Site icon Vistara News

Monsoon Travel: ಮಳೆಗಾಲದಲ್ಲಿ ಈ ಸ್ವರ್ಗಸಮಾನ 5 ಹಿನ್ನೀರಿನ ತಾಣಗಳನ್ನು ಕಣ್ಣು ತುಂಬಿಕೊಳ್ಳಿ!

backwater in karnataka

ಪ್ರವಾಸದ ದೃಷ್ಟಿಯಿಂದ ನೋಡಿದರೆ ಕರ್ನಾಟಕ ಸ್ವರ್ಗ. ಯಾಕೆಂದರೆ ಇಲ್ಲಿ, ಸಮುದ್ರ ತೀರವೂ ಇದೆ, ದಟ್ಟ ಕಾಡುಗಳೂ ಇವೆ. ಸಾವಿರಾರು ವರ್ಷಗಳ ಇತಿಹಾಸವಿರುವ, ವಾಸ್ತುಶಿಲ್ಪಗಳಿರುವ ದೇವಸ್ಥಾನಗಳೂ ಇವೆ, ಅತ್ಯಪೂರ್ವ ಬೆಟ್ಟಗುಡ್ಡಗಳೂ ಇವೆ. ಇಲ್ಲಿ ಚಾರಣಿಗರಿಗೂ ಹಬ್ಬವಾಗುವ ಜಾಗಗಳಿವೆ, ಪ್ರಾಣಿ ಪಕ್ಷಿ ಪ್ರಿಯರ ಮನತಣಿಸುವಷ್ಟು ಪ್ರಬೇಧಗಳಿವೆ. ಅಪರೂಪದ ಸಸ್ಯ ಸಂಕುಲವೂ ಇವೆ, ಮಳೆಕಾಡುಗಳೂ ಇವೆ. ಸರೋವರ ನದಿಗಳೂ ಇವೆ, ಜಲಪಾತಗಳು, ಹಿನ್ನೀರು ಹಾಗೂ ಅವುಗಳೆಡೆಯಲ್ಲಿ ದ್ವೀಪಗಳೂ ಇವೆ. ಒಟ್ಟಾರೆ ಕರ್ನಾಟಕ ಅಕ್ಷರಶಃ ಒಂದೇ ರಾಜ್ಯ, ಹಲವು ಜಗತ್ತು. ಮಳೆಗಾಲದಲ್ಲಿ ಕರ್ನಾಟಕ ಅಕ್ಷರಶಃ ಸ್ವರ್ಗವಾಗಿ ಬಿಡುತ್ತದೆ. ಇಲ್ಲಿನ ಜಲಪಾತಗಳೂ, ನದಿ, ಸರೋವರಗಳು ಹಿನ್ನೀರುಗಳೂ ಮೈದುಂಬಿಕೊಂಡು ಸುತ್ತಲ ಸಸ್ಯಸಂಕುಲವೂ ಜೀವತುಂಬಿಕೊಂಡು ನಳನಳಿಸುತ್ತಾ ಮೈಮನಗಳಿಗೆ ಆನಂದವನ್ನು ನೀಡುತ್ತದೆ. ಮಳೆಗಾಲದಲ್ಲಿ ಇಂತಹ ಜಾಗಗಳಲ್ಲಿ ವಿಹರಿಸಿಕೊಂಡು ಬರುವು ಬಹಳ ಖುಷಿ ನೀಡುತ್ತದೆ. ಹಾಗಾದರೆ ಬನ್ನಿ, ಕರ್ನಾಟಕದಲ್ಲಿ ನೋಡಲೇಬೇಕಾದ ಕೆಲವು ಹಿನ್ನೀರಿನ ಪ್ರವಾಸೀ ತಾಣಗಳನ್ನೊಮ್ಮೆ ಸುತ್ತು ಹಾಕಿ ಬರೋಣ.

