ಜೀವನದಲ್ಲಿ ಒಮ್ಮೆಯಾದರೂ ಕೇದಾರನಾಥಕ್ಕೆ (Kedarnath Temple) ಹೋಗಬೇಕು ಎಂಬುದು ಬಹಳಷ್ಟು ಮಂದಿಯ ಕನಸು. ಕೇದಾರನಾಥನ ದರ್ಶನವೆಂದರೆ ಕೇವಲ ಎಲ್ಲ ದೇವಾಲಯಗಳಂತೆ ಒಂದು ದೇವರ ದರ್ಶನವಷ್ಟೇ ಎಂದು ಗ್ರಹಿಸಿಕೊಂಡರೆ ತಪ್ಪಾದೀತು. ಹಿಮಾಲಯದ ಮಡಿಲಲ್ಲಿ ಮಲಗಿರುವ ಮಹಾದೇವನನ್ನು ಕಣ್ತುಂಬಿಕೊಳ್ಳುವುದೆಂದರೆ ಅದೊಂದು ದಿವ್ಯ ಅನುಭವ. ಕಿಲೋಮೀಟರುಗಟ್ಟಲೆ ಹಿಮಚ್ಛಾದಿತ ಪರ್ವತಗಳನ್ನು ನೋಡುತ್ತಾ ಗಿರಿ ಶಿಖರಗಳ ಹಾದಿಯಲ್ಲಿ ಏಕೀಭಾವದಲ್ಲಿ ನಡೆದು ಕೊನೆಗೆ ಕೇದಾರನಾಥನ ದರ್ಶನ ಮಾಡುವುದೇ ಒಂದು ಜೀವನಾನುಭವ.
ಉತ್ತರಾಖಂಡದ ಗಡ್‌ವಾಲ್ ಹಿಮಾಲಯ ಶ್ರೇಣಿಯಲ್ಲಿ ಮೌನವಾಗಿ ನಿಂತ ಕೇದಾರನಾಥ ದೇಗುಲ ಸಮುದ್ರ ಮಟ್ಟದಿಂದ 3,583 ಮೀಟರ್‌ಗಳಷ್ಟು ಎತ್ತರದಲ್ಲಿದೆ. ಕಡು ಚಳಿಯ ದಿನಗಳು ಕಳೆದು ಎಪ್ರಿಲ್ ಅಂತ್ಯದಲ್ಲಿ ಪ್ರತಿ ವರ್ಷ ಕೇದಾರನಾಥ ಭಕ್ತಾದಿಗಳಿಗೆ ತೆರೆಯುತ್ತದೆ. ಈ ವರ್ಷವೂ ಭಕ್ತಾದಿಗಳಿಗೆ ಎಂದಿನಂತೆ ಇದೀಗ ಕೇದಾರನಾಥ ದರ್ಶನ ನೀಡಲು ರೆಡಿಯಾಗಿದ್ದು, ಸರ್ಕಾರ ಕೇದಾರನಾಥ ಹೋಗುವ ಮಂದಿಗೆ ಎಚ್ಚರಿಕೆಯನ್ನೂ ನೀಡಿದೆ. ಕೇದಾರನಾಥ ಹೋಗುವ ಮಂದಿ ಹವಾಮಾನ ಎಚ್ಚರಿಕೆಗೆ ಅನುಗುಣವಾಗಿ ತಮ್ಮ ಪ್ರಯಾಣದ ಯೋಜನೆ ರೂಪಿಸಬೇಕೆಂದು ಹೇಳಿದೆ. ಕೇದಾರನಾಥ ಪರಿಸರದಲ್ಲಿ ಸದ್ಯ ಭಾರೀ ಮಳೆ ಹಾಗೂ ಹಿಮಪಾತವಾಗುತ್ತಿರುವುದರಿಂದ ಹವಾಮಾನ ವರದಿಗಳ ಆಧಾರದಲ್ಲಿ ಜಾಗರೂಕತೆ ವಹಿಸಲು ಪ್ರಯಾಣಿಕರಿಗೆ ಮನವಿಯನ್ನು ಮಾಡಿದೆ. ಸರ್ಕಾರ ಈ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಗಳಿಗಾಗಿ ಆರೋಗ್ಯ ಸೇವೆಗಳನ್ನೂ ಹಾದಿಯಲ್ಲಿ ವ್ಯವಸ್ಥೆ ಮಾಡಿದೆ.
