Site icon Vistara News

Hill Station: ಮಾಥೇರಾನ್‌ ಗಿರಿಧಾಮದ ಭೇಟಿಗೆ ಥ್ರಿಲ್‌ ತುಂಬಲು ಬಂದಿದೆ ಪುಟಾಣಿ ವಿಸ್ಟಾಡೋಮ್ ರೈಲು!

vistadome

ಟಾಯ್‌ ಟ್ರೈನ್‌ ಅಥವಾ ಪುಟಾಣಿ ರೈಲು ಎಂಬುದು ಕೇವಲ ಮಕ್ಕಳಿಗೆ ಮಾತ್ರವಲ್ಲ. ಹಿರಿಯರಾದಿಯಾಗಿ ಎಲ್ಲರನ್ನೂ ಮಕ್ಕಳಾಗಿಸಿಬಿಡುವ, ಅದ್ಭುತ ಕಲ್ಪನಾಲೋಕಕ್ಕೆ ಕರೆದೊಯ್ಯುವ ಅಯಸ್ಕಾಂತವದು. ಅದಕ್ಕಾಗಿಯೇ ಇಂದಿಗೂ ಎಂತೆಂತಹ ಥ್ರಿಲ್ಲಿಂಗ್‌ ಸೂಪರ್‌ ಫಾಸ್ಟ್‌ ವಾಹನಗಳ ಸೌಲಭ್ಯಗಳಿದ್ದರೂ, ಪುಟಾಣಿ ರೈಲಿನ ಲೋಕ ಕೊಡುವ ಮಜಾ ಯಾವುದೂ ಕೊಡದು. ಅದರಲ್ಲೂ, ಈ ರೈಲು ಪ್ರಯಾಣದ ಹಾದಿ ದಟ್ಟ ಕಾನನವಾದರೆ ಕಥೆ ಮುಗಿದಂತೆಯೇ. ಮಂಜು ಸುರಿವ ವಾತಾವರಣದಲ್ಲಿ, ಮುಖಕ್ಕೆ ಮುತ್ತಿಕ್ಕುವ ಬೆಳ್ಳನೆಯ ಮಂಜಿನ ಹನಿಯೊಳಗೆ ಕರಗಿಸುತ್ತಾ, ಎರಡೂ ಬದಿಗಳಲ್ಲಿ ಹಬ್ಬಿದ ಹಸಿರನ್ನು ಸೀಳಿಕೊಂಡು ರೈಲು ಹೋಗುತ್ತಿದ್ದರೆ, ಕಿಟಕಿಗೆ ಮುಖ ಕೊಟ್ಟು ಕುಳಿತೆವೆಂದರೆ, ಹೊತ್ತು ಹೋದದ್ದೇ ತಿಳಿಯದು. ಅದಕ್ಕಾಗಿಯೇ, ಎಲ್ಲರನ್ನೂ ಒಮ್ಮೆ ಬಾಲ್ಯಕ್ಕೆ ಕೊಂಡೊಯ್ಯಬಲ್ಲ ಶಕ್ತಿ ಅದಕ್ಕಿದೆ.

ಇಂದಿಗೂ ಕೆಲವೇ ಕೆಲವು ಜಾಗಗಳಲ್ಲಿ ಹಳೆಯ ಮಾದರಿಯ ಪುಟಾಣಿ ರೈಲುಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳಲ್ಲಿ ಪ್ರಯಾಣಿಸುವುದು ಬಹುತೇಕ ಪ್ರವಾಸ ಪ್ರಿಯರ ಬಕೆಟ್‌ ಲಿಸ್ಟಿನ ಬಯಕೆಗಳಾಗಿರುತ್ತವೆ ಎಂದರೆ ತಪ್ಪಲ್ಲ. ಡಾರ್ಜಿಲಿಂಗ್‌ ಟಾಯ್‌ ಟ್ರೈನ್, ಕಾಂಗ್ರಾ ಕಣಿವೆಯ ಪುಟಾಣಿ ರೈಲು, ನೀಲಗಿರಿ ಬೆಟ್ಟಗಳ ಪುಟಾಣಿ ರೈಲು ಹೀಗೆ ಕೆಲವೇ ಕೆಲವು ಇಂದಿಗೂ ಹಳೆಯ ಖುಷಿಯನ್ನು ಜನರಿಗೆ ಉಣಬಡಿಸುತ್ತಿರುವ ರೈಲುಸೇವೆಗಳು. ಇದೀಗ ಈ ಪಟ್ಟಿಗೆ ಹೊಸ ಬಗೆಯ ಇನ್ನೊಂದು ಪುಟಾಣಿ ರೈಲು ಸೇರ್ಪಡೆಯಾಗಿದೆ. ಮೊದಲೇ ಸೇವೆಯಲ್ಲಿದ್ದರೂ ಆಗೀಗ ರದ್ದು ಅನುಭವಿಸುತ್ತಾ ಬಂದಿದ್ದ ಐತಿಹಾಸಿಕ ಮಾಥೆರಾನ್‌ ಪುಟಾಣಿ ರೈಲು ಈಗ ಆಧುನಿಕವಾಗಿ ಸಜ್ಜುಗೊಂಡು ಮತ್ತೆ ಪ್ರವಾಸಿಗರ ಸೇವೆಗೆ ಸಿದ್ಧಗೊಂಡಿದೆ.

