Site icon Vistara News

Coracle ride | ಬದುಕಿನಲ್ಲೊಮ್ಮೆ ಹಿತವಾದ ತೆಪ್ಪದ ಪಯಣ ತಪ್ಪಿಸಬೇಡಿ!

dandeli coracle ride

ತೆಪ್ಪ ವಿಹಾರ (coracle ride) ಎಂಬುವುದು ಮನಸ್ಸಿಗೆ ಮುದ ನೀಡುವ ಪಯಣ. ಮೋಟಾರಿನ ಸಹಾಯವಿಲ್ಲದೆ, ಪ್ರಶಾಂತವಾಗಿ ಹರಿವ ನೀರಿನಲ್ಲಿ, ಜುಳು ಜುಳು ನಿನಾದ ಕೇಳುತ್ತಾ ಹುಟ್ಟು ಹಾಕುತ್ತಾ ನದಿಯಲ್ಲಿ ಸಾಗುವ ಅನುಭವವೇ ಹಿತಕರ. ನದಿಯ ಸಂಗವೇ ಹಾಗೆ. ಎಲ್ಲ ದುಗುಡಗಳನ್ನು ತೊಳೆದು ಮನಸ್ಸಿಗೆ ಸುಖ ಶಾಂತಿ ನೀಡುವ ಶಕ್ತಿ ಅದಕ್ಕಿದೆ. ಅದರಲ್ಲೂ ವೃತ್ತಾಕಾರದ ಬೆತ್ತದ ತೆಪ್ಪದಲ್ಲಿ ಸುರುಳಿ ಸುತ್ತುತ್ತಾ ಸುತ್ತಲ ಮನಮೋಹಕ ದೃಶ್ಯ ಕಣ್ತುಂಬಿಕೊಳ್ಳುತ್ತಾ ಸಾಗುವುದು ಬದುಕಿನಲ್ಲಿ ಆಗಾಗ ಬೇಕಾಗಿರುತ್ತದೆ. ದೂರದ ಜಾಗಗಳ್ಯಾಕೆ, ನಮ್ಮ ಆಸುಪಾಸಿಲ್ಲೇ ಇಂತಹ ಹಲವು ಜಾಗಗಳಿವೆ. ಒಂದು ವೀಕೆಂಡಿನಲ್ಲಿ ಸುತ್ತು ಹಾಕಿ ಬಂದಾಗ ದಿನನಿತ್ಯದ ಜಂಜಾಟಕ್ಕೆ ಮತ್ತೆ ಚೈತನ್ಯ ಸಿಗುತ್ತದೆ. ಮತ್ತೊಂದಿಷ್ಟು ಕಾಲ ಉಲ್ಲಾಸದಾಯಕವಾಗಿ ಕೆಲಸ ಮಾಡಲು ಉಮೇದು ಬರುತ್ತದೆ. ಹಾಗಾದರೆ, ಅಂತಹ ವೃತ್ತಾಕಾರದ ತೆಪ್ಪದ ಪಯಣಕ್ಕೆ ನಮ್ಮ ಸುತ್ತಮುತ್ತಲೇ ಎಲ್ಲೆಲ್ಲಿ ಹೋಗಬಹುದು ಎಂದು ನೋಡೋಣ.

