Site icon Vistara News

IRCTC Jyotirlinga Yatra: ರೈಲ್ವೆ ಇಲಾಖೆಯಿಂದ ಏಳು ಜ್ಯೋತಿರ್ಲಿಂಗ ವೀಕ್ಷಣೆ ಪ್ರವಾಸ; ದರ ವಿವರ ಇಲ್ಲಿದೆ

IRCTC Jyotirlinga Yatra

ನವದೆಹಲಿ: ಏಕಕಾಲಕ್ಕೆ ಏಳು ಜ್ಯೋತಿರ್ಲಿಂಗಗಳ (seven Jyotirlinga ) ದರ್ಶನ ಮಾಡಬೇಕು ಎಂದು ಬಯಸುವವರಿಗೆ ಶುಭ ಸುದ್ದಿ. ಭಾರತೀಯ ರೈಲ್ವೆ ಊಟೋಪಚಾರ ಮತ್ತು ಪ್ರವಾಸೋದ್ಯಮ ನಿಗಮ (IRCTC) ಭಾರತ್ ಗೌರವ್ ಎಸಿ ಟೂರಿಸ್ಟ್ ಟ್ರೈನ್ (Bharat Gaurav AC Tourist Train) ಮೂಲಕ 7 ಜ್ಯೋತಿರ್ಲಿಂಗ ಯಾತ್ರೆಯ (IRCTC Jyotirlinga Yatra) ಹೊಸ ಪ್ರವಾಸೋದ್ಯಮ ಪ್ಯಾಕೇಜ್ ಅನ್ನು ಪ್ರಕಟಿಸಿದೆ.

ಜ್ಯೋತಿರ್ಲಿಂಗ ಯಾತ್ರೆಯು 2024ರ ಮೇ 22ರಿಂದ ಪ್ರಾರಂಭವಾಗಲಿದ್ದು, 11 ರಾತ್ರಿ, 12 ಹಗಲಿನಲ್ಲಿ ಪೂರ್ಣಗೊಳ್ಳಲಿದೆ ಎಂದು ಐಆರ್‌ಸಿಟಿಸಿ ನಿಗಮ ಹೇಳಿದೆ. ಈ ನಿಗಮ ಪ್ರವಾಸೋದ್ಯಮ ಪ್ಯಾಕೇಜ್ ಕೋಡ್- NZBG35. ಬೆಳಗ್ಗೆ ಚಹಾ, ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಒಳಗೊಂಡಿರುತ್ತದೆ. ಸಸ್ಯಾಹಾರಿ ಆಹಾರವನ್ನು ಮಾತ್ರ ನೀಡಲಾಗುವುದು.

ಇದನ್ನೂ ಓದಿ: Summer Tour: ಬೇಸಿಗೆ ಪ್ರವಾಸಕ್ಕೆ ಸೂಕ್ತ ಈ 5 ಅದ್ಭುತ ಗಿರಿಧಾಮಗಳು!


ಎಲ್ಲಿಗೆ ಭೇಟಿ?

ಈ ಸಂದರ್ಭದಲ್ಲಿ ಏಳು ಜ್ಯೋತಿರ್ಲಿಂಗ ಕ್ಷೇತ್ರಗಳಾದ ಓಂಕಾರೇಶ್ವರ ಜ್ಯೋತಿರ್ಲಿಂಗ, ಮಹಾಕಾಳೇಶ್ವರ ಜ್ಯೋತಿರ್ಲಿಂಗ, ಸೋಮನಾಥ ಜ್ಯೋತಿರ್ಲಿಂಗ, ದ್ವಾರಕಾಧೀಶ ದೇವಸ್ಥಾನ ಮತ್ತು ನಾಗೇಶ್ವರ ಜ್ಯೋತಿರ್ಲಿಂಗ, ಭೇಟ್ ದ್ವಾರಕಾ ತ್ರಯಂಬಕೇಶ್ವರ ಜ್ಯೋತಿರ್ಲಿಂಗ, ಗೃಷ್ಣೇಶ್ವರ ಜ್ಯೋತಿರ್ಲಿಂಗ ಔರಂಗಾಬಾದ್, ಭೀಮಾಶಂಕರ ಜ್ಯೋತಿರ್ಲಿಂಗ, ಪುಣೆ ಸೇರಿದೆ.

ಯಾತ್ರಾರ್ಥಿಗಳೇ ಗಮನಿಸಿ

ಆಸಕ್ತ ಯಾತ್ರಾರ್ಥಿಗಳು ಐಆರ್‌ಸಿಟಿಸಿಯಿಂದ ಜ್ಯೋತಿರ್ಲಿಂಗ ಯಾತ್ರೆಗಾಗಿ ಉದ್ದೇಶಿಸಿರುವ ಭಾರತ್ ಗೌರವ್ ಎಸಿ ಟೂರಿಸ್ಟ್ ರೈಲಿನಲ್ಲಿ ಸ್ಲೀಪರ್ ಕ್ಲಾಸ್, ಥರ್ಡ್ ಎಸಿ ಮತ್ತು ಸೆಕೆಂಡ್ ಎಸಿ ಆಯ್ಕೆ ಮಾಡಬಹುದು.

ದರ ಇಂತಿದೆ

ಟ್ರೈನ್ ಜರ್ನಿ ಸಿಂಗಲ್, ಡಬಲ್, 5-11 ವರ್ಷದ ಮೂವರು ಮಕ್ಕಳಿಗೆ ಇಂತಿದೆ. 2A 48600- 46700 ರೂ. , 3A ರೂ 36700- 35150ರೂ., ಎಸ್ಎಲ್ ರೂ 22150 ನಿಂದ 20800ರೂ.

