Site icon Vistara News

Igloo house | ಹಿಮವೇ ಹಾಸಿಗೆ, ಹಿಮವೇ ಹೊದಿಕೆ! ಮನಾಲಿಯಲ್ಲಿ ಪಡೆಯಿರಿ ಅನುಭವ

igloo house

ಬೆಳ್ಳನೆಯ ಹಿಮದ ಮನೆ, ನೆಲಕ್ಕೆ ಹಿಮಹಾಸು, ತಲೆಯೆತ್ತಿದರೆ ಹಿಮದ್ದೇ ಮೇಲ್ಛಾವಣಿ, ಕೈಕಾಲಿಟ್ಟಲ್ಲೆಲ್ಲಾ ಹಿಮ, ಮಲಗಲು ಹೋದರೆ ಹಿಮದ್ದೇ ಮಂಚ, ಥರಗುಟ್ಟುವ ಚಳಿ! ಇಂಥದ್ದೊಂದು ಅನುಭವ ಹೇಗಿದ್ದೀತು ಎಂದು ಎಂದಾದರೂ ಕಲ್ಪನೆ ಮಾಡಿದ್ದೀರಾ? ʻಶೀತವಲಯಗಳಲ್ಲಿ ಜನರು ಇಗ್ಲೂಗಳಲ್ಲಿ ವಾಸಿಸುತ್ತಿದ್ದರುʼ ಎಂದು ನಾವು ಸಣ್ಣವರಿದ್ದಾಗ ಪಠ್ಯದಲ್ಲಿ ಓದಿ ಗೊತ್ತು. ಆದರೆ, ಸ್ವತಃ ಕಣ್ಣಾರೆ ನೋಡಿ ಅನುಭವಿಸಿ ಗೊತ್ತಾ ಹೇಳಿ? ಆಗೆಲ್ಲಾ ಇಗ್ಲೂ ಎಂದರೆ ಹೇಗಿರಬಹುದು ಎಂದು ಅದರಲ್ಲಿ ಕೊಟ್ಟ ವಿವರಣೆಗಳಿಂದ ಓದಿ ತಿಳಿದುಕೊಂಡು, ಆಹಾ, ಇಂಥದ್ದೊಂದು ಇಗ್ಲೂ ಮನೆಗಳಲ್ಲಿ ಜೀವನದಲ್ಲೊಮ್ಮೆಯಾದರೂ ಇದ್ದು ನೋಡಬೇಕು ಎಂದು ಮನಸ್ಸಿನಲ್ಲೊಮ್ಮೆ ಯೋಚನೆ ಸುಳಿದು ಹೋಗಿದ್ದರೆ ಅದಕ್ಕೆ ಶೀತವಲಯಕ್ಕೋ, ವಿದೇಶದ ಯಾವುದೋ ಟ್ರಾವೆಲ್‌ ಪ್ಯಾಕೇಜ್‌ ನೋಡಿ ಇದು ಆಗುವ ಮಾತಲ್ಲ ಎಂದು ಬೇಸರ ಪಡಬೇಕಾಗಿಲ್ಲ. ನೀವು ಮನಸ್ಸು ಮಾಡಿದರೆ, ಈಗ ಇಗ್ಲೂ ಅನುಭವ ನಮ್ಮ ದೇಶದಲ್ಲೂ ಪಡೆಯಬಹುದು!

ಹೌದು. ವಿದೇಶಗಳಲ್ಲಿ ಪ್ರವಾಸಿಗರನ್ನು ಸೆಳೆಯುವ ಈ ಮಂಜುಗಡ್ಡೆಯ ಮನೆಯಲ್ಲಿ ಉಳಿದುಕೊಳ್ಳುವುದರ ಕಲ್ಪನೆಯೇ ಒಂದು ರಮ್ಯ ಅನುಭವ. ಒಂದೆರಡು ದಿನ ಚಳಿಯಲ್ಲಿ ಆಹಾ ಎಂದುಕೊಂಡು ಚಳಿಗಾಲದಲ್ಲಿ ಹಿಮಯ ಮೇಲೆಯೇ ನಡೆದಾಡಿ, ತಿಂದುಂಡು, ರಾತ್ರಿಯಾದರೆ ಸಾಕು ಚಳಿ ಕಾಸಿಕೊಂಡು ಕತೆ ಹೇಳಿಕೊಂಡು, ಕಳೆದು ಬರುವ ಯೋಚನೆ ಬಂದರೆ ಅದರಷ್ಟು ಚಂದದ ಪ್ರವಾಸದ ಅನುಭವ ಇನ್ನೊಂದಿಲ್ಲ. ಇಂತಹ ಅನುಭವ ಪಡೆಯಬೇಕೆಂದರೆ, ಮನಾಲಿಯ ಈ ಐಸ್‌ ಹೊಟೇಲಿಗೆ ಹೋದರಾಯಿತು!

