ಶ್ರೀಕೃಷ್ಣನೆಂದರೆ ದ್ವಾರಕೆ (Krishna Janmashtami) ಎಂದು ಆತನ ದರ್ಶನ ಪಡೆಯಲು ದ್ವಾರಕೆಗೆ ಹೋಗುವ ಮಂದಿ ಒಂದೆಡೆಯಾದರೆ, ಉತ್ತರ ಪ್ರದೇಶದ ಮಥುರಾ, ವೃಂದಾವನಗಳೂ ಕೂಡಾ ಕೃಷ್ಣಭಕ್ತರ ತವರು. ಇಲ್ಲಿ ಶ್ರೀಕೃಷ್ಣ ತನ್ನ ಬಾಲ್ಯ ಕಳೆದ ವೃಂದಾವನವನ್ನು, ಮಥುರೆಯನ್ನೂ (Mathura travel) ನೋಡಿ ಬರುವುದು ಬಹುತೇಕ ಕೃಷ್ಣನ ಭಕ್ತರ ಜೀವಿತಾವಧಿಯ ಕನಸುಗಳಲ್ಲಿ ಒಂದು. ಉತ್ತರ ಪ್ರದೇಶದ ವೃಂದಾವನ ಮಥುರಾಗಳಲ್ಲಿ ಪ್ರವಾಸ ಮಾಡುವ ಕನಸಿದ್ದವರು ಅಲ್ಲಿ ಯಾವೆಲ್ಲ ಜಾಗಗಳನ್ನು ನೋಡಿ ಬರಬಹುದು (Travel guide) ಎಂಬುದನ್ನು ನೋಡೋಣ ಬನ್ನಿ.
ಪ್ರೇಮಮಂದಿರ, ವೃಂದಾವನ: ಕೃಷ್ಣನ ಬಹು ಪ್ರಸಿದ್ಧ ದೇವಾಲಯಗಳಲ್ಲಿ ಪ್ರೇಮಮಂದಿರವೂ ಒಂದು. ಇಲ್ಲಿನ ಗೋಡೆಗಳಲ್ಲಿರುವ ಅತ್ಯಾಕರ್ಷನ ಚಿತ್ರಕಲೆಯು ಭಕ್ತಾದಿಗಳನ್ನು ತನ್ನೆಡೆಗೆ ಸೆಳೆಯುತ್ತದೆ. ರಾತ್ರಿ ಅತ್ಯದ್ಭುತ ಲೈಟಿಂಗ್ ವ್ಯವಸ್ಥೆಯನ್ನೂ ಇಲ್ಲಿ ಮಾಡುವುದರಿಂದ ರಾತ್ರಿ ಇಲ್ಲಿಗೆ ಭೇಟಿ ನೀಡುವುದು ಅದ್ಭುತ ಅನುಭವವನ್ನು ನೀಡುತ್ತದೆ. ಇದಲ್ಲದೆ, ಇಸ್ಕಾನ್‌ನಿಂದ ನಿರ್ಮಿತವಾದ ಶ್ರೀಕೃಷ್ಣ ಬಲರಾಮ ಮಂದಿರವೂ ಕೂಡಾ ವೃಂದಾವನದ ಪ್ರಮುಖ ಆಕರ್ಷಣೆಗಳಲ್ಲೊಂದು.