1. ಹೊನ್ನೆಮರಡು: ಹೊನ್ನೆಮರಡು ಹಿನ್ನೀರಿನ ಪ್ರದೇಶ ಸಾಗರದಿಂದ ಸುಮಾರು 35 ಕಿಮೀ ದೂರದಲ್ಲಿದೆ. ಹೆಸರಿನಂತೆ ಇದು ಪ್ರಕೃತಿ ಪ್ರಿಯರ ಪಾಲಿಗೆ ಹೊನ್ನು. ಈ ಹಿನ್ನೀರಿನ ಮಧ್ಯಭಾಗದಲ್ಲೊಂದು ಪುಟಾಣಿ ದ್ವೀಪವೂ ಇದೆ. ಹಾಗಾಗಿ ಕ್ಯಾಂಪಿಂಗ್‌ ಮಾಡಬಯಸುವ ಮಂದಿಗೆ ಇದು ಅತ್ಯುತ್ತಮ ಕ್ಯಾಂಪಿಂಗ್‌ ಅನುಭವವನ್ನೂ ನೀಡುತ್ತದೆ. ಹೊನ್ನೆಮರಡಿನಿಂದ ಹತ್ತಿರದಲ್ಲೇ ಇರುವ ಜೋಗ ಜಲಪಾತ, ಇಕ್ಕೇರಿ, ದಬ್ಬೆ ಜಲಪಾತ ಮತ್ತಿತರ ಹಲವು ಜಾಗಗಳಿಗೂ ಹೋಗಿ ಬರಬಹುದು. ಕಯಾಕ್‌ ಮಾಡುವ ಮಂದಿಗೆ ಹೊನ್ನೆಮರಡು ಅತ್ಯುತ್ತಮ ಜಾಗ.

2. ಸಿಗಂದೂರು: ದೇವಸ್ಥಾನವೂ ಅದರ ಜೊತೆಗೊಂದು ಹಿನ್ನೀರಿನ ರಮ್ಯ ತಾಣವೂ ಜೊತೆಗೇ ಸಿಕ್ಕರೆ ಯಾರಿಗೆ ಬೇಡ ಹೇಳಿ. ಹೀಗೆ ಸಿಗಂದೂರು ಎಂಬ ಪುಣ್ಯಕ್ಷೇತ್ರ ಎಲ್ಲ ಬಗೆಯ ಪ್ರವಾಸೀ ಪ್ರಿಯರಿಗೂ ಪ್ರಿಯವಾಗುವುದು ಹೀಗೆ. ಶಿವಮೊಗ್ಗ ಜಿಲ್ಲೆಯಲ್ಲಿರುವ ಸಿಗಂದೂರಿನ ಚೌಡೇಶ್ವರಿ ದೇವಾಲಯ ಅತ್ಯಂತ ಪ್ರಸಿದ್ಧ. ಲಿಂಗನಮಕ್ಕಿ ಅಣೆಕಟ್ಟಿನಿಂದಾದ ಹಿನ್ನೀರಿನ ಪ್ರದೇಶದಲ್ಲಿರುವ ಸಿಗಂದೂರು ಊರೇ ರಮಣೀಯ ತಾಣ. ಚೌಡೇಶ್ವರಿಯ ದರ್ಶನ ಮುಗಿಸಿಕೊಂಡು, ಶರಾವತಿ ಹಿನ್ನೀರಿನಲ್ಲಿ ಸುತ್ತಾಡುವುದು ಮನಸ್ಸಿಗೆ ಮುದ ನೀಡುತ್ತದೆ.

3. ನವಿಲುತೀರ್ಥ: ಮಲಪ್ರಭಾ ನದಿಯ ಹಿನ್ನೀರಿನ ಪ್ರದೇಶದಲ್ಲಿದೆ ಈ ನವಿಲುತೀರ್ಥ. ಸವದತ್ತಿ ಯಲ್ಲಮ್ಮನ ದರ್ಶನ ಮಾಡಿಕೊಂಡು ಪ್ರಕೃತಿಯ ರಮ್ಯ ತಾಣದಲ್ಲಿ ವಿಹರಿಸುವ ಮನಸ್ಸಾದರೆ ಸವದತ್ತಿಯಿಂದ 12 ಕಿಮೀ ದೂರದಲ್ಲಿರುವ ಈ ನವಿಲುತೀರ್ಥಕ್ಕೆ ಹೋಗಬಹುದು. ಬೆಳಗಾವಿಯ ಸವದತ್ತಿಯ ಬಳಿ ಇರುವ ಈ ನವಿಲುತೀರ್ಥಕ್ಕೆ ಹೀಗಾಗಿ ರೇಣುಕಾ ಸಾಗರ ಸರೋವರ ಎಂಬ ಹೆಸರೂ ಇದೆ.

