ನಂಬಿದರೆ ನಂಬಿ ಬಿಟ್ಟರೆ ಬಿಡಿ. ಇಲ್ಲಿ ಚಾರ್ಲಿಯ ಕತೆ ಹೇಳುತ್ತಿದ್ದಾರೆ ಎಂದು ಭ್ರಮಿಸಿದರೆ ನಾವು ಜವಾಬ್ದಾರರಲ್ಲ. ಚಾರ್ಲಿಯ ಕತೆಯಂತೆಯೇ ಕಂಡರೂ ಇದು ಮಾತ್ರ ಸ್ನೋಬೆಲ್‌ನ ಕತೆ!
ಹೌದು. ಕೊಚ್ಚಿಯ ಸುಧೀಶ್.ಕೆ.ಟಿ ಎಂಬಾತ ತನ್ನ ನಾಯಿಯ ಜೊತೆ ಬೈಕ್‌ನಲ್ಲಿಯೇ ಭಾರತವಿಡೀ ಒಂದು ಸುತ್ತು ಹಾಕಿ ೧೨,೦೦೦ ಕಿಮೀ ಪ್ರವಾಸ ಮಾಡಿ ಮರಳಿದ್ದಾರೆ. ಮೂರು ವರ್ಷದ ಸ್ನೋಬೆಲ್, ಥೇಟ್ ಚಾರ್ಲಿಯಂತೆಯೇ ಕಾಶ್ಮೀರಕ್ಕೂ ಹೋಗಿ, ಹಿಮದಲ್ಲಿ ಮನಸೋ ಇಚ್ಛೆ ಆಟವಾಡಿ, ಅಲ್ಲಿಂದ ಲಡಾಕಿಗೂ ಹೋಗಿ ಕೆಲವು ಚಾರಣಗಳನ್ನೂ ಮಾಡಿ ತನ್ನ ಒಡೆಯನ ಜೊತೆ ಬೈಕಿನಲ್ಲಿ ವಾಪಾಸು ಬಂದಿದೆ.
ಮೂರು ವರ್ಷದ ಹಿಂದೆ ಜೋರಾಗಿ ಅಳುತ್ತಲೇ ಇದ್ದ ನಾಯಿಮರಿಯೊಂದು ಸುದೀಶ್ ಅವರಿಗೆ ರಸ್ತೆ ಬದಿಯಲ್ಲಿ ಸಿಕ್ಕಿತ್ತು. ಕರುಣೆ ಉಕ್ಕಿ ಅದನ್ನು ಮನೆಗೆ ತಂದು ಅದನ್ನು ಸಾಕತೊಡಗಿದ ಸುಧೀಶ್ ಆ ನಾಯಿಯನ್ನು ವಿಪರೀತ ಹಚ್ಚಿಕೊಂಡರು. ಆ ನಾಯಿಮರಿ ಬೆಳೆಯುತ್ತಾ ಬೆಳೆಯುತ್ತಾ ಸುಧೀಶ್ ಅವರ ಬದುಕನ್ನೇ ಬದಲಾಯಿಸಿಬಿಟ್ಟಿತು.
ಬಹಳ ಕಾಲದಿಂದ ಸುಧೀಶ್‌ಗೆ ಬೈಕ್‌ನಲ್ಲಿಯೇ ಭಾರತ ಪ್ರವಾಸ ಮಾಡಬೇಕೆಂಬ ಆಸೆಯಿತ್ತು. ಲಡಾಕ್‌ವರೆಗೆ ಬೈಕ್‌ನಲ್ಲಿಯೇ ಹೋಗಬೇಕೆಂಬ ಕನಸನ್ನು ಈ ಸ್ನೋಬೆಲ್ ಬಂದಾಗಿನಿಂದ ಮುಂದೂಡುತ್ತಲೇ ಬಂದ ಸುಧೀಶ್, ತಾನು ಅಷ್ಟು ದಿನ ಸ್ನೋಬೆಲ್‌ನನ್ನು ಬಿಟ್ಟು ಹೋದರೆ ಕಷ್ಟವಾಗಬಹುದು ಎಂಬುದು ಹೆಚ್ಚು ನೋವನ್ನು ನೀಡುತ್ತಿತ್ತು. ಹಾಗಾದರೆ, ತನ್ನ ಜೊತೆ ಸ್ನೋಬೆಲ್‌ನನ್ನೂ ಕರೆದುಕೊಂಡು ಹೋದರೆ ಹೇಗೆ ಎಂಬ ಯೋಚನೆ ಬಂದು ಈ ಪ್ರವಾಸಯ ಪ್ಲಾನ್ ಸಿದ್ಧಮಾಡಿದ್ದಾರೆ ಸುಧೀಶ್.
