Site icon Vistara News

Viral news | 10,000 ಉದ್ಯೋಗಿಗಳಿಗೆ ಮೂರು ದಿನದ ಡಿಸ್ನಿ ವರ್ಲ್ಡ್‌ ಪ್ರವಾಸ ಮಾಡಿಸಿದ ಬಾಸ್!

disney world

ವೃತ್ತಿ ಜೀವನದಲ್ಲಿ ಮೇಲೇರಲು, ಉತ್ತಮವಾಗಿ ಕೆಲಸ ಮಾಡಲು, ಸಂಸ್ಥೆಯಲ್ಲಿ ಆರೋಗ್ಯಕರ ವಾತಾವರಣ ಬೇಕಾಗುತ್ತದೆ. ಅಷ್ಟೇ ಅಲ್ಲ, ಸಂಸ್ಥೆಯ ಮುಖ್ಯಸ್ಥರು, ಮೇಲಾಧಿಕಾರಿಗಳ ಸೌಜನ್ಯ, ಬೆನ್ನು ತಟ್ಟಿ ಪ್ರೋತ್ಸಾಹ ಮಾಡುವ ಗುಣ, ಆಗಾಗ ಒಳ್ಳೆಯ ಕೆಲಸ ಮಾಡಿದಾಗ ಮೆಚ್ಚುಗೆಯ ನುಡಿಗಳು, ಕಾಲಕಾಲಕ್ಕೆ ಸಂಬಳ ಏರಿಕೆ ಇತ್ಯಾದಿಗಳೂ ಇರಬೇಕಾಗುತ್ತದೆ. ಆಗ ಮಾರ ಉದ್ಯೋಗಿ, ಯಾವ ಮಾನಸಿಕ ಕಿರಿಕಿರಿಯೂ ಇಲ್ಲದೆ, ತನ್ನ ಕುಟುಂಬದ ಜೊತೆಗೂ ನೆಮ್ಮದಿಯಿಂದ, ಸಂಶಥೆಯಲ್ಲೂ ಪ್ರಾಮಾಣಿಕವಾಗಿ ಅತ್ಯಂತ ನಿಷ್ಠೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ತನ್ನ ಉದ್ಯೋಗಿಗಳನ್ನು ಹೀಗೆ ನೆಮ್ಮದಿಯಾಗಿ ಸಂತೋಷದಿಂದಿಡುವ ಒಳಗುಟ್ಟನ್ನು ಅರಿತ ಸಂಸ್ಥೆಗಳು ಗೆಲ್ಲುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಬಹಳ ಅಪರೂಪವೆಂಬಂತೆ, ಇಲ್ಲೊಂದು ಸಂಸ್ಥೆ ಹೀಗೆ ತನ್ನ ಉದ್ಯೋಗಿಗಳ ಅತ್ಯದ್ಭುತ ಕೆಲಸದಿಂದ ಈ ವರ್ಷ ಭಾರೀ ಯಶಸ್ಸನ್ನು ಪಡೆದುಕೊಂಡ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದೆ. ಇದು ಕೇವಲ ಪಾರ್ಟಿಯಲ್ಲ. ಮೂರು ದಿನಗಳ ಐಷಾರಾಮಿ ಪ್ರವಾಸವನ್ನು ತನ್ನೆಲ್ಲ ೧೦ ಸಾವಿರ ಉದ್ಯೋಗಿಗಳಿಗೂ ಅವರ ಕುಟುಂಬಸ್ಥರಿಗೂ ವ್ಯವಸ್ಥೆ ಮಾಡಿದ್ದು ವಿಶೇಷ!

ಬಹಳಷ್ಟು ಮಂದಿಗೆ ಇದೊಂದು ಕನಸಿನಂತೆ ಕಾಣಬಹುದು. ತಾವು ಕೆಲಸ ಮಾಡುವ ಸಂಸ್ಥೆಯ ಬಿಲಿಯನೇರ್‌ ಒಡೆಯನೊಬ್ಬ ತನ್ನ ಸಂಸ್ಥೆಯ ಅಷ್ಟೂ ಮಂದಿಯನ್ನು ಪ್ರವಾಸಕ್ಕೆ ಕರೆದುಕೊಂಡು ಹೋದರೆ, ಯಾರಿಗೆ ತಾನೇ ಖುಷಿಯಾಗಲಿಕ್ಕಿಲ್ಲ ಹೇಳಿ!