ನಿಲುಗಡೆ ತಾಣಗಳು

ಐಆರ್‌ಸಿಟಿಸಿ ನಿಗಮದ ಬೋರ್ಡಿಂಗ್/ ಡಿ-ಬೋರ್ಡಿಂಗ್ ಪಾಯಿಂಟ್‌ಗಳನ್ನು ಗುರುತಿಸಿದೆ. ಯೋಗ ನಗರಿ ರಿಷಿಕೇಶ್, ಹರಿದ್ವಾರ, ಮೊರಾದಾಬಾದ್, ಬರೇಲಿ, ಶಹಜಹಾನ್‌ಪುರ, ಹರ್ದೋಯ್, ಲಕ್ನೋ, ಕಾನ್ಪುರ್, ಒಆರ್‌ಐ, ವಿರಂಗನ ಲಕ್ಷ್ಮೀಬಾಯಿ ಮತ್ತು ಲಲಿತ್‌ಪುರ ಜಂಕ್ಷನ್.

ಯಾತ್ರಾ ಪ್ಯಾಕೇಜ್ ಸೇರ್ಪಡೆ

ಒಬ್ಬ ಪ್ರಯಾಣಿಕ ಪ್ಯಾಕೇಜ್ ಅನ್ನು ಬುಕ್ ಮಾಡಬಹುದು. ಆದರೆ ಆ ವ್ಯಕ್ತಿಯು ಡಬಲ್/ ಟ್ರಿಪಲ್ ಆಕ್ಯುಪೆನ್ಸಿಯಲ್ಲಿ ಬುಕ್‌ ಮಾಡಬೇಕಾಗುತ್ತದೆ ಎಂದು ಐಆರ್‌ಸಿಟಿಸಿ ತಿಳಿಸಿದೆ. ಎಲ್ಲಾ ಸಂಚಾರ ಮತ್ತು ದೃಶ್ಯ ವೀಕ್ಷಣೆಯ ಪ್ಯಾಕೇಜ್ ವರ್ಗದ ಪ್ರಕಾರ ಇರುತ್ತದೆ. ನಿಗಮವು ಪ್ರಯಾಣಿಕರಿಗೆ ಪ್ರಯಾಣ ವಿಮೆಯನ್ನು ನೀಡುತ್ತದೆ. ವೃತ್ತಿಪರ ಮತ್ತು ಸ್ನೇಹಪರ ಪ್ರವಾಸದ ಅನುಭವಕ್ಕಾಗಿ ವಿವಿಧ ಸೇವೆಗಳನ್ನು ನೀಡುತ್ತದೆ. ನಿಗಮದ ಟೂರ್ ಮ್ಯಾನೇಜರ್‌ಗಳು ಪ್ರವಾಸದ ಉದ್ದಕ್ಕೂ ಪ್ರವಾಸಿಗರ ಜೊತೆ ಪ್ರಯಾಣಿಸುತ್ತಾರೆ.


ಉತ್ತಮ ಸೌಲಭ್ಯ

ಟ್ರೈನ್ ಜರ್ನಿ ಸ್ಲೀಪರ್ ಕ್ಲಾಸ್ 3AC 2AC ಪ್ರಯಾಣದ ಪ್ರಕಾರ ಬಜೆಟ್ ಗೆ ಹೊಂದಿಕೆಯಾಗುವ ಹೊಟೇಲ್ ಗಳಲ್ಲಿ ರಾತ್ರಿ ತಂಗುವ ವ್ಯವಸ್ಥೆ ಮಾಡಲಾಗುತ್ತದೆ. ಮೂರು ಹೊತ್ತು ಊಟ ಮತ್ತು ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಭಾರತ್ ಗೌರವ್ ರೈಲುಗಳು

ಭಾರತೀಯ ರೈಲ್ವೆಯು ಭಾರತ್ ಗೌರವ್ ಪ್ರವಾಸಿ ರೈಲುಗಳ ಬ್ಯಾನರ್ ಅಡಿಯಲ್ಲಿ ಥೀಮ್ ಆಧಾರಿತ ಸ್ಥಳಗಳಿಗೆ ಪ್ರವಾಸಿ ರೈಲುಗಳನ್ನು ನಿರ್ವಹಿಸುತ್ತದೆ. ರೈಲು ಪ್ರಯಾಣಗಳನ್ನು ವೈವಿಧ್ಯಮಯ ಸ್ಥಳಗಳಿಗೆ ಪರಿಚಯಿಸಲಾಗಿದೆ. ರೈಲ್ವೆ ಸಚಿವಾಲಯವು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಭವ್ಯವಾದ ಐತಿಹಾಸಿಕ ಸ್ಥಳಗಳನ್ನು ಪ್ರದರ್ಶಿಸುವ ಉದ್ದೇಶದಿಂದ ‘ಭಾರತ್ ಗೌರವ್ ರೈಲುಗಳು’ ಪರಿಕಲ್ಪನೆಯನ್ನು ಪರಿಚಯಿಸಿದೆ. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ರೈಲು ನಿಲ್ದಾಣ ಅಥವಾ ರೈಲ್ವೆ ಇಲಾಖೆಯ ವೆಬ್‌ ಸೈಟ್‌ ಸಂಪರ್ಕಿಸಬಹುದು.

Exit mobile version