ಮಾಥೇರಾನ್‌ ಹೆಸರು ಪ್ರಕೃತಿ ಪ್ರಿಯರಿಗೆ ಹೊಸತೇನೂ ಅಲ್ಲ. ಮುಂಬೈಯಿಂದ 100 ಕಿಮೀ ದೂರದಲ್ಲಿರುವ ಪುಟಾಣಿ ಗಿರಿಧಾಮವಿದು. ಸಹ್ಯಾದ್ರಿ ಬೆಟ್ಟಗಳ ಸಾಲಿನ ಇದು ತನ್ನ ಅದ್ಭುತ ಪ್ರಕೃತಿ ಸೌಂದರ್ಯದಿಂದ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಮಳೆಗಾಲದಲ್ಲಂತೂ ಇದರ ಸೌಂದರ್ಯ ದುಪ್ಪಟ್ಟಾಗುತ್ತದೆ. ಮುಂಬೈ ನಗರಿಯ ಮಂದಿಯ ಪಾಲಿಗಿದು ಪಕ್ಕದಲ್ಲೇ ಕೈಗೆಟಕುವ ಸ್ವರ್ಗ. ಇಂಥ ಮಾಥೇರಾನ್‌ ನೋಡಿ ಬರುವ ಕನಸಿದ್ದರೆ ಈಗ ನೀವು ಈ ಪುಟಾಣಿ ರೈಲನ್ನು ಆಯ್ಕೆ ಮಾಡಬಹುದು. ಅದರಲ್ಲೂ ಐಷಾರಾಮಿ ಸುತ್ತಲೂ ಗಾಜಿನ ಕಿಟಕಿಗಳಿಂದಾವೃತವಾದ ವಿಸ್ಟಾಡೋಮ್‌ ಕೋಚ್‌ ಕೂಡಾ ಆಯ್ಕೆಗೆ ಲಭ್ಯವಿದೆ!

೨೦೧೬ರಲ್ಲಿ ಈ ಪುಟಾಣಿ ರೈಲು ಸೇವೆ ರದ್ದುಗೊಂಡ ಮೇಲೆ ೨೦೧೮ರಲ್ಲಿ ಮತ್ತೆ ಮರು ಉದ್ಘಾಟನೆಗೊಂಡು ಪ್ರಯಾಣ ಆರಂಭಿಸಿತ್ತು. ಆದರೆ, ೨೦೧೯ರಲ್ಲಿ ಭೂಕುಸಿತದ ಕಾರಣದಿಂದ ನಿಂತುಹೋದ ಸೇವೆ, ಮತ್ತೆ ಸರಿಯಾಗಿ ಆರಂಭವಾಗಿರಲಿಲ್ಲ. ಕೇವಲ ನಿರ್ಧಿಷ್ಟ ಎರಡು ನಿಲ್ದಾಣಗಳ ನಡುವೆ ಮಾತ್ರ ಪ್ರಯಾಣ ಲಭ್ಯವಿತ್ತು. ಇದೀಗ ಪೂರ್ಣಪ್ರಮಾಣದಲ್ಲಿ ಮತ್ತಷ್ಟು ಹೊಸ ಸೇವೆಗಳೊಂದಿಗೆ ಮರಳಿದ್ದು ಈ ಬಗ್ಗೆ ಭಾರತೀಯ ರೈಲ್ವೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಪುಟ್ಟದೊಂದು ವಿಡಿಯೋವನ್ನೂ ಹಂಚಿಕೊಂಡಿದೆ. ೨೩ ಸೆಕೆಂಡುಗಳ ಈ ವಿಡಿಯೋ ಜನಮನಸೂರೆಗೊಳ್ಳುತ್ತಿದೆ.

