Site icon Vistara News

Travel Tips | ನೀವು ಅಲೆಮಾರಿಗಳೇ? ಹೊಸ ಬಗೆಯ ಪ್ರವಾಸಕ್ಕೆ 5 ಅಣಿಮುತ್ತುಗಳು!

travel tips

ಬಹಳ ಸಾರಿ ವರ್ಷವೊಂದು ಹೇಗೆ ಕಣ್ಣು ಮುಚ್ಚುವುದರೊಳಗೆ ಮುಗಿದುಹೋಗಿ ಬಿಡುತ್ತದೆ ಎಂಬುದೇ ಗೊತ್ತಾಗುವುದಿಲ್ಲ. ೨೦೨೨ ಬಂದಷ್ಟೇ ವೇಗವಾಗಿ ಮುಗಿದು ೨೦೨೩ ಬಂದಿದೆ. ಅನೇಕ ಮಂದಿ, ಕಳೆದ ವರ್ಷ ಮಾಡಲಾಗದಿದ್ದುದನ್ನು ಈ ವರ್ಷವಾದರೂ ಮಾಡಬೇಕು ಅಂದುಕೊಂಡಿರುತ್ತಾರೆ. ಮುಖ್ಯವಾಗಿ ಪ್ರವಾಸಪ್ರಿಯರು, ತಮ್ಮ ಪಟ್ಟಿಯಲ್ಲಿ ಒಂದಿಷ್ಟು ತಾಣಗಳನ್ನು ಗುರುತು ಮಾಡಿಕೊಂಡು ಈ ವರ್ಷ ಇಷ್ಟಾದರೂ ಪ್ರವಾಸ ಮಾಡಬೇಕು ಎಂದುಕೊಳ್ಳುವುದೇನೋ ನಿಜ. ಆದರೆ ಅನೇಕರಿಗೆ ಕಂಡ ಕನಸನ್ನು ನನಸಾಗಿಸಲು ಸಾಧ್ಯವಾಗುವುದಿಲ್ಲ!

ಪ್ರವಾಸ ಪ್ರಿಯರಿಗೆ ಪ್ರತಿ ಹೊಸ ವರ್ಷ ಬಂದಾಗಲೂ ಟ್ರಾವೆಲ್‌ ರೆಸೊಲ್ಯೂಷನ್‌ ಸಿದ್ಧವಾಗುತ್ತದೆ. ಒಂದಿಷ್ಟು ಜಾಗಗಳ ಪಟ್ಟಿ ಮಸ್ತಕದಲ್ಲಿ ಭದ್ರವಾಗಿ ಕೂತಿರುತ್ತದೆ. ಹೋಗಲಾಗದೆ ಉಳಿದ ಜಾಗಗಳ ಪಟ್ಟಿ ದೊಡ್ಡದಿರುತ್ತದೆ. ಹಾಗಾದರೆ, ಇಂತಹ ಪ್ರವಾಸೀ ಪ್ರಿಯರು, ತಮ್ಮ ಪ್ರವಾಸದ ಬಗೆಯನ್ನು, ವಿಧಾನವನ್ನು ಈ ವರ್ಷ ಹೇಗೆ ಪರಿಣಾಮಕಾರಿಯಾಗಿ ಬದಲಾಯಿಸಿಕೊಂಡು ವರ್ಷಾಂತ್ಯದಲ್ಲಿ ಒಂದಿಷ್ಟು ಬದಲಾದ ಮನೋಭಾವದೊಂದಿಗೆ ಸಂತೃಪ್ತಿ ಪಡೆಯಬಹುದು. ನಿಮ್ಮನ್ನು ನೀವು ಉತ್ತಮ ಪ್ರವಾಸಿಗರಾಗಿ ಈ ವರ್ಷ ಹೇಗೆ ಬದಲಾಯಿಸಿಕೊಳ್ಳಬಹುದು ನೋಡೋಣ.

೧. ಪ್ರವಾಸಿ ಪ್ರಿಯರಿಗೆ ಬ್ಯಾಕ್‌ಪ್ಯಾಕಿಂಗ್‌ ಪದ ಹೊಸತಲ್ಲ. ಕಡಿಮೆ ಬಜೆಟ್‌ನ, ಪಾಕೆಟ್‌ ಫ್ರೆಂಡ್ಲೀ ಟ್ರಾವೆಲ್‌ ಇದು. ಬ್ಯಾಗೊಂದನ್ನು ಹೆಗಲಿಗೇರಿಸಿ, ಹೆಚ್ಚು ಪ್ಲಾನ್‌ ಮಾಡಿಕೊಳ್ಳದೆ, ಬಂದದ್ದನ್ನು ಬಂದಂತೆ ಸ್ವೀಕರಿಸುವ ಮನೋಭಾವವನ್ನು ಬೆಳೆಸುವ ಈ ಬಗೆಯ ಟ್ರಾವೆಲ್‌ ಅನುಭವದ ಮೂಟೆಯನ್ನೇ ಮೊಗೆಮೊಗೆದು ಕೊಡುತ್ತದೆ.

