ಪ್ರವಾಸ
Bengaluru Tour: ನಿಮ್ಮ ಮನೆಗೆ ನೆಂಟರು ಬಂದಾಗ ಸುಲಭವಾಗಿ ಬೆಂಗಳೂರು ತೋರಿಸುವುದು ಹೇಗೆ?
ಬೆಂಗಳೂರಿಗೆ ಬರುವ ಪ್ರವಾಸಿಗರಿಗೆಂದೇ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಬೆಂಗಳೂರಿನ ಒಂದು ದಿನದ ಪ್ರವಾಸಿ ಪ್ಯಾಕೇಜ್ (Bengaluru Tour) ನಡೆಸುತ್ತಿದೆ. ಅದರ ವಿವರ ಇಲ್ಲಿದೆ.
ಬೆಂಗಳೂರು: ಬೆಂಗಳೂರಿಗರಾಗಿರುವ ನಿಮ್ಮ ಮನೆಗೆ ನೆಂಟರು ಬಂದಿದ್ದಾರೆ. ಬೆಂಗಳೂರಿಗೆ ಹೊಸಬರಾಗಿರುವ ಅವರಿಗೆ ಬೆಂಗಳೂರನ್ನು ಸುತ್ತಿಸಬೇಕು. ಆದರೆ ನಿಮ್ಮ ಬಳಿ ಅಷ್ಟೊಂದು ಸಮಯವಿಲ್ಲ ಅಥವಾ ಅವರನ್ನು ಕರೆದುಕೊಂಡು ಹೋಗುವುದಕ್ಕೆ ವಾಹನವಿಲ್ಲ. ಹಾಗಿರುವಾಗ ನೀವು ಅವರನ್ನು ಸುರಕ್ಷಿತವಾಗಿ ಹೇಗೆ ಬೆಂಗಳೂರು ಸುತ್ತಿಸಬಹುದು ಎಂದು ಯೋಚಿಸಬಹುದು. ಯೋಚನೆ ಬಿಡಿ, ಏಕೆಂದರೆ ನೆಂಟರನ್ನು ಬೆಂಗಳೂರು ಸುತ್ತಿಸುವ ನಿಮ್ಮ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರ ಪ್ರವಾಸೋದ್ಯಮ ಇಲಾಖೆಯೇ ಹೊತ್ತುಕೊಳ್ಳುತ್ತದೆ. ಅದಕ್ಕೆಂದೇ ಒಂದು ದಿನದ ವಿಶೇಷ ಪ್ರವಾಸಿ ಪ್ಯಾಕೇಜ್ (Bengaluru Tour) ಅನ್ನೂ ನೀಡುತ್ತಿದೆ.
ಇದನ್ನೂ ಓದಿ: Bengaluru tour : ಬೆಂಗಳೂರು ಸುತ್ತಮುತ್ತ ನೀವು ನೋಡಲೇಬೇಕಾದ ಟಾಪ್ 10 ಪ್ರವಾಸಿ ತಾಣಗಳಿವು
ಒಂದು ದಿನದ ಮಟ್ಟಿನ ಬೆಂಗಳೂರು ಪ್ರವಾಸದ ಪ್ಯಾಕೇಜ್ ಅನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ನಡೆಸುತ್ತಿದೆ. ನಗರದ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಕರೆದುಕೊಂಡು ಹೋಗುವುದಷ್ಟೇ ಅಲ್ಲದೆ, ಅಲ್ಲಿನ ವಿಶೇಷತೆಗಳನ್ನೂ ನಿಮಗೆ ತಿಳಿಸುವ ಕೆಲಸವನ್ನು ಇಲಾಖೆ ಮಾಡುತ್ತಿದೆ.
ಯಾವ ಯಾವ ಸ್ಥಳಗಳ ವೀಕ್ಷಣೆ?
* ಇಸ್ಕಾನ್
* ರಾಜರಾಜೇಶ್ವರಿ ದೇಗುಲ
* ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
* ಜವಹರಲಾಲ್ ನೆಹರು ವಿಜ್ಞಾನ ಪ್ರದರ್ಶನಾಲಯ ಮತ್ತು ತಾರಾಲಯ
ಎಷ್ಟೊತ್ತಿಗೆ ಎಲ್ಲಿಗೆ?
7.30 : ಪ್ರವಾಸಕ್ಕೆ ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳುವವರು ಬೆಳಗ್ಗೆ 7.30ಕ್ಕೆ ಯಶವಂತಪುರದ ಬಿಎಂಟಿಸಿ ಬಸ್ ನಿಲ್ದಾಣದಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಮುಖ್ಯ ಕಚೇರಿಯಲ್ಲಿರಬೇಕು.
7.45 : ಮೊದಲನೆಯದಾಗಿ ಪ್ರವಾಸಿಗರನ್ನು ಯಶವಂತಪುರದಲ್ಲಿರುವ ಇಸ್ಕಾನ್ ದೇಗುಲಕ್ಕೆ ಕರೆದೊಯ್ಯಲಾಗುವುದು. ಒಂದು ಗಂಟೆಯ ಕಾಲ ಈ ದೇವಸ್ಥಾನದ ದರ್ಶನ ಮಾಡಿಸಲಾಗುವುದು.
8.45 – 9.15 : ರಾಜರಾಜೇಶ್ವರಿ ದೇಗುಲ
10.30 – 1.00 : ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ
1.00 – 1.30: ಬನ್ನೇರುಘಟ್ಟದ ಮಯೂರ ವನಶ್ರೀ ಹೋಟೆಲ್‌ನಲ್ಲಿ ಊಟ
4.30 – 5.15 : ಜವಹರಲಾಲ್ ನೆಹರು ತಾರಾಲಯ
6.30 : ಯಶವಂತಪುರದ ಪ್ರವಾಸೋದ್ಯಮ ಇಲಾಖೆಯ ಮುಖ್ಯ ಕಚೇರಿಯಲ್ಲಿ ಪ್ರವಾಸ ಕೊನೆಗೊಳ್ಳುವುದು.
ಶುಲ್ಕ ಎಷ್ಟು?
ಪೂರ್ತಿ ಒಂದು ದಿನದ ಈ ಪ್ರವಾಸದಲ್ಲಿ ಪ್ರವಾಸಿಗರನ್ನು ಡಿಲಕ್ಸ್ ಎಸಿ ಬಸ್ಸಿನಲ್ಲಿ ಬೆಂಗಳೂರು ಸುತ್ತಿಸಲಾಗುವುದು. ಅದಕ್ಕೆಂದು ಒಬ್ಬರು 495 ರೂ. ಶುಲ್ಕ ಭರಿಸಬೇಕು. 5 ವರ್ಷದ ಮೇಲಿನವರಿಗೆ ಮಾತ್ರವೇ ಪ್ರವಾಸಕ್ಕೆ ಅವಕಾಶವಿದ್ದು, ಎಲ್ಲರಿಗೂ ಒಂದೇ ತೆರನಾದ ಶುಲ್ಕವಿದೆ. ಈ ಪ್ರವಾಸ ಮಂಗಳವಾರದ ಹೊರತುಪಡಿಸಿ ಬೇರೆಲ್ಲ ದಿನಗಳೂ ಇರುತ್ತದೆ.
ಉಪಯೋಗವೇನು?
ಈ ಪ್ರವಾಸದಲ್ಲಿ ಬರುವ ಪ್ರವಾಸಿಗರಿಗೆ ಪ್ರೇಕ್ಷಣೀಯ ಸ್ಥಳವನ್ನು ನೋಡುವುದಕ್ಕೆ ಸಾಕಷ್ಟು ಸಮಯ ನೀಡಲಾಗುವುದು. ಹಾಗೆಯೇ ಪ್ರತಿ ಸ್ಥಳದ ಬಗ್ಗೆ ವಿವರಗಳನ್ನು ನೀಡಲಾಗುವುದು. ಅದಕ್ಕೆಂದೇ ವೃತ್ತಿಪರ ಪ್ರವಾಸಿ ಮಾರ್ಗದರ್ಶಿಗಳು ನಿಮ್ಮೊಂದಿಗೆ ಬರುತ್ತಾರೆ. ರಾಜ್ಯ, ಕೇಂದ್ರ ಮತ್ತು PSUಗಳ ಉದ್ಯೋಗಿಗಳಿಗೆ LTC ಸೌಲಭ್ಯಗಳು ಇರುತ್ತದೆ.