ಹೀರೋ ಸ್ಪ್ಲೆಂಡರ್ ಬೈಕಿನಲ್ಲಿ ಈ ನಾಯಿ- ಮಾನವ ಜೋಡಿ, ಮೇ ೮ರಂದು ಹೊರಟಿದೆ. ಕೆಲವು ಟ್ರಯಲ್ ರನ್‌ಗಳೂ ಈ ಜೋಡಿಯ ಉತ್ಸಾಹವನ್ನು ಇಮ್ಮಡಿಗೊಳಿಸಿದ್ದು, ಹಿಮಚ್ಛಾದಿತ ಬೆಟ್ಟಗಳವರೆಗಿನ ಚಾರಣವನ್ನೂ ಸ್ನೋಬೆಲ್ ಅತ್ಯುತ್ಸಾಹದಿಂದಲೇ ಮಾಡಿದೆ. ಚಾರಣವಿದ್ದಾಗಲೆಲ್ಲ ಬಹಳ ಖುಷಿಯಾಗಿರುತ್ತಿದ್ದ ಸ್ನೋಬೆಲ್, ಇನ್ನೂ ಹೆಚ್ಚು ಮಾಡಬೇಕೆಂದು ಉತ್ಸಾಹ ತೋರುತ್ತಿತ್ತು. ಬಹುಮುಖ್ಯವಾಗಿ ಹಿಮ ಸಿಕ್ಕಿದರೆ ಅದರ ಖುಷಿಗೆ ಪಾರವೇ ಇರುತ್ತಿರಲಿಲ್ಲ. ಬೇಕಾದಷ್ಟು ಹೊತ್ತು ಆಟವಾಡಿಕೊಂಡಿರುತ್ತಿತ್ತು ಎಂದು ಸುಧೀಶ್ ಹೇಳಿದ್ದಾರೆ.
ನಾವಿಬ್ಬರೂ ಒಬ್ಬರಿಗೊಬ್ಬರು ಒಳ್ಳೆಯ ಸಾಥ್ ನೀಡಿದ್ದೇವೆ. ಸ್ನೋಬೆಲ್ ಕೂಡಾ ನನ್ನನ್ನು ಚೆನ್ನಾಗಿ ನೋಡಿಕೊಂಡಿದೆ. ಹೈ ಆಲ್ಟಿಟ್ಯೂಡ್ ಪ್ರದೇಶಗಳಲ್ಲಿ ಮಾತ್ರ ಸ್ವಲ್ಪ ಹಿಂಜರಿದಿತ್ತು. ಆಗ ನಾನೇ ಮುಂದೆ ಹೋದರೆ, ನನ್ನನ್ನು ಹಿಂಬಾಲಿಸುತ್ತಿತ್ತು. ಇದೊಂದು ಬಿಟ್ಟರೆ, ಬೇರೆಲ್ಲಾ ಕಡೆ ಯಾವುದೇ ಕಿರಿಕಿರಿ ಮಾಡದೆ, ನನ್ನೊಂದಿಗೆ ಅತ್ಯಂತ ಖುಷಿಯಿಂದ ಇಡೀ ಪ್ರವಾಸವನ್ನು ಅನುಭವಿಸಿದೆ ಎನ್ನುತ್ತಾರೆ ಸುಧೀಶ್.
ಆದರೂ ಈ ಪ್ರವಾಸದಿಂದ ಹಲವಾರು ಜಾಗಗಳನ್ನು ಸ್ನೋಬೆಲ್‌ಗಾಗಿ ಕೈಬಿಟ್ಟಿದ್ದೇನೆ. ಸಾಕುಪ್ರಾಣಿಗಳಿಗೆ ಪ್ರವೇಶವಿರಲಿಕ್ಕಿಲ್ಲ ಅನಿಸಿದ ಜಾಗಗಳಲ್ಲಿ, ಪ್ರವೇಶಧನವಿರುವ ಕಡೆಗಳಲ್ಲಿ ಹೋಗಲೇ ಇಲ್ಲ. ಆದರೆ, ಬೇರೆ ಯಾವೆಲ್ಲ ಜಾಗಗಳಿಗೆ ನಾಯಿ ಜೊತೆ ಆರಾಮವಾಗಿ ಸುತ್ತಾಡಬಹುದು ಅಲ್ಲೆಲ್ಲ ಸುತ್ತಾಡಿದ್ದೇವೆ ಎಂದಿದ್ದಾರೆ ಸುಧೀಶ್.