ಬಹುರಾಷ್ಟ್ರೀಯ ಹಣಕಾಸು ಸೇವಾ ಸಂಸ್ಥೆ ಸಿಟಾಡೆಲ್‌ ಎಲ್‌ ಎಲ್‌ ಸಿ ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆನ್‌ ಗ್ರಿಫಿನ್‌ ಎಂಬವರು ತನ್ನಲ್ಲಿ ಕೆಲಸ ಮಾಡುವ ಎಲ್ಲಾ ಹತ್ತು ಸಾವಿರ ಮಂದಿ ನೌಕರರನ್ನು ಅವರ ಕುಟುಂಬ ಸಮೇತರಾಗಿ ಪ್ರವಾಸಕ್ಕೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿದ್ದಾರೆ. ವರ್ಷಪೂರ್ತಿ ಅತ್ಯದ್ಭುತವಾಗಿ ದುಡಿದು ಸಂಸ್ಥೆಯ ಯಶಸ್ಸಿನಲ್ಲಿ ಪ್ರಾಮಾಣಿಕವಾಗಿ ಕೈಜೋಡಿಸಿದ ತನ್ನ ಕೆಲಸಗಾರರನ್ನು ಹೀಗೂ ಖುಷಿ ಪಡಿಸದಿದ್ದರೆ ಹೇಗೆ ಎಂದು ಅವರು, ಎಲ್ಲರಿಗೂ ಈ ಉಡುಗೊರೆ ನೀಡಿದ್ದಾರೆ.

ಈ ಪ್ರವಾಸ ಅಂತಿಂಥ ಸಾಮಾನ್ಯ ಪ್ರವಾಸವಲ್ಲ. ಯುಎಸ್‌ನ ಓರ್ಲಾಂಡೋನಲ್ಲಿರುವ ವಿಶ್ವವಿಖ್ಯಾತ ವಾಲ್ಟ್‌ ಡಿಸ್ನಿ ವರ್ಲ್ಡ್‌ಗೆ ಮೂರು ದಿನಗಳ ಪ್ರವಾಸ ಇದಾಗಿದ್ದು, ವಿಶ್ವದೆಲ್ಲೆಡೆ ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುವ ಎಲ್ಲರಿಗೂ ವಿಮಾನ ವೆಚ್ಚ ಸೇರಿದಂತೆ ಎಲ್ಲ ಬಗೆಯ ವ್ಯವಸ್ಥೆಗಳನ್ನು ಮಾಡಿ ಯುಎಸ್‌ ಪ್ರವಾಸವನ್ನು ಏರ್ಪಡಿಸಿದ್ದಾರೆ. ಮೂರು ದಿನಗಳಿಗಾಗಿ ಇಡೀ ಡಿಸ್ನಿ ವರ್ಲ್ಡ್‌ ಅನ್ನೇ ಬುಕ್‌ ಮಾಡಿ ತನ್ನಲ್ಲಿ ಕೆಲಸ ಮಾಡುವ ಮಂದಿಗೆ ಕಾಲ ಕಳೆಯುವಂತೆ ವ್ಯವಸ್ಥೆ ಮಾಡಿದ್ದು ವಿಶೇಷ.

ಮೂರು ದಿನಗಳ ಕಾಲ ಡಿಸ್ನಿ ವರ್ಲ್ಡ್‌ನ ಐಷಾರಾಮಿ ಪಾರ್ಕುಗಳು, ಸಮಾರಂಭ ಕೊಠಡಿಗಳು ಸೇರಿದಂತೆ ಎಲ್ಲವನ್ನೂ ಈ ಸಂಸ್ಥೆ ಬುಕ್‌ ಮಾಡಿಕೊಂಡಿದ್ದು ಅದ್ದೂರಿ ಪಾರ್ಟಿ ಹಾಗೂ ಮೋಜು ಮಸ್ತಿಗಳ ಔತಣವನ್ನೇ ತನ್ನ ಉದ್ಯೋಗಿಗಳಿಗೆ ನೀಡಿದೆ. ಉದ್ಯೋಗಿಗಳು ಕೆಲಸವನ್ನು ಮರೆತು, ತಮ್ಮ ಕುಟುಂಬದೊಂದಿಗೆ ಮಜವಾಗಿ, ಕಾಲ ಕಳೆಯಲು ಎಲ್ಲ ವ್ಯವಸ್ಥೆಗಳನ್ನೂ ಸಂಸ್ಥೆ ಮಾಡಿತ್ತು.

