Site icon Vistara News

Monsoon Driving: ಮಳೆಗಾಲದಲ್ಲಿ ಕಾರು ಪ್ರಯಾಣಕ್ಕೆ ಹೊರಡುವಾಗ ಈ ಟಿಪ್ಸ್‌ ಗಮನದಲ್ಲಿರಲಿ

monsoon driving

ಭಾರತದಲ್ಲಿ ಮಾನ್ಸೂನ್‌ ಬರಲಿ ಎಂದು ಲಕ್ಷಾಂತರ ಜನ ಎದುರು ನೋಡುತ್ತಾರೆ. ಕೃಷಿ ಚಟುವಟಿಕೆಗೆ ಮಾತ್ರವಲ್ಲ. ಮಳೆಯಲ್ಲಿ ಪ್ರವಾಸ ಹೋಗುವುದು ಕೂಡ ಒಂದು ಆನಂದದ ಅನುಭವ. ಮಳೆಯಲ್ಲಿ ಪ್ರಕೃತಿಯ ಇನ್ನೊಂದು ಮುಖ ತೆರೆದುಕೊಳ್ಳುತ್ತದೆ. ಅದರಲ್ಲೂ ಹಿಲ್‌ ಸ್ಟೇಶನ್‌ಗಳಿಗೆ ಹೋಗುವ ಪ್ರವಾಸಿಗರ ಸಂಖ್ಯೆ ಹೆಚ್ಚು. ಡ್ರೈವ್‌ ಮಾಡಲು ಬಯಸುವವರಿಗೆ ಮಳೆಗಾಲ ಒಂದು ರೀತಿಯಲ್ಲಿ ರೊಮ್ಯಾಂಟಿಕ್. ಮಳೆಗಾಲದ ಡ್ರೈವಿಂಗ್‌ ಆಕರ್ಷಕ; ಆದರೆ ಅಷ್ಟೇ ರಿಸ್ಕ್‌ ಹೊಂದಿರುವ ಸಂಗತಿ ಕೂಡ. ರಸ್ತೆ ಜಾರುತ್ತದೆ; ಹೊಂಡಗಳು ನೀರು ತುಂಬಿ ಕಾಣುವುದಿಲ್ಲ. ಮಳೆ ಬರುವಾಗ ಕಾರಿನ ಗಾಜು ಮುಚ್ಚಿಹೋಗಿ ದಾರಿ ಸರಿಯಾಗಿ ಕಾಣದೆ ಹೋಗಬಹುದು. ಹೀಗಾಗಿ ಕಾರು ಚಾಲನೆ ರಿಸ್ಕೀ ಮತ್ತು ಥ್ರಿಲ್ಲಿಂಗ್.‌ ಹೀಗಾಗಿ ಮಳೆಯಲ್ಲಿ ಡ್ರೈವ್‌ ಮಾಡುತ್ತಾ ಹೊರಟುಬಿಡುವ ಮುನ್ನ ಕೆಳಗಿನ ಟಿಪ್ಸ್‌ (Monsoon Driving) ನೆನಪಿನಲ್ಲಿರಲಿ.

ಹವಾಮಾನ ಮುನ್ಸೂಚನೆ ಗಮನಿಸಿ

ಭಾರತದಲ್ಲಿ ಮಾನ್ಸೂನ್ ಸಂಪೂರ್ಣವಾಗಿ ಅನಿರೀಕ್ಷಿತ. ಒಂದು ಗಂಟೆ ಬಿಸಿಲಿದ್ದರೆ ಮತ್ತೊಂದು ನಿಮಿಷದಲ್ಲಿ ಮಳೆ ಸುರಿಯಬಹುದು. ಹೀಗಾಗಿ ನೀವು ಭೇಟಿ ನೀಡಲು ಯೋಜಿಸಿರುವ ಸ್ಥಳದ ಹವಾಮಾನದ ಮುನ್ಸೂಚನೆಯನ್ನು ಗಮನಿಸಿ. ಹವಾಮಾನ ಅಪ್ಲಿಕೇಶನ್‌ ಇನ್‌ಸ್ಟಾಲ್‌ ಮಾಡಿಕೊಳ್ಳಿ. ನಿರಂತರವಾಗಿ ಅದನ್ನು ಗಮನಿಸುತ್ತಿರಿ. ಇತ್ತೀಚೆಗೆ ಬಹಳಷ್ಟು ಗಿರಿಧಾಮಗಳಲ್ಲಿ ಭೂಕುಸಿತಗಳು ಸಂಭವಿಸುತ್ತಿವೆ. ಅದನ್ನೂ ಗಮನದಲ್ಲಿಟ್ಟುಕೊಳ್ಳಿ.

