Site icon Vistara News

Chardham Yatra 2024: ಚಾರ್‌ಧಾಮ್‌, ಕೇದಾರನಾಥನ ದರ್ಶನ ಮಾಡಲು ಬಯಸಿದ್ದೀರಾ? ನಿಮಗೆ ಬೇಕಾದ ಮಾಹಿತಿ ಇಲ್ಲಿದೆ

Chardham Yatra

ಹಿಮಾಲಯ ಶ್ರೇಣಿಗಳ ನಡುವೆ (chardham yatra 2024) ವಿರಾಜಮಾನನಾಗಿರುವ ಶಿವನ ದರ್ಶನ ಭಾಗ್ಯವೆಂಬುದು ಹಿಂದೂಗಳ ಪಾಲಿಗೆ ಜನ್ಮದ ಸೌಭಾಗ್ಯಗಳಲ್ಲಿ ಒಂದು. ದ್ವಾದಶ ಜ್ಯೋತಿರ್ಲಿಂಗಗಳ ಪೈಕಿ ಒಂದಾದ ಕೇದಾರನ ದರ್ಶನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮಾಡಬೇಕೆಂಬ ಕನಸು ಕೋಟಿಕೋಟಿ ಭಾರತೀಯರದ್ದು. ಮೇ 10ರಂದು ಚಳಿಗಾಲದ ಬ್ರೇಕ್‌ ಮುಗಿಸಿಕೊಂಡು ಕೇದಾರನಾಥ ಮತ್ತೆ ಭಕ್ತರಿಗೆ ದರ್ಶನ ಭಾಗ್ಯ ನೀಡುತ್ತಿದ್ದಾನೆ. ಇನ್ನು ಈ ವರ್ಷದ ನವೆಂಬರ್‌ 20ರವರೆಗೂ ಭಕ್ತರಿಗೆ ದರ್ಶನ ನೀಡಲಿದ್ದಾನೆ. ಕೇದಾರನ ಜೊತೆಜೊತೆಗೆ ಬದ್ರಿನಾಥ, ಗಂಗೋತ್ರಿ, ಯಮುನೋತ್ರಿಗಳೆಲ್ಲವೂ ಚಳಿಗಾಲದ ರಜೆಯನ್ನು ಮುಗಿಸಿಕೊಂಡು ಭಕ್ತರಿಗೆ ತೆರೆದಿವೆ.
ವಿಶೇಷವೆಂದರೆ ಈ ಬಾರಿ ಎಂದೂ ಕಾಣದ ಜನಜಂಗುಳಿ ಎಲ್ಲೆಡೆ ಕಾಣುತ್ತಿದೆ. ಕೇದಾರನಾಥ ಧಾಮ ತೆರೆದ ಮೊದಲ ಮೂರೇ ದಿನಗಳಲ್ಲಿ 75,135 ಭಕ್ತರು ಕೇದಾರನ ದರ್ಶನ ಮಾಡಿದ್ದಾರೆ. ಇದು ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಅತ್ಯಂತ ಹೆಚ್ಚು. ದಿನೇದಿನೇ ಭಕ್ತರ ಸಂಖ್ಯೆಯೂ ಹೆಚ್ಚುತ್ತಿದೆ. ಪ್ರತಿ ನಿತ್ಯವೂ ಇಪ್ಪತ್ತು ಸಾವಿರಕ್ಕೂ ಅಧಿಕ ಮಂದಿ ಭಕ್ತರು ದರ್ಶನ ಭಾಗ್ಯ ಪಡೆದು ಪುನೀತರಾದ ಧನ್ಯತೆ ಅನುಭವಿಸುತ್ತಿದ್ದಾರೆ. ಕೇದಾರನಾಥನ ಹಾದಿಗಳೆಲ್ಲವೂ ವಾಹನಗಳಿಂದ ತುಂಬಿಹೋಗಿದೆ. ಎಲ್ಲೆಡೆಯೂ ಟ್ರಾಫಿಕ್‌ ಜಾಮ್, ನೂಕುನುಗ್ಗಲು ಇತ್ಯಾದಿಗಳ ಸುದ್ದಿಗಳೇ ಕೇಳಿ ಬರುತ್ತಿವೆ. ಇದರಿಂದ ಇನ್ನು ಹೋಗಬೇಕೆಂದುಕೊಳ್ಳುವ ಆಸಕ್ತ ಭಕ್ತಾದಿಗಳ ಮನದಲ್ಲಿ ಒಂದು ಸಣ್ಣ ಗೊಂದಲವೂ ಎದ್ದಿವೆ. ಹಾಗಾದರೆ ಕೇದಾರನ ದರ್ಶನಕ್ಕೆ ಯಾವಾಗ, ಹೇಗೆ ಹೋಗಬೇಕು ಇತ್ಯಾದಿ ಇತ್ಯಾದಿ. ಈ ನಿಮ್ಮ ಗೊಂದಲಗಳಿಗೆ ಇಲ್ಲಿ ಪರಿಹಾರ ದೊರಕೀತು.