ಈ ಪ್ರವಾಸಕ್ಕೆ ಹೋಗಬಯಸುವವರು https://www.kstdc.co/tour-packages/bengaluru-full-day-trip/ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 8043344334 ಸಂಖ್ಯೆಗೆ ಕರೆ ಮಾಡಬಹುದು.
ಆಹಾರ/ಅಡುಗೆ
Food Guide: ಬೆಂಗಳೂರಿನ ತಿಂಡಿಪೋತರಿಗೆ 10 ತಿಂಡಿ ಅಡ್ಡಾಗಳು!
ಬೆಂಗಳೂರಿನಲ್ಲಿ ಟ್ರೈ ಮಾಡಲೇಬೇಕಾದ ತಿಂಡಿ ಅಡ್ಡಾಗಳು ಯಾವುದು ಎಂದರೆ ಪಟ್ಟಿ ಹನುಮಂತನ ಬಾಲದ ಹಾಗೆ ಉದ್ದ ಬೆಳೆದೀತು. ಹನುಮಂತನ ಬಾಲ ಉದ್ದವಿದ್ದರೂ ಕಷ್ಟಪಟ್ಟು ಕೆಲವನ್ನು ಇಲ್ಲಿ ಕೊಡುವ ಪ್ರಯತ್ನ ಮಾಡಲಾಗಿದೆ.
ಬೆಂಗಳೂರಿನಲ್ಲಿ ಸಂಜೆಯಾದರೆ ಸಾಕು, ಅದೂ ಸಂಜೆಮಳೆ ಸುರಿದು ನಿಂತು ತಂಪಾದ ಗಾಳಿ ಬೀಸುತ್ತಿರಲು, ಮನೆಯೊಳಗೆ ಬಂಧಿಯಾಗಿ ಕೂರಲು ಯಾರಿಗೆ ತಾನೇ ಮನಸ್ಸಾದೀತು. ತಣ್ಣಗಿನ ಗಾಳಿಗೆ ಮೈಯೊಡ್ಡಿ ಸಂಜೆ ಗಲ್ಲಿಯೊಂದರಲ್ಲಿ ಇಷ್ಟದ್ದನ್ನು ಇಷ್ಟಪಟ್ಟವರೊಡನೆ ಕೂತು ತಿಂದರೆ ಮನಸ್ಸು ಹಗುರ, ಹೊಟ್ಟೆ ಭಾರ.
ಹಾಗಾದರೆ ಬೆಂಗಳೂರಿನಲ್ಲಿ ಟ್ರೈ ಮಾಡಲೇಬೇಕಾದ ತಿಂಡಿ ಅಡ್ಡಾಗಳು ಯಾವುದು ಎಂದರೆ ಹೆಸರಿಸುವ ಕಷ್ಟ ಯಾರಿಗೂ ಬೇಡ. ಪಟ್ಟಿ ಹನುಮಂತನ ಬಾಲದ ಹಾಗೆ ಉದ್ದ ಬೆಳೆದೀತು. ಒಂದೊಂದು ಏರಿಯಾದಲ್ಲೇ ಕನಿಷ್ಟ ಐದಾರು ಪ್ರಸಿದ್ಧ ತಿಂಡಿ ಅಡ್ಡಾಗಳು ಖಂಡಿತ ಇದ್ದೇ ಇರುತ್ತದೆ. ಹನುಮಂತನ ಬಾಲ ಉದ್ದವಿದ್ದರೂ ಕಷ್ಟಪಟ್ಟು ಕೆಲವನ್ನು ಇಲ್ಲಿ ಕೊಡುವ ಪ್ರಯತ್ನ ಮಾಡಲಾಗಿದೆ.
1. ವಿವಿ ಪುರಂ ತಿಂಡಿಬೀದಿ: ಈ ಹೆಸರು ಕೇಳದವರು ಬೆಂಗಳೂರಿನಲ್ಲಿ ಇದ್ದರೆ ಅವರದ್ದೂ ಒಂದು ಜನ್ಮವಾ ಎಂದು ತಿಂಡಿಪ್ರಿಯರು ಬಾಯಿ ಬಡಕೊಂಡಾರು. ದಶಕಗಳಿಂದ ವಿವಿ ಪುರಂಗೆ ಅಂಥ ಹೆಸರು. ಜೇಬಿನಲ್ಲಿ ದುಡ್ಡಿಲ್ಲದಿದ್ರೂ, ಚಿಲ್ಲರೆ ಕಾಸು ಎಣಿಸಿಕೊಂಡು ಇಲ್ಲಿ ಬಂದರೂ ಹೊಟ್ಟೆ ಬಿರಿಯುವಷ್ಟು ತಿಂದುಕೊಂಡು ಹೋಗಬಹುದು. ಇಲ್ಲಿನ ಪೊಟೇಟೋ ಟ್ವಿಸ್ಟರ್, ಸಿಹಿ ಬೇಳೆ ಹೋಳಿಗೆ, ಮಸಾಲೆ ದೋಸೆ, ಶಿವಣ್ಣ ಗುಲ್ಕಂದ್ ಸೆಂಟರಿನ ರೋಸ್ ಗುಲ್ಕಂದ್ ಮಾತ್ರ ಮರೆಯದೆ ತಿನ್ನಲೇಬೇಕು.
2. ಶ್ರೀಸಾಗರ್-ಸಿಟಿಆರ್, ಮಲ್ಲೇಶ್ವರಂ: ಬಾಯಲ್ಲಿ ನೀರೂರಿಸುವ ಕ್ರಿಸ್ಪಿ ಬೆಣ್ಣೆ ಮಸಾಲೆ ದೋಸೆ ತಿನ್ನಬೇಕೆಂದರೆ ಸಿಟಿಆರ್‌ಗೆ ಭೇಟಿ ಕೊಡಲೇಬೇಕು. ಆರು ದಶಕಗಳಿಂದ ದೋಸೆಗೆ ಹೆಸರುವಾಸಿಯಾಗಿರುವ ಇಲ್ಲಿ ಇಡ್ಲಿ ವಡೆ, ಕೇಸರಿಭಾತ್, ಪೂರಿ ಸಾಗು ಕೂಡಾ ಚೆನ್ನಾಗಿರುತ್ತದೆ.
3. ಹರಿ ಸೂಪರ್ ಸ್ಯಾಂಡ್‌ವಿಚ್, ಜಯನಗರ: ಜಯನಗರದಲ್ಲಿ ಆ ತುದಿಯಿಂದ ಈ ತುದಿಗೆ ಅಡ್ಡಾಡಿದರೆ ತಿನ್ನಲು ಎಷ್ಟೆಲ್ಲ ಅವಕಾಶಗಳಿವೆ! ಜಯನಗರ ಮೂರನೇ ಬ್ಲಾಕಿನ ಹರಿ ಸೂಪರ್ ಸ್ಯಾಂಡ್‌ವಿಚ್ ಕೂಡಾ ಅಂಥದ್ದೇ ಒಂದು. ಇಲ್ಲಿ ಬಗೆಬಗೆಯ ಸ್ಯಾಂಡ್‌ವಿಚ್‌ಗಳೂ, ಚಾಟ್‌ಗಳೂ ದೊರೆಯುತ್ತವೆ.