ವಾಹನ ಕೂಲಂಕಷವಾಗಿ ಪರಿಶೀಲಿಸಿ

ಅಂಕುಡೊಂಕಾದ ಘಾಟಿಗಳು, ಕತ್ತಲಿನ ಸುರಂಗಗಳು, ಒದ್ದೆಯಾದ ಮತ್ತು ಕೆಸರು ತುಂಬಿದ ರಸ್ತೆಗಳು ಮಳೆಗಾಲದಲ್ಲಿ ನಿಮಗೆ ಎದುರಾಗುತ್ತವೆ. ಇಂಥ ಸಂದರ್ಭದಲ್ಲಿ ನಿಮ್ಮ ವಾಹನ ಪೂರ್ತಿ ಫಿಟ್‌ ಆಗಿರಬೇಕು. ಮಳೆಗಾಲದಲ್ಲಿ ಇಳಿಜಾರು ರಸ್ತಗಳಲ್ಲಿ ವಾಹನ ಓಡಿಸುವುದು ದುಃಸ್ವಪ್ನವೇ ಸರಿ. ನಿಮ್ಮ ಪ್ರಯಾಣ ಪ್ರಾರಂಭಿಸುವ ಮೊದಲು ಪೂರ್ತಿ ಸರ್ವಿಸ್‌ ಮಾಡಿಸಿ. ವಾಹನ ಟೈರ್‌ಗಳು, ವಿಂಡ್‌ಶೀಲ್ಡ್ ವೈಪರ್‌ಗಳು, ಹೆಡ್‌ಲೈಟ್‌ಗಳು, ಬ್ರೇಕ್‌ಗಳು ಉತ್ತಮ ಸ್ಥಿತಿಯಲ್ಲಿವೆ ಎಂದು ಖಚಿತಪಡಿಸಿಕೊಳ್ಳಿ. ಬಿಡಿ ಟೈರ್ ಒಯ್ಯಲು ಮರೆಯಬೇಡಿ.

ನಿಧಾನ ಮತ್ತು ಸ್ಥಿರವಾದ ಡ್ರೈವಿಂಗ್‌

ʼಸ್ಲೋ ಮತ್ತು ಸ್ಟೆಡಿʼ ಎಂಬುದು ಪ್ರಸಿದ್ಧವಾದ ಮಾತು. ನಿಧಾನವಾದ ಮತ್ತು ಸ್ಥಿರವಾದ ಓಟ ಗೆಲ್ಲುತ್ತದೆ. ಮಳೆಯ ಸಂದರ್ಭದಲ್ಲಿ ವಾಹನ ಚಾಲನೆಗೂ ಇದು ಅನ್ವಯ. ವಿಶೇಷವಾಗಿ ಘಾಟಿ ರಸ್ತೆಗಳ ಏರುವಿಕೆ ಮತ್ತು ಇಳಿಯುವಿಕೆ. ಮುಂದಿನ ವಾಹನದಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಿ. ವಿಶೇಷವಾಗಿ ಅಪಘಾತಗಳು ಸಂಭವಿಸುವ ಭೂಪ್ರದೇಶದ ಮೂಲಕ ಪ್ರಯಾಣಿಸುತ್ತಿದ್ದಾಗ.