ಇದನ್ನೂ ಓದಿ: Travel Tips: ಹಿಮದೂರುಗಳಲ್ಲಿ ಬದುಕಿನಲ್ಲೊಮ್ಮೆ ಮಾಡಲೇಬೇಕಾದ ಸಾಹಸ ಕ್ರೀಡೆಗಳಿವು!

ಸಾಂಪ್ರದಾಯಿಕ ಮಾದರಿಯ ಈ ನೇರಲ್-‌ ಮಾಥೇರಾನ್‌ ರೈಲು ಚುಕುಬುಕು ಪುಟಾಣಿ ರೈಲಾಗಿದ್ದು ಇದರಲ್ಲಿ ವಿಸ್ಟಾಡೋಮ್‌ ಕೋಚ್‌ ಕೂಡಾ ಇರಲಿದೆ. ಪಶ್ಚಿಮ ಘಟ್ಟಗಳ ಸುಮಾರು ೨೧ ಕಿಮೀ ದೂರಗಳಷ್ಟು ದಟ್ಟ ಕಾಡಿನ ದಾರಿಯಲ್ಲಿ ಕ್ರಮಿಸುವ ಇದು ಕಣ್ಣಿಗೆ ಹಬ್ಬ.

ಭಾರತೀಯ ರೈಲ್ವೆ ಪ್ರಕಾರ, ರೈಲು ಪ್ರಯಾಣ ಪ್ರವಾಸಿಗರಿಗೆ ಹಬ್ಬ. ಪ್ರಕೃತಿ ಸೌಂದರ್ಯವನ್ನು ಮೊಗೆಮೊಗೆದು ಕುಡಿಯಲು ಇದಕ್ಕಿಂದ ಚಂದದ ಅವಕಾಶ ಇನ್ನೊಂದು ಸಿಗಲಾರದು.

ಇದು ನೇರಲ್‌- ಮಾಥೇರಾನ್‌ ಮಧ್ಯೆ ಜುಮ್ಮಪತ್ತಿ, ಪಾವಟರ್‌ಪೈಪ್‌ ಹಾಗೂ ಅಮನ್‌ ಲಾಡ್ಜ್‌ ಎಂಬ ಮೂರು ನಿಲ್ದಾಣಗಳಲ್ಲಿ ಸ್ವಲ್ಪ ಹೊತ್ತಿನ ನಿಲುಗಡೆಯನ್ನು ಹೊಂದಿದೆ. ಈ ಎಲ್ಲ ನಿಲ್ದಾಣಗಳೂ ಸೌರಶಕ್ತಿಯ ಉತ್ಪಾದಕಗಳನ್ನು ಹೊಂದಿದ್ದು ಶಕ್ತಿ ಉತ್ಪಾದಕ ಗಾಳಿಯಂತ್ರಗಳನ್ನೂ ಹೊಂದಿದೆ. ಇವೆಲ್ಲವೂ ರೈಲಿನಲ್ಲಿ ಎಲ್‌ಇಡಿ ಲೈಟಿಂಗ್‌ ಹಾಗೂ ಫ್ಯಾನ್‌ಗಳಿಗೆ ಬಳಕೆಯಾಗಲಿದೆ.

ಈ ನ್ಯಾರೋಗೇಜ್‌ ರೈಲು ಮಾರ್ಗ ಸ್ವಾತಂತ್ರಪೂರ್ವದ್ದಾಗಿದ್ದು, ೧೯೦೦ರಲ್ಲಿ ವಿನ್ಯಾಸ ಮಾಡಲಾಗಿತ್ತು, ರೈಲುಮಾರ್ಗದ ಕಾರ್ಯ ೧೯೦೪ರಲ್ಲಿ ಆರಂಭವಾಗಿ ೧೯೦೭ರಲ್ಲಿ ಅಂತ್ಯಗೊಂಡಿತ್ತು.

ಇದನ್ನೂ ಓದಿ: 7 Wonders Of Karnataka : ಇವೇ ನೋಡಿ ಕರ್ನಾಟಕದ 7 ಅದ್ಭುತಗಳು!

Exit mobile version