್‌, ಇಂಡೋನೇಷ್ಯಾ, ಸಿಂಗಾಪುರ ದೇಶಗಳತ್ತ ಹೆಚ್ಚು ಮುಖ ಮಾಡಿದ್ದಾರೆ. ಯುರೋಪಿಯನ್‌ ದೇಶಗಳಾದ ಫ್ರಾನ್ಸ್‌ ಹಾಗೂ ಸ್ವಿಜರ್‌ಲ್ಯಾಂಡ್‌ ಕಡೆಗೂ ಪ್ರವಾಸಿಗರ ಒಲವಿದೆ. ಭಾರತೀಯರು ಹೆಚ್ಚಾಗಿ, ಹಸಿರು ಹಸಿರಾಗಿರುವ ನಯನಮನೋಹರ ಬೆಟ್ಟಗಳೂ, ಸಮದ್ರ ತೀರವೂ ಇರುವ ದೇಶಗಳನ್ನು ಹೆಚ್ಚು ಇಷ್ಟ ಪಡುತ್ತಿದ್ದಾರೆ. ಹಾಗಾಗಿಯೇ ಥಾಯ್ಲೆಂಡ್‌, ಇಂಡೋನೇಷ್ಯಾ ಹಾಗೂ ಸಿಂಗಾಪುರ ದೇಶಗಳೇ ಇಲ್ಲಿ ಮುಖ್ಯ ಸ್ಥಾನದಲ್ಲಿವೆ.

ನಮ್ಮ ದೇಶದೊಳಗಿನ ಪ್ರವಾಸಿ ಸ್ಥಳಗಳ ಪೈಕಿ, ಮೆಟ್ರೋ ಸಿಟಿಗಳಾದ, ದೆಹಲಿ, ಮುಂಬೈ, ಬೆಂಗಳೂರು ಹಾಗೂ ಚೆನ್ನೈ ಕಡೆಗೆ ಹೆಚ್ಚು ಒಲವಿದೆ. ಗೋವಾ ಸಹಜವಾಗಿಯೇ ಎಂದಿನಂತೆ, ಈ ಎಲ್ಲ ನಗರಗಳನ್ನು ಹಿಂದಿಕ್ಕಿ ಮುಂಚೂಣಿಯಲ್ಲಿರುವ ಬಗ್ಗೆ ಹೆಚ್ಚು ಆಶ್ಚರ್ಯಪಡುವಂಥದ್ದೇನಿಲ್ಲ. ಭಾರತದೊಳಗಿನ ಪ್ರವಾಸೀ ತಾಣಗಳ ಪೈಕಿ ಜನರು ಈಗಲೂ, ಸಮುದ್ರ ತೀರದಲ್ಲಿ ರಿಲ್ಯಾಕ್ಸ್‌ ಆಗಲು ಗೋವಾವನ್ನೇ ಬಯಸುತ್ತಿದ್ದಾರೆ.‌

ಇದನ್ನೂ ಓದಿ: Weird travel : ಹೆಂಡತಿ ಮುಖದ ದಿಂಬಿನೊಂದಿಗೆ ಪ್ರವಾಸ ಮಾಡಿದ ಗಂಡ!

ಜಾಗತಿಕವಾಗಿ ಬ್ಯಾಂಕಾಕ್‌ ಮೊದಲ ಸ್ಥಾನದಲ್ಲಿದ್ದು, ಕೋವಿಡ್‌ನ ಎಲ್ಲ ನಿರ್ಬಂಧಗಳಿಂದ ಕಳಚಿಕೊಂಡು ಈಗ ಝಗಮಗಿಸುತ್ತಿದ್ದು ಎಲ್ಲಾ ಬಗೆಯ ಪ್ರವಾಸಿಗರನ್ನೂ ತನ್ನೆಡೆಗೆ ಆಕರ್ಷಿಸುತ್ತಿದೆ. ತನ್ನ ಭರ್ಜರಿ ನೈಟ್‌ಲೈಫ್‌, ಬೀಚುಗಳು, ದೇವಾಲಯಗಳು, ಸಂಸ್ಕೃತಿ, ಆಹಾರ ವೈವಿಧ್ಯ ಹೀಗೆ ಪ್ರತಿಯೊಂದು ವಿಭಾಗದಲ್ಲೂ ಮಿಂಚುವ ಬ್ಯಾಂಕಾಕ್‌ ಸಹಜವಾಗಿಯೇ ಸುತ್ತಮುತ್ತಲ ದೇಶಗಳಿಂದ ತನ್ನೆಡೆಗೆ ಪ್ರವಾಸಿಗರನ್ನು ಸೆಳೆಯುತ್ತಿದೆ. ಮುಖ್ಯವಾಗಿ ಏಷ್ಯಾದ ಮಂದಿಯನ್ನು ತನ್ನೆಡೆಗೆ ಸೆಳೆಯುತ್ತಿದೆ.