4. ಖಾನ್ ಸಾಹೇಬ್ ಗ್ರಿಲ್ಸ್ ಅಂಡ್ ರೋಲ್ಸ್, ಇಂದಿರಾನಗರ: ಕ್ರಂಚೀ ರೋಲ್‌ಗಳು ಹಾಗೂ ಗ್ರಿಲ್‌ಗಳಲ್ಲಿ ವೈರೈಟಿ ತಿನ್ನಬೇಕಾದಲ್ಲಿ ಇಂದಿರಾನಗರ ಎರಡನೇ ಹಂತದಲ್ಲಿರುವ ಖಾನ್ ಸಾಹೇಬರಲ್ಲಿಗೆ ಭೇಟಿ ಕೊಡಬೇಕು. ಇಲ್ಲಿನ ಕಟಿ ರೋಲ್ಸ್, ಚಿಕನ್ ಸೀಖ್ ರೋಲ್ ಅದ್ಭುತ.
5.ಪುಚ್ಕಾಸ್, ಮಾರತ್‌ಹಳ್ಳಿ: ಮಾರತ್ ಹಳ್ಳಿಯ ಸಿಲ್ವರ್ ಸ್ಪ್ರಿಂಗ್ ಲೇಔಟ್‌ನ ಪುಚ್ಕಾಸ್ ಪಾನಿಪುರಿಗೆ ಹೇಳಿ ಮಾಡಿಸಿದ್ದು. ಇಲ್ಲಿನ ಪಾನಿಪುರಿಯ ಜೊತೆಗೆ ಬಿಸಿಬಿಸಿ ಜಿಲೇಬಿ ಕೂಡಾ ಎಲ್ಲರ ಹಾಟ್ ಫೇವರಿಟ್.
6. ಚಟರ್ ಪಟರ್, ಬನಶಂಕರಿ: ಚಾಟ್‌ನಲ್ಲೂ ವೆರೈಟಿ ಬೇಕೆಂದರೆ ಇಲ್ಲಿಗೆ ಬರಬೇಕು. ಬೇಲ್‌ಪುರಿ, ದಬೇಲಿ, ಬಗೆಬಗೆಯ ಫ್ಲೇವರ್ಡ್ ಪಾನಿಪುರಿಗಳು, ಬ್ಲ್ಯಾಕ್‌ಕರೆಂಟ್ ಗಪಾಗಪ್ ಸೇರಿದಂತೆ ತರಹೇವಾರಿ ಹೆಸರಿನ ಚಾಟ್‌ಗಳು ಇಲ್ಲಿ ಲಭ್ಯ. ಹೆಸರಿಗೆ ತಕ್ಕಂತೆ ಚಟರ್ ಪಟರ್!
7. ದಾದರ್ ವಡಾಪಾವ್, ಇಂದಿರಾನಗರ: ಹೆಸರೇ ಹೇಳುವಂತೆ ಮುಂಬೈ ಶೈಲಿಯ ವಡಾಪಾವ್ ತಿನ್ನಬೇಕೆನಿಸಿದರೆ ಇದು ಹೇಳಿ ಮಾಡಿಸಿದ ಜಾಗ. ಇಲ್ಲಿ ಸೆಝ್ವಾನ್, ಆಲೂ, ಪನೀರ್ ಮತ್ತಿತರ ಹಲವು ಬಗೆಯ ವಡಾಪಾವ್ ಇವೆ. ಇಲ್ಲಿನ ಚಟ್ ಪಟಾ ವಡಾಪಾವ್, ಚಟ್ನಿ ಗ್ರಿಲ್ಡ್ ಸ್ಯಾಂಡ್‌ವಿಚ್ ಎಲ್ಲರ ಹಾಟ್ ಫೇವರಿಟ್.
ಇದನ್ನೂ ಓದಿ: ಒಲಿಂಪಿಕ್ಸ್‌ಗೆ ಸೇರಿಸಿ: ವಿದ್ಯಾರ್ಥಿ ಭವನದ ವೇಯ್ಟರ್ ಬಗ್ಗೆ ಆನಂದ್ ಮಹೀಂದ್ರ ಟ್ವೀಟ್
8. ಶಾಹಿ ದರ್ಬಾರ್, ಯಶವಂತಪುರ: ಮತ್ತೀಕೆರೆಯ ಎಂ ಎಸ್ ರಾಮಯ್ಯ ಮೈದಾನದ ಪಕ್ಕದಲ್ಲೇ ಇರುವ ಶಾಹಿ ದರ್ಬಾರ್ ಬಗೆಬಗೆಯ ರೋಲ್‌ಗಳಿಗೆ ಫೇಮಸ್ಸು. ಎಗ್ ರೋಲ್, ವೆಜ್ ರೋಲ್, ಪನೀರ್ ರೋಲ್, ಚಿಕನ್ ರೋಲ್ ಇಲ್ಲಿನ ಕೆಲವು ತಿನ್ನಲೇಬೇಕಾದ ವೆರೈಟಿಗಳು.
9. ಆರ್ ಆರ್ಸ್ ಬ್ಲೂ ಮೌಂಟ್ ಅಂಡ್ ಬಾಂಬೆ ಸ್ಯಾಂಡ್‌ವಿಚ್, ವಸಂತನಗರ: ವಸಂತನಗರದ ಎಂಟನೇ ಮುಖ್ಯರಸ್ತೆಯಲ್ಲಿರುವ ಈ ಅಂಗಡಿಯ ಸುತ್ತಮುತ್ತ ಹಲವಾರು ಇಂಥದ್ದೇ ಬಗೆಯ ಅಂಗಡಿಗಳಿರುವುದರಿಂದ ಈ ಏರಿಯಾವನ್ನೇ ಲೋಫರ್ಸ್ ಲೇನ್ ಎಂದೂ ಕರೆಯುತ್ತಾರಂತೆ. ಇಲ್ಲಿನ ಚಿಕನ್ ಬೋಟ್, ಮೆಕ್ಸಿಕನ್ ಚಾಟ್ ಬಹಳ ರುಚಿ.
10. ಚೆಟ್ಟೀಸ್ ಕಾರ್ನರ್, ಕುಮಾರಪಾರ್ಕ್ ವೆಸ್ಟ್: ನೀವು ಹೊಸ ತಲೆಮಾರಿನ ಸ್ಟ್ರೀಟ್ ಫುಡ್ ಪ್ರಿಯರಾದಲ್ಲಿ ಈ ಶಾಪ್ ನಿಮಗಾಗಿಯೇ ಇದೆ. ನಾನಾ ಪ್ರಯೋಗಗಳಿಗೆ ಸದಾ ತೆರೆದ ಮನಸ್ಸಿರುವ ಸಹೋದರರಿಬ್ಬರು ೧೯೯೭ರಲ್ಲಿ ಶುರುಮಾಡಿದ ಇದರಲ್ಲಿ ಪಾಶ್ಚಿಮಾತ್ಯ ಹಾಗೂ ಭಾರತೀಯ ರುಚಿಗಳ ಸಂಗಮವಿದೆ. ಬೆಂಗಳೂರಿಗೆ ಮೊದಲ ಬಾರಿಗೆ ಪೊಟೇಟೋ ಟ್ವಿಸ್ಟರ್ ಪರಿಚಯಿಸಿದ ಕೀರ್ತಿಯೂ ಇವರಿಗೇ ಸಲ್ಲುತ್ತದೆ. ಬನ್ ನಿಪ್ಪಟ್ ಮಸಾಲಾ, ಮಸಾಲಾ ಸೋಡಾ ಇಲ್ಲಿ ಬಲು ರುಚಿ.
ಇದನ್ನೂ ಓದಿ: Healthy breakfast | ಬೆಳಗಿನ ತಿಂಡಿಗಳು: ನಮ್ಮಲ್ಲೇ ಇದೆ, ನಮ್ಮ ಆರೋಗ್ಯದ ಸೀಕ್ರೆಟ್!
ಪ್ರವಾಸ
Travel Tips: ಬೆಟ್ಟದ ಹಾದಿಯಲ್ಲಿ ಪ್ರವಾಸಕ್ಕೆ ಮೊದಲು ಈ ಆಹಾರಗಳನ್ನು ತಿನ್ನದಿರಿ!
