Site icon Vistara News

Kumara parvata: ಟ್ರೆಕ್ಕಿಂಗ್ ಪ್ರಿಯರಿಗೆ good News; ಸುಬ್ರಹ್ಮಣ್ಯದ ಕುಮಾರಪರ್ವತ ಚಾರಣಕ್ಕೆ ಮತ್ತೆ ಅವಕಾಶ

Kumara parvata trekking

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿರುವ ಕುಮಾರಪರ್ವತ ಚಾರಣಕ್ಕೆ (Kumara parvata Trekking) ಮತ್ತೆ ಅವಕಾಶ ನೀಡಲಾಗಿದೆ. ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಚಾರಣಿಗರಿಗೆ ಅವಕಾಶ ಒದಗಿಸಲಾಗಿದೆ ಎಂದು ಅರಣ್ಯ ಇಲಾಖೆ (Forest Department) ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ಮಳೆಗಾಲದಲ್ಲಿ ವಿಪರೀತ ಮಳೆ ಬೀಳುವ ಅವಧಿಯಲ್ಲಿ ಟ್ರೆಕ್ಕಿಂಗ್ ಪ್ರಿಯರ ಹಿತದೃಷ್ಟಿಯಿಂದ ಕುಮಾರಪರ್ವತ ಚಾರಣವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗುತ್ತದೆ. ಬಳಿಕ ಮಳೆ ಕಡಿಮೆಯಾಗುತ್ತಿದ್ದಂತೆಯೇ ನಿಷೇಧ ತೆರವು ಮಾಡಲಾಗುತ್ತದೆ. ಈ ಬಾರಿ ಹೆಚ್ಚು ಮಳೆಯೇ ಬಿದ್ದಿಲ್ಲ. ಇದೀಗ ನಿರ್ಬಂಧಗಳನ್ನು ತೆರವುಗೊಳಿಸಿ ಕೆಲವು ಷರತ್ತುಗಳೊಂದಿಗೆ ಮತ್ತೆ ಚಾರಣಕ್ಕೆ ಅವಕಾಶ ನೀಡಲಾಗಿದೆ.

ಕುಮಾರಪರ್ವತ ಚಾರಣಕ್ಕೆ ಮೇ ಅಂತ್ಯದಿಂದ ಸೆಪ್ಟಂಬರ್‌ 29ರವರೆಗೆ ನಿರ್ಬಂಧ ವಿಧಿಸಲಾಗಿತ್ತು. ಸೆಪ್ಟಂಬರ್‌ 29 ರಿಂದ ಮತ್ತೆ ಅವಕಾಶ ಮಾಡಿಕೊಡಲಾಗಿತ್ತಾದರೂ, ಮಳೆ ಬೀಳುತ್ತಿದ್ದ ಪರಿಣಾಮ ಅಕ್ಟೋಬರ್‌ 3ರಿಂದ ಮತ್ತೆ ತಾತ್ಕಾಲಿಕವಾಗಿ ಚಾರಣಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಇದೀಗ ಅಕ್ಟೋಬರ್‌ 7ರ ಶನಿವಾರದಂದು ಮತ್ತೆ ಅವಕಾಶ ನೀಡಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಈ ನಡುವೆ, ಅರಣ್ಯ ಇಲಾಖೆ ಚಾರಣಿಗರು ಪಾಲಿಸಬೇಕಾದ ಕೆಲವೊಂದು ನಿಯಮಗಳನ್ನು ಕೂಡಾ ಉಲ್ಲೇಖಿಸಿದೆ. ಸ್ವಚ್ಛತೆಗೆ ಪ್ರಾಮುಖ್ಯತೆಯನ್ನು ನೀಡಬೇಕು, ಸುರಕ್ಷತೆ ಬಗ್ಗೆ ಎಚ್ಚರಿಕೆ ವಹಿಸಬೇಕು ಮತ್ತು ಕಾಡುಪ್ರಾಣಿಗಳಿಗೆ ತೊಂದರೆ ನೀಡದಂತೆ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಅರಣ್ಯ ಇಲಾಖೆಯಿಂದಲೂ ಚಾರಣಿಗರಿಗೆ ನೆರವು