4. ಲಕ್ಕವಳ್ಳಿ: ಪಶ್ಚಿಮ ಘಟ್ಟದ ಮಡಿಲಲ್ಲಿರುವ ಲಕ್ಕವಳ್ಳಿ ಅತ್ಯಂತ ಮನೋಹರ ಪ್ರದೇಶ. ಸುತ್ತಲೂ ಎತ್ತರೆತ್ತರ ಹಸಿರು ಬೆಟ್ಟಗುಡ್ಡ ಕಾಡುಗಳಿಂದಾವೃತವಾದ ಈ ಪ್ರದೇಶ ನಯನ ಮನೋಹರ. ಭದ್ರಾ ಜಲಾಶಯದಿಂದಾದ ಹಿನ್ನೀರಿನ ಪ್ರದೇಶವಾದ ಇಲ್ಲಿಗೆ ಭೇಟಿ ಕೊಟ್ಟರೆ , ಭದ್ರಾ ಹುಲಿ ರಕ್ಷಿತಾರಣ್ಯವನ್ನೂ ನೋಡಬಹುದು. ಪ್ರಕೃತಿ ಪ್ರಿಯರು ಮನಸೋಲುವ ತಾಣವಿದು.

5. ಹೊನ್ನಾವರ ಕಾಂಡ್ಲಾವನ: ಹೊನ್ನಾವರದ ಬಳಿ, ಶರಾವತಿ ನದಿಯಿಂದಾದ ಹಿನ್ನೀರಿನ ಪ್ರದೇಶದಲ್ಲಿ ಬೆಳೆದಿರುವ ಕಾಂಡ್ಲಾ ಕಾಡುಗಳು ಅತ್ಯಂತ ಸುಂದರ. ಇದೀಗ ಪ್ರವಾಸೋದ್ಯಮ ಇಲಾಖೆ, ಅತ್ಯಂತ ಸುಂದರ ಹಾಗೂ ಅದ್ಭುತ ಅನುಭವ ನೀಡುವ ಬೋರ್ಡ್‌ ವಾಕ್‌ ಅನುಕೂಲವನ್ನೂ ಈ ಕಾಂಡ್ಲಾವನದಲ್ಲಿ ಮಾಡಿದೆ. ಕಾಂಡ್ಲಾ ಕಾಡುಗಳ ಮಧ್ಯದಲ್ಲಿ ನಿರ್ಮಿಸಲಾದ ಮರದ ಸೇತುವೆಯಿಂದ ಹಿನ್ನೀರಿನಲ್ಲಿ ಸ್ವಲ್ಪ ದೂರ ನಡೆದು ಸಾಗಬಹುದಾದ ಉತ್ತಮ ಅನುಭವ ನೀಡುವ ಜಾಗವಿದು. ಇಲ್ಲಿ ಶರಾವತಿ ಹಿನ್ನೀರಿನಲ್ಲಿ ದೋಣಿಯಲ್ಲಿ ವಿಹರಿಸುತ್ತಾ ಅದ್ಭುತ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು. ಅಷ್ಟೇ ಅಲ್ಲ, ಹೊನ್ನಾವರ, ಕುಮಟಾ ಹಾಗೂ ಕಾರವಾರದ ಸುತ್ತಮುತ್ತಲ ಹಲವು ಸಮುದ್ರ ತೀರದಲ್ಲೂ ವಿಹರಿಸಬಹುದು.

ಇದನ್ನೂ ಓದಿ: Child care in monsoon: ಮಳೆಗಾಲದಲ್ಲಿ ಪುಟಾಣಿಗಳ ಆರೈಕೆ ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ

Exit mobile version