ಪ್ರವಾಸದ ಪ್ಲಾನಿಂಗ್‌

ನಿಮ್ಮ ಸಂಪೂರ್ಣ ಪ್ರವಾಸವನ್ನು ಮುಂಚಿತವಾಗಿಯೇ ಮ್ಯಾಪ್‌ ಮುಂದಿಟ್ಟುಕೊಂಡು ಪ್ಲಾನ್‌ ಮಾಡಿಕೊಳ್ಳಿ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಬೇಕಾದ ಸಮಯ, ವಿರಾಮದ ಅವಧಿ, ಇವುಗಳನ್ನು ಲೆಕ್ಕ ಹಾಕಿ. ಪ್ಲಾನ್‌ ಮಾಡಿದ ಸಮಯಕ್ಕೆ ಸರಿಯಾಗಿ ಎಲ್ಲವೂ ನಡೆಯುವಂತೆ ನೋಡಿಕೊಳ್ಳಿ. ಮಳೆಗಾಲದಲ್ಲಿ ರಾತ್ರಿ ವೇಳೆ ವಾಹನ ಚಲಾಯಿಸುವುದನ್ನು ಆ ಮೂಲಕ ತಪ್ಪಿಸಿ.

ಆಫ್-ರೋಡಿಂಗ್ ತಪ್ಪಿಸಿ

ಡ್ರೈವಿಂಗ್‌ ಸಾಹಸಿಗಳಿಗೆ ಚಾಲನೆ ಮಾಡುವಾಗ ಉಂಟಾಗುವ ಅಡ್ರಿನಾಲಿನ್‌ ರಷ್‌ ತುಂಬಾ ಪ್ರಿಯ. ನಿಯಮಗಳನ್ನು ಉಲ್ಲಂಘಿಸುವುದು, ವೇಗವಾಗಿ ಚಲಾಯಿಸುವುದೇ ಇಂಥವರಿಗೆ ಪ್ರಿಯ. ಆದರೆ ಮಳೆಗಾಲದಲ್ಲಿ ಇದು ಅಪಾಯಕಾರಿ. ಯಾಕೆಂದರೆ ಭಾರತದ ರಸ್ತೆಗಳು ಮಳೆಗಾಲದಲ್ಲಿ ಕುಖ್ಯಾತ. ಅನಿವಾರ್ಯ ಅಲ್ಲದಿದ್ದರೆ ಆಫ್‌ ರೋಡ್‌ ಪ್ರಯಾಣ ತಪ್ಪಿಸಿ. ಯಾಕೆಂದರೆ ವಾಹನದ ಟೈರ್‌ಗಳು ಕೆಸರಿನಲ್ಲಿ ಸಿಕ್ಕಿಹಾಕಿಕೊಳ್ಳಬಹುದು.

ಟೈರ್‌ಗಳು ಸೂಕ್ತ ಸ್ಥಿತಿಯಲ್ಲಿರಲಿ

ತೇವವಿರುವ ರಸ್ತೆ ಮೇಲೆ ಓಡಿಸುವಾಗ ಟೈರ್‌ಗಳು ಸುಸ್ಥಿತಿಯಲ್ಲಿರಬೇಕು. ಇದರ ಟ್ರೆಡ್‌ಗಳು ನೀರನ್ನು ಚದುರಿಸುವ ಚಾನಲ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ನಿಖರವಾದ ಟ್ರೆಡ್‌ಗಳನ್ನು ಹೊಂದಿದ ಟೈರ್‌ಗಳು ಅಗತ್ಯ. ಫ್ಲ್ಯಾಟ್‌ ಆದ ಟೈರ್‌ಗಳು ನೀರಿನ ಮೇಲೆ ಚಲಾಯಿಸಿದಾಗ ಜಾರುತ್ತವೆ. ಚಕ್ರದ ಹೊರಮೈಯ ಟ್ರೆಡ್‌ಗಳ ಆಳವು ಕನಿಷ್ಠ 2 ಮಿಮೀ ಇರಬೇಕು. ಸವೆದ ಟೈರ್‌ಗಳು ಪಂಕ್ಚರ್‌ ಆಗಬಹುದು. ಕೆಲವು ಸಂದರ್ಭಗಳಲ್ಲಿ ಸಿಡಿಯಬಹುದು. ಹೀಗಾಗಿ ಚಕ್ರಗಳ ಆಳ ಸವೆಯುವ ಮುನ್ನ ಬದಲಾಯಿಸಿಕೊಳ್ಳಿ.