  1. ಕುಮಾರಪರ್ವತ ಚಾರಣ ಮತ್ತೆ ಆರಂಭಗೊಂಡಿರುವುದರಿಂದ ಪರ್ವತದ ದಾರಿಯಲ್ಲಿ ಮತ್ತು ಪರ್ವತದಲ್ಲಿ ಸ್ವಚ್ಛತೆ ಕಾಪಾಡಲು ವಿಶೇಷ ವ್ಯವಸ್ಥೆಯನ್ನು ಇಲಾಖೆ ಮಾಡಿದೆ.
  2. ಕುಮಾರಪರ್ವತ, ಗಿರಿಗದ್ದೆ, ಕಲ್ಲಚಪ್ಪರ ಸೇರಿದಂತೆ ಪರ್ವತಾರೋಹಣದ ಹಾದಿಯಲ್ಲಿ ಸ್ವಚ್ಛತೆ ಕಾಪಾಡಲು ಬೇಕಾದ ಸೂಕ್ತ ವ್ಯವಸ್ಥೆ ಮಾಡಲಾಗಿದೆ.
  3. ಸೂಚನಾ ಫಲಕಗಳನ್ನು ಅಲ್ಲಲ್ಲಿ ಅಳವಡಿಸಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡಲಾಗಿದೆ.
  4. ಪ್ಲಾಸ್ಟಿಕ್‌ ಬಾಟಲಿ, ಕವರ್‌‌ಗಳು,ಇತರ ಪ್ಲಾಸ್ಟಿಕ್, ಬಾಟಲಿ ವಸ್ತುಗಳನ್ನು ಕೊಂಡೊಯ್ಯದಂತೆ ನಿರ್ಬಂಧ ವಿಧಿಸಲಾಗಿದೆ.
  5. ಅಲ್ಲಲ್ಲಿ ಕಸದ ತೊಟ್ಟಿಗಳ ವ್ಯವಸ್ಥೆಯನ್ನೂ ಇಲಾಖೆ ಕಲ್ಪಿಸಿದೆ. ಪ್ರವಾಸಿಗರು ಕಟ್ಟುನಿಟ್ಟಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದೂ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Travel Destinations: ಅತೀ ಹೆಚ್ಚು ಪ್ರವಾಸಿಗರನ್ನು ಸೆಳೆದ ವಿಶ್ವದ ಟಾಪ್‌ 10 ದೇಶಗಳಿವು!

ಎಲ್ಲಿದೆ ಕುಮಾರ ಪರ್ವತ?

ಪುಷ್ಪಗಿರಿ ಎಂದೂ ಕರೆಯಲ್ಪಡುವ ಕುಮಾರ ಪರ್ವತವು ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯದಲ್ಲಿ ಅತಿ ಎತ್ತರದ ಶಿಖರವಾಗಿದೆ. ಇದು ಕರ್ನಾಟಕದ 6ನೇ ಅತಿ ಎತ್ತರದ ಶಿಖರವಾಗಿದೆ. ಕುಮಾರ ಪರ್ವತವು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಹತ್ತಿರ ಇದೆ. ಇದು ಸಮುದ್ರ ಮಟ್ಟದಿಂದ ಸುಮಾರು 1712 ಮೀ ಎತ್ತರದಲ್ಲಿದೆ ಹಾಗೂ ಸುಬ್ರಹ್ಮಣ್ಯ ದೇವಸ್ಥಾನದಿಂದ ಸುಮಾರು 13 ಕಿ. ಮೀ ದೂರದಲ್ಲಿದೆ. ಕುಮಾರ ಪರ್ವತವು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗು ಜಿಲ್ಲೆಗಳ ಗಡಿಯಲ್ಲಿ ಇದೆ. ಇಲ್ಲಿಗೆ ಬೆಂಗಳೂರು ಭಾಗದಿಂದ ಭಾರಿ ಸಂಖ್ಯೆಯಲ್ಲಿ ಚಾರಣಿಗರು ಬರುತ್ತಾರೆ.

Exit mobile version