Site icon Vistara News

Monsoon Travel Tips: ʻಮಳೆಗಾಲದಲ್ಲಿ ಪ್ರವಾಸʼ ಎಂಬ ದಿವ್ಯಾನುಭೂತಿ: ಹೊರಡುವಾಗ ಇವಿಷ್ಟು ನೆನಪಿರಲಿ!

travel

ಮಳೆಗಾಲದಲ್ಲಿ ಪ್ರವಾಸ ಎಂಬುದು ಒಂದು ಸಾಹಸಮಯ ಅನುಭವ. ಈ ಪ್ರವಾಸವೆಂಬ ಸಾಹಸದಲ್ಲಿ ತೆರೆದಷ್ಟೂ ಮೊಗೆಮೊಗೆವ ನೆನಪುಗಳನ್ನೂ, ಅನುಭವವನ್ನೂ ಪಡೆಯುವ ಅವಕಾಶ. ಮಳೆಯಲ್ಲಿ ನೆನೆದಷ್ಟೂ ನೆನಕೆಗಳು, ಮಿಂದಷ್ಟೂ ತಣಿಯದ ಭಾವಗಳು. ಹಾಗಾಗಿ ಮಳೆಗಾಲದ ಪ್ರಯಾಣ ಮನದಲ್ಲಿ ಸುಂದರ ನೆನಪುಗಳ ಮಾಲೆಯನ್ನೇ ಕಟ್ಟಬಲ್ಲುದು. ಇವು ನಮ್ಮನ್ನು ಇನ್ನಷ್ಟು ಪಕ್ವಗೊಳಿಸಿ, ಭಾವನಾತ್ಮಕ ಜೀವಿಗಳನ್ನಾಗಿಸುವ, ಬದುಕನ್ನು ಪ್ರೀತಿಸುವ ಜೀವಗಳನ್ನಾಗಿ ಮಾಡಿಸುತ್ತವೆ. ಇವೆಲ್ಲ ನಿಜವಾದರೂ ಮಳೆ ಎಂಬುದು ಸಾಕಷ್ಟು ಅವಾಂತರಗಳನ್ನೂ ಅಧ್ವಾನಗಳನ್ನೂ, ತೊಂದರೆಗಳನ್ನೂ ಸೃಷ್ಟಿಸಿಬಿಡುತ್ತದೆ. ಮಳೆಗೆ ಸರಿಯಾಗಿ ನಾವು ತಯಾರಾಗದಿದ್ದರೆ, ಆಗುವ ತೊಂದರೆಗಳಿವು. ಮುಖ್ಯವಾಗಿ ಮಳೆಗಾಲದಲ್ಲಿ ಪ್ರಯಾಣ, ಪ್ರವಾಸ ಮಾಡುವ ಮೊದಲು ಸಾಕಷ್ಟು ತಯಾರಿಯೇ ಮಾಡಬೇಕಾಗುತ್ತದೆ. ಹಾಗಾಗಿ ಬನ್ನಿ, ಮಳೆಗಾಲದಲ್ಲಿ ಪ್ರವಾಸ ಮಾಡುವ ಮೊದಲು ಯಾವೆಲ್ಲ ತಯಾರಿಯನ್ನು ನಾವು ಮಾಡಬೇಕು (Monsoon Travel Tips) ಎಂಬುದನ್ನು ಅವಲೋಕಿಸೋಣ.