ಬ್ಯಾಂಕಾಕ್‌, ಜೆಜು ದ್ವೀಪ, ಕೌಲಾಲಂಪುರ್‌, ಟೋಕಿಯೋ, ಸಿಯಾಲ್‌, ಸಿಂಗಾಪುರ, ಬಾಲಿ, ಪಟ್ಟಾಯ, ಮನಿಲ, ಪೆನಾಂಗ್‌, ಹಾಂಗ್‌ಕಾಂಗ್‌, ಬುಸಾನ್‌, ಒಸಾಕ, ಜೊಹೊರ್‌ಬಹ್ರು, ತೈಚುಂಗ್‌ ಟಾಪ್‌ ಪಟ್ಟಿಯಲ್ಲಿರುವ ಸ್ಥಳಗಳು.
ಸದ್ಯ ಎರಡು ವರ್ಷಗಳಿಂದ ಕೋವಿಡ್‌ ಹೆಸರಿನಲ್ಲಿ ಪ್ರವಾಸ ನಿಂತೇ ಹೋಗಿದ್ದರಿಂದ ಹಲವರು ಹೋದ ಸ್ಥಳಗಳಿಗೇ ಮತ್ತೆ ಹೋಗಲು ಬಯಸುತ್ತಿದ್ದಾರೆ. ಒಂದೆಡೆ ಸುಮ್ಮನೆ ಕೂತು, ತಾವು ಹಿಂದೆ ಅಲ್ಲಿಗೆ ಭೇಟಿ ಕೊಟ್ಟ ನೆನಪುಗಳನ್ನು ಮೆಲುಕು ಹಾಕಲು ಬಯಸುತ್ತಿದ್ದಾರೆ. ಹಾಗಾಗಿಯೇ ಮತ್ತೆ ಮತ್ತೆ ಬ್ಯಾಂಕಾಕ್‌, ಕೌಲಾಲಂಪುರದಂತಹ ಜಾಗಗಳೇ ಮತ್ತೆ ಮತ್ತೆ ಜನರ ಟಾಪ್‌ ಆಯ್ಕೆಗಳಾಗುತ್ತಿವೆ ಎಂದು ಅಗೋಡಾ ಹೇಳಿದೆ.

ಭಾರತೀಯ ಪ್ರವಾಸಿಗರು ಮುಂದಿನ ಬೇಸಿಗೆಯಲ್ಲಿ ಥಾಯ್ಲೆಂಡ್‌, ಇಂಡೋನೇಷ್ಯಾ, ಸಿಂಗಾಪುರ, ಫ್ರಾನ್ಸ್‌ ಹಾಗೂ ಸ್ವಿಜರ್‌ಲ್ಯಾಂಡ್‌ ದೇಶಗಳನ್ನೇ ಮತ್ತೆ ಭೇಟಿ ಕೊಡಲು ಬಯಸುತ್ತಿದ್ದಾರೆ. ಬ್ಯಾಂಕಾಕ್‌ ಭಾರತೀಯರಿಗಷ್ಟೇ ಅಲ್ಲ, ಯುಎಸ್‌, ಯುಕೆ ಪ್ರವಾಸಿಗರ ಆಯ್ಕೆಯ ಟಾಪ್‌ಪಟ್ಟಿಯಲ್ಲಿಯೂ ಮೊದಲ ಸ್ಥಾನದಲ್ಲೇ ಇದೆ.

ಸಿಂಗಾಪುರದ ಮಂದಿ ಮಲೇಶಿಯಾ, ಥಾಯ್ಲೆಂಡ್‌ ಹಾಗೂ ಇಂಡೋನೇಷ್ಯಾವನ್ನು ಹೋಗಬಯಸುವ ಟಾಪ್‌ ಪಟ್ಟಿಯಲ್ಲಿಟ್ಟರೆ, ಆಸ್ಟ್ರೇಲಿಯಾ ಪ್ರವಾಸಿಗರು ಬಾಲಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಮೆರಿಕನ್‌ ಪ್ರವಾಸಿಗರು ಬ್ಯಾಂಕಾಕ್‌, ಮನಿಲ ಹಾಗೂ ಟೋಕಿಯೋಗೆ ಮೊದಲ ಮೂರು ಸ್ಥಾನಗಳನ್ನು ನೀಡಿದ್ದಾರೆ.

ಇದನ್ನೂ ಓದಿ: ಬೈಕಿಂಗ್‌ ಕ್ರೇಜ್‌ ನಿಮಗಿದೆಯಾ? ನೀವು ಓದಲೇಬೇಕಾದ ಐದು ಪುಸ್ತಕಗಳು ಇಲ್ಲಿವೆ

Exit mobile version