Site icon Vistara News

Bengaluru Tour: ನಿಮ್ಮ ಮನೆಗೆ ನೆಂಟರು ಬಂದಾಗ ಸುಲಭವಾಗಿ ಬೆಂಗಳೂರು ತೋರಿಸುವುದು ಹೇಗೆ?

ಬೆಂಗಳೂರು: ಬೆಂಗಳೂರಿಗರಾಗಿರುವ ನಿಮ್ಮ ಮನೆಗೆ ನೆಂಟರು ಬಂದಿದ್ದಾರೆ. ಬೆಂಗಳೂರಿಗೆ ಹೊಸಬರಾಗಿರುವ ಅವರಿಗೆ ಬೆಂಗಳೂರನ್ನು ಸುತ್ತಿಸಬೇಕು. ಆದರೆ ನಿಮ್ಮ ಬಳಿ ಅಷ್ಟೊಂದು ಸಮಯವಿಲ್ಲ ಅಥವಾ ಅವರನ್ನು ಕರೆದುಕೊಂಡು ಹೋಗುವುದಕ್ಕೆ ವಾಹನವಿಲ್ಲ. ಹಾಗಿರುವಾಗ ನೀವು ಅವರನ್ನು ಸುರಕ್ಷಿತವಾಗಿ ಹೇಗೆ ಬೆಂಗಳೂರು ಸುತ್ತಿಸಬಹುದು ಎಂದು ಯೋಚಿಸಬಹುದು. ಯೋಚನೆ ಬಿಡಿ, ಏಕೆಂದರೆ ನೆಂಟರನ್ನು ಬೆಂಗಳೂರು ಸುತ್ತಿಸುವ ನಿಮ್ಮ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರ ಪ್ರವಾಸೋದ್ಯಮ ಇಲಾಖೆಯೇ ಹೊತ್ತುಕೊಳ್ಳುತ್ತದೆ. ಅದಕ್ಕೆಂದೇ ಒಂದು ದಿನದ ವಿಶೇಷ ಪ್ರವಾಸಿ ಪ್ಯಾಕೇಜ್‌ (Bengaluru Tour) ಅನ್ನೂ ನೀಡುತ್ತಿದೆ.

ಇದನ್ನೂ ಓದಿ: Bengaluru tour : ಬೆಂಗಳೂರು ಸುತ್ತಮುತ್ತ ನೀವು ನೋಡಲೇಬೇಕಾದ ಟಾಪ್‌ 10 ಪ್ರವಾಸಿ ತಾಣಗಳಿವು

ಒಂದು ದಿನದ ಮಟ್ಟಿನ ಬೆಂಗಳೂರು ಪ್ರವಾಸದ ಪ್ಯಾಕೇಜ್‌ ಅನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ನಡೆಸುತ್ತಿದೆ. ನಗರದ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಕರೆದುಕೊಂಡು ಹೋಗುವುದಷ್ಟೇ ಅಲ್ಲದೆ, ಅಲ್ಲಿನ ವಿಶೇಷತೆಗಳನ್ನೂ ನಿಮಗೆ ತಿಳಿಸುವ ಕೆಲಸವನ್ನು ಇಲಾಖೆ ಮಾಡುತ್ತಿದೆ.

ಯಾವ ಯಾವ ಸ್ಥಳಗಳ ವೀಕ್ಷಣೆ?

* ಇಸ್ಕಾನ್‌

* ರಾಜರಾಜೇಶ್ವರಿ ದೇಗುಲ

* ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

* ಜವಹರಲಾಲ್‌ ನೆಹರು ವಿಜ್ಞಾನ ಪ್ರದರ್ಶನಾಲಯ ಮತ್ತು ತಾರಾಲಯ

ಎಷ್ಟೊತ್ತಿಗೆ ಎಲ್ಲಿಗೆ?

7.30 : ಪ್ರವಾಸಕ್ಕೆ ಟಿಕೆಟ್‌ ಬುಕ್ಕಿಂಗ್‌ ಮಾಡಿಕೊಳ್ಳುವವರು ಬೆಳಗ್ಗೆ 7.30ಕ್ಕೆ ಯಶವಂತಪುರದ ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಮುಖ್ಯ ಕಚೇರಿಯಲ್ಲಿರಬೇಕು.