1. ಬ್ಯಾಗ್‌ ಪ್ಯಾಕ್‌ ಮಾಡಿಕೊಳ್ಳುವಾಗ ಬಹಳ ಜತನದಿಂದ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಮುಖ್ಯವಾಗಿ ನಮಗೆ ನಿಜವಾಗಿ ಅಗತ್ಯವಿರುವ ಬಟ್ಟೆಗಳಿಗಿಂತ ಹೆಚ್ಚು ಬಟ್ಟೆಗಳನ್ನು ಪ್ಯಾಕ್‌ ಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಮಳೆಗೆ ನಮ್ಮ ಬಟ್ಟೆಗಳು ಯಾವಾಗ ಎಲ್ಲಿ ಬೇಕಾದರೂ ಒದ್ದೆಯಾಗಿ ಬಿಡಬಹುದು. ಅಂದುಕೊಂಡ ಹಾಗೆ ಬಟ್ಟೆ ಒಣಗದೆ ಇರಬಹುದು. ಒದ್ದೆ ಬಟ್ಟೆಯಲ್ಲೇ ಹೆಚ್ಚು ಕಾಲ ಇರುವುದರಿಂದ ಚರ್ಮದ ಅಲರ್ಜಿಗಳು ಬರಬಹುದು. ಒದ್ದೆಯಿಂದ ಚಳಿಯೂ ಆಗಬಹುದು. ಶೀತ ನೆಗಡಿಯೂ ಆಗಬಹುದು. ಹಾಗಾಗಿ ಹೆಚ್ಚುವರಿ ಬಟ್ಟೆಗಳ ಅಗತ್ಯ ಮಳೆಗಾಲದಲ್ಲಿ ಹೆಚ್ಚು.

2. ಮಳೆಗಾಲದಲ್ಲಿ ಬ್ಯಾಗ್‌ನಲ್ಲಿ ಇಟ್ಟುಕೊಳ್ಳಬೇಕಾದ ಬಹುಮುಖ್ಯ ವಸ್ತು ಎಂದರೆ ಛತ್ರಿ ಅಥವಾ ರೇನ್‌ಕೋಟ್‌. ದೂರಪ್ರಯಾಣವೇ ಇರಲಿ ಹತ್ತಿರವೇ ಇರಲಿ, ಬ್ಯಾಗ್‌ ಪ್ಯಾಕ್‌ ಮಾಡಿಕೊಳ್ಳುವಾಗ ನಿಮಗೆ ಯಾವುದು ಹೆಚ್ಚು ಆರಾಮದಾಯಕವಾಗಿರುತ್ತದೋ ಅದನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಅಥವಾ ಎರಡನ್ನೂ ಇಟ್ಟುಕೊಳ್ಳುವುದೂ ಕೂಡಾ ಒಳ್ಳೆಯದೇ. ಗಾಳಿ ಮಳೆಗೆ ಕೊಡೆಯನ್ನು ಹಿಡಿದುಕೊಂಡು ನಡೆಯುವುದು ಕೆಲವೆಡೆ ಕಷ್ಟ ಅನಿಸಬಹುದು. ಹಾಗಾಗಿ ಪರಿಸ್ಥಿತಿಗೆ ಅನುಗುಣವಾಗಿ ಕೊಡೆ ಹಾಗೂ ರೇನ್‌ಕೋಟನ್ನು ಬಳಸಬಹುದು.

3. ಮಳೆಗಾಲದಲ್ಲಿ ಬಾಯಾರಿಕೆಯಾಗುವುದಿಲ್ಲ ಎಂಬ ಅಂದಾಜಿನಿಂದ ನೀರಿನ ಬಾಟಲ್‌ ಮರೆಯಬೇಡಿ. ಮಳೆಗಾಲದಲ್ಲೂ ನೀರು ಅತ್ಯಂತ ಅಗತ್ಯ. ಹಾಗಾಗಿ ನೀರಿನ ಬಾಟಲ್‌ ಇಟ್ಟುಕೊಳ್ಳಿ. ದೇಹ ನಿರ್ಜಲೀಕರಣದಂತಹ ಸಮಸ್ಯೆಗೆ ಈಡಾಗದಂತೆ ಕಾಪಾಡಿಕೊಳ್ಳಲು ಮುಖ್ಯವಾಗಿ ಪ್ರಯಾಣದಲ್ಲಿ ನೀರು ಬೇಕೇ ಬೇಕು. ಇದರ ಜೊತೆಗೆ ಒಂದೆರಡು ಪ್ಯಾಕೆಟ್‌ ಬಿಸ್ಕತ್ತೋ ಅಥವಾ ಎನರ್ಜಿ ಬಾರ್‌ ಇತ್ಯಾದಿಗಳನ್ನೂ ಇಟ್ಟುಕೊಳ್ಳುವುದು ಒಳ್ಳೆಯದು.

