Site icon Vistara News

ಪ್ರವಾಸವೆಂದರೆ ಪ್ರಯಾಸ ಪಡುವ Motion sickness ಮಂದಿಗೊಂದಿಷ್ಟು ಗುಟ್ಟು!

travel

ಪ್ರವಾಸ ಇಷ್ಟ, ಆದರೆ, ಅದೇ ಪ್ರವಾಸವೇ ಕಷ್ಟ! ಇಂಥದ್ದೊಂದು ವರ್ಗ ನಮ್ಮ ನಡುವೆ ಸದಾ ಇರುತ್ತದೆ. ಎಂತೆಂಥ ದುರ್ಗಮ ದಾರಿಗಳಿಗೂ ಎದ್ದು ಹೊರಟು ನಿಲ್ಲುವ ಮಂದಿಯನ್ನು ನೋಡಿದರೆ ಇವರಲ್ಲಿ ಕೆಲವರಿಗೆ ಸದಾ ಹೊಟ್ಟೆಯಲ್ಲಿ ಉರಿಯೇನೋ ಆದರೂ, ಪ್ರಯಾಣದ ಹೆಸರೆತ್ತಿದರೆ ಇವರಿಗೆ ಹೊಟ್ಟೆಯಲ್ಲಿ ಅವಲಕ್ಕಿ ಕುಟ್ಟಿದಂತಾಗುತ್ತದೆ. ಯಾಕೆಂದರೆ, ತನಗೆ ಮಾಡಲಾಗುವುದಿಲ್ಲವಲ್ಲ ಎಂಬ ಬೇಸರ. ತನ್ನದೇ ಊರಿನಿಂದ ಒಂದೈವತ್ತು ಕಿಮೀ ದೂರಕ್ಕೆ ಕಾರಿನಲ್ಲೋ, ಬಸ್ಸಿನಲ್ಲೋ ಕೂತು ಒಂದೆರಡು ತಿರುವು ದಾಟುವಷ್ಟರಲ್ಲೇ ತಲೆ ಸುತ್ತು, ವಾಂತಿ ಎಂದು ಪ್ರಯಾಣಕ್ಕೇ ಹೆದರುವ ಎಷ್ಟೋ ಮಂದಿ ಇರುತ್ತಾರೆ. ಇಂಥವರಿಗೆ ಯಾವತ್ತೂ ಪ್ರವಾಸ ಎಂದರೆ ಪ್ರಯಾಸವೇ!

ಮೋಷನ್‌ ಸಿಕ್‌ನೆಸ್‌/ಟ್ರಾವೆಲ್‌ ಸಿಕ್‌ನೆಸ್‌ ಎಂಬ ವಿಚಿತ್ರ ಆರೋಗ್ಯ ಸಮಸ್ಯೆಯೇ ಹಾಗೆ. ಇದು ಗಂಭೀರವಾದ ತೊಂದರೆಯೇನೂ ಅಲ್ಲದಿದ್ದರೂ, ಬಲ್ಲವನಿಗೇ ಗೊತ್ತು ಅದರ ನಿಜವಾದ ಸಮಸ್ಯೆ. ಕಾರು, ಬಸ್ಸು, ದೋಣಿ, ರೈಲು ಏನೇ ಹತ್ತಿ ಒಂದಿಷ್ಟು ದೂರ ಪ್ರಯಾಣ ಮಾಡಲು ತೊಡಗಲಿ, ಅಷ್ಟರವರೆಗೆ ಫಿಟ್‌ ಅಂಡ್‌ ಫೈನ್‌ ಆಗಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ವಿಪರೀತ ಸುಸ್ತಿನಂತೆ ಬಸವಳಿದು ಬಿಡುತ್ತಾನೆ/ಳೆ. ತಿಂದಿದ್ದೆಲ್ಲ ವಾಂತಿಯಾಗುತ್ತದೆ. ʻಎಲ್ಲಿಗಾದರೂ ಹೋಗುವುದಿದೆ, ಆ ದಾರಿ ತಿರುವುಗಳಿಂದ ಕೂಡಿದೆʼ ಎಂದಾದರೆ, ತನ್ನ ಕಥೆ ಮುಗಿದಂತೆಯೇ ಎಂದು ಅಂಥರಿಗೆ ಹೊರಡುವ ಮೊದಲೇ ನಡುಕ ಶುರುವಾಗುತ್ತದೆ. ನಿಂಬೆಹಣ್ಣು, ಟ್ರಾವೆಲ್‌ ಸಿಕ್‌ನೆಸ್‌ ಮಾತ್ರೆ ಎಂದೆಲ್ಲಾ ಮೊದಲೇ ತಯಾರಿ ಶುರುಮಾಡಬೇಕಾಗುತ್ತದೆ.