ಇತ್ತೀಚೆಗಷ್ಟೇ ನಾಲ್ಕೈದು ವರ್ಷಗಳ ಹಿಂದೆ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಜನ್ಮ ತಳೆದ ಇಗ್ಲೂ ಮನೆ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿ ಬೆಳೆಯುತ್ತಿದೆ. ವಿಕಾಸ್‌ ಕುಮಾರ್‌ ಹಾಗೂ ತಶಿ ದೋರ್ಜೆ ಎಂಬಿಬ್ಬರು ಸೇರಿ ಕೇಲಿಂಗ್ ಹಿಮಾಲಯನ್‌ ಅಡ್ವೆಂಚರ್ಸ್‌ ಎಂಬ ಸಂಸ್ಥೆಯೊಂದನ್ನು ಹುಟ್ಟುಹಾಕಿ ಆ ಮೂಲಕ ಮನಾಲಿಯಲ್ಲಿ ಒಂದು ಪರಿಪೂರ್ಣ ಇಗ್ಲೂ ಅನುಭವವನ್ನು ಭಾರತದಲ್ಲೇ ಮೊದಲ ಬಾರಿಗೆ ಪ್ರವಾಸಿಗರಿಗೆ ನೀಡುತ್ತಿದ್ದಾರೆ. ಹಿಮಚ್ಛಾದಿತ ಪರ್ವತಗಳಿಂದ ಸುತ್ತುವರಿಯಲ್ಪಟ್ಟ ಹಿಮದ ಮನೆಯಲ್ಲಿ ಸುತ್ತಲೂ ಬೆಳ್ಳನೆ ಹಿಮ ಬಿಟ್ಟರೆ ಒಂದು ತುಂಡು ಮಣ್ಣ ಭೂಮಿಯೂ ಕಾಣದಂಥ ಹಿಮವೋ ಹಿಮದ ಅನುಭವದಲ್ಲಿ ಚಳಿಯಲ್ಲಿ ಬೆವರಿಳಿಸಿ ಬರುವ ಅನುಭವವನ್ನ ನೀಡುತ್ತಿದೆ.

ಇದು ಪ್ರವಾಸಿಗಳ ಆದ್ಯತೆಗಳಿಗನುಸಾರವಾಗಿ ವಿವಿಧ ಪ್ಯಾಕೇಜುಗಳನ್ನೂ ನೀಡುತ್ತಿದೆ. ಈ ಪ್ಯಾಕೇಜುಗಳ ಪೈಕಿ ಒಂದಿ ರಾತ್ರಿ ಇಗ್ಲೂನಲ್ಲಿ ಇರುವುದು, ರಾತ್ರಿ ಕ್ಯಾಂಪಿಂಗ್‌, ಬಾರ್ಬೆಕ್ಯೂ, ಬೋನ್‌ಫೈರ್‌, ಊಟ, ಕೆಲವು ಸಾಹಸೀ ಆಟಗಳು, ಸ್ಲೆಡ್ಜಿಂಗ್‌, ಸ್ಕೀಯಿಂಗ್‌, ಸ್ನೋ ಬೋರ್ಡಿಂಗ್‌ ಕಲಿಕೆ, ಹಿಮಚ್ಛಾದಿತ ಬೆಟ್ಟಗಳಲ್ಲಿ ಸಣ್ಣ ಚಾರಣ, ನಿಮ್ಮದೇ ಒಂದು ಇಗ್ಲೂ ನಿರ್ಮಿಸುವುದು ಇತ್ಯಾದಿ ಇತ್ಯಾದಿ ಚಟುವಟಿಕೆಗಳನ್ನು ಹೊಂದಿದೆ. ಒಂದು ರಾತ್ರಿ ಎರಡು ಹಗಲು, ಎರಡು ರಾತ್ರಿ ಮೂರು ಹಗಲು ಎಂಬ ಕೆಲವು ಪ್ಯಾಕೇಜುಗಳನ್ನು ಹೊಂದಿಕೊಂಡು ಈ ಎಲ್ಲ ಚಟುವಟಿಕೆಗಳು ನಿರ್ಧಾರವಾಗುತ್ತವೆ.

ಇದನ್ನೂ ಓದಿ | Bicycle travel | ಕರ್ನಾಟಕದಿಂದ ಕಾಶ್ಮೀರಕ್ಕೆ ಇಬ್ಬರು ಕನ್ನಡಿಗರ 3,500 ಕಿಮೀ ಸೈಕಲ್‌ ಯಾತ್ರೆ!

