Site icon Vistara News

Best Tourist Places In Tamilnadu: ಈ ಸುಂದರ ದೇವಾಲಯಗಳ ದರ್ಶನಕ್ಕಾದರೂ ತಮಿಳುನಾಡಿಗೆ ಹೋಗಲೇಬೇಕು!

Best Tourist Places In Tamilnadu

ತಮಿಳುನಾಡು ಎಂದ ತಕ್ಷಣ ನೆನಪಾಗುವುದು ಸುಂದರ ದೇವಸ್ಥಾನಗಳು, ಈ ದೇವಸ್ಥಾನಗಳಲ್ಲಿ ಸಿಗುವ ರುಚಿಯಾದ ಪ್ರಸಾದ, ಸಾಂಪ್ರದಾಯಿಕ ಉಡುಗೆ ತೊಡುಗೆಗಳು, ಹೊಟ್ಟೆ ತುಂಬಿಸುವ ಸೊಗಸಾದ ಊಟ. ಆಧ್ಯಾತ್ಮದಲ್ಲಿ ಆಸಕ್ತಿ ಇರುವ, ದೇವಸ್ಥಾನಗಳ ಭೇಟಿಯಿಂದ ಶಾಂತಿ ನೆಮ್ಮದಿ ಕಂಡುಕೊಳ್ಳುವ ಯಾರೇ ಆದರೂ, ತಮಿಳುನಾಡಿನ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ಕೊಡಲು ಬಯಸುತ್ತಾರೆ. ಬೃಹತ್‌ ದೇವಸ್ಥಾನಗಳು, ಪುರಾತನ ಐತಿಹಾಸಿಕ ದೇವಸ್ಥಾನಗಳ ದರ್ಶನ ಮಾಡಿಕೊಂಡು ಪುನೀತರಾಗುವ ಇಚ್ಛೆ ಇರುವ ಮಂದಿ ತಮಿಳುನಾಡಿನ ಈ ಪ್ರಮುಖ ದೇವಸ್ಥಾನಗಳಿಗೆ ಜೀವಿತಾವಧಿಯಲ್ಲಿ ಒಮ್ಮೆಯಾದರೂ (Best Tourist Places In Tamilnadu) ಹೋಗಿ ಬರಬೇಕು.

ಮೀನಾಕ್ಷಿ ದೇವಸ್ಥಾನ, ಮಧುರೈ

ತಮಿಳುನಾಡಿನ ಅತ್ಯಂತ ಪ್ರಸಿದ್ಧವಾದ ದೇವಸ್ಥಾನಗಳ ಪೈಕಿ ಮಧುರೈನ ಮೀನಾಕ್ಷಿ ದೇವಾಲಯ ಪ್ರಮುಖವಾದುದು. ಇಲ್ಲಿ ಶಿವನನ್ನು ಸುಂದರೇಶ್ವರನ ಹೆಸರಿನಲ್ಲೂ, ಪಾರ್ವತಿಯನ್ನು ಮೀನಾಕ್ಷಿಯ ಹೆಸರಿನಲ್ಲೂ ಪೂಜಿಸಲಾಗುತ್ತದೆ. ಬೃಹತ್‌ ದೇವಾಲಯ ಸಮುಚ್ಛಯವಾಗಿರುವ ಇದಕ್ಕೆ ಒಮ್ಮೆ ಒಳಗೆ ಹೊಕ್ಕರೆ, ಹೊರಬರಲು ಕೆಲವು ಗಂಟೆಗಳು ಬೇಕು. ಸುಮಾರು 16ನೇ ಶತಮಾನದ್ದೆಂದು ಹೇಳಲಾಗುವ ಈ ದೇವಾಲಯಕ್ಕೆ ನಿತ್ಯವೂ ಲಕ್ಷಗಟ್ಟಲೆ ಭಕ್ತರು ದೂರದೂರುಗಳಿಂದ ಬಂದು ದರ್ಶನ ಪಡೆಯುತ್ತಾರೆ. ಮಧುರೈಗೆ ಹೋದರೆ, ಇಲ್ಲಿನ ಸಾಂಪ್ರದಾಯಿಕ ಊಟ, ಜಿಗರ್‌ಥಂಡಾ, ದೋಸೆ, ಇಡ್ಲಿಗಳ ರುಚಿಯನ್ನು ಸವಿಯಲು ಮರೆಯಬೇಡಿ.

