ಪ್ರವಾಸದ ಬಗ್ಗೆ ಆಸಕ್ತಿ ಇರುವ ಮಂದಿಗೆ ಒಮ್ಮೆಯಾದರೂ ಪ್ರವಾಸದ ಸಂದರ್ಭ, ಈವರೆಗೆ ಪ್ರಪಂಚದಲ್ಲಿರುವ ಹೊಟೇಲುಗಳ ಪೈಕಿ ಅತ್ಯಂತ ಹಳೆಯ ಹೊಟೇಲು ಯಾವುದಿರಬಹುದು ಎಂಬ ಸಣ್ಣ ಕುತೂಹಲ ಹುಟ್ಟಿರಬಹುದು. ಎಷ್ಟೋ ಬಾರಿ, ತಿಂಡಿ ತಿನ್ನಲು ಎಡತಾಕುವ ರೆಸ್ಟೋರೆಂಟು ಅಥವಾ ಯಾವುದೋ ಹೊಸ ಊರಲ್ಲಿ ಉಳಿದುಕೊಳ್ಳಲು ಈಗೆಲ್ಲಾ ಕೂತಲ್ಲೇ ಒಂದೇ ಬೆರಳ ತುದಿಯಲ್ಲೇ ಬುಕ್ ಆಗಿಬಿಡುವ ಹೊಟೇಲುಗಳ ಹೆಸರಿನ ಜೊತೆಗೆ ಇಸವಿಯನ್ನೂ ನಮೂದಿಸಿರುವುದನ್ನು ಗಮನಿಸಿರಬಹುದು. ʻಇಷ್ಟು ವರ್ಷಗಳಿಂದ ನಿಮ್ಮ ಸೇವೆಯಲ್ಲಿʼ ಎಂಬಂತೆ ತಮ್ಮ ಇತಿಹಾಸವನ್ನು ಹೆಮ್ಮೆಯಿಂದ ಹೇಳುವ ಹಲವಾರು ಹೊಟೇಲುಗಳನ್ನೂ, ರೆಸ್ಟೋರೆಂಟುಗಳನ್ನೂ ನಾವು ನಿತ್ಯವೂ ನೋಡುತ್ತೇವೆ. ಬ್ರಿಟೀಷರ ಕಾಲದಲ್ಲೇ ಈ ಹೊಟೇಲು ಹೀಗಿತ್ತಂತೆ, ಇದರ ಒಂದು ಮೂಲೆಯ ಬೆಂಚಿನಲ್ಲಿ ಗಾಂಧಿ ತಾತ ಚಹಾ ಕುಡಿದಿದ್ದರಂತೆ ಎಂಬಂಥ ಹಲವು ಕತೆಗಳನ್ನು ಕೇಳುತ್ತಲೇ ರೋಮಾಂಚಿತರಾಗುತ್ತಾ ಅಂಥ ಹೊಟೇಲಿನ ಹೆಸರಿಗೋಸ್ಕರ ಅಲ್ಲೊಮ್ಮೆ ಭೇಟಿ ಕೊಟ್ಟು, ಒಂದು ಚಹಾವೋ, ಊಟವೋ ಮಾಡಿಕೊಂಡು ಫೋಟೋದೊಂದಿಗೆ ಮರಳಿ ಬರುತ್ತೇವೆ. ಆದರೆ ಎಲ್ಲಾದರೂ ಸಾವಿರದ ಮುನ್ನೂರು ವರ್ಷ ಇತಿಹಾಸ ಹೊಂದಿದ ಹೊಟೇಲಿನ ಬಗ್ಗೆ ಎಲ್ಲಾದರೂ ಕೇಳಿದ್ದೀರಾ? ಇಲ್ಲ ಎಂದಾದರೆ ಇಲ್ಲಿ ಕೇಳಿ!