ನಿಧಿವನ, ವೃಂದಾವನ: ನಿಧಿವನವೆಂದರೆ ಒಂದು ಪುಟ್ಟ ಕಾಡು. ಇಲ್ಲಿನ ಮರಗಳೇ ಒಂದು ವಿಶಿಷ್ಟ ಬಗೆಯಂಥವು. ವೃಂದಾವನ ನಗರಿಯೊಳಗೇ ಇರುವ ಈ ನಿಧಿವನದ ಬಗ್ಗೆ ಈ ಊರ ಮಂದಿಯಲ್ಲಿ ವಿಶಿಷ್ಟ ನಂಬಿಕೆಯಿದೆ. ಶ್ರೀಕೃಷ್ಣ ಗೋಪಿಕೆಯರ ಜೊತೆ ರಾಸಲೀಲೆಯಾಡುತ್ತಿದ್ದ ಜಾಗ ಇದೆಂದೂ, ಇಂದಿಗೂ ಕೃಷ್ಣ ಇಲ್ಲಿಗೆ ರಾಸಲೀಲೆಯಾಡಲು ಭೇಟಿ ನೀಡುತ್ತಾನೆಂದೂ ನಂಬಿರುವ ಜನತೆ, ಈ ನಿಧಿವನದ ಕಡೆಗಿರುವ ತಮ್ಮ ಮನೆಗಳ ಕಿಟಕಿ ಬಾಗಿಲುಗಳನ್ನು ಕತ್ತಲಾದೊಡನೆ ಮುಚ್ಚಿಕೊಳ್ಳುವ ಆಚರಣೆಯಿದೆ. ಕತ್ತಲಾದರೆ, ನಿಧಿವನದ ಕಡೆ ನೋಡಬಾರದೆಂದೂ ಇಲ್ಲಿನ ಮಂದಿ ಅಘೋಷಿತ ನಿಯಮ. ಇನ್ನೂ ಕೆಲವರ ಪ್ರಕಾರ, ಶ್ರೀಕೃಷ್ಣ ಗೋಪಿಕೆಯರ ಜೊತೆಗೆ ಇಲ್ಲಿ ರಾಸಲೀಲೆಯಾಡುವುದನ್ನು ನೋಡಿದ ರಾಧೆ, ಆತನ ನಡವಳಿಕೆಯಿಂದ ಬೇಸತ್ತು, ಇಲ್ಲಿಗೆ ಬಂದವರು ಸಮಸ್ಯೆಗೆ ಸಿಲುಕುತ್ತಾರೆಂದೂ, ಇಲ್ಲಿ ಹಕ್ಕಿ ಪಿಕ್ಕಿಗಳ್ಯಾವುದೂ ಬರಬಾರದೆಂದೂ, ಸೂರ್ಯನ ಬೆಳಕೂ ಸುಳಿಯದಂತೆ ಕತ್ತಲು ಕವಿದಿರಲಿ ಎಂದೂ ಶಾಪವಿತ್ತಳು ಎಂಬ ಕಥೆಯೂ ಇದೆ. ಇನ್ನೂ ಕೆಲವರ ಪ್ರಕಾರ, ಶ್ರೀಕೃಷ್ಣನೂ ರಾಧೆಯೂ ಇಲ್ಲಿ ಖಾಸಗಿ ಸಮಯ ಕಳೆಯುವುದರಿಂದ ಯಾರಿಗೂ ಕತ್ತಲಾದ ಮೇಲೆ ಇಲ್ಲಿಗೆ ಪ್ರವೇಶವಿಲ್ಲ ಎಂದೂ ಹೇಳಲಾಗುತ್ತದೆ. ಒಟ್ಟಿನಲ್ಲಿ ನಿಧಿವನವೆಂದರೆ ಇದಿಗೂ ರಹಸ್ಯವೇ!
ಶ್ರೀಕೃಷ್ಣ ಜನ್ಮಸ್ಥಾನ, ಮಥುರಾ: ಜನ್ಮಭೂಮಿ ಹೆಸರಿನಲ್ಲೇ ಕರೆಯಲ್ಪಡುವ ಈ ದೇಗುಲದೊಳಗೆ ಕೃಷ್ಣ ಹುಟ್ಟಿದನೆನ್ನಲಾದ ಸೆರೆಮನೆಯೂ ಇದೆ. ಇದೇ ಸ್ಥಳದಲ್ಲಿ ಸೆರೆಮನೆಯಲ್ಲಿ ಕೃಷ್ಣ ಜನಿಸಿದ ಎಂದು ಇಲ್ಲಿನ ಸ್ಥಳಪುರಾಣವು ಹೇಳುತ್ತದೆ. ಜನ್ಮಾಷ್ಠಮಿಯ ಸಂದರ್ಭ ಇಲ್ಲಿಗೆ ಭೇಟಿ ನೀಡುವುದು ವಿಶೇಷ. ದೇವಸ್ಥಾನಕ್ಕೆ ಅಂಟಿಕೊಂಡಂತೆ ಔರಂಗಜೇಬನು ಕಟ್ಟಿಸಿದ ಈದ್ಗಾ ಮಸೀದಿಯನ್ನೂ ಇಲ್ಲಿ ಕಾಣಬಹುದು.