೧. ಹೊಗೆನಕಲ್:‌ ಇದು ತಮಿಳುನಾಡಿನಲ್ಲಿದ್ದರೂ, ಕರ್ನಾಟಕಕ್ಕೆ ಅಂದರೆ ಬೆಂಗಳೂರಿಗೆ ಅತ್ಯಂತ ಹತ್ತಿರದಲ್ಲಿರುವ ಪ್ರವಾಸಿ ತಾಣ. ಬೆಂಗಳೂರಿನಿಂದ ಸುಮಾರು ೧೭೦ ಕಿಮೀ ದೂರದಲ್ಲಿದ್ದು, ಸುಮಾರು ಮೂರು ಗಂಟೆಗಳ ಹಾದಿಯ ಪಯಣವಿದು. ದಕ್ಷಿಣ ಭಾರತದ ನಯಾಗರ ಎಂದೇ ಹೆಸರಾಗಿರುವ ಬಹಳ ಸುಂದರವಾದ ಜಲಪಾತವಿದು. ಹೊಗೆ ಮತ್ತು ಕಲ್ಲು ಎಂಬ ಎರಡು ಪದಗಳಿಂದ ಹುಟ್ಟಿಕೊಂಡಿರುವ ಈ ಸ್ಥಳದ ಹೆಸರೇ ಹೇಳುವ ಹಾಗೆ, ಶಿಲೆಗಳ ಮೇಲೆ ನೀರು ಧುಮ್ಮಿಕ್ಕಿ ಸದಾ ಮಂಜು ಮಿಶ್ರಿತ ಹೊಗೆಯಂತ ವಾತಾವರಣವನ್ನು ಸೃಷ್ಟಿಸಿದ ಜಾದೂ ತಾಣವಿದು. ಇಂಥ ಹೊಗೆನಕಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಇಲ್ಲಿನ ತೆಪ್ಪದ ಪಯಣ. ನೂರಾರು ಅಂಬಿಗರು ಇಲ್ಲಿ ವೃತ್ತಾಕಾರದ ಬೆತ್ತದ ತೆಪ್ಪಗಳನ್ನು ಹಿಡಿದು ಪ್ರವಾಸಿಗರಿಗಾಗಿ ಕಾಯುತ್ತಾರೆ. ತೆಪ್ಪಗಳಲ್ಲಿ ಕುಳಿತು, ಬೃಹತ್‌ ಶಿಲೆಗಳ ಮಧ್ಯದಲ್ಲಿ ಹರಿವ ಕಾವೇರಿಯ ಮಡಿಲಲ್ಲಿ ಸಾಗುವುದೇ ಒಂದು ಚಂದನೆಯ ಅನುಭವ. ಸಾಗುವಾಗ ಹಾದಿ ಮಧ್ಯೆ ಜಲಪಾತಗಳು ಸಿಕ್ಕು ಅವುಗಳ ನೀರು ಮುಖಕ್ಕೆ ಚಿಮ್ಮುವಾಗ ಆಗುವ ಅನುಭೂತಿಯೇ ಫ್ರೆಶ್‌ ಫೀಲ್‌ ಕೊಡುತ್ತದೆ. ವೀಕೆಂಡಿನ ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದಂತಹ ಜಾಗ.

೨. ಹಂಪಿ: ಹಂಪಿಯೂ ಕೂಡಾ ಇಂಥ ತೆಪ್ಪದ ಪಯಣಕ್ಕೆ ಹೇಳಿ ಮಾಡಿಸಿದ ಜಾಗ. ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯದ ಭವ್ಯ ಇತಿಹಾಸವನ್ನು ಕಣ್ತುಂಬಿಕೊಂಡು, ಐತಿಹಾಸಿಕ ಕಥೆಗಳ್ನು ಕೇಳುತ್ತಾ ನಿಸರ್ಗದ ಮಡಿಲಲ್ಲಿ ಸಂತೋಷ ಅನುಭವಿಸಬೇಕೆಂದರೆ ಅದಕ್ಕೆ ಈ ತೆಪ್ಪಕ್ಕೇ ಬರಬೇಕು. ಸಂಜೆಯ ಹೊತ್ತು, ಸೂರ್ಯಾಸ್ತವನ್ನು ಅನುಭವಿಸುತ್ತಾ ಹಂಪೆಯ ಸೌಂದರ್ಯವನ್ನು ಒಳಗೆಳೆದುಕೊಳ್ಳುತ್ತಾ ತೆಪ್ಪದ ಮೇಲೆ ಮೈಚೆಲ್ಲಿದರೆ ಆಹಾ ಅನುಭವ. ಒಂದು ದಿನ ಸಂಪನ್ನವಾದ ಖುಷಿ.

೩. ಶ್ರೀರಂಗಪಟ್ಟಣ: ಮೈಸೂರಿನಲ್ಲಿ ಅಡ್ಡಾಡಿ ಶ್ರೀರಂಗಪಟ್ಟಣಕ್ಕೆ ಬಂದಿರೆಂದರೆ, ಒಮ್ಮೆಯಾದರೂ ಇಲ್ಲಿ ತೆಪ್ಪದಲ್ಲಿ ಕೂರಬೇಕು. ಮೈಸೂರಿನಿಂದ ಸುಮಾರು ೨೦ ಕಿಮೀ ದೂರದಲ್ಲಿರುವ ಇಲ್ಲಿ ಶ್ರೀರಂಗನಾಥ ಸ್ವಾಮಿ ದೇವರನ್ನು ದರ್ಶನ ಮಾಡಿಕೊಂಡು ಸಂಜೆಯ ತಂಪಿನಲ್ಲಿ ತೆಪ್ಪದಲ್ಲಿ ಕೂತು ಕರಿಘಟ್ಟದ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಗಂಜಾಂ ಪ್ರದೇಶದಲ್ಲಿ ಬೇಕಾದಷ್ಟು ತೆಪ್ಪಗಳು ಸಿಗುತ್ತಿದ್ದು, ಸುಮಾರು ಅರ್ಧ ಗಂಟೆ ಖುಷಿಯಾಗಿ ಕಾಲ ಕಳೆಯಬಹುದು.