ಕೇದಾರನಾಥಕ್ಕೆ ವರ್ಷಪೂರ್ತಿ ಹೋಗಲಾಗುವುದಿಲ್ಲ. ಒಂದು ನಿಗದಿತ ಸಮಯಕ್ಕಷ್ಟೇ ದೇವಸ್ಥಾನದ ಬಾಗಿಲು ಭಕ್ತಾದಿಗಳಿಗೆ ತೆರೆಯುತ್ತದೆ. ಉಳಿದ ಸಮಯದಲ್ಲಿ ಕೇದಾರನಾಥವಿಡೀ ಹಿಮದಲ್ಲಿ ಮುಚ್ಚಿ ಹೋಗುತ್ತದೆ. ಕೇದಾರನಾಥ ದೇವಾಲಯದ ಮುಖ್ಯ ದೇವರನ್ನು ಈ ಮುಚ್ಚುವ ಸಮಯದಲ್ಲಿ ಅಂದರೆ ನವೆಂಬರ್ ತಿಂಗಳಿಂದ ಎಪ್ರಿಲ್ ತಿಂಗಳವರೆಗೆ ಉಕ್ಕಿಮಠದ ಓಂಕಾರೇಶ್ವರ ದೇವಸ್ಥಾನಕ್ಕೆ ಕರೆತಂದು ಇಟ್ಟು ಪೂಜೆ ಮಾಡಲಾಗುತ್ತದೆ. ಹಿಮ ಕರಗಿದ ಮೇಲೆ ದೇವರನ್ನು ಮತ್ತೆ ಕೇದಾರನಾಥಕ್ಕೆ ಕರೆದುಕೊಂಡು ಹೋಗಿ, ಭಕ್ತಾದಿಗಳಿಗೆ ಸ್ವಸ್ಥಾನದಲ್ಲಿ ದರ್ಶನ ಒದಗಿಸಲಾಗುತ್ತದೆ.
ಕೇದಾರನಾಥಕ್ಕೆ ನೀವು ರೈಲಿನಲ್ಲಿ ಪ್ರಯಾಣಿಸುವುದಾದರೆ ಹತ್ತಿರದ ರೈಲ್ವೇ ಸ್ಟೇಷನ್ ಎಂದರೆ ಹೃಷಿಕೇಶ. ಹೃಷಿಕೇಶದಿಂದ 215 ಕಿಮೀ ದೂರದ ಗೌರಿಕುಂಡ ಎಂಬಲ್ಲಿಗೆ ಮತ್ತೆ ಬಸ್ಸು ಅಥವಾ ಇನ್ನಾವುದೇ ವಾಹನದ ಮೂಲಕ ಪಯಣಿಸಬಹುದು. ಗೌರಿಕುಂಡದಿಂದ ಕಾಲ್ನಡಿಗೆಯಲ್ಲೆ 18 ಕಿಮೀ ದೂರದ ಕೇದಾರಕ್ಕೆ ಪಯಣಿಸಬೇಕು. ದೇಶದ ಯಾವುದೇ ಮೂಲೆಯಿಂದ ನೀವು ಕೇದಾರಕ್ಕೆ ವಿಮಾನದಲ್ಲಿ ಪಯಣಿಸಬಯಸಿದರೆ, ಡೆಹ್ರಾಡೂನ್‌ಗೆ ವಿಮಾನ ಸೌಲಭ್ಯವಿದೆ. ಅಲ್ಲಿಂದ 239 ಕಿಮೀ ದೂರದ ಗೌರಿಕುಂಡಕ್ಕೆ ಮತ್ತೆ ನೀವು ಬಸ್ಸು ಅಥವಾ ಇನ್ನಾವುದೇ ವಾಹನದ ಮೂಲಕ ಸಾಗಬಹುದು.
ನಡಿಗೆ ಸಾಧ್ಯವಿಲ್ಲ, ಆದರೆ ಕೇದಾರನನ್ನೊಮ್ಮೆ ನೋಡಬೇಕು ಎಂದು ಬಯಸುವವರಿಗೆ ಹೆಲಿಕಾಪ್ಟರ್ ಸೇವೆಯೂ ಇದೆ. ಹೆಲಿಕಾಪ್ಟರ್ ಸೇವೆಗೆ ಗುಪ್ತಕಾಶಿ, ಸೆರ್ಸಿ ಅಥವಾ ಫಟಾದಿಂದ ಮುಂಚಿತವಾಗಿ ಬುಕ್ ಮಾಡಬಹುದು. ಹೋಗಲು ಸುಮಾರು 2,500 ರೂಪಾಯಿಗಳು ಒಬ್ಬ ವ್ಯಕ್ತಿಗೆ ಆದರೆ, ಸುಮಾರು 5,000 ರೂಪಾಯಿಗಳಲ್ಲಿ ನಡಿಗೆಯ ಶ್ರಮವಿಲ್ಲದೆ ಹೋಗಿ ಬರಬಹುದು. ಡೆಹ್ರಾಡೂನ್‌ನಿಂದಲೂ ನೇರ ಹೆಲಿಕಾಪ್ಟರ್ ವ್ಯವಸ್ಥೆಯಿದೆ.