ಶ್ರೀದ್ವಾರಕಾಧೀಶ ದೇವಸ್ಥಾನ, ಮಥುರಾ: ಇದು ಮಥುರಾದ ಅತ್ಯಂತ ಹಳೆಯ ಹಾಗೂ ಅತ್ಯಂತ ದೊಡ್ಡ ದೇವಸ್ಥಾನಗಳಲ್ಲಿ ಒಂದು. ಇದು ವಿಶ್ರಾಮ್ ಘಾಟ್‌ನ ಬಳಿಯಲ್ಲೇ ಇದ್ದು ಇದನ್ನು ೧೮೧೪ರಲ್ಲಿ ನಿರ್ಮಿಸಲಾಯಿತು ಎಂದು ಇತಿಹಾಸ ಹೇಳುತ್ತದೆ. ಕೃಷ್ಣ ಜನ್ಮಾಷ್ಠಮಿ ಹಾಗೂ ಹೋಳಿ ಹಬ್ಬದ ಸಂದರ್ಭಗಳಲ್ಲಿ ಈ ದೇಗುಲದಲ್ಲಿ, ವಿಶೇಷ ಪೂಜೆ ಸಂಭ್ರಮಾಚರಣೆಗಳು ನಡೆಯುತ್ತದೆ.
ಕಂಸ ಕಿಲಾ, ಮಥುರಾ: ಮಥುರೆಯ ರಾಜ ಕಂಸನ ಅರಮನೆಯೆಂದು ಹೇಳಲಾಗುವ ಕೋಟೆ ಇಲ್ಲಿನ ಕೃಷ್ಣ ಗಂಗಾ ಘಾಟ್ ಹಾಗೂ ಗೋಘಾಟ್‌ನ ಬಳಿ ಇದೆ. ಇಲ್ಲಿ ಹಿಂದೂ ಹಾಗೂ ಮುಸ್ಲಿಂ ಶೈಲಿಯ ಮಿಶ್ರಣವಿರುವ ಕೋಟೆಯನ್ನು ಕಾಣಬಹುದು.
ನಂದಗಾಂವ್, ಮಥುರಾ: ನಂದಗಾಂವ್ ಎಂಬ ಪುಟ್ಟ ಹಳ್ಳಿ ರಾಧೆಯ ಊರು ಬರ್ಸಾನಾದಿಂದ ೮ ಕಿಮೀ ದೂರದಲ್ಲಿದೆ. ಇಲ್ಲಿ ಕೃಷ್ಣ ಆಟವಾಡಿಕೊಂಡು ತನ್ನ ಸಾಕು ತಾಯಿ ಯಶೋಧೆ ಹಾಗೂ ನಂದನ ಮನೆಯಲ್ಲಿ ಬೆಳೆದ ಎಂದು ಪುರಾಣದ ಕಥೆಗಳು ಹೇಳುತ್ತವೆ. ಕೃಷ್ಣನ ಬಾಲಲೀಲೆಗಳಿರುವ ನಂದಗೋಕುಲ ಇದೇ. ಹೋಳಿ ಹಾಗೂ ಜನ್ಮಾಷ್ಠಮಿಯ ಸಂದರ್ಭ ಭಕ್ತರು ನಂದಗಾಂವ್‌ನಲ್ಲಿ ನೆರೆಯುತ್ತಾರೆ.
ಕೇವಲ ಇಷ್ಟೇ ಅಲ್ಲ, ಮಥುರಾ, ವೃಂದಾವನದ ಗಲ್ಲಿಗಲ್ಲಿಗಳೂ ಕೃಷ್ಣನ, ರಾಧೆಯ ಕಥೆ ಹೇಳುತ್ತವೆ. ಅಲ್ಲಿಯ ಘಾಟ್‌ಗಳು, ರಸ್ತೆರಸ್ತೆಯಲ್ಲೂ ಎಡತಾಕುವ ದೇವಸ್ಥಾನಗಳು, ಕೃಷ್ಣರಾಧೆಯರ ಹೆಸರನ್ನೇ ಹೇಳುತ್ತವೆ. ಒಂದಿಷ್ಟು ದಿನಗಳು ಮಥುರೆ, ವೃಂದಾವನದಲ್ಲಿ ಕಳೆಯುವ ಸಮಯವೂ ಇರಬೇಕು ಅಷ್ಟೆ.
ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಶ್ರೀಕೃಷ್ಣ; ತಾನು ದೇವರೆನ್ನುತ್ತಲೇ ಮನುಷ್ಯರೊಡನೆ ಒಡನಾಡಿದವ