ಜನಜಂಗುಳಿಯ ಗಮನ ಇರಲಿ

ಚಾರ್‌ಧಾಮ್‌ ಯಾತ್ರೆ ಆರಂಭವಾದ ತಕ್ಷಣ ಅನೇಕರು ದರ್ಶನಕ್ಕೆ ಹೊರಟುಬಿಡುತ್ತಾರೆ. ಆದರೆ, ಈ ಸಂದರ್ಭ ಶಾಲಾ ಕಾಲೇಜುಗಳಿಗೂ ರಜೆ ಇರುವುದರಿಂದ ಪ್ರವಾಸೀ ಸ್ಥಳಗಳಲ್ಲಿ, ಯಾತ್ರಾ ಸ್ಥಳಗಳಲ್ಲಿ ಸಹಜವಾಗಿಯೇ ಜನಜಂಗುಳಿ ಹೆಚ್ಚು. ಹಾಗಾಗಿ ಮೇ ತಿಂಗಳಲ್ಲಿ ಸಾಮಾನ್ಯವಾಗಿ ಯಾತ್ರೆ ಸುಖಕರವಾಗಿ ಆಗದು. ನಿಮಗೆ ಬೇರೆ ಸಮಯದಲ್ಲಿ ರಜೆ ಸಿಕ್ಕೀತು ಎಂಬ ಧೈರ್ಯವಿದ್ದರೆ ಈಗ ಜನಜಂಗುಳಿಯಿರುವ ಮೇ ತಿಂಗಳಲ್ಲಿ ಹೋಗದೆ ಇರುವುದೇ ಒಳಿತು. ಜೂನ್‌, ಜುಲೈ ತಿಂಗಳಲ್ಲಿಯೂ ಉತ್ತರಾಖಂಡದ ವಾತಾವರಣದ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲವಾದ್ದರಿಂದ ಈ ಎರಡು ತಿಂಗಳನ್ನೂ ನೀವು ಪರಿಗಣಿಸದೇ ಇರುವುದೇ ಒಳ್ಳೆಯದು. ಚಾರ್‌ಧಾಮ್‌ ಯಾತ್ರೆಯನ್ನು ನೆಮ್ಮದಿಯಿಂದ, ಕಡಿಮೆ ಜನರಿರುವ ಸಮಯದಲ್ಲಿ ಮಾಡಬೇಕೆನ್ನುವ ಆಸೆಯಿದ್ದರೆ, ನೀವು ಆಗಸ್ಟ್‌ನಿಂದ ಅಕ್ಟೋಬರ್‌ ಒಳಗೆ ಮಾಡುವುದು ಒಳಿತು. ಆ ಸಮಯದಲ್ಲಿ ವಾತಾವರಣವೂ ಅನುಕೂಲಕರವಾಗಿರುತ್ತದೆ. ಚಳಿ ತಡೆಯಬಲ್ಲಿರಾದರೆ ಅಕ್ಟೋಬರ್‌ ಪ್ರಶಸ್ತ.