ಹೊಟ್ಟೆ ಕೈಕೊಟ್ಟಾಗ ದೇಹ, ಮನಸ್ಸು ನಮ್ಮ ಮಾತನ್ನು ಕೇಳುವುದಿಲ್ಲ. ಅದರಿಂದಾಗಿ ನಮ್ಮ ಪ್ರವಾಸದ ಖುಷಿ ಪೂರ್ತಿಯಾಗಿ ಹಾಳಾಗುತ್ತದೆ. ಹಾಗಾದರೆ, ಪ್ರವಾಸದಲ್ಲಿ ಬೆಟ್ಟದ ಹಾದಿಯಲ್ಲಿ, ಭಾರೀ ತಿರುವುಗಳಿರುವ ರಸ್ತೆಗಳಲ್ಲಿ ಗಂಟೆಗಟ್ಟಲೆ ಪ್ರವಾಸ ಮಾಡುವ ಸಂದರ್ಭ ಮೊದಲೇ ಯಾವ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು?
ಪ್ರವಾಸ ಎಂಬುದು ಖುಷಿ. ಈಗ ಬೇಸಗೆ ಹತ್ತಿರ ಬರುತ್ತಿದ್ದಂತೆ ಬಹುತೇಕ ಎಲ್ಲರೂ ಕುಟುಂಬ ಸಮೇತರಾಗಿ ಒಂದಲ್ಲ ಒಂದು ಪ್ರವಾಸದ ಸಿದ್ಧತೆಯಲ್ಲಿರುತ್ತಾರೆ. ವಿಮಾನದ ಮೂಲಕವೋ, ರಸ್ತೆ ಮಾರ್ಗವೋ, ರೈಲು ಮಾರ್ಗವೋ ಏನೇ ಆದರೂ ಪ್ರವಾಸ ತರುವ ಅನುಭವವೇ ಬೇರೆ. ಪ್ರವಾಸಕ್ಕೆ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಳ್ಳುವುದು ಒಂದು ಸಡಗರವಾದರೆ, ಪ್ರವಾಸದಲ್ಲಿ ಮೂರೂ ಹೊತ್ತು ಏನೆಲ್ಲ ತಿನ್ನುವುದು, ಎಲ್ಲೆಲ್ಲಿ ತಿನ್ನಬೇಕು ಎಂಬು ಪ್ಲಾನ್ ಮಾಡಿಕೊಳ್ಳುವುದೂ ಕೂಡಾ ಇನ್ನೊಂದು ಹರುಷ. ಚೆನ್ನಾಗಿ ತಿಂದುಂಡು ಸ್ಥಳಗಳನ್ನು ನೋಡಿ ಎಲ್ಲ ಒತ್ತಡವನ್ನು ಬದಿಗಿಟ್ಟು ಪ್ರವಾಸದ ಮಜಾವನ್ನು ಅನುಭವಿಸಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ, ಪ್ರವಾಸದ ಖುಷಿಯನ್ನು ಅನುಭವಿಸುವ ಭರದಲ್ಲಿ ತಿನ್ನುವ ಸಂಭ್ರಮದಲ್ಲಿ ಬಹಳಷ್ಟು ಮಂದಿ ತಪ್ಪನ್ನೇ ಮಾಡುತ್ತಾರೆ. ಚೆನ್ನಾಗಿ ತಿಂದು ಹೇರ್‌ಪಿನ್ ಬೆಂಡ್‌ಗಳಿರುವ ಹಾವಿನಂತೆ ತೆವಳುವ ರಸ್ತೆಯಲ್ಲಿ ಪ್ರಯಾಣ ಆರಂಭಿಸುತ್ತಾರೆ. ಆಗ ಹೊಟ್ಟೆ ನಮ್ಮ ಮಾತನ್ನು ಕೇಳದೆ ಇನ್ನೊಂದು ಹಾಡು ಹಾಡುತ್ತದೆ. ಹೊಟ್ಟೆ ಕೈಕೊಟ್ಟಾಗ ದೇಹ, ಮನಸ್ಸು ನಮ್ಮ ಮಾತನ್ನು ಕೇಳುವುದಿಲ್ಲ. ಅದರಿಂದಾಗಿ ನಮ್ಮ ಪ್ರವಾಸದ ಖುಷಿ ಪೂರ್ತಿಯಾಗಿ ಹಾಳಾಗುತ್ತದೆ. ಹಾಗಾದರೆ, ಪ್ರವಾಸದಲ್ಲಿ ಬೆಟ್ಟದ ಹಾದಿಯಲ್ಲಿ, ಭಾರೀ ತಿರುವುಗಳಿರುವ ರಸ್ತೆಗಳಲ್ಲಿ ಗಂಟೆಗಟ್ಟಲೆ ಪ್ರವಾಸ ಮಾಡುವ ಸಂದರ್ಭ ಮೊದಲೇ ಯಾವ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದನ್ನು ನೋಡೋಣ.
1. ಎಣ್ಣೆತಿಂಡಿಗಳನ್ನು ಬದಿಗಿಡಿ: ಹೌದು, ಪ್ರವಾಸದ ಸಂದರ್ಭ ಏನಾದರೊಂದು ಮೆಲ್ಲುತ್ತಾ ಕಾರಿನಲ್ಲೋ ಬಸ್ಸಿನಲ್ಲೋ ಪಯಣಿಸುವ ಮಜಾವೇ ಬೇರೆ. ಆದರೆ, ಸಿಕ್ಕಸಿಕ್ಕಲ್ಲೆಲ್ಲ ಪಕೋಡಾ, ಬಜ್ಜಿ, ಬೋಂಡಾ ಅಥವಾ ಏನಾದರೂ ಎಣ್ಣೆ ತಿಂಡಿಗಳನ್ನು ತಿನ್ನುವುದನ್ನು ಕಡಿಮೆ ಮಾಡಿ. ಕಡಿದಾದ ಹಾದಿಯಲ್ಲಿ ಎಣ್ಣೆತಿಂಡಿಗಳನ್ನು ಅತಿಯಾಗಿ ತಿಂದರೆ ಜೀರ್ಣಕ್ರಿಯೆ ನಿಧಾನವಾಗಿ ಹೊಟ್ಟೆ ಕೆಡುವ ಸಂಭವ ಇದೆ. ಪಕೋಡಾ, ಆಲೂ ಟಿಕ್ಕಿ, ಚಿಪ್ಸ್, ಫ್ರೈಸ್, ಫ್ರೈಡ್ ಚಿಕನ್ ಇತ್ಯಾದಿಗಳನ್ನು ಸಾಧ್ಯವಾದಷ್ಟೂ ಅವಾಯ್ಡ್ ಮಾಡಿ.
2. ಮಾಂಸಾಹಾರ: ಪ್ರವಾಸದ ಸಂದರ್ಭ ಬೆಟ್ಟದ ಹಾದಿಯಲ್ಲಿ ಪ್ರಯಾಣವಿದ್ದಾಗ ಮೊದಲೇ ಮಾಂಸಹಾರ ಮಾಡಿ ಇಂತಹ ರಸ್ತೆಯಲ್ಲಿ ಹೊರಡಬೇಡಿ. ಬಟರ್ ಚಿಕನ್, ಮಟನ್ ರೋಗನ್ ಜೋಶ್, ಚಿಕನ್ ಟಿಕ್ಕಾ ಇತ್ಯಾದಿ ಇತ್ಯಾದಿ ಸ್ಪೈಸೀ ಮಾಂಸಾಹಾರವನ್ನು ತಿಂದು ಹೊರಟರೆ,ತಿರುವು ಮುರುವು ರಸ್ತೆಯಲ್ಲಿ ಖಂಡಿತಾ ಹೆಚ್ಚುಕಡಿಮೆಯಾಗಬಹುದು. ಮೀನು ಹಾಗೂ ಮಾಂಸ ದೇಹದಲ್ಲಿ ಸರಿಯಾಗಿ ಪಚನವಾಗಲು ಎರಡು ದಿನಗಳೇ ಬೇಕಾಗುತ್ತದೆ. ಇದರಲ್ಲಿ ಸಂಕೀರ್ಣವಾದ ಪ್ರೋಟೀನ್ ಇರುವುದರಿಂದ ಯಾವುದಾದರೂ ಲಘು ಆಹಾರ ತಿಂದು ಇಂತಹ ಜಾಗಕ್ಕೆ ಪ್ರಯಾಣ ಬೆಳೆಸಿ.