monsoon travel

4. ಮಳೆಗಾಲದಲ್ಲಿ ವಾಟರ್‌ಪ್ರೂಫ್‌ ಬ್ಯಾಗ್‌ ಕೂಡಾ ಅತ್ಯಂತ ಅಗತ್ಯ. ಬಟ್ಟೆಗಳನ್ನು ಬ್ಯಾಗ್‌ ಒಳಗೆ ತುಂಬಿಸುವಾಗ ನೀವು ತೆಗೆದುಕೊಂಡ ಬ್ಯಾಗ್‌ ಒಳಗೆ ನೀರು ಹೋಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅಥವಾ ಬ್ಯಾಗ್‌ ಒಳಗೆ ಸಾಕಷ್ಟು ವಾಟರ್‌ಪ್ರೂಫ್‌ ಕವರ್‌ಗಳಲ್ಲಿ ಬಟ್ಟೆಗಳನ್ನಿಡಿ.

5. ಒಂದು ಸಣ್ಣ ಪ್ಯಾಕ್‌ ಟಿಶ್ಯೂ ಪೇಪರ್‌ ಕೂಡಾ ಇರಲಿ. ಮಳೆನೀರು ಮುಖಕ್ಕೆ ರಾಚುವಾಗ ಒರೆಸಿಕೊಳ್ಳಲು ಒಣಬಟ್ಟೆ/ ಕರ್ಚೀಫ್‌ ಆಥವಾ ಟಿಶ್ಯೂ ಪೇಪರ್‌ ಸಕಾಲಕ್ಕೆ ಸಹಾಯ ಮಾಡುತ್ತವೆ.

6. ಮಳೆಗಾಲದ ಪ್ರಯಾಣದಲ್ಲಿ ತೊಂದರೆಗಳಿಗೆ ಮಾನಸಿಕವಾಗಿ ಸಿದ್ಧರಾಗಿಯೇ ಹೊರಡಿ. ಮಳೆಗಾಲದಲ್ಲಿ ಭೂಕುಸಿತ ಸೇರಿದಂತೆ ಅನೇಕ ತೊಂದರೆಗಳು ಮಾರ್ಗಮಧ್ಯದಲ್ಲಿ ಆಗಬಹುದು. ಇದರಿಂದ ಪ್ರಯಾಣದ ಯೋಜನೆ ಏರುಪೇರಾಗಬಹುದು, ತಡವಾಗಿ ತಲುಪಬಹುದು. ಹೀಗಾಗಿ ಮಾನಸಿಕ ಸಿದ್ಧತೆ ಬಹಳ ಮುಖ್ಯ.

7. ಜಾರುವ ಚಪ್ಪಲಿ, ಒದ್ದೆಯಾದರೆ ಬಹಳ ಹೊತ್ತು ಒಣಗದ ಶೂ ಇತ್ಯಾದಿಗಳನ್ನು ಬಳಸಬೇಡಿ. ಮಳೆಗಾಲಕ್ಕೆ ಸೂಕ್ತವಿರುವ ಚಪ್ಪಲಿ ಬಳಸಿ.

8. ಎಲ್ಲೆಂದರಲ್ಲಿ ನೀರು ಕುಡಿಯುವಾಗ, ಆಹಾರ ಸೇವಿಸುವಾಗ ಜಾಗ್ರತೆ ವಹಿಸಿ. ಮಳೆಗಾಲದಲ್ಲಿ ಬಹುಬೇಗ ಬ್ಯಾಕ್ಟೀರಿಯಾಗಳಿಗೆ ಆಹಾರ ಹಾಗೂ ನೀರು ತೆರೆದಿರುವುದರಿಂದ ಸುಲಭವಾಗಿ ಆರೋಗ್ಯದಲ್ಲಿ ಏರುಪೇರಾಗುವ ಸಂಭವ ಇರುತ್ತದೆ.