ಬ್ರೇಕ್‌ಗಳು ಸುಸ್ಥಿತಿಯಲ್ಲಿರಲಿ

ಎಲ್ಲಾ ಪರಿಸ್ಥಿತಿಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸುವ ಬ್ರೇಕ್‌ಗಳನ್ನು ಹೊಂದಿರುವುದು ಮುಖ್ಯ. ಮಳೆಗಾಲದಲ್ಲಿ ರಸ್ತೆ ಜಾರುವುದರಿಂದ, ಮುಂದಿನ ವಾಹನದಿಂದ ಸ್ವಲ್ಪ ಹೆಚ್ಚಿನ ಅಂತರವನ್ನೇ ಕಾಪಾಡಿಕೊಳ್ಳಬೇಕು. ಆದ್ದರಿಂದ ನಿಮ್ಮ ಬ್ರೇಕ್‌ಗಳು ಟಿಪ್‌ಟಾಪ್ ಆಗಿರಬೇಕು. ಭಾರೀ ಮಳೆಯ ಸಮಯದಲ್ಲಿ ಅಥವಾ ಕೆಸರು ರಸ್ತೆಯಲ್ಲಿ ಚಾಲನೆ ಮಾಡಿದ ನಂತರ ಬ್ರೇಕ್‌ಗಳನ್ನು ಲಘುವಾಗಿ ಟ್ಯಾಪ್ ಮಾಡುವ ಮೂಲಕ ಒಣಗಿಸಿಕೊಳ್ಳಿ. ಇತ್ತೀಚಿನ ಹೊಸ ಕಾರುಗಳು ಆರ್ದ್ರ ನೆಲದಲ್ಲಿ ಬ್ರೇಕಿಂಗ್ ಅನ್ನು ಹೆಚ್ಚು ಸುರಕ್ಷಿತಗೊಳಿಸಿವೆ.

ವೈಪರ್‌ಗಳು ಸ್ವಚ್ಛವಾಗಿರಲಿ

ಮಾನ್ಸೂನ್‌ನಲ್ಲಿ ಚಾಲನೆ ಮಾಡುವಾಗ ನಿಮ್ಮ ಎದುರಿನ ಗಾಜನ್ನು ಸ್ವಚ್ಛವಾಗಿಡುವ ವೈಪರ್‌ಗಳು ತುಂಬಾ ಅಗತ್ಯ. ಗೆರೆಗಳಿಲ್ಲದ ವಿಂಡ್‌ಶೀಲ್ಡ್ ಮುಂದಿರಬೇಕು. ಗೆರೆಗಳಿದ್ದರೆ ಅದು ದೃಷ್ಟಿಗೆ ಅಡ್ಡಿಯಾಗಬಹುದು. ವೈಪರ್ ಬ್ಲೇಡ್‌ಗಳು ಸ್ವಚ್ಛವಾಗಿ ಒರೆಸುತ್ತಿವೆ ಎಂದು ಖಚಿತಪಡಿಸಿಕೊಳ್ಳಿ. ಇತರ ಕಾರುಗಳ ಚಕ್ರಗಳಿಂದ ಸಿಡಿದ ಕೆಸರು ಇತ್ಯಾದಿ ಸ್ವಚ್ಛಗೊಳಿಸಲು ವೈಪರ್ ವಾಷರ್ ದ್ರವ ತುಂಬಿಸಿಕೊಳ್ಳಿ.