ಈ ಜೋಡಿ ೪೨ ಕಿಮೀ ಚಾರಣ ಮಾಡಿ ಕೇದಾರನಾಥನ ದರ್ಶನವನ್ನೂ ಮಾಡಿದ್ದಾರೆ. ಕಾಶ್ಮೀರದ ಶ್ರೀನಗರಕ್ಕೂ ಹೋಗಿ, ದಾಲ್ ಸರೋವರದಲ್ಲಿ ದೋಣಿ ವಿಹಾರವನ್ನೂ ಜೊತೆಗೇ ಮಾಡಿದ್ದಾರೆ. ಗುಲ್ಮಾರ್ಗ್‌ಗೆ ಹೋಗಿ ಅಲ್ಲಿ ಹಿಮದಲ್ಲಿ ಆಟವಾಡಿದ್ದಾರೆ. ನುಬ್ರಾ ವ್ಯಾಲಿ, ಪ್ಯಾಂಗಾಂಗ್ ಸರೋವರದುದ್ದಕ್ಕೂ ಅಡ್ಡಾಡಿ ಬಂದಿದ್ದು, ಇದೊಂದು ಅಭೂತಪೂರ್ವ ಅನುಭವ ಎಂದು ಸುಧೀಶ್ ರೋಮಾಂಚಿತರಾಗುತ್ತಾರೆ.
ಇದನ್ನೂ ಓದಿ: Solo Travel: ಸೋಲೋ ಪ್ರವಾಸ ಗೆಲ್ಲೋಕೆ 15 ಸೂತ್ರಗಳು!
ಶ್ರೀನಗರ ದಲ್ ಸರೋವರದಲ್ಲಿ ದೋಣಿ ವಿಹಾರದಲ್ಲಿ ಈ ನಾಯಿ-ಮಾನವ ಜೋಡಿಯನ್ನು ನೋಡಿ ಹಲವರು ಆಶ್ಚರ್ಯ ಚಕಿತರಾಗಿ ಕೊಂಡಾಡಿದ್ದಾರಂತೆ. ದೋಣಿಯಲ್ಲೂ ಶಿಸ್ತಿನಿಂದ ಕೂತು ಎಂಜಾಯ್ ಮಾಡುತ್ತಿದ್ದ ನಾಯಿಯನ್ನು ಕಂಡು ಎಲ್ಲರಿಗೂ ಖುಷಿ. ಹಲವು ಪ್ರವಾಸಿಗರು, ಸ್ಥಳೀಯರು ನಮ್ಮ ಕತೆ ಕೇಳಿ ಸೆಲ್ಫೀ ಕೂಡಾ ತೆಗೆದುಕೊಂಡರು ಎಂದು ತನ್ನ ಸ್ನೋಬೆಲ್ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ ಸುಧೀಶ್.
ನಾನು ಒಬ್ಬನೇ ಹೋಗಬೇಕೆಂದುಕೊಂಡ ಪ್ರಯಾಣವಿದು. ಆದರೆ, ಸ್ನೋಬೆಲ್ ಬಿಟ್ಟು ಹೋಗುವುದು ಸರಿಯೆನಿಸದೆ, ಅದನ್ನೂ ನನ್ನ ಜೊತೆ ಸೇರಿಸಿಕೊಂಡೆ. ನಾನು ಒಬ್ಬನೇ ಆಗಿದ್ದರೆ, ಇದನ್ನು ಬೇಗ ಮುಗಿಸಬಹುದಿತ್ತು. ಸ್ನೋಬೆಲ್‌ಗಾಗಿ ಈ ಪ್ರವಾಸ ಎರಡು ತಿಂಗಳಿಗೆ ಎಳೆಯಬೇಕಾಯಿತು. ಸ್ನೋಬೆಲ್ ಕಂಫರ್ಟ್‌ಗಾಗಿ ಬಹುತೇಕ ಟೆಂಟ್‌ನಲ್ಲಿಯೇ ತಂಗುತ್ತಿದ್ದೆ ಎಂದು ತನ್ನ ಪ್ರವಾಸದ ಬಗೆಯನ್ನು ವಿವರಿಸುತ್ತಾರೆ ಸುಧೀಶ್.
