ಭಾರತ ಮಹಿಳೆಯರ ಏಕಾಂಗಿ ಪ್ರವಾಸ(ಸೋಲೋ ಟ್ರಾವೆಲ್)ಕ್ಕೆ ಹೇಳಿ ಮಾಡಿಸಿದ ದೇಶವಲ್ಲ ಎಂಬ ಮಾತಿದೆ. ಆದರೆ, ಭಾರತದಲ್ಲಿ ಇತ್ತೀಚೆಗೆ ಮಹಿಳೆಯರು ಬ್ಯಾಗ್ ಹೆಗಲಿಗೇರಿಸಿ ಒಬ್ಬರೇ ತಿರುಗಾಡುವ ಸಂಸ್ಕೃತಿ ಹೆಚ್ಚಾಗುತ್ತಿದೆ. ಮುಖ್ಯವಾಗಿ ಯುವ ಮನಸ್ಸುಗಳು, ತಿರುಗಾಟ ಬದುಕಿನ ಭಾಗವೆಂದು ಶತಾಯಗತಾಯ ನಂಬುವವರು, ನಂಬಿದಂತೆಯೇ ಬದುಕಿ ತೋರಿಸುವ ಗಟ್ಟಿಗಿತ್ತಿ ಹುಡುಗಿಯರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಬ್ಯಾಗು ಹೆಗಲಿಗೇರಿಸಿ, ಎಲ್ಲೋ ಕೂತು ಎಲ್ಲೋ ತಿಂದು ಲ್ಯಾಪ್‌ಟಾಪ್ ಕುಟ್ಟಿ ಕೆಲಸ ಮಾಡುತ್ತಾ, ಹಳ್ಳಿಯೊಂದರಲ್ಲೋ, ಬೆಟ್ಟದ ಬುಡದಲ್ಲೋ ದಿನಗಟ್ಟಲೆ ವಾರಗಟ್ಟಲೆ ಬದುಕು ಅನುಭವಿಸುವ ಹೊಸ ಬಗೆಯ ಪ್ರವಾಸದ ಖುಷಿಯ ಅನುಭವಿಸುವ ಒಂಟಿ ಮಹಿಳೆಯರು ಇದ್ದಾರೆ. ಆದರೆ, ಇಂತಹ ಆಸೆ ಹೆಚ್ಚಿನ ಮಹಿಳೆಯರಲ್ಲಿ ಇದ್ದರೂ, ಮನೆಯಲ್ಲಿನ ಒತ್ತಡ, ಸುರಕ್ಷಿತತೆಯ ಭಯ, ಕಂಫರ್ಟ್‌ಗಳನ್ನು ಬಿಟ್ಟು ಹೊರಕ್ಕೆ ಕಾಲಿಡುವುದು ಹೇಗೆ ಎನ್ನುವ ಅರೆಮನಸ್ಸು ಇವೆಲ್ಲವೂ ಇಂಥದ್ದೊಂದು ಸಾಹಸ ಅನುಭವಿಸಿ ನೋಡಲು ಆಗದಂತೆ ತಡೆಯುತ್ತದೆ. ಹಲವರಲ್ಲಿ ಇರುವ ಈ ಗೊಂದಲಗಳಿಗಾಗಿಯೇ, ಭಾರತದಲ್ಲಿ ಹೆಣ್ಣುಮಕ್ಕಳ ಏಕಾಂಗಿ ಪ್ರವಾಸಕ್ಕೆ ಸುರಕ್ಷಿತತೆಯ ದೃಷ್ಟಿಯಿಂದ ಯೋಗ್ಯವೆನಿಸುವ ಕೆಲವು ಪ್ರವಾಸೀ ಸ್ಥಳಗಳ ಪಟ್ಟಿ ಇಲ್ಲಿದೆ.
೧. ಗೋವಾ: ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪ್ಲಾನ್ ಇಂಡಿಯಾ ಸಿದ್ಧಪಡಿಸಿದ ವರದಿಯಲ್ಲಿ ಗೋವಾ ಮಹಿಳೆಯರಿಗೆ ಅತ್ಯಂತ ಸುರಕ್ಷಿತ ಜಾಗ ಎಂದು ಹೇಳಿದೆ.