monsoon travel

ಇದನ್ನೂ ಓದಿ: Monsoon Season : ಏನು ನಿನ್ನ ಹನಿಗಳ ಲೀಲೆ… ಭಾರತದಲ್ಲಿ ಮುಂಗಾರು ಸೃಷ್ಟಿ ಹೇಗೆ? ಮಳೆ ವ್ಯಾಪಿಸುವುದು ಯಾವ ರೀತಿ?

9. ಸಾಮಾನ್ಯ ಔಷಧಿಗಳನ್ನು ಇಟ್ಟುಕೊಳ್ಳುವುದನ್ನು ಮರೆಯಬೇಡಿ. ಪ್ಯಾರಾಸಿಟಮಾಲ್‌, ನೆಗಡಿಯ ಔಷಧ, ನೋವಿನ ಮಾತ್ರೆ, ಡಯಾರಿಯಾ, ಹಾಗೂ ವಾಂತಿ ಇತ್ಯಾದಿಗಳಿಗೆ ಬೇಕಾಗುವ ಔಷಧಿಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು.

10. ಜೋರಾಗಿ ಮಳೆ ಬರುವ ಸಂದರ್ಭ, ನೆರೆ, ಭೂಕುಸಿತ ಇತ್ಯಾದಿಗಳು ನಡೆದುದು ಗೊತ್ತಿದ್ದೂ ಅಥವಾ ಸಂದರ್ಭ ಟಿಕೆಟ್‌ ಬುಕ್‌ ಮಾಡಲು ಹೊರಡಬೇಡಿ. ಯಾವುದೇ ಕ್ಷಣದಲ್ಲಿ ಇಂಥ ಪ್ರಯಾಣ ರದ್ದಾಗುವ ಸಂಭವ ಇರುತ್ತದೆ. ಅಷ್ಟೇ ಅಲ್ಲ, ಕೈಯಲ್ಲಿ ಸಾಕಷ್ಟು ಕ್ಯಾಶ್‌ ಕೂಡಾ ಇರುವುದು ಒಳ್ಳೆಯದು. ಕೇವಲ ಆನ್‌ಲೈನ್‌ ನಂಬಿಕೊಂಡು ಬರಿಗೈಯಲ್ಲಿ ಹೊರಡಬೇಡಿ. ಮಳೆಗಾಲದಲ್ಲಿ ಸಿಗ್ನಲ್‌ ಇಲ್ಲವಾಗುವ, ಕರೆಂಟು ಇಲ್ಲದೇ ಇರುವ ಸಂದರ್ಭಗಳೆಲ್ಲ ಎದುರಾಗಬಹುದಾದ್ದರಿಂದ, ಇಂಥವಕ್ಕೆ ಮೊದಲೇ ತಯಾರಾಗಿಯೇ ಹೊರಡಿ.

ಮಳೆಗೆ ಹೆದರಿ ಮನೆಯಲ್ಲಿ ಬೆಚ್ಚಗೆ ಕೂರುವುದಕ್ಕಿಂತ ನಮ್ಮ ಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳು ಇಂಥ ಪ್ರಯಾಣ, ಪ್ರವಾಸಗಳು ಮೈಮನಕ್ಕೆ ಬೇಕೇ ಬೇಕು. ಆದರೆ ಹೊರಡುವಾಗ ತಯಾರಾಗಿ ಹೊರಡುವುದರಿಂದ ಈ ಅನುಭವವನ್ನು ಅದ್ಭುತವಾಗಿರುವಂತೆ ಮಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ!

ಇದನ್ನೂ ಓದಿ: Monsoon diet | ಮಳೆಗಾಲದಲ್ಲಿ ಈ ತರಕಾರಿಗಳನ್ನು ತ್ಯಜಿಸಿದರೆ ಆರೋಗ್ಯ

Exit mobile version