ಒಮ್ಮೆ ಇಲ್ಲಿರಲು ಹೆಚ್ಚೆಂದರೆ ೧೫ ಮಂದಿಗೆ ಮಾತ್ರ ಸಾಧ್ಯವಾಗುವುದರಿಂದ, ಇಗ್ಲೂನಲ್ಲಿ ಉಳಿಯಬೇಕೆಂಬ ಇಚ್ಛೆ ಇದ್ದವರು ಸಾಕಷ್ಟು ಮೊದಲೇ ಮುಂಗಡ ಬುಕ್ಕಿಂಗ್‌ ಮಾಡಿಕೊಳ್ಳಬೇಕಾಗುತ್ತದೆ. ಜನವರಿಯಿಂದ ಮಾರ್ಚ್‌ವರೆಗೆ ಇಂತಹ ಇಗ್ಲೂ ಮನೆಗಳು ಲಭ್ಯವಿದ್ದು ಈ ಸಂದರ್ಭ ಮಾತ್ರ ಇಲ್ಲಿ ಕಾಲ ಕಳೆದು ಪರ್ಫೆಕ್ಟ್‌ ಹಾಲಿಡೇ ಮಜಾ ಅನುಭವಿಸಬಹುದು. ಹೊಸತೊಂದು ಅನುಭವ ತಮ್ಮದಾಗಿಸಿಕೊಳ್ಳಬಹುದು.

ಹಾಗಂತ ಇಲ್ಲಿ ನಾಲ್ಕು ಗೋಡೆಗಳ ಮಧ್ಯೆ ಐಷಾರಾಮಿ ಅನುಭವ ನೀಡುವ ಹೊಟೇಲುಗಳ, ಬಗೆಬಗೆಯ ಮೆನು ಇರುವ ಊಟದ ರಾತ್ರಿಗಳನ್ನು ಕಲ್ಪನೆ ಮಾಡಿಕೊಳ್ಳಬೇಡಿ. ಅಂತಹ ಯೋಚನೆಯಿದ್ದವರು ಅದಕ್ಕಾಗಿಯೇ ಇರುವ ಹಾಲಿಡೇ ಪ್ಯಾಕೇಜುಗಳನ್ನು ಬೇರೆಡೆ ಆಯ್ಕೆ ಮಾಡಬಹುದು. ಯಾಕೆಂದರೆ, ಇದು ಸಂಪೂರ್ಣ ಭಿನ್ನವಾದ, ಆದರೆ ಅಷ್ಟೇ ಕ್ರೇಝೀ ಆದ ವಿನೂತನ ಅನುಭವ ನೀಡುವ ಪ್ರವಾಸ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಎಂತಹ ಸನ್ನಿವೇಶಕ್ಕೂ ಹೊಂದಿಕೊಳ್ಳುವುದು, ಹೊಸತೊಂದು ಅನುಭವಕ್ಕೆ ಮೈಮನಸ್ಸು ತೆರೆದು ಕಾಯುವುದು ಇಷ್ಟ ಪಡುವ ವ್ಯಕ್ತಿಗಳು ನೀವಾಗಿದ್ದರೆ, ಅಂಥವರಿಗೆ ಇಂತಹ ಪ್ರವಾಸ ಖುಷಿ ಕೊಡಬಹುದು. ಇಲ್ಲಿ ಹೆಚ್ಚು ಚಳಿಯಾದೀತು ಎಂದೂ ಭಯ ಪಡುವ ಅಗತ್ಯವಿಲ್ಲ. ಇಲ್ಲಿ ಚಳಿಗೆ ಸಂಬಂಧಿಸಿದಂತೆ ಎಲ್ಲ ರೀತಿಯ ವ್ಯವಸ್ಥೆಗಳೂ ಇದ್ದು, ರಾತ್ರಿ ಸ್ಲೀಪಿಂಗ್‌ ಬ್ಯಾಗಿನೊಳಗೆ ನಿಮ್ಮ ಮೈತೂರಿಸಿ ಹೆಚ್ಚುವರಿ ಬ್ಲ್ಯಾಂಕೆಟ್‌ಗಳನ್ನು ಹೊದ್ದುಕೊಂಡು ಮಲಗಿಬಿಡಬಹುದು. ಹೊಸ ವಾತಾವರಣ, ಹೊಸ ಅನುಭವಕ್ಕೆ ತೆರೆದುಕೊಳ್ಳುವ ಮನಸ್ಸಿದ್ದರೆ ಸಾಕು ಇಗ್ಲೂ ಖಂಡಿತ ಜೀವಮಾನದ ಒಂದು ಚಂದನೆಯ ಬೆಚ್ಚನೆಯ ನೆನಪಾಗಿ ಉಳಿಯಬಲ್ಲುದು!

ಇದನ್ನೂ ಓದಿ | Desert travel | ಭಾರತದಲ್ಲಿದ್ದೂ ಚಳಿಗಾಲದಲ್ಲಿ ಮರಳುಗಾಡು ನೋಡದಿದ್ದರೆ ಹೇಗೆ?!

Exit mobile version