೨. ಟ್ರಾವೆಲರ್‌ ಆಗಿ, ಟೂರಿಸ್ಟ್‌ ಅಲ್ಲ! ಟ್ರಾವೆಲರ್‌ ಪದಕ್ಕೂ ಟೂರಿಸ್ಟ್‌ ಪದಕ್ಕೂ ವ್ಯತ್ಯಾಸವಿದೆ. ಹೆಚ್ಚು ತಲೆಕೆಡಿಸಿಕೊಳ್ಳದೆ, ಪ್ಯಾಕೇಜೊಂದನ್ನು ಆಯ್ಕೆ ಮಾಡಿ, ಅವರು ಹೇಳಿದ ದುಡ್ಡು ಕೊಟ್ಟು, ಅವರು ಹಾಕಿಕೊಟ್ಟ ತಾಣಗಳಿಗೆ ಭೇಟಿ ಕೊಟ್ಟು, ಚಂದದೊಂದು ಹೋಟೇಲಲ್ಲಿ ಉಳಿದುಕೊಂಡು ಬಂದರೆ ನೀವು ಟೂರಿಸ್ಟ್‌. ಆದರೆ ಟ್ರಾವೆಲರ್‌ ಹಾಗಲ್ಲ. ನೀವು ಇಲ್ಲಿ ಪ್ಯಾಕೇಜಿನ ಮೊರೆ ಹೋಗುವುದಿಲ್ಲ. ನೀವು ಹೋಗುವ ತಾಣದ ಪ್ರಮುಖ ಜಾಗಗಳನ್ನು ನೋಡಿ ಸುಮ್ಮನೆ ಕೂರುವುದಿಲ್ಲ. ಆ ಊರಿನಲ್ಲಿ ಸಹಜವಾಗಿ ಅವರಂತೇ ಇದ್ದು, ಜನರೊಂದಿಗೆ ಬೆರೆತು, ಅಲ್ಲಿನ ಆಹಾರವನ್ನು ಟ್ರೈ ಮಾಡಿ, ಒಂದಿಷ್ಟು ಹೊಸ ವಿಷಯಗಳನ್ನು ಕಲಿತು, ಸಿಕ್ಕ ಜಾಗದಲ್ಲಿ ಉಳಿದುಕೊಂಡು ಹೊಸ ಬಗೆಯ ಅನುಭವಗಳಿಗೆ ತೆರೆದುಕೊಳ್ಳುತ್ತಾ ಹೊಸ ಜಾಗದಲ್ಲಿ ಅಲ್ಲಿನ ಹೋಂಸ್ಟೇಗಳಲ್ಲಿ ಇದ್ದುಕೊಂಡು ಹೊಸ ಅನುಭವಗಳೊಂದಿಗೆ ಮರಳುವ ಮನಸ್ಸು ಮಾಡಿದರೆ, ನೀವು ಟ್ರಾವೆಲರ್.‌ ಟೂರಿಸ್ಟ್‌ ಆಗಿದ್ದರೆ ಟ್ರಾವೆಲರ್‌ ಆಗಿ ಬದಲಾಗುವ ಕನಸು ಕಾಣಿ! ಆಗ ದಕ್ಕುವ ಪ್ರವಾಸದ ಅನುಭವವೇ ಬೇರೆ!

ಇದನ್ನೂ ಓದಿ | Desert travel | ಭಾರತದಲ್ಲಿದ್ದೂ ಚಳಿಗಾಲದಲ್ಲಿ ಮರಳುಗಾಡು ನೋಡದಿದ್ದರೆ ಹೇಗೆ?!

೩. ಸ್ಥಳೀಯರಿಗೆ ಬೆಲೆ ಕೊಡಿ. ಮಧ್ಯವರ್ತಿಗಳನ್ನು ಬಿಡಿ. ಸ್ಥಳೀಯ ಆಹಾರ, ಸ್ಥಳೀಯರ ಹೋಂಸ್ಟೇ, ಸ್ಥಳೀಯ ಗೈಡುಗಳು ಹೀಗೆ ಅಲ್ಲಿನ ಮಂದಿಗೆ ಸಹಾಯವಾಗಿ. ಅಲ್ಲಿನ ಮಂದಿ ಮಾಡಿದ ಕರಕುಶಲ ವಸ್ತುಗಳನ್ನು ಅಂಥ ಮಾಡುವ ಜಾಗಕ್ಕೆ ಹೋಗಿ ನೋಡಿ ಖರೀದಿಸಿ. ಅಲ್ಲಿನ ಜನಜೀವನ ಗಮನಿಸಿ. ಹೊಟ್ಟೆಪಾಡಿಗೆ ಅವರು ಪ್ರವಾಸೋದ್ಯಮವನ್ನು ನೆಚ್ಚಿಕೊಂಡರೆ, ನೀವು ಮಾಡುವ ಈ ಕೆಲಸ ಅಲ್ಲಿನ ಮಂದಿಯ ನಿತ್ಯಜೀವನಕ್ಕೆ ಎಷ್ಟು ಸಹಕಾರಿ ಎಂಬುದನ್ನು ಅರಿಯಿರಿ. ಸ್ಥಳೀಯರನ್ನು ಬೆಳೆಸಿ.