೨. ಲಡಾಕ್: ಇತ್ತೀಚೆಗಿನ ವರ್ಷಗಳಲ್ಲಿ ಪ್ರವಾಸೀ ತಾಣವಾಗಿ ಲಡಾಕ್ ಸಾಕಷ್ಟು ವಾಣಿಜ್ಯೀಕರಣಗೊಂಡಿದೆ ಎಂದು ಅನಿಸಿದರೂ, ಸುರಕ್ಷಿತತೆಯ ದೃಷ್ಟಿಯಿಂದ ಲಡಾಕ್ ಮಹಿಳೆಯರಿಗೆ ಯೋಗ್ಯವೇ.
೩. ಪಾಂಡಿಚೇರಿ: ಪ್ರೆಂಚ್ ವಾಸ್ತುಶಿಲ್ಪ ಹಾಗೂ ಮುಗಿಯದ ಸಮುದ್ರ ತೀರಗಳಿಗೆ ಹೆಸರುವಾಸಿಯಾಗಿರುವ ಪಾಂಡಿಚೇರಿ, ತಮ್ಮ ಪಾಡಿಗೆ ತಾವಿರುವ, ಮುಂದುವರಿದ ಚಿಂತನೆಗಳ ಜನರಿರುವ ಶಾಂತವಾದ ಊರು. ಮಹಿಳೆಯರು ಸೋಲೋ ಆರಾಮವಾಗಿ ಮಾಡಿ ಬರಬಹುದು.
೪. ಶಿಲ್ಲಾಂಗ್: ಪೂರ್ವದ ಸ್ಕಾಟ್‌ಲ್ಯಾಂಡ್ ಎಂದೇ ಹೆಸಾಗಿರುವ ಶಿಲ್ಲಾಂಗ್, ಯಾವುದೇ ಬಗೆಯ ಪ್ರವಾಸಿಗರಿಗೂ ಅನುಭವದ ಮೂಟೆಗಳನ್ನೇ ಕೊಟ್ಟುಬಿಡುವ ಮಜವಾದ ಸುರಕ್ಷಿತ ಊರು.
೫. ಹಂಪಿ: ಭವ್ಯ ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಕುರುಹುಗಳನ್ನು ನೋಡಬೇಕಿದ್ದರೆ ಹಂಪಿಗೆ ಹೋಗಬೇಕು. ಸದಾ ವಿದೇಶಿಯರಿಂದ ತುಂಬಿರುವ, ಯಾವುದೇ ಭಯವಿಲ್ಲದೆ ಒಬ್ಬರೇ ಕಲ್ಲುಬಂಡೆಗಳನ್ನು ಹತ್ತಿಳಿಯುತ್ತಾ ಕಳೆದುಹೋಗಬಹುದಾದ ಜಾಗ.
೬. ಗುವಾಹಟಿ: ಭಾರತದ ಸೆವೆನ್ ಸಿಸ್ಟರ್ಸ್ ಹೆಸರಿನ ರಾಜ್ಯಗಳ ಚಂದದೂರು. ಯಾವುದೇ ತಲೆಬಿಸಿಯಿಲ್ಲದೆ, ಒಬ್ಬರೇ ಆರಾಮವಾಗಿ ಸುತ್ತಬಹುದಾದ ಫ್ರೆಂಡ್ಲೀ ಊರಿದು.
೭. ನೈನಿತಾಲ್: ಮಾವಿನ ಹಣ್ಣಿನ ಆಕಾರದ ಸರೋವರದಲ್ಲಿ ಒಬ್ಬರೇ ಪೆಡಲ್ ಬೋಟಿಂಗ್ ಮಾಡುತ್ತಾ ಸದಾ ಹಿತವಾದ ಹವಾಮಾನವಿರುವ, ಚಳಿಗಾಲದಲ್ಲಿ ಚಳಿಯೂ, ಮಳೆಗಾಲದಲ್ಲಿ ಒದ್ದೆಯಾಗುವ ಮಳೆಯೂ ಇರುವ ಮುದ್ದಾದ ಊರು ಏಕಾಂಗಿ ಮಹಿಳೆಯರ ತಿರುಗಾಟಕ್ಕೂ ಯೋಗ್ಯ ಜಾಗ.