ಇದನ್ನೂ ಓದಿ: Travel Tips: ಹಿಮದೂರುಗಳಲ್ಲಿ ಬದುಕಿನಲ್ಲೊಮ್ಮೆ ಮಾಡಲೇಬೇಕಾದ ಸಾಹಸ ಕ್ರೀಡೆಗಳಿವು!
3. ಬಫೆ ಊಟ: ಬಗೆಬಗೆಯ ಭಕ್ಷ್ಯಗಳಿರುವ ಬಫೆ ಸೆಳೆಯುತ್ತದೆ ನಿಜ. ಆದರೆ, ಚೆನ್ನಾಗಿ ಬಫೆ ಉಂಡು ಹೊಟ್ಟೆ ಉಬ್ಬರಿಸಿದಂತಾಗಿ, ಹೊಟ್ಟೆ ಎತ್ತಲು ಶಕ್ತಿ ಇಲ್ಲದಷ್ಟು ತಿಂದಾಗ ಖಂಡಿತವಾಗಿಯೂ ಬೆಟ್ಟದ ಹಾದಿಯ ತಿರುವು ಮುರುವು ರಸ್ತೆ ನಿಮ್ಮ ಹೊಟ್ಟೆಕೆಡಿಸುವುದು ಗ್ಯಾರಂಟಿ. ಹಾಗಾಗಿ, ಪ್ರಯಾಣಕ್ಕೂ ಮುನ್ನ ಇಂತಹ ಹಬ್ಬದೂಟದ ಯೋಚನೆಯನ್ನು ಆದಷ್ಟೂ ಬದಿಗಿಡಿ.
4. ಹಾಲಿನ ಉತ್ಪನ್ನಗಳು: ಹಾಲು ಹಾಗೂ ಹಾಲಿನ ಆಹಾರ ಉತ್ಪನ್ನಗಳಾದ ಚೀಸ್, ಕ್ರೀಂ, ಐಸ್ ಕ್ರೀಂ ಇತ್ಯಾದಿಗಳು ಪ್ರಯಾಣದ ಸಂದರ್ಭ ಆರೋಗ್ಯವನ್ನು ಹದಗೆಡುವಂತೆ ಮಾಡುತ್ತದೆ. ಮೋಷನ್ ಸಿಕ್‌ನೆಸ್ ತೊಂದರೆ ಇರುವವರಿಗೆ ಖಂಡಿತವಾಗಿ ಇದು ಒಳ್ಳೆಯದನ್ನು ಮಾಡುವುದಿಲ್ಲ. ದೇಹ ಕುಲುಕಾಡುವಾಗ ಹಾಲಿನ ಉತ್ಪನ್ನಗಳು ಬಹಳ ಸಾರಿ ವಾಂತಿ ತರಿಸುತ್ತದೆ. ಹಾಗಾಗಿ ಕಾರ್, ಬಸ್‌ನಲ್ಲಿ ಪಯಣಿಸುವ ಸಂದರ್ಭ ಹಾಲು ಕುಡಿಯಬೇಡಿ ಹಾಗೂ ಡೈರಿ ಉತ್ಪನ್ನಗಳನ್ನು ತಿನ್ನಬೇಡಿ.
5. ಕಾರ್ಬೋನೇಟೆಡ್ ಡ್ರಿಂಕ್‌ಗಳು ಹಾಗೂ ಆಲ್ಕೋಹಾಲ್: ಕಾರ್ಬೋನೇಟೆಡ್ ಡ್ರಿಂಕ್‌ಗಳು ಅಥವಾ ಸೋಡಾದಲ್ಲಿ ಇದರಲ್ಲಿ ಹೆಚ್ಚು ಸಕ್ಕರೆ ಇರುವುದರಿಂದ ಇದು ಹೊಟ್ಟೆಯನ್ನು ಕೆಡಿಸುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ ಆಗಿ ಪ್ರಯಾಣವೇ ಯಾತನಾಮಯವಾಗಬಹುದು. ಹಾಗಾಗಿ, ಬಾಯಾರಿಕೆಗೆ ಆದಷ್ಟೂ ತಾಜಾ ಹಣ್ಣು ಅಥವಾ ನೀರು ಕುಡಿಯುವುದು ಒಳ್ಳೆಯದು. ಆಲ್ಕೋಹಾಲ್ ಕೂಡಾ ಅಷ್ಟೇ, ಪ್ರಯಾಣದ ಸಂದರ್ಭ ವಾಂತಿ ತರಿಸುವ ಸಂಭವ ಹೆಚ್ಚು. ಹಾಗಾಗಿ ಇವುಗಳಿಂದ ದೂರವಿರಿ.
ಇದನ್ನೂ ಓದಿ: Travel Tips: ಬ್ಲೂ ಸರ್ಟೀಫಿಕೆಟ್ ಪಡೆದ ನೀಲಿ ಹಸಿರ ಸ್ವಚ್ಛ ಸುಂದರ ನಮ್ಮ ಕಡಲ ಕಿನಾರೆಗಳಿವು! ರಾಜ್ಯದ್ದೂ ಇವೆ!
ಪ್ರವಾಸ
Travel Tips: ಗುಹೆಗಳೆಂಬ ಪ್ರಕೃತಿ ವಿಸ್ಮಯಗಳು: ನೋಡಲೇಬೇಕಾದ ಭಾರತದ ಗುಹೆಗಳಿವು!
ಜೀವನದಲ್ಲಿ ಒಮ್ಮೆಯಾದರೂ ನೀವು ಒಳಹೊಕ್ಕು ನೋಡಲೇಬೇಕಾದ ಗುಹೆಗಳು ಭಾರತದಲ್ಲಿವೆ. ಕೆಲವು ಪ್ರಸಿದ್ಧವಾಗಿದ್ದರೆ, ಇನ್ನೂ ಕೆಲವು ಅಷ್ಟೇನೂ ಪ್ರಸಿದ್ಧವಲ್ಲ. ಆದರೂ ಇವುಗಳ ಭೇಟಿ ಆನಂದದಾಯಕ.
ನಿಸರ್ಗ ನಿರ್ಮಿತ ಗುಹೆಗಳಿಗೆ ಭಾರತದಲ್ಲೇನೂ ಕೊರತೆಯಿಲ್ಲ. ಅಜಂತಾ ಎಲ್ಲೋರಾ, ಬಾದಾಮಿಯಂತಹ ಗುಹಾಂತರ್ದೇವಾಲಯಗಳು ಒಂದೆಡೆಯಾದರೆ, ಗುಹೆಗಳು ಹೇಗಿದ್ದವೋ ಅದೇ ಸ್ವರೂಪದಲ್ಲಿ ಇಂದಿಗೂ ಉಳಿಸಿಕೊಂಡು ಬಂದಿರುವುದು ಇನ್ನೊಂದು ಬಗೆಯ ಗುಹೆಗಳು. ಇಂಥ ಗುಹೆಗಳ, ಜೀವನದಲ್ಲೊಮ್ಮೆಯಾದರೂ ಗುಹೆಗಳೆಂಬ ರೋಮಾಂಚನದೊಳಕ್ಕೆ ಹೊಕ್ಕು ನೋಡಲೇಬೇಕಾದ ಪ್ರಕೃತಿ ವಿಸ್ಮಯಗಳಿವು.