ಕುಮಾರಿ ಅಮ್ಮನ್‌ ಕೋಯಿಲ್‌, ಕನ್ಯಾಕುಮಾರಿ

51 ಶಕ್ತಿ ಪೀಠಗಳಲ್ಲಿ ಒಂದಾದ ಈ ದೇವಸ್ಥಾನದಲ್ಲಿ ದೇವಿಯು ಬಾಣಾಸುರನ ವಧೆಗಾಗಿ ಅವತರಿಸಿದ ಪುಟ್ಟ ಹುಡುಗಿಯ ರೂಪವನ್ನೇ ಇಲ್ಲಿ ಪೂಜಿಸಲಾಗುತ್ತದೆ. ಬಹಳ ಪ್ರಸಿದ್ಧವಾದ ಈ ದೇವಾಲಯವನ್ನು ನೋಡಲು ಹೋದರೆ, ಭಾರತದ ಕೆಳತುದಿಯಾದ ಕನ್ಯಾಕುಮಾರಿಯ ಹಲವು ಜಾಗಗಳಲ್ಲಿ ಸುತ್ತಾಡಿ ಬರಬಹುದು.

ನಟರಾಜ ದೇವಾಲಯ, ಚಿದಂಬರಂ

ಚಿದಂಬರಂನ ನಟರಾಜ ದೇವಸ್ಥಾನ ಕೂಡಾ ತಮಿಳುನಾಡಿನ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಇಲ್ಲಿ ಗೋವಿಂದರಾಜ ಪೆರುಮಾಳ್‌ ಹಾಗೂ ನಟರಾಜನಾದ ಶಿವ ಇಬ್ಬರನ್ನೂ ಪ್ರಮುಖವಾಗಿ ಪೂಜಿಸಲಾಗುತ್ತದೆ. ಹಾಗಾಗಿ, ಶೈವ ಪಂಥ ಹಾಗೂ ವೈಷ್ಣವ ಪಂಥವನ್ನು ಅನುಸರಿಸುವ ಮಂದಿ ಇಲ್ಲಿಗೆ ದರ್ಶನ ನೀಡುತ್ತಾರೆ. ಹಾಗಾಗಿ ಎರಡೂ ಪಂಥದ ಮಂದಿಯನ್ನು ಸೆಳೆಯುವ ಅಪರೂಪದ ದೇವಸ್ಥಾನವಿದು.

ಅರುಣಾಚಲೇಶ್ವರ ದೇವಸ್ಥಾನ, ತಿರುವಣ್ಣಾಮಲೈ

ಒಂಭತ್ತನೇ ಶತಮಾನದಲ್ಲಿ ಚೋಳರು ಕಟ್ಟಿಸಿದರೆನ್ನಲಾಗುವ ಈ ದೇವಸ್ಥಾನ ಅತ್ಯಂತ ಪ್ರಸಿದ್ಧವಾದ ಶಿವ ದೇವಸ್ಥಾನ. ಅಣ್ಣಾಮಲೈ ಬೆಟ್ಟದ ಬುಡದಲ್ಲಿರುವ ಈ ದೇವಾಲಯದ ಪ್ರಸಿದ್ಧ ಆಚರಣೆಗಳ ಪೈಕಿ ಗಿರಿವಲಂ ಕೂಡಾ ಒಂದು. ಸಾವಿರಾರು ಭಕ್ತರು ಪ್ರತಿ ಹುಣ್ಣಿಮೆಯ ದಿನ ಅಣ್ಣಾಮಲೈ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ರಾತ್ರಿಯಿಡೀ ಪ್ರದಕ್ಷಿಣೆ ಬಂದು ಅರುಣಾಚಲನ ದರ್ಶನ ಮಾಡುತ್ತಾರೆ.

ರಾಮನಾಥಸ್ವಾಮಿ ದೇವಸ್ಥಾನ, ರಾಮೇಶ್ವರಂ

ರಾಮೇಶ್ವರಂನಲ್ಲಿರುವ ಈ ಶಿವನ ದೇವಾಲಯ 12 ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿದೆ. ಸಮುದ್ರ ತೀರದಲ್ಲಿರುವ ಈ ದೇವಸ್ಥಾನದ ಲಿಂಗವನ್ನು ಸ್ವತಃ ಶ್ರೀರಾಮನೇ ಸೀತೆಯ ಹುಡುಕಾಟದಲ್ಲಿ ಇಲ್ಲಿಗೆ ಬಂದಾಗ ಪ್ರತಿಷ್ಠಾತಿಸಿ ಪೂಜಿಸಿದ ಎಂಬ ಸ್ಥಳಪುರಾಣವಿದೆ. 12ನೇ ಶತಮಾನದಲ್ಲಿ ಪಾಂಡ್ಯರಾಜರು ಈ ದೇವಾಲಯವನ್ನು ವಿಸ್ತರಿಸಿ ಪುನರುಜ್ಜೀವನಗೊಳಿಸಿದರು ಎಂದು ಇತಿಹಾಸ ಹೇಳುತ್ತದೆ.

ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಂ, ತಿರುಚಿರಾಪಳ್ಳಿ

ತ್ರಿಚಿ ಅಥವಾ ತಿರುಚಿರಾಪಳ್ಳಿಯ ರಂಗನಾಥ ಸ್ವಾಮಿ ದೇವಾಲಯ ಈಗಲೂ ಪೂಜೆ ನಡೆಯುವ ದೇವಸ್ಥಾನಗಳ ಪೈಕಿ ಅತ್ಯಂತ ವಿಸ್ತಾರವಾದ ದೇವಾಲಯ. ವೈಷ್ಣವ ಪಂಥದ ಮಂದಿಯ ಪ್ರಮುಖ ದೇವಾಲಯವಾದ ಇಲ್ಲಿ ಶ್ರೀಹರಿಯು ಗರ್ಭಗುಡಿಯಲ್ಲಿ ಶೇಷಶಯನದ ರೀತಿಯಲ್ಲಿ ಪವಡಿಸಿರುವುದು ವಿಶೇಷ.

ಬೃಹದೀಶ್ವರ ದೇವಸ್ಥಾನ, ತಂಜಾವೂರು

11ನೇ ಶತಮಾನದಲ್ಲಿ ಚೋಳರ ಕಾಲದಲ್ಲಿ ಕಟ್ಟಲಾದ ಈ ದೇವಸ್ಥಾನ ಭಾರತದ ಪ್ರಮುಖ ಶಿವ ದೇವಾಲಯಗಳಲ್ಲಿ ಒಂದು. ನಿತ್ಯವೂ ಸಾವಿರಾರು ಭಕ್ತರು ಭೇಟಿಕೊಡುವ ಈ ದೇವಸ್ಥಾನ. ಇದು ತನ್ನ ಅತ್ಯಪೂರ್ವ ವಾಸ್ತುಶಿಲ್ಪ, ಕೆತ್ತನೆಗಳಿಂದಷ್ಟೇ ಅಲ್ಲ, ತನ್ನ ಹಲವು ವಿಸ್ಮಯಗಳಿಂದಲೂ ಬಲು ಪ್ರಸಿದ್ಧಿ. ಅದಕ್ಕಾಗಿಯೇ ನಿತ್ಯವೂ ಇಲ್ಲಿ ಭಕ್ತರಷ್ಟೇ ಅಲ್ಲ, ದೇಶವಿದೇಶಗಳಿಂದ ಪ್ರವಾಸಿಗರೂ ಅಚ್ಚರಿಯಿಂದ ಭೇಟಿ ನೀಡುತ್ತಾರೆ

ಕಪಾಲೀಶ್ವರ ದೇವಸ್ಥಾನ, ಮೈಲಾಪುರ, ಚೆನ್ನೈ

ಪಲ್ಲವರ ಕಾಲದಲ್ಲಿ ಏಳನೇ ಶತಮಾನದಲ್ಲಿ ಕಟ್ಟಲಾದ ಈ ದೇವಸ್ಥಾನ, ಚೆನ್ನೈನ ಪ್ರಸಿದ್ಧ ದೇವಸ್ಥಾನಗಳ ಪೈಕಿ ಒಂದು. ಶಿವನನ್ನು ಇಲ್ಲಿ ಕಪಾಲೀಶ್ವರನ ಹೆಸರಿನಲ್ಲಿ ಪೂಜಿಸುತ್ತಾರೆ. ಚೆನ್ನೈಯಲ್ಲೇ ಇರುವ ಇದಕ್ಕೆ ನಿತ್ಯವೂ ಸಾವಿರಾರು ಭಕ್ತರು ನೆರೆಯುತ್ತಾರೆ.

ಇದನ್ನೂ ಓದಿ: South Indian Monsoon Destinations: ದಕ್ಷಿಣ ಭಾರತದ ಈ 6 ಸ್ಥಳಗಳಲ್ಲಿ ಮಳೆಗಾಲದಲ್ಲಿ ಚಾರಣ ಮಾಡಲೇಬೇಕು!

Exit mobile version