Site icon Vistara News

Tourism Policy : ಇನ್ನೊಂದೇ ತಿಂಗಳಲ್ಲಿ ಹೊಸ ಪ್ರವಾಸೋದ್ಯಮ ನೀತಿ ಜಾರಿ

HK Patil in Nandi hills

ಬೆಂಗಳೂರು: ಮುಂದಿನ ಒಂದು ತಿಂಗಳ ಒಳಗಾಗಿ ರಾಜ್ಯ ಹೊಸ ಪ್ರವಾಸೋದ್ಯಮ ನೀತಿ (Tourism Policy) ಜಾರಿಯಾಗಲಿದೆ. ಅಲ್ಲದೆ, ಬಡವರಿಗೂ ಪ್ರವಾಸೋದ್ಯಮವು ಕೈಗಟುಕಲಿದೆ. ಇದರ ಜತೆಜತೆಗೆ ಪ್ರವಾಸೋದ್ಯಮದ ದೃಷ್ಟಿಕೋನವನ್ನೂ (Tourism Perspective) ಬದಲಾಯಿಸುವ ಚಿಂತನೆ ಇದ್ದು, ಕೃಷಿ ಹಾಗೂ ಶೈಕ್ಷಣಿಕ (Agriculture and Educational Tourism) ದೃಷ್ಟಿಯನ್ನು ಇಟ್ಟುಕೊಂಡು ನೂತನ ನೀತಿ ಜಾರಿಗೆ ಬರಲಿದೆ.

ಇಷ್ಟು ದಿನಗಳ ಕಾಲ ಪ್ರವಾಸೋದ್ಯಮ‌ ಎಂದರೆ ಶ್ರೀಮಂತರಿಗೆ ಎಂಬ ಭಾವನೆ ಇತ್ತು. ಪ್ರವಾಸೋದ್ಯಮ ಇಲಾಖೆ ಆ ರೀತಿಯ ಅಪವಾದವನ್ನು ತೊಡೆದು ಹಾಕಿ ಶ್ರಮಿಕರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪ್ರವಾಸೋದ್ಯಮದಲ್ಲಿ ಹೊಸ ಬದಲಾವಣೆ ತರಲು ಚಿಂತನೆ ನಡೆಸಿದೆ. ಕೃಷಿ, ಶಿಕ್ಷಣ ಮತ್ತು ಶ್ರದ್ಧಾ ಪ್ರವಾಸಿ ಕೇಂದ್ರಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅವುಗಳ ಬೆಳವಣಿಗೆಗೆ ಪೂರಕವಾಗಿ ಮತ್ತು ಸಹಕಾರಿಯಾಗಿ ಪ್ರವಾಸೋದ್ಯಮ ನೀತಿಯನ್ನು ರೂಪಿಸುವ ಅಗತ್ಯತೆಯನ್ನು ಸರ್ಕಾರ ಕಂಡುಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ಪ್ರವಾಸೋದ್ಯಮ ನೀತಿಯನ್ನು ಜಾರಿ ಮಾಡಲು ನಿರ್ಧರಿಸಿದೆ. ಇನ್ನು ಒಂದು ತಿಂಗಳೊಳಗಾಗಿ ರಾಜ್ಯದಲ್ಲಿ ಹೊಸ ಪ್ರವಾಸೋದ್ಯಮ ನೀತಿ ಜಾರಿಯಾಗಲಿದೆ.

ಇದನ್ನೂ ಓದಿ: Commission Politics : ನ್ಯಾಯಾಂಗ ಆಯೋಗಕ್ಕೆ ಕೊಠಡಿಯನ್ನೇ ಕೊಡದ ಸರ್ಕಾರ; ಇನ್ನೂ ಶುರುವಾಗದ ತನಿಖೆ!

ನಂದಿ ಬೆಟ್ಟದ ಸಮಗ್ರ ಅಭಿವೃದ್ಧಿ

ನಂದಿ ಬೆಟ್ಟದಲ್ಲಿ (Nandi Hills) ಕೆಎಸ್‌ಡಿಟಿಸಿ ಬಂದ ಮೇಲೆ ಪ್ರವಾಸಿಗರಿಗೆ ಎಲ್ಲಿ ಏನಿದೆ ಎಂದು ತಿಳಿಯಲು ಸೂಚನಾ ಫಲಕಗಳನ್ನು ಹಾಕಲಾಗಿದೆ. ಶೌಚಾಲಯ ವ್ಯವಸ್ಥೆಯನ್ನು ಉತ್ತಮ ಗೊಳಿಸಲಾಗಿದೆ, ಬೆಟ್ಟದ ಸ್ವಚ್ಛತೆಗೆ 20 ಮಂದಿ ಸಿಬ್ಬಂದಿಯನ್ನು ನೇಮಿಸಲಾಗಿದೆ.