ಅಗತ್ಯವಿದ್ದಾಗ ಲೈಟ್‌ ಬಳಸಿ

ಮಳೆ ಸುರಿಯುತ್ತಿರುವಾಗ, ರಸ್ತೆ ಸರಿಯಾಗಿ ಕಾಣದಾಗ ಚಾಲನೆ ಮಾಡುವುದು ಅನಿವಾರ್ಯವಾದರೆ ನಿಮ್ಮ ಕಾರಿನ ಹೆಡ್‌ಲೈಟ್‌ ಆನ್‌ ಇಟ್ಟುಕೊಳ್ಳಿ. ಮಳೆಗಾಲದಲ್ಲಿ ಹೆಚ್ಚಾಗಿ ಪ್ರಯಾಣಿಸುವವರಾದರೆ ಫಾಗ್‌ ಲೈಟ್‌ ಹಾಕಿಸಿಕೊಳ್ಳಿ. ಎಮರ್ಜೆನ್ಸಿ ಲೈಟ್‌ ಅಥವಾ ಬ್ಲಿಂಕರ್‌ ಬಳಸುವುದನ್ನು ತಪ್ಪಿಸಿ- ಯಾಕೆಂದರೆ ಇವು ಇರುವುದು ಅಪಾಯಕಾರಿ ಸನ್ನಿವೇಶದಲ್ಲಿ ಬಳಸಲು ಮಾತ್ರ.

ಅಂತರ ಮತ್ತು ವೇಗ ನಿಯಂತ್ರಣದಲ್ಲಿಡಿ

ಒದ್ದೆಯಾದ ರಸ್ತೆಯ ಮೇಲ್ಮೈಗಳಲ್ಲಿ ಬ್ರೇಕಿಂಗ್ ಅಂತರ ಹೆಚ್ಚಿರುತ್ತದೆ. ಹೀಗಾಗಿ ಮುಂಭಾಗದಲ್ಲಿರುವ ವಾಹನದಿಂದ ನಿಮ್ಮ ಅಂತರವನ್ನು ಕಾಯ್ದುಕೊಳ್ಳುವುದು ಅಪಘಾತವನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಮಳೆಯ ಸಮಯದಲ್ಲಿ ನಿಮ್ಮ ವೇಗವನ್ನು ನಿಯಂತ್ರಿಸಿ. ಇದು ನಿಮಗೆ ಬ್ರೇಕ್ ಹಾಕಲು ಸಾಕಷ್ಟು ಸ್ಥಳಾವಕಾಶವನ್ನು ನೀಡುತ್ತದೆ.

ಇದನ್ನೂ ಓದಿ: Monsoon Health Tips : ಮಳೆಗಾಲದಲ್ಲಿ ವೈರಲ್‌ ಸೋಂಕು ತಡೆಯುವುದು ಹೇಗೆ?

ಎಸ್ಕೇಪ್‌ ಸಲಕರಣೆ

ತುಂಬಾ ಕೆಟ್ಟ ಸನ್ನಿವೇಶ ಒದಗಿತು ಎಂದಿಟ್ಟುಕೊಳ್ಳಿ. ಉದಾಹರಣೆಗೆ ಕಾರಿನ ಡೋರ್‌ ಜಾಮ್‌ ಆಗಿದ್ದರೆ? ಹೊಸ ಕಾರುಗಳಲ್ಲಿ ಹಿಂಬದಿ ಚಿಮ್ಮುವ ಸೀಟುಗಳಿವೆ. ಆದರೆ ಹಳೆಯ ಕಾರುಗಳಲ್ಲಿ ಅವು ಇಲ್ಲ. ಇನ್ನೊಂದು ಆಯ್ಕೆ ಅಂದರೆ ಕಿಟಕಿ ಒಡೆಯುವುದು. ಕಾರಿನಲ್ಲೊಂದು ಸುತ್ತಿಗೆ ಇದ್ದರೆ ಚೆನ್ನ. ಅಥವಾ ಹೆಡ್‌ರೆಸ್ಟ್‌ನ ಲೋಹದ ಸ್ಲೈಡರ್‌ ಅಥವಾ ಪಾದಗಳನ್ನು ಇದಕ್ಕೆ ಬಳಸಿ. ಸೀಟ್‌ಬೆಲ್ಟ್ ಕಟ್‌ ಮಾಡಲು ಕತ್ತರಿ, ಟಾರ್ಚ್, ಅಗ್ನಿಶಾಮಕ ಕೂಡ ಇದ್ದರೆ ಒಳ್ಳೆಯದು.