ಇದನ್ನೂ ಓದಿ: Kedarnath Yatra: ಏಪ್ರಿಲ್ 25ರಿಂದ ಕೇದಾರನಾಥ ಯಾತ್ರೆ; ದಿನಕ್ಕೆ13 ಸಾವಿರ ಯಾತ್ರಿಕರಿಗೆ ಮಾತ್ರ ದರ್ಶನಕ್ಕೆ ಅವಕಾಶ
ಕೇದಾರನಾಥ ಹೋಗುವಾಗ ದೇಹ ಅಲ್ಲಿನ ಹವಾಮಾನಕ್ಕೆ ಹೊಂದಿಕೊಳ್ಳಲು ಸಮಯ ನೀಡಲೇಬೇಕು. ಅತ್ಯಂತ ಗಡಿಬಿಡಿಯಲ್ಲಿ ಪಯಣ ಶುರು ಮಾಡುವ ಮೊದಲು ದೇಹಕ್ಕೆ ಸರಿಯಾಗಿ ವಿಶ್ರಾಂತಿ ನೀಡಿ ಪಯಣ ಆರಂಭಿಸಿ. ನಡಿಗೆಯಲ್ಲಿ ವಿಪರೀತ ಸುಸ್ತು, ಉಸಿರಾಟಕ್ಕೆ ತೊಂದರೆ ಇತ್ಯಾದಿಗಳ ಅನುಭವವಾದರೆ, ಪಯಣ ಮುಂದುವರಿಸಬೇಡಿ. ಕೆಲಕಾಲ ವಿಶ್ರಮಿಸಿ ಮುಂದುವರಿಯಿರಿ.
ಕೇದಾರನಾಥ ಯಾತ್ರೆಗೆ ಪ್ಯಾಕ್ ಮಾಡುವಾಗ ಆದಷ್ಟು ಕಡಿಮೆ ಪ್ಯಾಕ್ ಮಾಡಿ. ನಿಮ್ಮ ಅಷ್ಟೂ ಸಾಮಾನುಗಳನ್ನು ನೀವು ಹೊತ್ತುಕೊಂಡು ನಡೆಬೇಕಾದ್ದರಿಂದ ಮಿತವಾಗಿ ಪ್ಯಾಕ್ ಮಾಡಿ. ಆದರೆ, ಚಳಿಗೆ ಅಗತ್ಯವಾಗಿ ಬೇಕಾದ ಬೆಚ್ಚನೆಯ ಬಟ್ಟೆಗಳನ್ನು ಮಾತ್ರ ಮರೆಯದಿರಿ. ನೆನಪಿಡಿ, ಇದು ಹಿಮಾಲಯ ಶ್ರೇಣಿಯಲ್ಲಿರುವುದರಿಂದ ಅಲ್ಲಿನ ಹವಾಮಾನಕ್ಕೆ ಅನುಗುಣವಾದ ಬಟ್ಟೆಯ ಆಯ್ಕೆ ಬಹಳ ಮುಖ್ಯ.
ಕೇದಾರನಾಥ ದರ್ಶನ ಜೀವಮಾನದಲ್ಲೊಮ್ಮೆ ಎಂಬ ಅನುಭವ ನೀಡುವ ಪಯಣ. ಅದರ ಪ್ರಯಾಣಕ್ಕೆ ಸಾಕಷ್ಟು ತಯಾರಿ ಅಗತ್ಯ. ದೇಹದಲ್ಲಿ ಕಸುವು ಇದ್ದಾಗ ಒಮ್ಮೆಯಾದರೂ ಚಾರ್ ಧಾಮ್ ಯಾತ್ರೆಯಲ್ಲೊಂದಾದ ಕೇದಾರನ ದರ್ಶನ ಮಾಡಬೇಕು!
ಇದನ್ನೂ ಓದಿ: Kedarnath Temple: ಚಿನ್ನದ ದೇಗುಲವಾದ ಕೇದಾರನಾಥ; ಯಾತ್ರೆ ಸಮಯದಲ್ಲಿಯೇ ಚಿನ್ನದ ಕಳಸ ಪ್ರತಿಷ್ಠಾಪನೆ