ಹಿಮಾಲಯ ಪರ್ವತ ಪ್ರದೇಶದಲ್ಲಿ ಈ ಧಾಮಗಳಿರುವುದರಿಂದ ಖಂಡಿತವಾಗಿಯೂ ನೀವು ಅಂದುಕೊಂಡಂತೆ ಹವಾಮಾನ ಇರದು. ಅಲ್ಲಿ ಹೀಗೆಯೇ ಇದ್ದೀತೆಂದು ಊಹಿಸುವುದೂ ಕಷ್ಟ. ಇದ್ದಕ್ಕಿದ್ದಂತೆ ಮಳೆ ಬರಬಹುದು. ಬಿಸಿಲೂ ಇರಬಹುದು. ಭಾರೀ ಮಳೆಗೆ ರಸ್ತೆ ಕುಸಿದು ಬೀಳಬಹುದು. ಹಾಗಾಗಿ ಮಾನಸಿಕವಾಗಿ ಇಂತಹ ಅಡೆತಡೆಗಳಿಗೆ ಸಿದ್ಧವಾಗಿಯೇ ಹೋಗಿ. ಆದರೂ ನೀವು ಹೊರಡುವ ಮುನ್ನ ಹವಾಮಾನ ಮುನ್ಸೂಚನೆಯನ್ನೂ ಮೊದಲೇ ಪರೀಕ್ಷಿಸಿಕೊಳ್ಳಿ.

ಚಾರ್‌ಧಾಮ್‌ ಯಾತ್ರೆ ಮಾಡಲು ಯಾವುದೇ ಏಜೆನ್ಸಿಗಳ ಸಹಾಯ ಬೇಕಾಗಿಲ್ಲ. ನೀವು ಸರಿಯಾಗಿ ಈ ಬಗ್ಗೆ ಭೌಗೋಳಿಕವಾಗಿ ಕೊಂಚ ಓದಿ ತಿಳಿದುಕೊಂಡರೆ, ನಿಮ್ಮ ಪಾಡಿಗೆ ಸ್ವತಂತ್ರವಾಗಿ ಬುಕ್‌ ಮಾಡಿಕೊಳ್ಳಬಹುದು. ಇದು ಕಷ್ಟವೇನಲ್ಲ. ಆದರೆ ಇದು ನಿಮ್ಮಿಂದ ಸಾಧ್ಯವಿಲ್ಲ, ತಿಳಿಯದು ಎಂದಾದಲ್ಲಿ ಏಜೆನ್ಸಿ ಸಹಾಯ ಪಡೆಯಿರಿ. ನೀವೇ ನಿಮ್ಮಷ್ಟಕ್ಕೆ ಒಂದು ಸಣ್ಣ ಸಮಾನ ಆಸಕ್ತರ ಗುಂಪಿನ ಜೊತೆಗೆ ಹೋಗುವುದು ಅತ್ಯಂತ ಸೂಕ್ತ. ಆಗ ನಿಮ್ಮ ಆಯ್ಕೆಯ ದಿನಗಳಲ್ಲಿ, ನೀವಂದುಕೊಂಡ ಜಾಗಗಳಿಗೆ ಹೋಗಿ ಅಲ್ಲಿ ಅಂದಿಕೊಂಡದ್ದಕ್ಕಿಂತ ಹೆಚ್ಚು ತಂಗಬೇಕೆಂಬ ಬಯಕೆಯಾದಲ್ಲಿ ಅದನ್ನೂ ಮಾಡಬಹುದು. ಜೆನ್ಸಿಗಳ ಸಹಾಯವಿಲ್ಲದೆ ನಿಮ್ಮಷ್ಟಕ್ಕೆ ಹೋದರೆ ಇವೆಲ್ಲ ಆಯ್ಕೆಗಳು ನಿಮ್ಮ ಕೈಯಲ್ಲೇ ಇರುತ್ತವೆ ಎಂಬುದು ನೆನಪಿಡಿ.

ಹೇಗೆ ಹೋಗಬೇಕು?

ನವದೆಹಲಿ ಅಥವಾ ಡೆಹ್ರಾಡೂನ್‌ವರೆಗೆ ವಿಮಾನ ಪ್ರಯಾಣ ಮಾಡಿ ಅಲ್ಲಿಂದ ಹರಿದ್ವಾರ, ಋಷಿಕೇಶ, ದೇವಪ್ರಯಾಗ, ಶ್ರೀನಗರ, ರುದ್ರಪ್ರಯಾಗ ದಾಟಿಕೊಂಡು ಗೌರಿಕುಂಡ ಎಂಬಲ್ಲಿಗೆ ಸಾಗಬೇಕು.ಹರಿದ್ವಾರದಿಂದ ಗೌರಿಕುಂಡಕ್ಕೆ 123 ಕಿಮೀ ಆದರೂ, ಹಿಮಾಲಯದ ಕಡಿದಾದ ರಸ್ತೆಯಾಗಿರುವುದರಿಂದ ಈ ದಾರಿಯನ್ನು ಕ್ರಮಿಸಲು ಹೆಚ್ಚು ಸಮಯ ಬೇಕು ಎಂಬುದನ್ನು ನೆನಪಿಡಿ. ಗೌರಿಕುಂಡದಿಂದ ಕೇದಾರನವರೆಗೆ 18 ಕಿಮೀಗಳ ಚಾರಣ. ಈ ಹಾದಿಯನ್ನು ಕ್ರಮಿಸಲು ನಡೆಯಬಹುದು. ನಡೆಯಲು ಸಾಧ್ಯವಿಲ್ಲವೆಂದರೆ ಕುದುರೆ/ಪೋನಿ ಅಥವಾ ಹೊತ್ತುಕೊಂಡು ಹೋಗುವ ಮಂದಿಯ ಸಹಾಯವನ್ನು ಪಡೆಯಬಹುದು. ಹೆಲಿಕಾಪ್ಟರ್‌ ಸೇವೆಯನ್ನೂ ಪಡೆಯಬಹುದು.