ಹೌದು. ಸಾವಿರ ವರ್ಷಕ್ಕೂ ಹೆಚ್ಚು ಹಿಂದೆ ಆರಂಭವಾದ ವಿಶ್ವದ ಅತ್ಯಂತ ಹಳೆಯ ಹೊಟೇಲು ಇಂದಿಗೂ ಇದೆ ಎಂಬುದು ಆಶ್ಚರ್ಯವಾದರೂ ಸತ್ಯ! ಆದರೆ ಅದಿರುವುದು ಜಪಾನಿನಲ್ಲಿ. ಮೌಂಟ್ ಫುಜಿಯನ್ನು ನೋಡಿಕೊಂಡೇ ಬೆಳಗು ಮಾಡಬಹುದಾದ ಚಂದದ ಮುದ್ದಾದ ಹೊಟೇಲೊಂದಕ್ಕೆ ಇಂತಹ ಭವ್ಯ ಇತಿಹಾಸವಿದೆ.
ಜಪಾನಿನ ಮಂದಿಗೆ ಮೌಂಟ್ ಫುಜಿಗಿಂತ ಬೇರೆ ಹೆಚ್ಚಿನದಿಲ್ಲ. ಜಪಾನಿಗೆ ಬರುವ ಮಂದಿಗೂ ಅಷ್ಟೇ, ಫುಜಿ ಶಿಖರವನ್ನು ನೋಡದೆ ಮರಳುವ ಮನಸ್ಸಾಗದು, ಜಪಾನ್ ಪ್ರವಾಸ ಪೂರ್ತಿಯಾಗದು. ಹೀಗಾಗಿ, ಜಪಾನಿಗೆ ಬರುವ ಸೆಲೆಬ್ರಿಟಿಗಳಿಗೆಲ್ಲ ಫುಜಿಯ ಜೊತೆಗೆ ಈ ಹೊಟೇಲಿನ ಹುಚ್ಚೂ ಜೊತೆಗೇ ಇದೆ. ಮೌಂಟ್ ಫುಜಿಗಿಂತ ಹೆಚ್ಚೇನೂ ದೂರವಿಲ್ಲದ ಕ್ರಿಸ್ತಶಕ ೭೦೫ರಲ್ಲಿ ಆರಂಭವಾದ ಈ ಹೊಟೇಲಿನ ಹೆಸರು ಕೈಂಯುಕನ್ ಇನ್.
ನಿಶಿಯಾಮಾ ಹಾಟ್‌ಸ್ಪ್ರಿಂಗ್ ಎಂದೇ ಖ್ಯಾತಿವೆತ್ತಿರುವ ಕೈಂಯುಕನ್ ಎಂಬ ಜಪಾನ್‌ನ ಈ ರೆಸಾರ್ಟ್‌ನ ಇನ್ನೊಂದು ವಿಶೇಷವೆಂದರೆ ೧೩೦೦ ವರ್ಷಗಳಿಂದಲೂ ಇದನ್ನು ಆರಂಭಿಸಿದ ಕುಟುಂಬವೇ ಇಂದಿಗೂ ನಡೆಸಿಕೊಂಡು ಬರುತ್ತಿರುವುದು! ಇಲ್ಲಿಯವರೆಗೆ ಈ ಕುಟುಂಬದ ೫೨ ಪೀಳಿಗೆಗಳು ಇದನ್ನು ನಡೆಸಿಕೊಂಡು ಬಂದಿದ್ದು, ಈ ಹೊಟೇಲು ಈಗಲೂ ಚಾಲ್ತಿಯಲ್ಲಿರುವ ವಿಶ್ವದ ಅತ್ಯಂತ ಹಳೆಯ ಹೊಟೇಲ್ ಎಂದು ಗಿನ್ನಿಸ್ ಪುಸ್ತಕದಲ್ಲೂ ತನ್ನ ಹೆಸರು ದಾಖಲಿಸಿದೆ.