೪. ತಲಕಾಡು: ಪ್ರವಾಸಿಗರಿಂದ ಗಿಜಿಗುಡುವ ತಲಕಾಡು ಶಾಪಗ್ರಸ್ಥ ಊರು. ಕಾವೇರಿ ತೀರದಲ್ಲಿರುವ ಇದು ಒಂದು ಕಾಲದಲ್ಲಿ ಶಾಪದಿಂದಾಗಿ ಅಷ್ಟೂ ಅದ್ಭುತ ದೇವಾಲಯಗಳು ಮರಳಿನಲ್ಲಿ ಹೂತುಹೋಯಿತು ಎಂಬ ಕಥೆಯೂ ಇದರದ್ದು. ಇಲ್ಲೂ ತೆಪ್ಪದಲ್ಲಿ ಕಾವೇರಿಯಲ್ಲಿ ವಿಹಾರ ಮಾಡಿಕೊಂಡು ಬರುವ ಅವಕಾಶವಿದೆ.

೫. ದಾಂಡೇಲಿ: ಕರ್ನಾಟಕದಲ್ಲಿದ್ದರೂ ಗೋವಾಕ್ಕೆ ಹತ್ತಿರದಲ್ಲಿರುವುದರಿಂದ ದಾಂಡೇಲಿ ಯಾವಾಗಲೂ ಗೀವಾ ಪ್ರವಾಸಿಗರ ಲಿಸ್ಟಿನಲ್ಲಿ ಬಂದು ಹೋಗುವ ತಾಣ. ಸಾಹಸಪ್ರಿಯರಿಗೆ ಹೇಳಿ ಮಾಡಿಸಿದ ಜಾಗ. ದಟ್ಟ ಕಾಡಿನ, ಶಾಂತಿ ಪ್ರಿಯರಿಗೆ ಸಕಲವನ್ನೂ ಉಣಬಡಿಸುವ ಇಲ್ಲಿ ಯ್ರಾಫ್ಟಿಂಗ್‌, ಮೌಂಟೇನ್‌ ಬೈಕಿಂಗ್‌, ಟ್ರೆಕ್ಕಿಂಗ್‌, ಕಯಾಕಿಂಗ್‌, ಸೈಕ್ಲಿಂಗ್‌ ಹೀಗೆ ಹತ್ತು ಹಲವು ಮೈನವಿರೇಳಿಸುವ ರೋಮಾಂಚಕ ಅನುಭವ ನೀಡುವ ಆಯ್ಕೆಗಳು ದೊರೆಯುತ್ತವೆ. ಆಯ್ಕೆ ಮಾಡುವ ಸ್ವಾತಂತ್ರ್ಯ ಪ್ರವಾಸಿಗರಿಗೆ ಬಿಟ್ಟಿದ್ದು. ಜೊತೆಗೆ ಸಾಮಾನ್ಯವಾಗಿ ಎಲ್ಲರೂ ಮಾಡಬಹುದಾದ ತೆಪ್ಪದ ಪಯಣವೂ ಇಲ್ಲಿದೆ. ಚಿರತೆಯಿಂದ ಹಿಡಿದು ಎಲ್ಲ ಬಗೆಯ ಪ್ರಾಣಿಗಳೂ ಇಲ್ಲಿರುವುದರಿಂದ ಇದು ಪ್ರಕೃತಿ ಪ್ರಿಯರಿಗೊಂದು ಕಂಪ್ಲೀಟ್‌ ಪ್ಯಾಕೇಜ್‌.

ಇದನ್ನೂ ಓದಿ | Life tour | ಆನ್‌ಲೈನ್‌ ಕ್ಲಾಸ್‌ ಬಿಡಿಸಿ ಪ್ರವಾಸದ ಮೂಲಕ ಬದುಕಿನ ಪಾಠ ಹೇಳಿದ ಅಮ್ಮ!

Exit mobile version