ಈ ಮೋಷನ್‌ ಸಿಕ್‌ನೆಸ್‌ನಲ್ಲಿಯೂ ವಿಧಗಳಿವೆ. ಯಾವುದೇ ರೀತಿಯ ಪ್ರಯಾಣ, ನೆಲ, ಜಲ, ವಾಯು ಹೀಗೆ ಯಾವುದೇ ಮಾರ್ಗದ ಪ್ರಯಾಣದಿಂದ ಉಂಟಾಗುವ ಆರೋಗ್ಯದಲ್ಲಿ ವ್ಯತ್ಯಯ ಒಂದು ವಿಧವಾದರೆ, ಇನ್ನೊಂದು ತಾವು ಪ್ರಯಾಣಿಸದಿದ್ದರೂ ಪ್ರಯಾಣ/ಚಲನೆಯನ್ನು ಥಿಯೇಟರ್‌ನಲ್ಲೋ, ಟಿವಿಯಲ್ಲೋ ನೋಡುವುದರಿಂದ ಆಗುವ ಅಸಹಜತೆ, ಆರೋಗ್ಯದಲ್ಲಿ ಕಿರಿಕಿರಿ ಇನ್ನೊಂದು ಬಗೆ.

ಇದನ್ನೂ ಓದಿ: Travel tips | ಈ 10 ಮಂದಿ ಜೊತೆಗೆ ಪ್ರವಾಸ ಮಾಡಲೇಬಾರದು!

ಆದರೆ ಒಬ್ಬೊಬ್ಬರ ಅನುಭವ ಇಲ್ಲಿ ಒಂದೊಂದು ಬಗೆ. ಕೆಲವರಿಗೆ ತಲೆ ಸುತ್ತುವುದಷ್ಟೇ ಇದ್ದರೆ, ಇನ್ನೂ ಕೆಲವರಿಗೆ, ವಾಂತಿ, ಜೊಲ್ಲು ವಿಪರೀತ ಉತ್ಪತ್ತಿಯಾಗುವುದು, ಚರ್ಮ ಪೇಲವವಾಗುವುದು, ಹಸಿವು ಇಲ್ಲದಿರುವುದು, ವಿಪರೀತ ಸುಸ್ತಾಗುವುದು, ಉಸಿರಾಟ ಕಷ್ಟವಾದಂತಾಗುವುದು, ತಲೆನೋವು ಹೀಗೆ ಹಲವು ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹಾಗಾದರೆ ಇವು ಆಗುವುದು ಯಾಕೆ? ನಮ್ಮದೇ ಇಂದ್ರಿಯಗಳ ನಡುವಿನ ಸಂಘರ್ಷದಿಂದಾಗಿ ಆಗುವ ಫಲಿತಾಂಶವಿದು. ಮೇಲೆ ಕೆಳಗೆ ಹೋಗುವ ಜೈಂಟ್‌ ವೀಲ್‌ನಲ್ಲಿ ಕೂತಿದ್ದೀರಿ ಎಂದಿಟ್ಟುಕೊಳ್ಳೋಣ. ಕಣ್ಣು ನೋಡುವ ಮೂಲಕ ಮೇಲೆ ಕೆಳಗೆ ಹೋಗುತ್ತಿದ್ದೇವೆ ಎಂದು ಅರ್ಥ ಮಾಡಿಕೊಂಡರೂ ಮಾಂಸಖಂಡಗಳು ಇದನ್ನು ಅರಿತುಕೊಳ್ಳಲು ತಡಮಾಡುತ್ತಿದೆ. ಹೀಗಾಗಿ ಮಿದುಳಿಗೆ ಗೊಂದಲವಾಗಿ ತಪ್ಪುತಪ್ಪಾಗಿ ಸಂದೇಶ ರವಾನಿಸುತ್ತದೆ. ಇದರಿಂದ ತಲೆ ಸುತ್ತಲು, ತಲೆನೋವಾಗಲು, ವಾಂತಿ ಬಂದಂತೆ ಅನುಭವವಾಗಲು ಶುರುವಾಗುತ್ತದೆ.