ಕ್ರಿಸ್ತಶಕ ೭೦೫ರಲ್ಲಿ ಫುಜಿವಾರ ಮಹಿತೋ ಎಂಬವರು ಈ ಹೊಟೇಲನ್ನು ಆರಂಭಿಸಿದ್ದು ಅಂದಿನಿಂದ ಇವರ ಕುಟುಂಬ ಹೊಟೇಲ್ ಉದ್ದಿಮೆಯನ್ನು ಮುಂದುವರಿಸಿಕೊಂಡು ಬಂದಿದೆ. ಕಾಲಕಾಲಕ್ಕೆ ಈ ಹೊಟೇಲು ಸಾಕಷ್ಟು ಆಧುನಿಕ ಸೌಲಭ್ಯಗಳನ್ನೂ ವಿಸ್ತರಣೆಯನ್ನೂ ಮಾಡಿಕೊಂಡು ಬಂದರೂ, ಇಂದಿಗೂ ಅದೇ ಪೀಳಿಗೆ ಈ ಹೊಟೇಲನ್ನು ಮುಂದುವರಿಸುತ್ತಿರುವುದು ಅತ್ಯಂತ ವಿಶೇಷ.
ಹೊಟೇಲಿನಲ್ಲಿರುವ ಬಿಸಿನೀರಿನ ಬುಗ್ಗೆ ಇಲ್ಲಿನ ಪ್ರಮುಖ ಆಕರ್ಷಣೆ. ನಾಲ್ಕು ನೈಸರ್ಗಿಕವಾದ ಬಿಸಿನೀರಿನ ಬುಗ್ಗೆಯ ಈಜುಕೊಳಗಳು ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುವ ಸೂಜಿಗಲ್ಲು. ಇಷ್ಟೇ ಅಲ್ಲದೆ, ಇಲ್ಲಿನ ಕೋಣೆಗಳಿಂದ ಕಾಣುವ ಅದ್ಭುತ ದೃಶ್ಯಗಳು ಇದರ ಪ್ರಮುಖ ಆಕರ್ಷಣೆ. ೩೭ ಕೋಣೆಗಳಿರುವ ಈ ಹೊಟೇಲಿನಲ್ಲಿ ಉಳಿದುಕೊಳ್ಳಲು ಇದರ ಸದ್ಯದ ಬೆಲೆ ಪ್ರತಿ ರಾತ್ರಿಗೆ ೪೭೦ ಡಾಲರ್. ಅನೇಕ ಖ್ಯಾತನಾಮರು ಈ ಹೊಟೇಲಿನಲ್ಲಿ ಉಳಿದುಕೊಂಡಿದ್ದು, ಹಲವರ ಟಾಪ್ ಪಟ್ಟಿಯಲ್ಲಿ ಇದರ ಹೆಸರಿದೆಯಂತೆ. ಸೆಲೆಬ್ರಿಟಿಗಳು, ಹೆಸರಾಂತ ರಾಜಕಾರಣಿಗಳು, ಉದ್ದಿಮೆದಾರರು, ಕ್ರಿಕೆಟಿಗರು, ಸೇನಾ ಪ್ರಮುಖರು, ಸಿನಿಮಾ ತಾರೆಯರು, ಈ ಹೊಟೇಲಿನ ಐತಿಹಾಸಿಕ ಹಿನ್ನೆಲೆಗಾಗಿ ಹಾಗೂ ಇದಕ್ಕಿರುವ ಬ್ರಾಂಡ್ ಹೆಸರಿನಿಂದಾಗಿ ಈ ಹೊಟೇಲಿನಲ್ಲಿ ಉಳಿದುಕೊಳ್ಳ ಬಯಸುತ್ತಾರಂತೆ. ಸಾಂಪ್ರದಾಯಿಕ ಜಪಾನ್ ವಿನ್ಯಾಸದ ಕೋಣೆಗಳು ಹಾಗೂ ಆಹಾರ ಇಲ್ಲಿನ ಇನ್ನೊಂದು ವಿಶೇಷ.