ರಸ್ತೆಯಲ್ಲಿ ನಿಂತ ನೀರು

ರಸ್ತೆಯಲ್ಲಿ ನಿಂತ ನೀರು ಎಷ್ಟು ಆಳವಾಗಿದೆ ಎಂದು ತಿಳಿಯದೆ ಅದರ ಮೇಲೆ ಚಲಾಯಿಸುವುದು ಅಪಾಯಕಾರಿ. ಇತರ ಕಾರುಗಳು ಚಲಿಸುತ್ತಿರುವುದನ್ನು ಗಮನಿಸಿದರೆ ತಿಳಿಯಬಹುದು. ಇಂಥ ಕಡೆ ಮೊದಲ ಗೇರ್‌ನಲ್ಲಿ ಚಲಾಯಿಸಿ. ಎಕ್ಸಾಸ್ಟ್‌ಗೆ ನೀರು ಪ್ರವೇಶಿಸಿ ಎಂಜಿನ್‌ ಹಾಳಾಗುವುದನ್ನು ತಡೆಯಲು ಆರ್‌ಪಿಎಮ್‌ ಏರಿಸಿ. ನೀರು ಎಕ್ಸಾಸ್ಟ್‌ಗೆ ಹೋಗಿದೆ ಅನಿಸಿದರೆ ಕಾರನ್ನು ಸ್ಟಾರ್ಟ್‌ ಮಾಡಲು ಯತ್ನಿಸಬೇಡಿ. ನೀರಿನಿಂದ ಆಚೆ ಬಂದ ಬಳಿಕ ಬ್ರೇಕ್‌ಗಳನ್ನು ಮೆತ್ತಗೆ ತುಳಿದು ಡ್ರೈ ಮಾಡಿಕೊಳ್ಳಿ.

ಎಮರ್ಜೆನ್ಸಿ ಕಿಟ್ ಒಯ್ಯಿರಿ

ಮಾನ್ಸೂನ್ ಪ್ರಯಾಣದ ವೇಳೆ ಎಮರ್ಜೆನ್ಸಿ ಕಿಟ್‌ ನಿಮ್ಮ ಬಳಿ ಇರಲಿ. ನಿಮ್ಮ ದೇಹಾರೋಗ್ಯದ ಹಾಗೇ ವಾಹನದ ಆರೋಗ್ಯದ ಕಿಟ್‌ ಕೂಡ ಬಳಿಯಿರಲಿ. ಸ್ಪೇರ್‌ ಟೈರ್‌, ಜ್ಯಾಕ್‌ ಮುಂತಾದ ಟೈರ್‌ ಬದಲಿಸುವ ಸಲಕರಣೆಗಳು ಅಗತ್ಯವಾಗಿ ಇರಲಿ. ವಿಮೆ ಮುಂತಾದ ಅಗತ್ಯ ವಾಹನ ದಾಖಲಾತಿಗಳು ಜತೆಗಿರಲಿ.

ಇದನ್ನೂ ಓದಿ: Monsoon Season : ಏನು ನಿನ್ನ ಹನಿಗಳ ಲೀಲೆ… ಭಾರತದಲ್ಲಿ ಮುಂಗಾರು ಸೃಷ್ಟಿ ಹೇಗೆ? ಮಳೆ ವ್ಯಾಪಿಸುವುದು ಯಾವ ರೀತಿ?

Exit mobile version