ಸುಧೀಶ್ ಅವರು ಕೊಚ್ಚಿಯ ಮೆಡಿಕಲ್ ಶಾಪ್ ಒಂದರಲ್ಲಿ ಸ್ಟೋರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಾರೆ. ಇದರ ಜೊತೆಗೆ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿ ಈ ಪ್ರವಾಸಕ್ಕಾಗಿಯೇ ೫೦,೦೦೦ ರುಪಾಯಿಗಳನ್ನು ಉಳಿಸಿದ್ದರಂತೆ. ಪತ್ನಿ ಅಮೃತಾ ಕೂಡಾ ಗಂಡನಿಗೆ ಒತ್ತಾಸೆಯಾಗಿ ನಿಂತು ಹಣ ಉಳಿಸಿ ಸಹಾಯ ಮಾಡಿದ್ದಾರಂತೆ. ಬಹಳಷ್ಟು ಜಾಗಗಳಲ್ಲಿ ಸಾಕುಪ್ರಾಣಿಗಳನ್ನು ಸರಿಯಾಗಿ ನೋಡಿಕೊಳ್ಳದೆ ಹಿಂಸೆ ಮಾಡುತ್ತಾರೆ. ಜಗತ್ತಿಗೇ ಸಾಕು ಪ್ರಾಣಿಗಳ ಜೊತೆ ಹೇಗಿರಬೇಕು ಎಂಬುದನ್ನು ನನಗೆ ತೋರಿಸಿಕೊಡಬೇಕು ಅನಿಸಿತು. ಹಾಗಾಗಿ ಇದನ್ನು ಚಾಲೆಂಜ್ ಆಗಿ ತೆಗೆದುಕೊಂಡು ಮಾಡಿದೆ ಎಂದು ಖುಷಿಯಿಂದ ಹೇಳುತ್ತಾರೆ ಸುಧೀಶ್.
ಒಂದು ತಿಂಗಳ ಮೊದಲಿನಿಂದಲೇ ಸ್ನೋಬೆಲ್‌ಗೆ ತಯಾರಿ ಶುರು ಮಾಡಿದ್ದೆ. ವೆಲ್ಡರ್ ಸಹಾಯದಿಂದ ನನ್ನ ಹಿಂಬದಿಯ ಸೀಟಿನಲ್ಲಿ ಸಾಕಷ್ಟು ಮಾರ್ಪಾಡು ಮಾಡಿಸಿದೆ. ಅದಕ್ಕೂ ಕೂರಲು ಕ್ಯಾರಿಯರ್ ಸೇರಿಸಿದೆ. ಬಹಳಷ್ಟು ಸರಿತಪ್ಪುಗಳು ನಡೆದು ಕೊನೆಗೂ ಆರಾಮದಾಯಕವಾಗಿ ಕೂರಲು ಸೀಟು ಮಾಡಲಾಯಿತು. ಹಲವು ವ್ಯಾಕ್ಸೀನುಗಳನ್ನೂ ಹಾಕಿಸಿಕೊಂಡು, ಫಿಟ್‌ನೆಸ್ ಸರ್ಟಿಫಿಕೆಟ್ ಪಡೆದು ಎಲ್ಲ ತಯಾರಿ ನಡೆಸಿ ಹೊರಟ ಪ್ರಯಾಣವಿದು. ಹಾಗಾಗಿ ತೊಂದರೆಯಾಗಲಿಲ್ಲ. ನಾನು ಅಂದುಕೊಂಡದ್ದಕ್ಕಿಂತಲೂ ಅಮೋಘವಾಗಿ ನಡೆಯಿತು ಎನ್ನುವುದೇ ಸಂತೋಷ ಎಂದಿದ್ದಾರೆ ಸುಧೀಶ್.
ಇದನ್ನೂ ಓದಿ: 777 ಚಾರ್ಲಿ- ಧರ್ಮ ಥರಾ ನೀವು ಜತೆಯಾಗಿ ಪ್ರವಾಸ ಹೋಗ್ತೀರಾ?