ಭೀಮ್‌ಬೆಟ್ಕಾ ಗುಹೆಗಳು, ಮಧ್ಯ ಪ್ರದೇಶ: ಮಧ್ಯಪ್ರದೇಶದ ರಾತಾಪಾನಿ ವನ್ಯಜೀವಿ ರಕ್ಷಿತಾರಣ್ಯದಲ್ಲಿರುವ ಭೀಮ್‌ಬೆಟ್ಕಾ ಗುಹೆಗಳು ಭಾರತದ ಪ್ರಮುಖ ಗುಹೆಗಳಲ್ಲೊಂದು. ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಿರುವ ಈ ಗುಹೆಗಳ ಒಳಗೆ ಶಿಲಾಯುಗದ ಕಾಲದ ಚಿತ್ರಗಳನ್ನೂ ಹೊಂದಿದೆ. ಈ ಗುಹೆಗಳಿಗೆ ಪೌರಾಣಿಕ ಹಿನ್ನೆಲೆಯ ಕಥೆಗಳೂ ಇದ್ದು, ಹಿಂದೆ, ಪಾಂಡವರು ಅಜ್ಞಾತವಾಸದ ಸಂದರ್ಭ ಇಲ್ಲಿ ಯಾರಿಗೂ ಕಾಣದಂತಿರಲು ತಂಗಿದ್ದರು ಎಂಬ ಉಲ್ಲೇಖವೂ ಇದೆ. ಭಾರತದ ಪ್ರಮುಖ ಗುಹೆಗಳ ಪೈಕಿ ಇದೂ ಒಂದು.
ಬೋರಾ ಗುಹೆಗಳು, ಆಂಧ್ರಪ್ರದೇಶ: ವಿಶಾಖಪಟ್ಟಣದ ಅರಕು ವ್ಯಾಲಿಯಲ್ಲಿರುವ ಬೋರಾ ಗುಹೆಗಳು ನಿಸರ್ಗದ ವಿಸ್ಮಯಗಳಲ್ಲೊಂದು. ಗುಹೆಯ ಒಳಗೆ ನೈಸರ್ಗಿಕ ಶಿವಲಿಂಗವಿದ್ದು ಅತ್ಯಂತ ಸುಂದರ ಗುಹೆಗಳ ಪೈಕಿ ಇದೂ ಒಂದು.
ಎಡಕಲ್ ಗುಹೆಗಳು, ಕೇರಳ: ಕೇರಳದ ವಯನಾಡಿನಲ್ಲಿರುವ ಎಡಕಲ್ಲು ಕನ್ನಡ ಸಿನಿಮಾವೊಂದರ ಹೆಸರಿನಿಂದ ಬಹಳ ಪ್ರಸಿದ್ಧ. ವಯನಾಡಿನ ಅದ್ಭುತ ಬೆಟ್ಟಗುಡ್ಡಗಳ ನಡುವಿರುವ ಈ ಗುಹೆಯಲ್ಲಿ ಶಿಲಾಯುಗದ ಕಾಲದ ಅಂದರೆ ಸುಮಾರು ಕ್ರಿಸ್ತಪೂರ್ವ ೬೦೦೦ನೇ ಇಸವಿಯ ಆಸುಪಾಸಿನದ್ದೆಂದು ಹೇಳಲಾದ ಚಿತ್ರಗಳೂ ಇವೆ. ಕಲ್ಲು ಬಂಡೆಗಳ ಮೇಲೆ ಬರೆಯಲಾದ ಈ ಚಿತ್ರಗಳು ಶಿಲಾಯುಗದ ಕಥೆಗಳನ್ನು ನಮಗೆ ದಾಟಿಸುತ್ತವೆ. ಬೆಂಗಳೂರಿನಿಂದ ಸುಮಾರು ೨೭೦ ಕಿಮೀ ದೂರದಲ್ಲಿರುವ ಇದು ಮೂರ್ನಾಲ್ಕು ದಿನಗಳ ಪ್ರವಾಸಕ್ಕೆ ಹೇಳಿ ಮಾಡಿಸಿದ ಜಾಗ.
ಮಾಸ್ಮಾಯ್ ಗುಹೆಗಳು, ಚಿರಾಪುಂಜಿ: ಮೇಘಗಳ ತವರು, ಭಾರತದ ಮಳೆನಾಡು ಮೇಘಾಲಯದ ತುಂಬ ಗುಹೆಗಳೂ ಬೇಕಾದಷ್ಟಿವೆ. ಚಿರಾಪುಂಜಿಯಲ್ಲಿರುವ ಮಾಸ್ಮಾಯ್ ಗುಹೆಗಳು ಇವುಗಳ ಪೈಕಿ ಅತ್ಯಂತ ಪ್ರಸಿದ್ಧವಾದದ್ದು. ತೆವಳಿಕೊಂಡೇ ಒಳಗೆ ಹೋಗಬೇಕಾದ ಈ ಗುಹೆ ಒಂದು ಅತ್ಯಪೂರ್ವ ಅನುಭವ ನೀಡುತ್ತದೆ.
ಬೆಲ್ಲುಂ ಗುಹೆಗಳು, ಆಂಧ್ರಪ್ರದೇಶ: ಭಾರತದ ಎರಡನೇ ಅತ್ಯಂತ ದೊಡ್ಡ ನೈಸರ್ಗಿಕವಾದ ಗುಹೆಯಿದು. ಇದು ಸುಮಾರು ೩೨೨೯ ಮೀಟರ್‌ಗಳಷ್ಟು ಉದ್ದವಿದ್ದು, ೧೨೦ ಟಡಿಗಳಷ್ಟು ನೆಲದಿಂದ ಆಳದಲ್ಲಿದೆ. ಕರ್ನೂಲ್ ಜಿಲ್ಲೆಯ ಬೆಲ್ಲುಂ ಎಂಬಲ್ಲಿ ಈ ಗುಹೆಯಿದ್ದು ಬೆಂಗಳೂರಿನಿಂದ ಸುಮಾರು ೨೭೦ ಕಿಮೀ ದೂರದಲ್ಲಿದೆ. ಈ ಗುಹೆಗಳು ಬಹಳ ಹಿಂದೆ ಚಿತ್ರಾವತಿ ನದಿಯ ಹರಿವಿನಿಂದ ಭೂಗರ್ಭದಲ್ಲಿ ನೈಸರ್ಗಿಕವಾಗಿ ನಿರ್ಮಿತವಾದ ಗುಹೆಗಳೆಂದು ಹೇಳಲಾಗಿದ್ದು, ಇಂದಿಗೂ ಗುಹೆಯೊಳಗೆ ಸಾಕಷ್ಟು ನೀರಿನ ಮೂಲಗಳನ್ನು ಕಾಣಬಹುದು. ಇಲ್ಲಿ ಬೌದ್ಧ ಸನ್ಯಾಸಿಗಳೂ ಒಂದು ಕಾಲದಲ್ಲಿ ವಾಸವಿದ್ದರು ಎಂಬುದಕ್ಕೆ ಸಾಕ್ಷ್ಯಗಳು ದೊರೆತಿದ್ದು ಇವೆಲ್ಲವನ್ನೂ ಅನಂತಪುರದಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ. ಬೆಂಗಳೂರಿನಿಂದ ಸುಲಭವಾಗಿ ತಲುಪಬಹುದಾದ, ಗುಹೆಯೊಂದರ ಅದ್ಭುತ ಅನುಭವ ನೀಡಬಹುದಾದ ಗುಹೆ ಇದಾಗಿದ್ದು, ಕುಟುಂಬ ಸಮೇತರಾಗಿ ಒಂದೆರಡು ದಿನಗಳ ಪ್ರವಾಸದಲ್ಲಿ ನೋಡಿ ಬರಬಹುದಾದ ಸ್ಥಳವಿದು.