7.45 : ಮೊದಲನೆಯದಾಗಿ ಪ್ರವಾಸಿಗರನ್ನು ಯಶವಂತಪುರದಲ್ಲಿರುವ ಇಸ್ಕಾನ್‌ ದೇಗುಲಕ್ಕೆ ಕರೆದೊಯ್ಯಲಾಗುವುದು. ಒಂದು ಗಂಟೆಯ ಕಾಲ ಈ ದೇವಸ್ಥಾನದ ದರ್ಶನ ಮಾಡಿಸಲಾಗುವುದು.

8.45 – 9.15 : ರಾಜರಾಜೇಶ್ವರಿ ದೇಗುಲ

10.30 – 1.00 : ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ

1.00 – 1.30: ಬನ್ನೇರುಘಟ್ಟದ ಮಯೂರ ವನಶ್ರೀ ಹೋಟೆಲ್‌ನಲ್ಲಿ ಊಟ

4.30 – 5.15 : ಜವಹರಲಾಲ್‌ ನೆಹರು ತಾರಾಲಯ

6.30 : ಯಶವಂತಪುರದ ಪ್ರವಾಸೋದ್ಯಮ ಇಲಾಖೆಯ ಮುಖ್ಯ ಕಚೇರಿಯಲ್ಲಿ ಪ್ರವಾಸ ಕೊನೆಗೊಳ್ಳುವುದು.

ಶುಲ್ಕ ಎಷ್ಟು?

ಪೂರ್ತಿ ಒಂದು ದಿನದ ಈ ಪ್ರವಾಸದಲ್ಲಿ ಪ್ರವಾಸಿಗರನ್ನು ಡಿಲಕ್ಸ್‌ ಎಸಿ ಬಸ್ಸಿನಲ್ಲಿ ಬೆಂಗಳೂರು ಸುತ್ತಿಸಲಾಗುವುದು. ಅದಕ್ಕೆಂದು ಒಬ್ಬರು 495 ರೂ. ಶುಲ್ಕ ಭರಿಸಬೇಕು. 5 ವರ್ಷದ ಮೇಲಿನವರಿಗೆ ಮಾತ್ರವೇ ಪ್ರವಾಸಕ್ಕೆ ಅವಕಾಶವಿದ್ದು, ಎಲ್ಲರಿಗೂ ಒಂದೇ ತೆರನಾದ ಶುಲ್ಕವಿದೆ. ಈ ಪ್ರವಾಸ ಮಂಗಳವಾರದ ಹೊರತುಪಡಿಸಿ ಬೇರೆಲ್ಲ ದಿನಗಳೂ ಇರುತ್ತದೆ.

ಉಪಯೋಗವೇನು?

ಈ ಪ್ರವಾಸದಲ್ಲಿ ಬರುವ ಪ್ರವಾಸಿಗರಿಗೆ ಪ್ರೇಕ್ಷಣೀಯ ಸ್ಥಳವನ್ನು ನೋಡುವುದಕ್ಕೆ ಸಾಕಷ್ಟು ಸಮಯ ನೀಡಲಾಗುವುದು. ಹಾಗೆಯೇ ಪ್ರತಿ ಸ್ಥಳದ ಬಗ್ಗೆ ವಿವರಗಳನ್ನು ನೀಡಲಾಗುವುದು. ಅದಕ್ಕೆಂದೇ ವೃತ್ತಿಪರ ಪ್ರವಾಸಿ ಮಾರ್ಗದರ್ಶಿಗಳು ನಿಮ್ಮೊಂದಿಗೆ ಬರುತ್ತಾರೆ. ರಾಜ್ಯ, ಕೇಂದ್ರ ಮತ್ತು PSUಗಳ ಉದ್ಯೋಗಿಗಳಿಗೆ LTC ಸೌಲಭ್ಯಗಳು ಇರುತ್ತದೆ.

ಈ ಪ್ರವಾಸಕ್ಕೆ ಹೋಗಬಯಸುವವರು https://www.kstdc.co/tour-packages/bengaluru-full-day-trip/ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಟಿಕೆಟ್‌ ಬುಕ್‌ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 8043344334 ಸಂಖ್ಯೆಗೆ ಕರೆ ಮಾಡಬಹುದು.

Exit mobile version