ಇದನ್ನೂ ಓದಿ | Desert travel | ಭಾರತದಲ್ಲಿದ್ದೂ ಚಳಿಗಾಲದಲ್ಲಿ ಮರಳುಗಾಡು ನೋಡದಿದ್ದರೆ ಹೇಗೆ?!

ವರ್ಷಪೂರ್ತಿ ಹಗಲಿರುಳು ಕೆಲಸ ಮಾಡಿದ ಉದ್ಯೋಗಿಗಳಿಗೆ ಧನ್ಯವಾದ ಹೇಳುವ ಕಾರ್ಯಕ್ರಮ ಇದಾಗಿದ್ದು, ಸಂಸ್ಥೆ ಈ ವರ್ಷ ಅಭೂತಪೂರ್ವ ಸಾಧನೆ ಮಾಡಿದೆ. ಅತ್ಯದ್ಭುತ ತಂಡವನ್ನು ಸಂಸ್ಥೆಯೀಗ ಕಟ್ಟಿದ್ದು, ಇದು ಕೇವಲ ಸಂಸ್ಥೆಯ ಇತಿಹಾಸದಲ್ಲಿ ಮಾತ್ರವಲ್ಲ, ಹಣಕಾಸು ವಲಯದ ಇತಿಹಾಸದಲ್ಲೂ ಕೂಡಾ. ನಮ್ಮ ಸಂಸ್ಥೆಗೆ ಮುಂಬರುವ ದಿನದಲ್ಲಿ ಉಜ್ವಲ ಭವಿಷ್ಯವಿದ್ದು, ಈ ನಮ್ಮ ಉದ್ಯೋಗಿಗಳು ಇತಿಹಾಸ ಬರೆಯಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಗ್ರೀಫಿನ್‌ ತನ್ನ ಉದ್ಯೋಗಿಗಳುಗೆ ಹುರಿದುಂಬಿಸುವ ಮಾತನ್ನಾಡಿದ್ದಾರೆ.

ಗ್ರಿಫಿನ್‌ ಅವರು ಕಟ್ಟಿದ ಈ ಸಂಸ್ಥೆ ಫೋರ್ಬ್ಸ್‌ನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲೂ ಸ್ಥಾನ ಪಡೆದಿದೆ. ಗ್ರಿಫಿನ್‌ ಅವರು ವಿಶ್ವದ ಅತ ಶ್ರೀಮಂತರ ಪಟ್ಟಿಯಲ್ಲಿ ೪೦ನೇ ಸ್ಥಾನದಲ್ಲಿದ್ದಾರೆ. ತನ್ನ ಉದ್ಯೋಗಿಗಳಿಗೆ ಈ ಐಷಾರಾಮಿ ಪಾರ್ಟಿ ಏರ್ಪಡಿಸುವುದು ಮಾತ್ರವಲ್ಲ, ಕಲೆ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸುಮಾರು ೧.೫ ಬಿಲಿಯನ್‌ ಡಾಲರ್‌ಗಳಷ್ಟು ಹಣವನ್ನು ದಾನವಾಗಿ ನೀಡಿದ್ದಾರೆ.

ಇತ್ತೀಚೆಗಷ್ಟೆ, ಸಿಡ್ನಿ ಮೂಲದ ಸಂಸ್ಥೆಯೊಂದು ತನ್ನೆಲ್ಲಾ ಉದ್ಯೋಗಿಗಳನ್ನು ಹತ್ತು ದಿನಗಳ ಬಾಲಿ ಪ್ರವಾಸಕ್ಕೆ ಕರೆದೊಯ್ದಿತ್ತು. ಇದೀಗ ಅದಕ್ಕಿಂತಲೂ ಹೆಚ್ಚಿನ ಉದ್ಯೋಗಿಗಳಿರುವ ಬೃಹತ್‌ ಸಂಸ್ಥೆಯೊಂದು ಡಿಸ್ನಿ ವರ್ಲ್ಡ್ ನಂತಹ ಐಷಾರಾಮಿ ಪ್ರವಾಸ ಮಾಡಿಸಿದ್ದು ಸಾಕಷ್ಟು ಸುದ್ದಿಗೆ ಗ್ರಾಸವಾಗಿದೆ.

ಇದನ್ನೂ ಓದಿ | Igloo house | ಹಿಮವೇ ಹಾಸಿಗೆ, ಹಿಮವೇ ಹೊದಿಕೆ! ಮನಾಲಿಯಲ್ಲಿ ಪಡೆಯಿರಿ ಅನುಭವ

Exit mobile version