ಕುಟುಂಸಾರ್ ಗುಹೆಗಳು, ಛತ್ತೀಸ್‌ಗಢ: ಛತ್ತೀಸ್‌ಘಡದ ಬಸ್ತರ್‌ನ ಕಂಗೇರ್ ವ್ಯಾಲಿ ರಾಷ್ಟ್ರೀಯ ಉದ್ಯಾನದಲ್ಲಿರುವ ಈ ಗುಹೆ ನೈಸರ್ಗಿಕವಾಗಿ ನಿರ್ಮಿತವಾದ ಪ್ರಮುಖ ಗುಹೆಗಳಲ್ಲಿ ಒಂದು. ಇದರಲ್ಲಿ ಐದು ವಿಭಾಗಗಳಿದ್ದು, ಕೆಲವು ಬಾವಿಗಳನ್ನೂ ಹೊಂದಿದೆ. ೧೩೨೭ ಮೀಟರ್ ಉದ್ದವಿರುವ ಈ ಗುಹೆಯೊಳಗೆ ಸೂರ್ಯನ ಬಿಸಿಲು ತಾಗುವುದೇ ಇಲ್ಲ.
ನೆಲ್ಲಿತೀರ್ಥ, ಕರ್ನಾಟಕ: ಕರ್ನಾಟಕದೊಳಗೇ ಗುಹೆಯನ್ನು ನೋಡುವ ಆಸೆಯಿದ್ದವರಿಗೆ ನೆಲ್ಲಿತೀರ್ಥ ಉತ್ತಮ ಆಯ್ಕೆ. ದಕ್ಷಿಣ ಕನ್ನಡದಲ್ಲಿರುವ ಈ ಗುಹೆ ಸುಮಾರು ೨೦೦ ಮೀಟರ್ ಉದ್ದವಿದ್ದು, ಗುಹೆಯೊಳಗೆ ಶಿವಲಿಂಗವಿದೆ. ಗುಹೆಯೊಳಗೆ ನೆಲ್ಲಿಕಾಯಿ ಗಾತ್ರದ ನೀರಿನ ಬಿಂದುಗಳು ಬಿದ್ದು ಇಲ್ಲೆ ಕೊಳವೊಂದು ಉಂಟಾಗಿದ್ದು, ಈ ಕಾರಣದಿಂದಲೇ ಇಲ್ಲಿಗೆ ನೆಲ್ಲಿತೀರ್ಥವೆಂಬ ಹೆಸರು ಬಂದಿದೆ. ತೀರ್ಥೋದ್ಭವದ ದಿನ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.
ಇದನ್ನೂ ಓದಿ: Travel Tips: Beach Tourism: ಬ್ಲೂ ಸರ್ಟಿಫಿಕೇಶನ್ ಪಡೆದ ಭಾರತದ ಸ್ವಚ್ಛ ಬೀಚ್‌ಗಳಿವು! (ಭಾಗ 2)
ಪ್ರವಾಸ
ವಿಸ್ತಾರ ಸಂಪಾದಕೀಯ: ಮತದಾರರಿಗೆ ಆಮಿಷವೊಡ್ಡುವ ಚಟುವಟಿಕೆಗಳಿಗೆ ಕಡಿವಾಣ ಅಗತ್ಯ
ರಾಜ್ಯದಲ್ಲಿ ಮತದಾರರಿಗೆ ಗಿಫ್ಟ್ ಹಂಚುವ ಚಟುವಟಿಕೆಗಳು ಜೋರಾಗಿ ನಡೆಯುತ್ತಿವೆ. ಪ್ರಜಾಪ್ರಭುತ್ವಕ್ಕೆ ಇದು ಭೂಷಣವಲ್ಲ. ಇಂತಹ ಆಮಿಷಗಳನ್ನು ಜನರೇ ತಿರಸ್ಕರಿಸಬೇಕು. ಚುನಾವಣೆ ಆಯೋಗ ಇದನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು.
ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Election 2023) ಇನ್ನೂ ದಿನಾಂಕ ಪ್ರಕಟವಾಗಿಲ್ಲ. ಹಾಗಾಗಿ, ನೀತಿ ಸಂಹಿತೆ ಜಾರಿಯಾಗಿಲ್ಲ. ಆದರೆ, ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಡೆಸುತ್ತಿರುವ ಕಸರತ್ತು ಜೋರಾಗಿದೆ. ಕುಕ್ಕರ್, ಸೀರೆ, ಪಂಚೆ, ಸ್ಕೂಲ್ ಬ್ಯಾಗ್, ಬಳೆ, ಬಾಡೂಟ, ಮದ್ಯ, ನಗದು ವಿತರಣೆ ಸೇರಿದಂತೆ ನಾನಾ ರೂಪದಲ್ಲಿ ಮತದಾರರನ್ನೂ ಭ್ರಷ್ಟರನ್ನಾಗಿಸುವ ಅಕ್ರಮ ಚಟುವಟಿಕೆಗಳು ರಾಜ್ಯದಲ್ಲಿ ನಡೆಯುತ್ತಿವೆ. ಈ ಅಕ್ರಮವನ್ನು ತಡೆಗಟ್ಟಲು ಚುನಾವಣಾ ಆಯೋಗವು, ವಿವಿಧ ಇಲಾಖೆಗಳ ಸಹಾಯದೊಂದಿಗೆ ದಾಳಿಗಳನ್ನು ನಡೆಸುತ್ತಿದೆ. ಈವರೆಗೆ, ವಿಶೇಷ ಕಾರ್ಯಾಚರಣೆ ಮೂಲಕ ಕಳೆದ 3 ದಿನಗಳಲ್ಲಿ 5.4 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ವಾರ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ರಾಜ್ಯಕ್ಕೆ ಭೇಟಿ ನೀಡಿ, ಚುನಾವಣಾ ಅಕ್ರಮ ತಡೆಯಲು ಸೂಚನೆ ನೀಡಿದ್ದರು. ಬಳಿಕ, ಅಧಿಕಾರಿಗಳು ದಾಳಿಗಳನ್ನು ಚುರುಕುಗೊಳಿಸಿದ್ದಾರೆ. ಚುನಾವಣೆಯನ್ನು ಗೆಲ್ಲಲೇಬೇಕು ಎಂಬ ಲಕ್ಷ್ಯದೊಂದಿಗೆ ಅಭ್ಯರ್ಥಿಗಳು ನೀಡುವ ಆಮಿಷಗಳಿಗೆ ಮತದಾರರು ಸೊಪ್ಪ ಹಾಕಬಾರದು. ತಾತ್ಕಾಲಿಕ ಲಾಭಕ್ಕಾಗಿ ಮತವನ್ನು ಮಾರಿಕೊಳ್ಳುವುದನ್ನು ಜನರು ತಿರಸ್ಕರಿಸಬೇಕು.
ಚುನಾವಣಾ ಸ್ಪರ್ಧೆಗೆ ಮುಂದಾಗಿರುವ ರಾಜಕಾರಣಿಯೊಬ್ಬರ ಮನೆ ಮೇಲೆ ಇತ್ತೀಚೆಗೆ ದಾಳಿ ನಡೆಸಿದ ಕಂದಾಯ ಅಧಿಕಾರಿಗಳು, ಭಾರೀ ಸಂಖ್ಯೆಯಲ್ಲಿ ಸಂಗ್ರಹಿಸಲಾಗಿದ್ದ ಫುಡ್‌ಕಿಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇವರು ಈ ಹಿಂದೆಯೂ ಕುಕ್ಕರ್, ಸೀರೆ ಹಂಚಿ ಸುದ್ದಿಗೆ ಗ್ರಾಸವಾಗಿದ್ದರು. ಮತ್ತೊಂದೆಡೆ, ರಾಮನಗರ ತಾಲೂಕಿನಲ್ಲಿ, ಮತದಾರರಿಗೆ ಹಂಚಲು ಸಿದ್ಧವಾಗಿದ್ದ 2,900 ಕುಕ್ಕರ್‌ಗಳನ್ನು ತಹಸೀಲ್ದಾರ್ ಜಪ್ತಿ ಮಾಡಿದ್ದಾರೆ. ಐದು ದಿನಗಳ ಹಿಂದೆ, ಪರಿಷತ್ ಸದಸ್ಯರೊಬ್ಬರ ಹಾವೇರಿ ನಿವಾಸದ ಮೇಲೆ ವಾಣಿಜ್ಯ ಅಧಿಕಾರಿಗಳು ದಾಳಿ ನಡೆಸಿ, 6000ಕ್ಕೂ ಅಧಿಕ ಸೀರೆ, 9000ಕ್ಕೂ ಅಧಿಕ ಸ್ಕೂಲ್ ಬ್ಯಾಗ್‌ಗಳು, ತಟ್ಟೆ-ಲೋಟಗಳು ಸೇರಿದಂತೆ ಒಟ್ಟಾರೆ 8 ಕೋಟಿ ರೂ. ಮೌಲ್ಯದ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಇವು ಕೆಲವು ಉದಾಹರಣೆಗಳಷ್ಟೇ. ಇದು ಯಾವುದೋ ಒಂದು ಕ್ಷೇತ್ರಕ್ಕೆ ಅಥವಾ ಯಾವುದೋ ಒಂದೇ ಪಕ್ಷಕ್ಕೆ ಮಾತ್ರ ಸಿಮೀತವಾಗಿಲ್ಲ.