ಮಹಿಳೆಯರು ಹಾಗೂ ಎರಡರಿಂದ ಹನ್ನೆರಡು ವರ್ಷದ ಮಕ್ಕಳು, ನಿದ್ದೆಯ ತೊಂದರೆ ಇರುವವರು, ಕುಡಿತ ಹಾಗೂ ಸಿಗರೇಟಿನ ಚಟ ಇರುವ ಮಂದಿ, ಮೈಗ್ರೇನ್‌ ಇರುವ ಮಂದಿ, ಗರ್ಭಿಣಿಯರು, ಗಾಳಿಯ ಸಂಚಾರ ಇಲ್ಲದಂತ ಪರಿಸ್ಥಿತಿ ಇದ್ದಾಗ ಈ ಮೋಷನ್‌ ಸಿಕ್‌ನೆಸ್‌ ಕೆಲವೊಮ್ಮೆ ವಿಪರೀತ ಸಮಸ್ಯೆಯಾಗಿ ಪರಿಣಮಿಸಬಹುದು. ಯಾರೇ ಆದರೂ ಇಂಥ ಸಮಸ್ಯೆ ಇರುವವರು, ಆದಷ್ಟೂ ಪ್ರಯಾಣದ ಸಂದರ್ಭ ಆರಾಮವಾಗಿ ಕೂರಬೇಕು. ಸಾಕಷ್ಟು ನೀರು ಕುಡಿಯಬೇಕು. ಓದುವುದು, ಫೋನ್‌ ನೋಡುವುದು, ಬರೆಯುವುದು, ಮೆಸೇಜ್‌ ಮಾಡುವುದು ಇತ್ಯಾದಿಗಳನ್ನು ಚಲನೆಯಲ್ಲಿದ್ದಾಗ ಮಾಡಬಾರದು. ಧೂಮಪಾನ ಬಿಟ್ಟರೆ ಒಳ್ಳೆಯದು. ಪ್ರಯಾಣಕ್ಕೆ ಮೊದಲು ಮದ್ಯಪಾನ ಮಾಡದಿರುವುದು ಒಳ್ಳೆಯದು. ಆದಷ್ಟೂ ಶುದ್ಧಗಾಳಿಯನ್ನು ಉಸಿರಾಡಿ, ಕಿಟಕಿ ತೆರೆದು ಗಾಳಿಗೆ ಮುಖವೊಡ್ಡಿದರೆ, ಬಹಳಷ್ಟು ಆರಾಮವೆನಿಸುತ್ತದೆ. ಇವಷ್ಟೇ ಅಲ್ಲದೆ, ಅಂತಹ ಮಂದಿ ಯಾವತ್ತಿಗೂ ಪ್ರಯಾಣದ ಸಂದರ್ಭ ಇನ್ನೂ ಕೆಲವೊಂದು ಮುಂಚಿತ ತಯಾರಿ ನಡೆಸಿಕೊಂಡು ಹೋದರೆ ಒಳ್ಳೇದು.

ಇದನ್ನೂ ಓದಿ: Spiritual tourism | ದೇಹ, ಮನಸ್ಸುಗಳ ಜತೆಗೆ ಆತ್ಮಕ್ಕೂ ಪ್ರವಾಸ ಬೇಕೆ? ಇಲ್ಲಿವೆ ನೋಡಿ ಐದು ತಾಣಗಳು

ಇದಕ್ಕೆ ಹಲವು ನೈಸರ್ಗಿಕ ಮನೆಮದ್ದುಗಳೂ ಇವೆ. ಅದರಲ್ಲಿ ನಿಂಬೆಹಣ್ಣು ಬಹಳ ಸಾಮಾನ್ಯ ಹಾಗೂ ಪ್ರಸಿದ್ಧ ಮನೆಮದ್ದು. ಇದು ಎಲ್ಲರಿಗೂ ಹೊಂದೀತೆಂದು ಹೇಳುವುದು ಕಷ್ಟ. ಹಾಗಾಗಿ ಇವುಗಳಲ್ಲಿ ಕೆಲವನ್ನು ಪ್ರಯತ್ನಿಸಿ ಯಾವುದು ಹೆಚ್ಚು ಪರಿಣಾಮ ನೀಡುತ್ತದೆ ಎಂದು ನೋಡುವುದು ಉತ್ತಮ.

