Site icon Vistara News

ನಿಸರ್ಗದ ಸಂಗೀತವನ್ನೇ ಬಳಸಿಕೊಂಡು ಪ್ರಚಾರ ನಡೆಸುತ್ತಿರುವ ಇಟಲಿ ರೆಸಾರ್ಟ್‌

resorts

ಮಿಲನ್‌: ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ದೇಶಗಳಲ್ಲಿ ರೆಸಾರ್ಟ್‌ಗಳು, ಹೋಟೆಲ್‌ಗಳು ಗ್ರಾಹಕರನ್ನು ಆಕರ್ಷಿಸಲು ಎಲ್ಲಿಲ್ಲದ ಸರ್ಕಾಸ್‌ ಮಾಡುವುದನ್ನು ನೋಡಿದ್ದೇವೆ. ಇದೇ ರೀತಿಯಾಗಿ ಇಟಲಿಯ ಕೂಮಯಾನಲ್ಲಿರುವ ಆಲ್ಪೈನ್‌ ರೆಸಾರ್ಟ್‌ ಹೊಸ ಪ್ರಯೋಗವೊಂದನ್ನು ಮಾಡಿದ್ದು, ಜಗತ್ತಿನ ಗಮನ ಸೆಳೆದಿದೆ.

ತನ್ನ ಸುತ್ತಮುತ್ತಲ ಪ್ರದೇಶದಲ್ಲಿರುವ ಪ್ರಾಣಿ-ಪಕ್ಷಿಗಳು, ಗಿಡ-ಮರಗಳು ಮತ್ತು ಝರಿ-ತೊರೆಗಳಂಥ ನೈಸರ್ಗಿಕ ಶಬ್ದಗಳನ್ನೇ ಬಳಸಿಕೊಂಡು ಈ ರೆಸಾರ್ಟ್‌ ಸಂಗೀತದ ವಾತಾವರಣ ಸೃಷ್ಟಿಸಿದ್ದು, ಈ ಮೂಲಕ ಪ್ರವಾಸಿಗರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಇದರ ಪ್ರಚಾರಕ್ಕೆ ಈ ಸಂಗೀತವನ್ನೇ ಬಳಸಿಕೊಳ್ಳುತ್ತಿದ್ದು, ಈಗಾಗಲೇ ಪರಿಸರಾಸಕ್ತರನ್ನು ಆಕರ್ಷಿಸುತ್ತಿದೆ.

ಸುಂದರ ಪ್ರಾಕೃತಿಕ ತಾಣಗಳಿಗೆ ಪ್ರವಾಸಿಗರನ್ನು ಸೆಳೆಯಲು ಚಂದದ ಫೋಟೊ, ವಿಡಿಯೊಗಳನ್ನು ಬಳಸುವುದು ಸಾಮಾನ್ಯ. ಆದರೆ ಕಣ್ಣಿಗೇನೂ ಕೆಲಸವಿಲ್ಲದೆ ಕೇವಲ ಕಿವಿಗಷ್ಟೇ ಕೆಲಸ ನೀಡುವಂಥ ಪ್ರಚಾರ ತಂತ್ರವನ್ನು ಆಲ್ಪೈನ್‌ ರೆಸಾರ್ಟ್‌ ಅನುಸರಿಸಿದೆ. ಟೂರಿನ್‌ ಮೂಲದ ಮ್ಯಾಕ್ಸ್‌ ಕಾಸಚಿ ಎನ್ನುವ ಸಂಗೀತಗಾರನ ಕಲ್ಪನೆಯಲ್ಲಿ ಈ ಪ್ರಯೋಗ ಮೂಡಿಬಂದಿದೆ.

ಇಟಲಿಯ ಸಬ್‌ಸಾನಿಕಾ ಎನ್ನುವ ರಾಕ್‌ ಬ್ಯಾಂಡ್‌ನ ಸದಸ್ಯರಾಗಿರುವ ಮ್ಯಾಕ್ಸ್‌, ಬ್ಯ್ಲಾಂಕ್‌ ಪರ್ವತದ ತಪ್ಪಲಿನಲ್ಲಿರುವ ಈ ರೆಸಾರ್ಟ್‌ನಲ್ಲಿ ಸದಾ ನೈಸರ್ಗಿಕವಾಗಿ ಕೇಳಿ ಬರುವ ಸಂಗೀತವನ್ನೇ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. ಹಕ್ಕಿಗಳ ಕಲರವದಿಂದ ಹಿಡಿದು, ಪಿಸುಗುಡುವ ಗಾಳಿಯ ಜೊತೆಗೆ ಕಲ್ಲುಗಳ ಮೇಲೆ ಧುಮುಕುವ ನೀರಿನ ಜುಳುಜುಳು ನಾದವನ್ನೂ ಕಿವಿಗಿಂಪಾಗುವಂತೆ ಕಟ್ಟಿಕೊಟ್ಟಿದ್ದಾರೆ.

ರೆಸಾರ್ಟ್‌ನ್‌ ವೆಬ್‌ಸೈಟ್‌ಲ್ಲಿ, ಇಟಲಿಯ ಕೆಲ ಪ್ರವಾಸಿ ತಾಣದಲ್ಲಿ ಮತ್ತು ಜರ್ಮನಿ, ಬೆಲ್ಜಿಯಂ, ಫ್ರಾನ್ಸ್‌, ಬ್ರಿಟನ್‌ ಸೇರಿದಂತೆ ಹಲವಾರು ಐರೋಪ್ಯ ದೇಶಗಳಲ್ಲಿ ಈ ಸಂಗೀತದ ಮೂಲಕ ರೆಸಾರ್ಟ್‌ ಪ್ರಚಾರ ನಡೆಸುತ್ತಿದೆ. ಕಿವಿಗೆ ಗದ್ದಲ ಮಾತ್ರವೇ ಕೇಳಿ ಬೇಸತ್ತಿದ್ದ ನಗರ ಪ್ರದೇಶದ ಜನರನ್ನು ಆಕರ್ಷಿಸಲು ಈ ತಂತ್ರ ಬಳಸಲಾಗಿದೆ.

ಪ್ರಶಾಂತ ವಾತಾವರಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಪ್ರವಾಸಿಗರಿಗಾಗಿಯೇ ಕೆಲವು ರೆಸಾರ್ಟ್‌ಗಳು ವಿಶೇಷ ಸವಲತ್ತು ಕಲ್ಪಿಸುತ್ತಿವೆ. ಇಂಥ ಶಾಂತ ಮತ್ತು ಹಸಿರು ತಾಣಗಳನ್ನು ʻನಿಶ್ಶಬ್ದ ಉದ್ಯಾನಗಳುʼ ಎಂದೇ ಅಮೆರಿಕದಲ್ಲಿ ಗುರತಿಸಲಾಗುತ್ತಿದೆ.

ಇದನ್ನೂ ಓದಿ| Solo Travel: ಸೋಲೋ ಪ್ರವಾಸ ಗೆಲ್ಲೋಕೆ 15 ಸೂತ್ರಗಳು!

Exit mobile version