ಬ್ಯಾಂಬೊ ವಾಕ್ ವೇಯನ್ನು (Bamboo Walkway) ಪುನರ್ ಅಭಿವೃದ್ಧಿಪಡಿಸಲಾಗಿದೆ. ನೆಲ್ಲಿಕಾಯಿ ಬಸವಣ್ಣ ದೇವಾಲಯವನ್ನು (Nellikai Basavanna Temple) ನವೀಕರಣ ಮಾಡಲಾಗಿದೆ. ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳನ್ನು (CCTV camera in Nandi hill) ಅಳವಡಿಸಲಾಗಿದೆ. 150 ಸೊಲಾರ್ ದೀಪಗಳನ್ನು ಅಳವಡಿಸಲಾಗಿದೆ. ಉತ್ತಮ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರವಾಸಿಗರು ಕುಳಿತುಕೊಳ್ಳಲು ಹೊಸದಾಗಿ 50 ವಿಶ್ರಾಂತಿ ಆಸನಗಳನ್ನು ಅಳವಡಿಸಲಾಗಿದೆ. ಪಾರ್ಕಿಂಗ್ ವ್ಯವಸ್ಥೆಯನ್ನು ಉತ್ತಮಪಡಿಸಿ 4 ತಿಂಗಳಲ್ಲಿ ಸುಮಾರು 6 ಕೋಟಿ ಆದಾಯ ತಂದು ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಆದಾಯ ಹೆಚ್ಚಿಸಲು ಯೋಜಿಸಲಾಗಿದೆ. ಒಟ್ಟಾರೆ ನಂದಿ ಬೆಟ್ಟವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಲು ಯೋಜಿಸಲಾಗಿದೆ.

ಕಾನೂನು ತಜ್ಞರೊಂದಿಗೆ ಸಭೆ

ಶುಕ್ರವಾರ ಚಿಕ್ಕಬಳ್ಳಾಪುರ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರೂ ಆಗಿರುವ ಎಚ್.ಕೆ. ಪಾಟೀಲ್‌ ಅವರು, ರಾಜ್ಯದ ಹಿರಿಯ ಕಾನೂನು ತಜ್ಞರೊಂದಿಗೆ ಸಭೆ ನಡೆಸಿದ್ದಾರೆ.
ಕಾನೂನು ಸುಧಾರಣಾ ಕ್ರಮವಾಗಿ ಹಿರಿಯ ಕಾನೂನು ತಜ್ಞರೊಂದಿಗೆ ಸಭೆ ನಡೆಸಿದ ಸಚಿವರು, ತಜ್ಞರ ವಾದವನ್ನು ಆಲಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು ಮುಂದಿನ ದಿನಗಳಲ್ಲಿ ಅಗತ್ಯ ಕಾನೂನುಗಳಿಗೆ ಬದಲಾವಣೆ ತರುವ ಮೂಲಕ ಕಾನೂನು ಸುಧಾರಣೆಗೆ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದಡಿ ಇರಿಸಲಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದ್ದಾರೆ.

HK Patil inaguration in Nandi hill

ನಂದಿ ಬೆಟ್ಟದಲ್ಲಿ ಸಮ್ಮೇಳನ ಸಭಾಂಗಣ ಉದ್ಘಾಟಿಸಿದ ಸಚಿವ ಎಚ್.ಕೆ. ಪಾಟೀಲ್

ಪ್ರವಾಸೋದ್ಯಮ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ.ಪಾಟೀಲ್ ಅವರು ಶುಕ್ರವಾರ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಇತಿಹಾಸ ಮತ್ತು ವಿಶ್ವಪ್ರಸಿದ್ಧ ನಂದಿಗಿರಿಧಾಮದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 95 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 200 ಆಸನಗಳ ಸಾಮರ್ಥ್ಯದ ಸಮ್ಮೇಳನ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದರು.‌

ಇದನ್ನೂ ಓದಿ: Shakti Scheme : ಮಹಿಳೆಯರ ಉಚಿತ ಪ್ರಯಾಣದ ಸ್ಮಾರ್ಟ್‌ ಕಾರ್ಡ್‌; ಹುಟ್ಟಿದ ಹೊಸ ಕಥೆ!

ಈ ಸಂದರ್ಭದಲ್ಲಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಗದೀಶ್, ಕೆ.ಎಸ್.ಟಿ.ಡಿ. ನಿಗಮದ ಸ್ಥಳೀಯ ಅಧಿಕಾರಿಗಳು ಸೇರಿದಂತೆ ಪ್ರವಾಸೋದ್ಯಮ ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Exit mobile version