೮. ಲಾಹೋಲ್ ಮತ್ತು ಸ್ಪಿತಿ: ಮಳೆನೆರಳಿನ ಪ್ರದೇಶವಾದ ಹಿಮಾಲಯನ್ ಮರುಭೂಮಿ ನೋಡಬೇಕೆಂದರೆ ಸ್ಪಿತಿ ಕಣಿವೆಗೆ ಹೋಗಬೇಕು. ಹೃದಯ ವೈಶಾಲ್ಯತೆಯ ಹಿಮಾಚಲಿ ಜನರ ಫ್ರೆಂಡ್ಲೀ ಭಾವ ಏಕಾಂಗಿಯಾಗಿ ಹೋದ ನಿಮ್ಮನ್ನು ಭರಪೂರ ಅನುಭವಗಳೊಂದಿಗೆ ಮರಳುವಂತೆ ಮಾಡುತ್ತದೆ.
ಇದನ್ನೂ ಓದಿ | Bicycle travel | ಕರ್ನಾಟಕದಿಂದ ಕಾಶ್ಮೀರಕ್ಕೆ ಇಬ್ಬರು ಕನ್ನಡಿಗರ 3,500 ಕಿಮೀ ಸೈಕಲ್ ಯಾತ್ರೆ!
೯. ಉದಯಪುರ: ರಾಜಸ್ಥಾನದ ಉದಯಪುರವೆಂಬ ಅರಮನೆಗಳ ನಗರಿಯಲ್ಲಿ ಮಹಾರಾಣಿಯರಂತೆ ಬಿಂದಾಸ್ ಆಗಿ ಮಹಿಳೆಯರು ಒಬ್ಬರೇ ಓಡಾಡಿಕೊಂಡಿರಬಹುದು. ಸೋಲೋಗೆ ಇದು ಬೆಸ್ಟ್ ಜಾಗ.
೧೦. ವಾರಣಾಸಿ: ಅತ್ಯಂತ ಪುರಾತನ ನಗರವೆಂಬ ಹೆಗ್ಗಳಿಕೆಯ, ಧಾರ್ಮಿಕ ಸ್ಥಳವಾದರೂ, ಎಲ್ಲ ಬಗೆಯ ಪ್ರವಾಸಿಗರನ್ನೂ ತನ್ನೆಡೆಗೆ ಸೆಳೆಯುವ ಅತ್ಯಪೂರ್ವ ಜಾಗ. ಇಲ್ಲಿ ಗಂಗೆಯ ಮಡಿಲಿನಲ್ಲಿ ದೋಣಿಯ ಮೇಲೆ ತೇಲುತ್ತಾ, ಗಂಗಾರತಿಯೆಂಬ ಭಕ್ತಿಯಲ್ಲಿ ಮುಳುಗೇಳುತ್ತಾ ಬೇರೆಯದೇ ಆದ ಆನಂದವನ್ನು ಅನುಭವಿಸಬಹುದು. ಸೋಲೋ ಮಹಿಳೆಯರು ಯಾವ ಭಯವೂ ಇಲ್ಲದೆ ಓಡಾಡಬಹುದಾದ, ಬಜೆಟ್‌ಗೂ ಹೇಳಿ ಮಾಡಿಸಿದ ಪ್ರವಾಸೀ ಸ್ಥಳ.
೧೧. ಸಿಕ್ಕಿಂ: ಚಹಾ ತೋಟಗಳಲ್ಲಿ ಅಡ್ಡಾಡುತ್ತಾ, ಹಿಮಾಲಯದ ಸೌಂದರ್ಯವನ್ನು ಆಸ್ವಾದಿಸುತ್ತಾ ಒಬ್ಬರೇ ಸುತ್ತಾಡಬಹುದಾದ ರಮಣೀಯ ಸ್ಥಳಗಳಲ್ಲಿ ಒಂದು ಸಿಕ್ಕಿಂ.
೧೨. ಮುನ್ನಾರ್: ದೇವರ ನಾಡೆಂಬ ಹೆಮ್ಮೆಯ ಕೇರಳದ ಮೂನ್ನಾರ್‌ನ ಚಹಾ ತೋಟಗಳನ್ನೂ, ಬೆಟ್ಟ ಗುಡ್ಡ ಜಲಪಾತಗಳನ್ನೂ ಒಬ್ಬರೇ ಸವಿಯುವ ಮನಃಶಾಂತಿಯೇ ಬೇರೆ.
ಇದನ್ನೂ ಓದಿ | Desert travel | ಭಾರತದಲ್ಲಿದ್ದೂ ಚಳಿಗಾಲದಲ್ಲಿ ಮರಳುಗಾಡು ನೋಡದಿದ್ದರೆ ಹೇಗೆ?!