ಹೆಲಿಕಾಪ್ಟರ್‌ ಸೇವೆ

ಕೇದಾರನಾಥಕ್ಕೆ ಹೋಗಲು ಹೆಲಿಕಾಪ್ಟರ್‌ ಸೌಲಭ್ಯವೂ ಇದೆ. ಈಗಾಗಲೇ ಬುಕ್ಕಿಂಗ್‌ ವ್ಯವಸ್ಥೆ ತೆರೆದಿದ್ದು, ಮೇ 10ರಿಂದ ಜೂನ್‌ 20 ಹಾಗೂ ಸೆಪ್ಟೆಂಬರ್‌ 15ರಿಂದ ಅಕ್ಟೋಬರ್‌ 31ರವರೆಗೆ ಹೆಲಿಕಾಪ್ಟರ್‌ ಸೇವೆ ಲಭ್ಯ ಇದೆ. IRCTC ಹೆಲಿಕಾಪ್ಟರ್‌ ಯಾತ್ರೆ ವೆಬ್‌ಸೈಟ್‌ (www.heliyatra.irctc.co.in) ತೆರೆದು ಅಲ್ಲಿ ಸೈನ್‌ ಅಪ್‌ ಮಾಡಿ ನಿಮ್ಮ ವಿವರಗಳನ್ನು ದಾಖಲು ಮಾಡಬೇಕು. ನಂತರ ಚಾರ್‌ಧಾಮ್‌ ಯಾತ್ರೆ ವಿವರಗಳ ಮೇಲೆ ಕ್ಲಿಕ್‌ ಮಾಡಿ ನಿಮಗೆ ಬೇಕಾದ ದಿನಾಂಕಕ್ಕೆ ಲಭ್ಯವಿರುವ ಹೆಲಿಕಾಪ್ಟರ್‌ ಸೇವೆಯನ್ನು ಹುಡುಕಿ ಟಿಕೆಟ್‌ಗಳನ್ನು ಬುಕ್‌ ಮಾಡಬಹುದು. ಟಿಕೆಟ್‌ ಕನ್‌ಫರ್ಮ್‌ ಆದ ಮೇಲೆ ಅದನ್ನು ಡೌನ್‌ಲೋಡ್‌ ಮಾಡಿಟ್ಟುಕೊಳ್ಳಿ.

ರಿಜಿಸ್ಟರ್‌ ಮಾಡಿ

ಇಷ್ಟೇ ಅಲ್ಲ, ಪ್ರತಿ ಕೇದಾರನಾಥ ಯಾತ್ರಿಯೂ ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವೆಬ್‌ಸೈಟ್‌ಗೆ (https://registrationandtouristcare.uk.gov.in/signin.php) ಹೋಗಿ ಅಲ್ಲಿ ನಿಮ್ಮ ಕೇದಾರನಾಥ ಭೇಟಿಯ ವಿವರಗಳನ್ನು ಮೊದಲೇ ರಿಜಿಸ್ಟರ್‌ ಮಾಡಿಕೊಳ್ಳಬೇಕು. ನಕಲಿ ಟಿಕೆಟ್‌ ಜಾಲವೂ ಇರುವುದರಿಂದ ಈ ಬಗ್ಗೆ ಜಾಗರೂಕರಾಗಿರಿ. ಇಂತಹ ಮೋಸಕ್ಕೆ ಬಲಿಯಾಗಬೇಡಿ.

Exit mobile version