ಈ ಹಿಂದೆ ಮತದಾರರಿಗೆ ಆಮಿಷವೊಡ್ಡುವ ಚಟುವಟಿಕೆಗಳು ಒಂದಿಷ್ಟು ಕ್ಷೇತ್ರಗಳಲ್ಲಿ ಮಾತ್ರ ನಡೆಯುತ್ತಿದ್ದವು. ಆದರೆ, ಈಗ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಈ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿವೆ.
ಚುನಾವಣೆ ಸಂದರ್ಭದಲ್ಲಿ ಅಕ್ರಮಗಳನ್ನು ತಡೆಯದಿದ್ದರೆ ಪ್ರಜಾಪ್ರಭುತ್ವ ಸಶಕ್ತವಾಗಿ ಉಳಿಯಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಮತದಾರರು ಈ ವಿಷಯದಲ್ಲಿ ಜಾಗೃತರಾಗಬೇಕು. ಜನ ಜಾಗೃತರಾಗದೆ ಕಾನೂನು ಎಷ್ಟೇ ಬಿಗಿಗೊಳಿಸಿದರೂ ಪರಿಣಾಮ ಬೀರುವುದಿಲ್ಲ. ಯಾಕೆಂದರೆ, ಐನೂರು, ಸಾವಿರ ರೂಪಾಯಿಗೆ ಮತಗಳನ್ನು ಮಾರಿಕೊಂಡರೆ, ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಹಕ್ಕನ್ನು ಮತದಾರರು ಕಳೆದುಕೊಳ್ಳುತ್ತಾರೆ. ಹಣ, ಹೆಂಡ ಹಂಚಿ ಗೆದ್ದುಬರುವ ಅಭ್ಯರ್ಥಿ, ಚುನಾವಣಾ ವೆಚ್ಚವನ್ನು ಸರಿದೂಗಿಸಲು ಭ್ರಷ್ಟಾಚಾರಕ್ಕೆ ಇಳಿಯುತ್ತಾನೆ. ಅಂತಿಮವಾಗಿ ಅದರ ಹೊರೆ ಜನಸಾಮಾನ್ಯರ ಮೇಲೆಯೇ ಬೀಳುತ್ತದೆ. ಇದೊಂದು ವಿಷ ವರ್ತುಲ. ಚುನಾವಣೆಯಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೇ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ, ಅದರ ಒಳ್ಳೆಯ ಲಾಭ ಜನರಿಗೇ ಆಗುತ್ತದೆ. ಆಮಿಷಕ್ಕೆ ಬಿದ್ದು ಅರ್ಹನಲ್ಲದ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ, ಅದರಿಂದಾಗುವ ದುಷ್ಪರಿಣಾಮವನ್ನು ತಾವೇ ಅನುಭವಿಸಬೇಕಾಗುತ್ತದೆ ಎಂಬುದನ್ನು ಜನ ಅರಿತುಕೊಳ್ಳಬೇಕು.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತ್ ಪಾಲ್ ಬೇಟೆ, ಮತ್ತಷ್ಟು ಕಠಿಣ ಕ್ರಮ ಅಗತ್ಯ
ಈಗಿನ ಚುನಾವಣೆ ನಡೆಯುವ ರೀತಿ ನೋಡಿದರೆ, ಸಭ್ಯರು ಎಲೆಕ್ಷನ್ ಗೆಲ್ಲುವುದೇ ಅಸಾಧ್ಯ. ಹಣವಂತರು ಮಾತ್ರವೇ ಚುನಾವಣೆ ಗೆಲ್ಲಲು ಸಾಧ್ಯ ಎಂಬ ಸನ್ನಿವೇಶ ನಿರ್ಮಾಣವಾಗಿದೆ. ಈ ಕಳಂಕವನ್ನು ನಿವಾರಿಸಬೇಕಾದ ಮಹತ್ತರ ಜವಾಬ್ದಾರಿ ಮತದಾರರ ಮೇಲಿದೆ. ಚುನಾವಣೆ ಆಯೋಗದ ಜವಾಬ್ದಾರಿಯೂ ಇಲ್ಲಿ ದೊಡ್ಡದಿದೆ. ಆಮಿಷ ಮುಕ್ತ ಮತ್ತು ಅಕ್ರಮ ಮುಕ್ತ ಚುನಾವಣೆ ನಡೆಸಲು ಕಾಯಿದೆ ಕಾನೂನು ರೂಪಿಸಿದರೆ ಸಾಲದು. ಇದರ ಕಠಿಣ ಅನುಷ್ಠಾನವೂ ಮುಖ್ಯ. ಆಡಳಿತ ಪಕ್ಷ, ಪ್ರತಿಪಕ್ಷ ಎಂಬ ಭೇದಭಾವ ಮಾಡದೆ ಚುನಾವಣೆ ಆಯೋಗವು ನಿಷ್ಪಕ್ಷಪಾತವಾಗಿ ಇಂಥ ಅಕ್ರಮಗಳಿಗೆ ತಡೆ ಹಾಕಬೇಕು.
-
ದೇಶ19 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ20 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಗ್ಯಾಜೆಟ್ಸ್9 hours ago
Aadhaar Update: ಆನ್‌ಲೈನ್‌ನಲ್ಲಿ ಆಧಾರ್ ಅಪ್ಡೇಟ್ ಉಚಿತ; ಈ ಸೌಲಭ್ಯ ಜೂನ್ 14ರವರೆಗೆ ಮಾತ್ರ
-
ಅಂಕಣ20 hours ago
ಗೋ ಸಂಪತ್ತು: ಆಹಾರವಾಗಿ ಮಾತ್ರವಲ್ಲ, ಔಷಧವಾಗಿಯೂ ಮಜ್ಜಿಗೆಗೆ ಮಹತ್ವವಿದೆ!
-
ಅಂಕಣ20 hours ago
Brand story : ಚೀನಾದ ಇ-ಕಾಮರ್ಸ್ ದಿಗ್ಗಜ ಅಲಿಬಾಬಾ, 6 ಕಂಪನಿಗಳಾಗಿ ವಿಭಜನೆಯಾಗುತ್ತಿರುವುದೇಕೆ?
-
ಕರ್ನಾಟಕ10 hours ago
B.Y. Vijayendra: ಯಾವುದೇ ಕಾರಣಕ್ಕೆ ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಲ್ಲ: ಗೊಂದಲಕ್ಕೆ ತೆರೆಯೆಳೆದ ಯಡಿಯೂರಪ್ಪ
-
ದೇಶ11 hours ago
Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್ಗೆ 25 ಸಾವಿರ ರೂ. ದಂಡ!
-
ಕರ್ನಾಟಕ14 hours ago
SSLC Exam 2023: ಕಲಬುರಗಿಯಲ್ಲಿ ಎಸ್ಎಸ್ಎಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ; ವಾಟ್ಸಾಪ್ನಲ್ಲಿ ಹರಿದಾಡಿದ ಕನ್ನಡ ಪೇಪರ್