air travel

೪. ಮೊದಲೇ ಸರಿಯಾದ ಪ್ಲಾನ್‌ ಮಾಡಿ. ಇದು ನಿಮ್ಮ ಬಜೆಟ್‌ಗೂ ಒಳ್ಳೆಯದು. ಪ್ಯಾಕೇಜನ್ನು ಬಿಟ್ಟು ನೀವೇ ಪ್ಲಾನ್‌ ಮಾಡಿ. ಹೋಗುವ ಜಾಗದ ಬಗೆಗೆ ಅಂತರ್ಜಾಲದಲ್ಲಿ ಸಾಕಷ್ಟು ಓದಿ ತಿಳಿದುಕೊಳ್ಳಿ. ಮೊದಲೇ ತಿಳಿದುಕೊಂಡಿರುವುದು ನಿಮ್ಮ ಪ್ರವಾಸವನ್ನು ಇನ್ನೂ ಉತ್ತಮವಾಗಿಸುತ್ತದೆ.

೫. ಆದಷ್ಟೂ ಸರಳವಾಗಿರಲು ಪ್ರಯತ್ನಿಸಿ. ಬಹಳಷ್ಟು ಮಂದಿ ಪ್ರವಾಸದ ಸಂದರ್ಭ ಅತಿಯಾಗಿ ಪ್ಯಾಕ್‌ ಮಾಡುತ್ತಾರೆ. ಬಗೆಬಗೆಯ ಚಪ್ಪಲಿಗಳು, ಮ್ಯಾಚಿಂಗ್‌ ದಿರಿಸು, ಅಗತ್ಯಕ್ಕಿಂತ ಹೆಚ್ಚು ಬಟ್ಟೆಬರೆ ಇತ್ಯಾದಿ ಇತ್ಯಾದಿಗಳ ಲಗೇಜು ಹೆಚ್ಚಾಗುತ್ತದೆ. ಸರಿಯಾಗಿ ಹಾಗೂ ಲೈಟಾಗಿ ಪ್ಯಾಕು ಮಾಡಿಕೊಳ್ಳುವುದೂ ಒಂದು ಕಲೆ. ಆ ಕಲೆಯನ್ನು ಮೊದಲು ಕರಗತ ಮಾಡಲು ಪ್ರಯತ್ನಿಸಿ. ಕಡಿಮೆ ವಸ್ತುಗಳು ಹಾಗೂ ಅಗತ್ಯ ಹಾಗೂ ಕಂಫರ್ಟ್‌ ಇವನ್ನು ಮುಖ್ಯ ಉದ್ದೇಶವಾಗಿ ಇಟ್ಟುಕೊಂಡು ಪ್ಯಾಕ್‌ ಮಾಡುವುದು ಕಲಿತುಕೊಳ್ಳಿ.

ಇವಿಷ್ಟನ್ನು ಪ್ರವಾಸದ ಸಂದರ್ಭ ಸಾಧಿಸಲು ಪ್ರಯತ್ನಿಸಿಸದರೆ, ಖಂಡಿತವಾಗಿಯೂ ಈ ವರ್ಷ ನೀವು ಪ್ರವಾಸದಲ್ಲಿ ಕಡಿಮೆ ಜಾಗಕ್ಕೆ ಹೋದರೂ, ಒಂದಿಷ್ಟು ಹೊಸ ಅನುಭವ ಹಾಗೂ ಪ್ರಯೋಗಗಳಿಂದ ಬೆಳವಣಿಗೆ ಕಾಣುತ್ತೀರಿ. ಪ್ರವಾಸದ ನಿಜವಾದ ಮಜಾವನ್ನು ಕಾಣುತ್ತೀರಿ. ಪ್ರಯತ್ನಿಸುವುದು ನಿಮ್ಮ ಕೈಯಲ್ಲೇ ಇದೆ. ನಿಮ್ಮ ಅಲೆಮಾರಿತನಕ್ಕೊಂದು ನಿಜವಾದ ಅರ್ಥ ಸಿಗುವುದು ಆಗಲೇ!

ಇದನ್ನೂ ಓದಿ | Solo travel | ಮಹಿಳೆಯರೇ, ಈ ಸ್ಥಳಗಳು ನಿಮ್ಮ ಸೋಲೋ ಪ್ರವಾಸಕ್ಕೆ ಸುರಕ್ಷಿತ!

Exit mobile version