೧. ಶುಂಠಿ: ಸುಮಾರು ಆರು ಒಂದು ಇಂಚು ದೊಡ್ಡ ಹಸಿ ಶುಂಠಿಯ ಸಿಪ್ಪೆ ಸುಲಿದು, ಪ್ರಯಾಣ ಶುರುವಾಗುವಾಗ ಅದರಿಂದ ಸಣ್ಣ ತುಂಡೊಂದನ್ನು ಬಾಯಲ್ಲಿಟ್ಟುಕೊಂಡು ಚೀಪುತ್ತಾ ಇರುವುದರಿಂದ ಪ್ರಯಾಣದಲ್ಲಿ ತಲೆಸುತ್ತುವುದು, ವಾಂತಿ, ತಲೆನೋವು ಬರದಂತೆ ಸಹಾಯ ಮಾಡುತ್ತದೆ.

೨. ಪೆಪ್ಪರಮಿಂಟ್‌ ತೈಲ:‌ ೨-೩ ಹನಿ ಪೆಪ್ಪರಮಿಂಟ್‌ ತೈಲ (ಪುದಿನ ತೈಲ)ವನ್ನು ಕರ್ಚೀಫಿಗೆ ಹಾಕಿ, ಪ್ರಯಾಣದ ಸಂದರ್ಭ ಇದನ್ನು ಮೂಗಿಗೆ ಹಿಡಿದು ಮೂಸುತ್ತಾ ಇರುವುದರಿಂದ ಈ ಸಮಸ್ಯೆಯಿಂದ ದೂರವಿರಬಹುದು. ಒಂದು ಪುಟ್ಟ ಬಾಟಲಿ ಪುದಿನ ತೈಲವನ್ನು ಯಾವಾಗಲೂ ಬ್ಯಾಗಿನಲ್ಲಿಟ್ಟುಕೊಂಡಿರಿ.

೩. ಶುಂಠಿ ತೈಲ: ಇದೂ ಅಷ್ಟೆ, ಕರ್ಚೀಫಿನಲ್ಲಿ ೨-೩ ಹನಿ ಹಾಕಿ ಮೂಸುತ್ತಾ ಇದ್ದರೆ, ವಾಂತಿ, ತಲೆಸುತ್ತು ನಿಮ್ಮ ಹತ್ತಿರ ಸುಳಿಯುವುದಿಲ್ಲ.

೪. ನಿಂಬೆಹಣ್ಣು: ಪ್ರಯಾಣದುದ್ದಕ್ಕೂ ನಿಂಬೆಹಣ್ಣನ್ನು ಮೂಸುತ್ತಾ ಇರುವುದರಿಂದ ಸಮಸ್ಯೆಯಿಂದ ಪಾರಾಗಬಹುದು.

೫. ಉಪ್ಪಿನಕಾಯಿ ರಸ: ಉಪ್ಪಿನ ಕಾಯಿ ರಸವನ್ನು ಮೂಸುವುದರ ಮೂಲಕವೂ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ.

೬. ವಿಟಮಿನ್:‌ ಬಿ ವಿಟಮಿನ್‌ ಅಂದರೆ, ಬಿ೬, ಬಿ೧೨ಗಳು ಮೋಷನ್‌ ಸಿಕ್‌ನೆಸ್‌ಗೆ ಉತ್ತಮ ಔಷಧಿ. ಬಿ ವಿಟಮಿನ್‌ಯುಕ್ತ ಆಹಾರ ಸೇವನೆ ಇದಕ್ಕೆ ಸ್ವಲ್ಪ ಮಟ್ಟಿನ ಪರಿಹಾರ ನೀಡಬಹುದು. ಮೀನು, ಮಾಂಸ, ಹಾಲು, ಮೊಟ್ಟೆ ಒಳ್ಳೆಯದು.

೭. ಕ್ಯಾಮೋಮೈಲ್‌ ಟೀ: ಬಿಸಿನೀರಿಗೆ ಕ್ಯಾಮೋಮೈಲ್‌ ಪುಡಿ ಹಾಕಿ ಮಾಡಿದ ಹಾಲಿಲ್ಲದ ಚಹಾ ಕುಡಿಯುವುದು ಕೂಡಾ ಈ ಸಮಸ್ಯೆಗೆ ಉತ್ತಮ ಪರಿಹಾರ.

೮. ನೀರು ಕುಡಿಯಿರಿ. ದೇಹದಲ್ಲಿ ಸರಿಯಾಗಿ ನೀರಿನ ಪ್ರಮಾಣ ಇರುವುದು ಇಂಥ ಸಮಸ್ಯೆ ಬರದಂತೆ ತಡೆಯುತ್ತದೆ.

Exit mobile version